* ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಆಸ್ಪತ್ರೆಯಿಂದ ಡಿಸ್ಚಾರ್ಜ್* ಕೊರೋನಾ ಪಾಸಿಟಿವ್ ಬಂದ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ದಾಖಲಾಗಿದ್ದ ದಾದಾ* ಇದೀಗ ಮನೆಯಲ್ಲೇ 14 ದಿನಗಳ ಕಾಲ ಐಸೋಲೇಷನ್‌ನಲ್ಲಿರಲಿದ್ದಾರೆ ಸೌರವ್

ನವದೆಹಲಿ(ಡಿ.31): ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ) ಅಧ್ಯಕ್ಷ ಹಾಗೂ ಟೀಂ ಇಂಡಿಯಾ (Team India) ಮಾಜಿ ನಾಯಕ ಸೌರವ್‌ ಗಂಗೂಲಿ(Sourav Ganguly), ಕೋವಿಡ್ ಚಿಕಿತ್ಸೆ ಪಡೆದು, ಇದೀಗ ಆಸ್ಪತ್ರೆಯಿಂದ ಡಿಸ್ಚಾರ್ಜ್‌ ಆಗಿದ್ದಾರೆ. ಕೆಲದಿನಗಳ ಹಿಂದಷ್ಟೇ ಸೌರವ್ ಗಂಗೂಲಿಗೆ ಕೋವಿಡ್ 19 (COVID 19) ಸೋಂಕು ತಗುಲುತ್ತಿದ್ದಂತೆಯೇ ಮುನ್ನೆಚ್ಚರಿಕಾ ಕ್ರಮವಾಗಿ ಕೋಲ್ಕತಾದ ವುಡ್‌ಲ್ಯಾಂಡ್ಸ್‌ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದುಕೊಂಡಿದ್ದರು. 

ಸೌರವ್ ಗಂಗೂಲಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದರೂ ಸಹಾ, ಮನೆಯಲ್ಲಿಯೇ 14 ದಿನಗಳ ಕಾಲ ಐಸೋಲೇಷನ್‌ನಲ್ಲಿರಬೇಕಾಗಿದೆ. ಮೂಲಗಳ ಪ್ರಕಾರ ಸೌರವ್ ಗಂಗೂಲಿ ಅವರ ಕೊರೋನಾ ಟೆಸ್ಟ್ ನೆಗೆಟಿವ್ ಬಂದ ಹಿನ್ನೆಲೆಯಲ್ಲಿ ಎಲ್ಲಾ ಮುನ್ನೆಚ್ಚರಿಕಾ ಕ್ರಮಗಳನ್ನು ತೆಗೆದುಕೊಂಡು ಅವರನ್ನು ಆಸ್ಪತ್ರೆಯಿಂದ ಡಿಸ್ಚಾರ್ಜ್‌ ಮಾಡಲಾಗಿದೆ. ಪಿಟಿಐ ವರದಿಯ ಪ್ರಕಾರ ಸೌರವ್ ಗಂಗೂಲಿ ಅವರಿಗೆ ಕೊರೋನಾ ರೂಪಾಂತರ ತಳಿಯಾದ ಒಮಿಕ್ರೋನ್‌ ಸೋಂಕು ತಗುಲಿಲ್ಲ ಎನ್ನಲಾಗಿದೆ.

ಕೋಲ್ಕತಾದ ಯುವರಾಜ ಖ್ಯಾತಿಯ ಸೌರವ್ ಗಂಗೂಲಿ ಅವರಿಗೆ ಡಿಸೆಂಬರ್ 27ರಂದು ಕೊರೋನಾ ವೈರಸ್ (Coronavirus) ತಗುಲಿರುವುದು ಪತ್ತೆಯಾಗಿತ್ತು. ಇದರ ಬೆನ್ನಲ್ಲೇ ಪ್ರತಿಷ್ಠಿತ ಖಾಸಗಿ ಆಸ್ಪತ್ರೆಯಾದ ವುಡ್‌ಲ್ಯಾಂಡ್ಸ್‌ನಲ್ಲಿ ಹೆಚ್ಚಿನ ಚಿಕಿತ್ಸೆಗಾಗಿ ದಾಖಲಾಗಿದ್ದರು. 

