ಮೊಹಮ್ಮದ್ ಸಿರಾಜ್ ತಂದೆಯ ನಿಧನಕ್ಕೆ ಕಂಬನಿ ಮಿಡಿದ ಸೌರವ್ ಗಂಗೂಲಿ
ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಟೀಂ ಇಂಡಿಯಾ ವೇಗಿ ಮೊಹಮ್ಮದ್ ಸಿರಾಜ್ ತಂದೆಯ ನಿಧನಕ್ಕೆ ನುಡಿನಮನ ಅರ್ಪಿಸಿದ್ದಾರೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ
ನವದೆಹಲಿ(ನ.21): ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ಟೀಂ ಇಂಡಿಯಾ ವೇಗದ ಬೌಲರ್ ಮೊಹಮ್ಮದ್ ಸಿರಾಜ್ ತಂದೆ ಮೊಹಮ್ಮದ್ ಗೌಸ್ ಶುಕ್ರವಾರ(ನ.20) ಕೊನೆಯುಸಿರೆಳೆದಿದ್ದರು. ಇದರ ಬೆನ್ನಲ್ಲೇ ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿಯ ಅಧ್ಯಕ್ಷ ಸೌರವ್ ಗಂಗೂಲಿ, ವೇಗಿ ಸಿರಾಜ್ ತಂದೆಯ ನಿಧನಕ್ಕೆ ಕಂಬನಿ ಮಿಡಿದಿದ್ದಾರೆ.
ಮೊಹಮ್ಮದ್ ಸಿರಾಜ್, ಆಸ್ಟ್ರೇಲಿಯಾ ವಿರುದ್ಧ ಸೀಮಿತ ಓವರ್‌ಗಳ ಸರಣಿಯಾಡಲು ಕಾಂಗರೂ ನಾಡಿನಲ್ಲಿದ್ದು, ಸಿಡ್ನಿಯಲ್ಲಿ ಟೀಂ ಇಂಡಿಯಾ ಜತೆ ಕ್ವಾರಂಟೈನ್‌ಗೆ ಒಳಗಾಗಿದ್ದಾರೆ. ಮೊಹಮ್ಮದ್ ಸಿರಾಜ್‌ಗೆ ಈ ದುಃಖದಿಂದ ಹೊರಬರಲು ದೇವರು ಮತ್ತಷ್ಟು ಶಕ್ತಿ ನೀಡಲಿ. ಎಲ್ಲರ ಒಳ್ಳೆಯ ಹಾರೈಕೆಗಳು ಈ ಪ್ರವಾಸ ಸಿರಾಜ್‌ಗೆ ಮತ್ತಷ್ಟು ಯಶಸ್ಸು ದಕ್ಕಿಸಿಕೊಡಲಿ ಎಂದು ದಾದಾ ಶುಭ ಹಾರೈಸಿದ್ದಾರೆ.
26 ವರ್ಷದ ಮೊಹಮ್ಮದ್ ಸಿರಾಜ್ 13ನೇ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಪ್ರತಿನಿಧಿಸಿದ್ದರು. ಇನ್ನು ಕೋಲ್ಕತ ನೈಟ್‌ರೈಡರ್ಸ್ ವಿರುದ್ಧದ ಪಂದ್ಯದಲ್ಲಿ ಮೊಹಮ್ಮದ್ ಸಿರಾಜ್ 4 ಓವರ್ ಬೌಲಿಂಗ್ ಮಾಡಿ 2 ಮೇಡನ್ ಸಹಿತ ಕೇವಲ 8 ರನ್ ನೀಡಿ 3 ವಿಕೆಟ್ ಕಬಳಿಸಿ ಗಮನ ಸೆಳೆದಿದ್ದರು.
ಆಸ್ಪತ್ರೆ ದಾಖಲಾಗಿದ್ದ ಟೀಂ ಇಂಡಿಯಾ ವೇಗಿ ಮೊಹಮ್ಮದ್ ಸಿರಾಜ್ ತಂದೆ ನಿಧನ!
ಸದ್ಯ ವಿರಾಟ್ ಕೊಹ್ಲಿ ನೇತೃತ್ವದ ಟೀಂ ಇಂಡಿಯಾ ಆಸ್ಟ್ರೇಲಿಯಾ ಪ್ರವಾಸದಲ್ಲಿದ್ದು, ಆಸೀಸ್ ವಿರುದ್ಧ 3 ಏಕದಿನ, 3 ಟಿ20 ಹಾಗೂ ಕೊನೆಯಲ್ಲಿ 4 ಪಂದ್ಯಗಳ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯಾಡಲಿದೆ. ಸೀಮಿತ ಓವರ್‌ಗಳ ಸರಣಿ ನವೆಂಬರ್ 27ರಿಂದ ಆರಂಭವಾಗಲಿದೆ.