ಮುಂಬೈ(ಡಿ.24): ಪಾಕಿಸ್ತಾನ ಕ್ರಿಕೆಟ್ ಮಂಡಳಿ ಮುಖ್ಯಸ್ಥ ಎಹಸಾನ್ ಮಾನಿ ವಿವಾದಾತ್ಮಕ ಹೇಳಿಕೆಗೆ ಟೀಕೆಗಳು ವ್ಯಕ್ತವಾಗುತ್ತಿದೆ. ಭಾರತದಲ್ಲಿ ಭದ್ರತೆಯೇ ಇಲ್ಲ, ಪಾಕಿಸ್ತಾನ ಅತ್ಯಂತ ಸುರಕ್ಷಿತ ಎಂದಿದ್ದ ಮಾಣಿಗೆ ಇ ಬಿಸಿಸಿಐ ಕೂಡ ತಕ್ಕ ತಿರುಗೇಟು ನೀಡಿದೆ. ಭಾರತದ ಭದ್ರತೆ ಬಿಡಿ, ಪಾಕಿಸ್ತಾನದ ಭದ್ರತೆ ಕುರಿತು ಮಾತನಾಡುವ ಹಕ್ಕು ಪಾಕಿಸ್ತಾನ ಕ್ರಿಕೆಟ್ ಮಂಡಳಿ ಮುಖ್ಯಸ್ಥನಿಗಿಲ್ಲ ಎಂದಿದೆ.

ಇದನ್ನೂ ಓದಿ: ಭಾರತದಲ್ಲಿ ಭದ್ರತೆಯೇ ಇಲ್ಲ, ಪಾಕಿಸ್ತಾನ ಅತ್ಯಂತ ಸುರಕ್ಷಿತ ದೇಶ; ಪಿಸಿಬಿ ಮುಖ್ಯಸ್ಥ!

ಪಿಸಿಬಿ ಮುಖ್ಯಸ್ಥ ಎಹಸಾನ್ ಮಾನಿ ಲಂಡನ್‌ನಲ್ಲಿ ನೆಲೆಸಿದ್ದಾರೆ. ಆಗೊಮ್ಮೆ ಈಗೊಮ್ಮೆ ಪಾಕಿಸ್ತಾನಕ್ಕೆ ತೆರಳುವ ಮಾನಿಗೆ, ಪಾಕಿಸ್ತಾನದ ವಾಸ್ತವ ಸ್ಥಿತಿ ಗೊತ್ತಿಲ್ಲ. ಲಂಡನ್‌ನಲ್ಲಿ ಕುಳಿತ ಭಾರತದ ಭದ್ರತೆ ಕುರಿತು ಮಾತನಾಡುವ ಮಾನಿಗೆ ಪಾಕಿಸ್ತಾನದಲ್ಲಿ ಎನಾಗುತ್ತಿದೆ ಎಂಬುದೆ ತಿಳಿದಿಲ್ಲ ಎಂದು ಬಿಸಿಸಿಐ ಖಜಾಂಚಿ ಅರುಣ್ ಧುಮಾಲ್ ತಿರುಗೇಟು ನೀಡಿದ್ದಾರೆ.

ಇದನ್ನೂ ಓದಿ: ICC ಟೆಸ್ಟ್ ರ‍್ಯಾಂಕಿಂಗ್ ಪ್ರಕಟ; ಅಗ್ರಸ್ಥಾನ ಕಾಯ್ದುಕೊಂಡ ಕೊಹ್ಲಿ!..

ಪಾಕಿಸ್ತಾನದಲ್ಲಿ ಹೆಚ್ಚು ಸಮಯ ಕಳೆದಿದ್ದರೆ ನೈಜತೆ ಅರ್ಥವಾಗುತ್ತಿತ್ತು. ಕ್ರಿಕೆಟ್ ಸರಣಿ ಆಯೋಜಿಸಲು 10 ವರ್ಷ ಬೇಕಾಯಿತು. ಈ ದೇಶ ಭಾರತದ ಭದ್ರತೆ ಕುರಿತು ಮಾತನಾಡುತ್ತಿದೆ ಎಂದು ವ್ಯಂಗ್ಯವಾಡಿದ್ದಾರೆ. 

2009ರಲ್ಲಿ ಪಾಕಿಸ್ತಾನ ಪ್ರವಾಸ ಕೈಗೊಂಡಿದ್ದ ಶ್ರೀಲಂಕಾ ತಂಡದ ಮೇಲೆ ಭಯೋತ್ಪಾದಕರ ದಾಳಿಯಾಗಿತ್ತು. ಹಲವು ಕ್ರಿಕೆಟಿಗರು ಗಾಯಗೊಂಡಿದ್ದರು. ಈ ಘಟನೆ ಬಳಿಕ  ಪಾಕಿಸ್ತಾನ ಪ್ರವಾಸಕ್ಕೆ ಇತರ ಎಲ್ಲಾ ದೇಶಗಳು ಹಿಂದೇಟು ಹಾಕಿತ್ತು. 2015ರಲ್ಲಿ ಜಿಂಬಾಬ್ವೆ ಹಾಗೂ 2019ರಲ್ಲಿ ಶ್ರೀಲಂಕಾ ತಂಡ ನಿಗದಿತ ಓವರ್ ಕ್ರಿಕೆಟ್ ಸರಣಿ ಆಡಿತು. ಇದೀಗ ಶ್ರೀಲಂಕಾ ವಿರುದ್ಧದ 2 ಪಂದ್ಯಗಳ ಟೆಸ್ಟ್ ಸರಣಿ ಆಯೋಜಿಸಿತ್ತು. 10 ವರ್ಷಗಳ ಬಳಿಕ ಪಾಕಿಸ್ತಾನ ತನ್ನ ನೆಲದಲ್ಲಿ ಟೆಸ್ಟ್ ಸರಣಿ ಆಯೋಜಿಸಿತ್ತು.