ಇಂದು ಮಧ್ಯಾಹ್ನ ನಾವು ಸೌರವ್ ಗಂಗೂಲಿ ಅವರನ್ನು ಡಿಸ್ಚಾರ್ಜ್‌ ಮಾಡಿದ್ದೇವೆ. ಇನ್ನು ಮುಂದಿನ 14 ದಿನಗಳ ಕಾಲ ವೈದ್ಯರ ನಿಗಾದಲ್ಲಿ ಸೌರವ್ ಗಂಗೂಲಿ ಮನೆಯಲ್ಲಿಯೇ ಐಸೋಲೇಷನ್‌ನಲ್ಲಿರಲಿದ್ದಾರೆ. ಇದಾದ ಬಳಿಕ ಮುಂದಿನ ಚಿಕಿತ್ಸೆಯ ಕುರಿತಂತೆ ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದು ಆಸ್ಪತ್ರೆಯ ಅಧಿಕಾರಿಗಳು ಪಿಟಿಐ ಸುದ್ದಿಸಂಸ್ಥೆಗೆ ತಿಳಿಸಿವೆ ಎಂದು ವರದಿಯಾಗಿದೆ.

Sourav Ganguly Health Update: ಗಂಗೂಲಿಗೆ ಕಾಕ್‌ಟೇಲ್‌ ಥೆರಪಿ ಚಿಕಿತ್ಸೆ

ಸೌರವ್‌ ಗಂಗೂಲಿಗೆ (Sourav Ganguly) ಮುನ್ನೆಚ್ಚರಿಕೆ ಕ್ರಮವಾಗಿ ‘ಮೊನೊಕ್ಲೊನಲ್‌ ಆ್ಯಂಟಿಬಾಡಿ ಕಾಕ್‌ಟೇಲ್‌ ಥೆರಪಿ’ ಚಿಕಿತ್ಸೆ ನೀಡಲಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ. 

ಏನಿದು ಕಾಕ್‌ಟೇಲ್‌ ಚಿಕಿತ್ಸೆ?: ಕೋವಿಡ್‌ ಸೋಂಕಿತರಿಗೆ ತಲಾ 10 ಎಂಎಲ್‌ ಕ್ಯಾಸಿರಿವಿಮ್ಯಾಬ್‌ ಮತ್ತು ಇಮ್ಡಿವಿಮ್ಯಾಬ್‌ ಎನ್ನುವ ಔಷಧಗಳ ಮಿಶ್ರಣವನ್ನು ದ್ರವ ರೂಪದಲ್ಲಿ ಚುಚ್ಚುಮದ್ದಿನ ಮೂಲಕ ನೀಡಲಾಗುತ್ತದೆ. ಈ ಔಷಧವು ವೈರಸ್‌ ಶ್ವಾಸಕೋಶಕ್ಕೆ ತಲುಪುವುದನ್ನು ನಿಯಂತ್ರಿಸುತ್ತದೆ. ರೂಪಾಂತರಿ ವೈರಸ್‌ ವಿರುದ್ಧವೂ ಇದು ಪರಿಣಾಮಕಾರಿ ಎನ್ನಲಾಗಿದೆ. ಈ ಕಾಕ್‌ಟೇಲ್‌ ಔಷಧಕ್ಕೆ ಪ್ರತಿ ಡೋಸ್‌ಗೆ ಅಂದಾಜು 60,000 ರುಪಾಯಿ ಆಗಲಿದೆ.

