Asianet Suvarna News Asianet Suvarna News

Virat Kohli Quits Test Captaincy: ಕೊಹ್ಲಿ ನಾಯಕತ್ವ ತ್ಯಜಿಸಿದ್ದರ ಬಗ್ಗೆ ತುಟಿಬಿಚ್ಚಿದ ಗಂಗೂಲಿ..!

* ವಿರಾಟ್ ಕೊಹ್ಲಿ ಟೆಸ್ಟ್ ನಾಯಕತ್ವಕ್ಕೆ ವಿದಾಯ ಘೋಷಣೆ

* ಕೊಹ್ಲಿ ನಾಯಕತ್ವ ತ್ಯಜಿಸಿದ್ದರ ಬಗ್ಗೆ ಮೊದಲ ಬಾರಿಗೆ ತುಟಿಬಿಚ್ಚಿದ ಸೌರವ್ ಗಂಗೂಲಿ

* ಕೊಹ್ಲಿ ಟೆಸ್ಟ್ ನಾಯಕತ್ವ ತ್ಯಜಿಸಿದ್ದು ಅವರ ಸ್ವಂತ ನಿರ್ಧಾರವೆಂದ ದಾದಾ

BCCI President Sourav Ganguly First Reaction After Virat Kohli Quitting India Test Captaincy kvn
Author
Bengaluru, First Published Jan 17, 2022, 11:56 AM IST

ನವದೆಹಲಿ(ಜ.17): ದಕ್ಷಿಣ ಆಫ್ರಿಕಾ ವಿರುದ್ದದ ಟೆಸ್ಟ್ ಸರಣಿಯನ್ನು ಸೋತ ಬೆನ್ನಲ್ಲೇ ವಿರಾಟ್ ಕೊಹ್ಲಿ (Virat Kohli) ಭಾರತ ಟೆಸ್ಟ್ ಕ್ರಿಕೆಟ್ ತಂಡದ ನಾಯಕತ್ವಕ್ಕೆ ವಿದಾಯ ಹೇಳಿದ್ದಾರೆ. ವಿರಾಟ್‌ ಕೊಹ್ಲಿ ಟೀಂ ಇಂಡಿಯಾ (Team India) ಟೆಸ್ಟ್‌ ನಾಯಕತ್ವಕ್ಕೆ ಹಠಾತ್‌ ರಾಜೀನಾಮೆ ಘೋಷಿಸಿದ ಬಗ್ಗೆ ಪ್ರತಿಕ್ರಿಯಿಸಿರುವ ಬಿಸಿಸಿಐ(BCCI) ಅಧ್ಯಕ್ಷ ಸೌರವ್‌ ಗಂಗೂಲಿ(Sourav Ganguly), ನಾಯಕತ್ವ ತೊರೆದಿದ್ದು ಕೊಹ್ಲಿಯ ವೈಯಕ್ತಿಕ ನಿರ್ಧಾರ ಎಂದಿದ್ದಾರೆ. ಈ ಬಗ್ಗೆ ಟ್ವೀಟ್‌ ಮಾಡಿರುವ ಅವರು, ‘ವಿರಾಟ್‌ ಕೊಹ್ಲಿ ನಾಯಕತ್ವದಲ್ಲಿ ಭಾರತ ಎಲ್ಲಾ ಮೂರೂ ಮಾದರಿಯ ಕ್ರಿಕೆಟ್‌ನಲ್ಲಿ ಕ್ಷಿಪ್ರ ಪ್ರಗತಿ ಸಾಧಿಸಿತ್ತು. ಟೆಸ್ಟ್‌ ನಾಯಕತ್ವ ತ್ಯಜಿಸುವ ನಿರ್ಧಾರ ಕೊಹ್ಲಿಯ ವೈಯಕ್ತಿಕ ಹಾಗೂ ಇದನ್ನು ಬಿಸಿಸಿಐ ಗೌರವಿಸುತ್ತದೆ. ಭವಿಷ್ಯದಲ್ಲೂ ತಂಡವನ್ನು ಎತ್ತರಕ್ಕೆ ಕೊಂಡೊಯ್ಯಲು ಅವರ ಪಾತ್ರ ಪ್ರಮುಖವಾಗಿದೆ. ಅವರೊಬ್ಬ ಶ್ರೇಷ್ಠ ಆಟಗಾರ. ವೆಲ್‌ ಡನ್‌’ ಎಂದು ಶ್ಲಾಘಿಸಿದ್ದಾರೆ.