ಸೌರವ್ ಗಂಗೂಲಿ 2021ರಲ್ಲೇ ಈ ಮೊದಲು ಎರಡು ಬಾರಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದಿದ್ದರು. ಹೃದಯ ಸಂಬಂಧಿ ಕಾರಣದಿಂದ ಆಸ್ಪತ್ರೆಗೆ ದಾಖಲಾಗಿದ್ದ ದಾದಾ ಶಸ್ತ್ರಚಿಕಿತ್ಸೆಗೂ ಒಳಗಾಗಿದ್ದರು. ಸೌರವ್‌ ಗಂಗೂಲಿಗೆ ಲಘು ಹೃದಯಾಘಾತವಾಗಿದ್ದರಿಂದ ಆ್ಯಂಜಿಯೋಪ್ಲಾಸ್ಟಿ ಸರ್ಜರಿ ಮಾಡಲಾಗಿತ್ತು. ಇದಾದ ಬಳಿಕ ಮತ್ತೊಮ್ಮೆ ಆಸ್ಪತ್ರೆಗೆ ದಾಖಲಾಗಿದ್ದರು.

ತಂಡದ ಆಯ್ಕೆಯಲ್ಲಿ ನಾಯಕ, ಕೋಚ್‌ ಪಾತ್ರವೂ ಇರಲಿ: ಶಾಸ್ತ್ರಿ

ಮುಂಬೈ: ಭಾರತ ಕ್ರಿಕೆಟ್‌ ತಂಡದ ಆಯ್ಕೆಯಲ್ಲಿ ಪ್ರಧಾನ ಕೋಚ್‌ ಹಾಗೂ ನಾಯಕ ಸಹ ಪ್ರಮುಖ ಪಾತ್ರ ವಹಿಸುವಂತಾಗಬೇಕು. ಇಬ್ಬರೂ ತಮಗೆ ಬೇಕಿರುವ ಆಟಗಾರರನ್ನು ಆಯ್ಕೆ ಮಾಡುವಂತೆ ಆಯ್ಕೆಗಾರರನ್ನು ಕೇಳುವ ಸ್ವಾತಂತ್ರ್ಯ ಸಿಗಬೇಕು ಎಂದು ಮಾಜಿ ಕೋಚ್‌ ರವಿಶಾಸ್ತ್ರಿ (Ravi Shastri) ಹೇಳಿದ್ದಾರೆ. 

ತಂಡದ ಆಯ್ಕೆ ವಿಚಾರದಲ್ಲಿ ಬಿಸಿಸಿಐ (BCCI) ಪಾಲಿಸುತ್ತಿರುವ ಪದ್ಧತಿಯ ಬಗ್ಗೆ ಶಾಸ್ತ್ರಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ‘ತಂಡದ ಆಯ್ಕೆಯಲ್ಲಿ ನಾಯಕ ಹಾಗೂ ಕೋಚ್‌ ಅಭಿಪ್ರಾಯಗಳಿಗೂ ಮನ್ನಣೆ ಸಿಗಬೇಕಿದೆ. ಅದರಲ್ಲೂ ಈ ಹಿಂದೆ ನಾನು ಹಾಗೂ ಸದ್ಯ ದ್ರಾವಿಡ್‌ರಂತಹ ಅನುಭವಿಗಳು ಇರುವಾಗ, ಆಟಗಾರರ ಆಯ್ಕೆ ವೇಳೆ ನಮ್ಮನ್ನೂ ಕೇಳಬೇಕಾಗುತ್ತದೆ’ ಎಂದು ಶಾಸ್ತ್ರಿ ಹೇಳಿದ್ದಾರೆ. ಇಂಗ್ಲೆಂಡ್‌, ಆಸ್ಪ್ರೇಲಿಯಾ ಕ್ರಿಕೆಟ್‌ ತಂಡಗಳ ಆಯ್ಕೆ ಸಮಿತಿಗಳಲ್ಲಿ ಪ್ರಧಾನ ಕೋಚ್‌ಗೂ ಸ್ಥಾನವಿದೆ. ಬಿಸಿಸಿಐ ಆಯ್ಕೆ ಸಮಿತಿಯಲ್ಲಿ ಇಲ್ಲ.