ಯುಎಇನಲ್ಲಿ ನಡೆದ ಐಸಿಸಿ ಟಿ20 ವಿಶ್ವಕಪ್ (ICC T20 World Cup) ಟೂರ್ನಿ ಮುಕ್ತಾಯವಾಗುತ್ತಿದ್ದಂತೆಯೇ ವಿರಾಟ್ ಕೊಹ್ಲಿ, ಭಾರತ ಟಿ20 ನಾಯಕತ್ವದಿಂದ ಕೆಳಗಿಳಿದಿದ್ದರು. ಇದಾದ ಬಳಿಕ ದಕ್ಷಿಣ ಆಫ್ರಿಕಾ ಪ್ರವಾಸಕ್ಕೆ ತಂಡವನ್ನು ಆಯ್ಕೆಮಾಡುವಾಗ ಸೀಮಿತ ಓವರ್‌ಗಳ ಕ್ರಿಕೆಟ್‌ ತಂಡಕ್ಕೆ ಒಬ್ಬನೇ ನಾಯಕನಿರಲಿ ಎನ್ನುವ ಉದ್ದೇಶದಿಂದ ಕೊಹ್ಲಿಯನ್ನು ಕೆಳಗಿಳಿಸಿ ರೋಹಿತ್ ಶರ್ಮಾಗೆ (Rohit Sharma) ನಾಯಕತ್ವ ಪಟ್ಟ ಕಟ್ಟಲಾಗಿತ್ತು. ಆದರೆ ವಿರಾಟ್ ಕೊಹ್ಲಿಯನ್ನು ಟೆಸ್ಟ್ ತಂಡದ ನಾಯಕರಾಗಿ ಮುಂದುವರೆಸಲಾಗಿತ್ತು.

33 ವರ್ಷದ ವಿರಾಟ್ ಕೊಹ್ಲಿ 68 ಟೆಸ್ಟ್ ಪಂದ್ಯಗಳಲ್ಲಿ ಭಾರತ ತಂಡವನ್ನು ನಾಯಕನಾಗಿ ಮುನ್ನಡೆಸಿ 40 ಗೆಲುವುಗಳನ್ನು ತಂದುಕೊಡುವ ಮೂಲಕ, ಅತಿಹೆಚ್ಚು ಟೆಸ್ಟ್ ಪಂದ್ಯಗಳನ್ನು ಗೆಲ್ಲಿಸಿದ ಜಗತ್ತಿನ ನಾಲ್ಕನೇ ನಾಯಕ ಎನ್ನುವ ಕೀರ್ತಿಗೆ ಕೊಹ್ಲಿ ಭಾಜನರಾಗಿದ್ದರು. ಈ ಮೊದಲು ದಕ್ಷಿಣ ಆಫ್ರಿಕಾದ ಗ್ರೇಮ್ ಸ್ಮಿತ್(53), ರಿಕಿ ಪಾಂಟಿಂಗ್(43) ಹಾಗೂ ಸ್ಟೀವ್ ವಾ(41) ಅತಿಹೆಚ್ಚು ಟೆಸ್ಟ್ ಪಂದ್ಯಗಳನ್ನು ಗೆಲ್ಲಿಸಿಕೊಟ್ಟ ನಾಯಕರ ಪೈಕಿ ಮೊದಲ ಮೂರು ಸ್ಥಾನಗಳಲ್ಲಿದ್ದಾರೆ.

Virat Kohli Steps Down as Captain: ಪತಿಗಾಗಿ ಅನುಷ್ಕಾ ಶರ್ಮಾ ಭಾವುಕ ಬರಹ

ಮಹೇಂದ್ರ ಸಿಂಗ್ ಧೋನಿ (MS Dhoni) ಟೆಸ್ಟ್ ತಂಡದ ನಾಯಕತ್ವಕ್ಕೆ ವಿದಾಯ ಘೋಷಿಸುತ್ತಿದ್ದಂತೆಯೇ ನಾಯಕನಾಗಿ ಆಯ್ಕೆಯಾದ ವಿರಾಟ್ ಕೊಹ್ಲಿ ತಮ್ಮ ಆಕ್ರಮಣಕಾರಿ ಶೈಲಿಯ ನಾಯಕತ್ವದ ಮೂಲಕ ವಿದೇಶಗಳಲ್ಲೂ ತಂಡ ಭರ್ಜರಿ ಗೆಲುವು ಸಾಧಿಸುವಂತೆ ಮಾಡುವಲ್ಲಿ ಯಶಸ್ವಿಯಾಗಿದ್ದರು. ಆಸ್ಟ್ರೇಲಿಯಾ ನೆಲದಲ್ಲಿ ಟೆಸ್ಟ್ ಸರಣಿ ಗೆದ್ದ ಭಾರತ ಹಾಗೂ ಏಷ್ಯಾದ ಮೊದಲ ನಾಯಕ ಎನ್ನುವ ಹಿರಿಮೆ ಸೇರಿದಂತೆ ವಿರಾಟ್ ಕೊಹ್ಲಿ ರೆಡ್‌ ಬಾಲ್ ಕ್ರಿಕೆಟ್‌ನಲ್ಲಿ ಅಪಾರ ಸಾಧನೆ ಮಾಡಿದ್ದಾರೆ. ಚೊಚ್ಚಲ ಆವೃತ್ತಿಯ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನಲ್ಲಿ (World Test Championship) ವಿರಾಟ್ ಕೊಹ್ಲಿ ನೇತೃತ್ವದ ಟೀಂ ಇಂಡಿಯಾ ಫೈನಲ್‌ ಪ್ರವೇಶಿಸಿತ್ತಾದರೂ, ನ್ಯೂಜಿಲೆಂಡ್ ಎದುರು ಮುಗ್ಗರಿಸುವ ಮೂಲಕ ಚಾಂಪಿಯನ್ ಪಟ್ಟ ಅಲಂಕರಿಸಲು ವಿಫಲವಾಗಿತ್ತು.  

ವಿರಾಟ್ ಕೊಹ್ಲಿ ದಿಢೀರ್‌ ರಾಜೀನಾಮೆಗೆ ಕಾರಣಗಳು ಏನಿರಬಹುದು?

* ಬಿಸಿಸಿಐ ಜೊತೆ ಇತ್ತೀಚಿನ ದಿನಗಳಲ್ಲಿ ಕೊಹ್ಲಿ ಉತ್ತಮ ಬಾಂಧವ್ಯ ಹೊಂದಿರಲಿಲ್ಲ. ಇದು ರಾಜೀನಾಮೆಗೆ ಮುಖ್ಯ ಕಾರಣವಿರಬಹುದು.

* ಏಕದಿನ ನಾಯಕತ್ವ ಕಳೆದುಕೊಂಡಿದ್ದರಿಂದ ಅಸಮಾಧಾನಗೊಂಡಿದ್ದ ಕೊಹ್ಲಿ, ಟೆಸ್ಟ್‌ ನಾಯಕತ್ವವನ್ನೂ ಬಿಟ್ಟಿರಬಹುದು.

* ಟೆಸ್ಟ್‌ ಸೇರಿ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಶತಕ ಬಾರಿಸಿ 2 ವರ್ಷಕ್ಕೂ ಹೆಚ್ಚು ಸಮಯವಾಯಿತು. ಬ್ಯಾಟಿಂಗ್‌ನತ್ತ ಗಮನ ಹರಿಸಲು ನಾಯಕತ್ವ ಬಿಟ್ಟಿರಬಹುದು.

* ಕೇಪ್‌ಟೌನ್‌ ಟೆಸ್ಟ್‌ನಲ್ಲಿ ಪ್ರಸಾರಕರ ವಿರುದ್ಧ ಸ್ಟಂಪ್‌ ಮೈಕ್‌ನಲ್ಲಿ ಟೀಕಿಸಿ ವಿವಾದಕ್ಕೆ ಗುರಿಯಾಗಿದ್ದರಿಂದ ಬಿಸಿಸಿಐ ಸಿಟ್ಟಾಗಿ ನಾಯಕತ್ವ ಬಿಡುವಂತೆ ಸೂಚಿಸಿರಬಹುದು.

* 7 ವರ್ಷದಿಂದ ವಹಿಸಿಕೊಂಡಿದ್ದ ಜವಾಬ್ದಾರಿಯಿಂದ ಬಿಡುಗಡೆ ಪಡೆಯುವ ಮನಸು ಮಾಡಿರಬಹುದು.
 

Follow Us:
Download App:
  • android
  • ios