* ಮಹಿಳಾ ಕ್ರಿಕೆಟ್ ಅಭಿಮಾನಿಗಳಿಗೆ ಸಿಹಿ ಸುದ್ದಿ ನೀಡಿದ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ* 2023ರಲ್ಲಿ ಪೂರ್ಣ ಪ್ರಮಾಣದ ಮಹಿಳಾ ಐಪಿಎಲ್ ಟೂರ್ನಿ ಆಯೋಜಿಸಲು ಬಿಸಿಸಿಐ ಚಿಂತನೆ* ಉದ್ಘಾಟನಾ ಆವೃತ್ತಿಯಲ್ಲಿ ಐದರಿಂದ ಆರು ತಂಡಗಳು ಇರುವ ಸಾಧ್ಯತೆ
ಮುಂಬೈ(ಮಾ.26): ಬಿಸಿಸಿಐ (BCCI) ಕೊನೆಗೂ ಮಹಿಳಾ ಐಪಿಎಲ್ (IPL) ಆರಂಭಿಸಲು ನಿರ್ಧರಿಸಿದ್ದು, 2023ರಲ್ಲಿ ಟೂರ್ನಿಗೆ ಚಾಲನೆ ಸಿಗುವುದು ಬಹುತೇಕ ಖಚಿತವಾಗಿದೆ. ಈ ವಿಚಾರವನ್ನು ಶುಕ್ರವಾರ ನಡೆದ ಐಪಿಎಲ್ ಸಾಮಾನ್ಯ ಸಭೆಯ ಬಳಿ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ (Sourav Ganguly) ತಿಳಿಸಿದ್ದಾರೆ. ಈ ವರ್ಷ ಈ ಹಿಂದಿನಂತೆ 4 ಪ್ರದರ್ಶನ ಪಂದ್ಯಗಳು ನಡೆಯಲಿವೆ. ಈಗಾಗಲೇ ಆಸ್ಪ್ರೇಲಿಯಾ, ಇಂಗ್ಲೆಂಡ್‌ನಲ್ಲಿ ಐಪಿಎಲ್ ಮಾದರಿ ಮಹಿಳಾ ಟಿ20 ಟೂರ್ನಿಗಳು ನಡೆಯುತ್ತಿವೆ. ಮುಂದಿನ ವರ್ಷವೇ ಮಹಿಳಾ ಟಿ20 ಲೀಗ್ (Women's T20 League) ಆರಂಭಿಸುವುದಾಗಿ ಪಾಕಿಸ್ತಾನ ಕ್ರಿಕೆಟ್ ಮಂಡಳಿ(ಪಿಸಿಬಿ) ಇತ್ತೀಚೆಗೆ ಘೋಷಿಸಿತ್ತು.
ಈ ವರ್ಷ ಮಹಿಳಾ ಕೆರಿಬಿಯನ್ ಪ್ರೀಮಿಯರ್ ಲೀಗ್ ನಡೆಸುವುದಾಗಿ ವಿಂಡೀಸ್ ಕ್ರಿಕೆಟ್ ಮಂಡಳಿ ಘೋಷಿಸಿದೆ. ಹೀಗಾಗಿ ಒತ್ತಡಕ್ಕೆ ಸಿಲುಕಿದ ಬಿಸಿಸಿಐ, ಟೂರ್ನಿಯನ್ನು ಮುಂದಿನ ವರ್ಷದಿಂದ ಆರಂಭಿಸಲು ನಿರ್ಧರಿಸಿದೆ. ಆದರೆ ಇದಕ್ಕೆ ವಾರ್ಷಿಕ ಸಾಮಾನ್ಯ ಸಭೆ(ಎಜಿಎಂ)ಯಲ್ಲಿ ಒಪ್ಪಿಗೆ ಪಡೆಯಬೇಕಿದೆ. ಪೂರ್ಣ ಪ್ರಮಾಣದ ಮಹಿಳಾ ಐಪಿಎಲ್ ಟೂರ್ನಮೆಂಟ್ ಆಯೋಜಿಸಲು ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಅನುಮತಿ ಪಡೆಯಬೇಕು. ಮುಂದಿನ ವರ್ಷದಿಂದಲೇ ನಾವು ಮಹಿಳಾ ಐಪಿಎಲ್ ಟೂರ್ನಿಯನ್ನು ಆಯೋಜಿಸಲಿದ್ದೇವೆ ಎಂದು ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಹೇಳಿದ್ದಾರೆ.
ಉದ್ಘಾಟನಾ ಆವೃತ್ತಿಯಲ್ಲಿ ಐದರಿಂದ ಆರು ತಂಡಗಳು ಇರುವ ಸಾಧ್ಯತೆ ಇದೆ. ಪುರುಷರ ಐಪಿಎಲ್ ತಂಡಗಳನ್ನು ಹೊಂದಿರುವ ಫ್ರಾಂಚೈಸಿಗಳಿಗೇ ತಂಡದ ಮಾಲಿಕತ್ವ ಪಡೆಯಲು ಮೊದಲು ಪ್ರಸ್ತಾಪವಿರಿಸಲಿದ್ದು, ಒಪ್ಪದಿದ್ದರೆ ಬೇರೆಯವರಿಗೆ ಫ್ರಾಂಚೈಸಿ ಹಕ್ಕು ನೀಡುವುದಾಗಿ ತಿಳಿದುಬಂದಿದೆ. ಈಗಾಗಲೇ 3 ಐಪಿಎಲ್ ತಂಡಗಳ ಮಾಲಿಕರು, ಮಹಿಳಾ ತಂಡಗಳ ಮಾಲಿಕತ್ವವನ್ನೂ ಪಡೆಯಲು ಆಸಕ್ತಿ ತೋರಿದ್ದಾರೆ ಎನ್ನಲಾಗಿದೆ. ಈ ಆವೃತ್ತಿಯ ಐಪಿಎಲ್‌ನಲ್ಲಿ 4 ಪ್ರದರ್ಶನ ಪಂದ್ಯಗಳು: ಇನ್ನು ಇದೇ ವೇಳೆ ಐಪಿಎಲ್ ಗವರ್ನರ್ ಬ್ರಿಜೇಶ್ ಪಟೇಲ್, 15ನೇ ಆವೃತ್ತಿಯ ಐಪಿಎಲ್ ಟೂರ್ನಿಯ ವೇಳೆಯಲ್ಲಿಯೇ ಮೂರು ಮಹಿಳಾ ತಂಡಗಳನ್ನು ಒಳಗೊಂಡ 4 ಪ್ರದರ್ಶನ ಪಂದ್ಯಗಳನ್ನು ಆಯೋಜಿಸುವುದಾಗಿ ತಿಳಿಸಿದ್ದಾರೆ. ಪುರುಷರ ಐಪಿಎಲ್ ಪ್ಲೇ ಆಫ್ ಪಂದ್ಯಗಳ ವೇಳೆಯಲ್ಲಿಯೇ ಮೂರು ತಂಡಗಳು ಒಟ್ಟು 4 ಪ್ರದರ್ಶನ ಪಂದ್ಯವನ್ನು ಆಡಲಿವೆ.
ICC Women's World Cup: ದಕ್ಷಿಣ ಆಫ್ರಿಕಾ ಎದುರು ಗೆದ್ದರಷ್ಟೇ ಭಾರತಕ್ಕೆ ಸೆಮೀಸ್ ಅವಕಾಶ
ಕಳೆದ ವರ್ಷದ ಐಪಿಎಲ್ ಟೂರ್ನಿಯ ಎರಡನೇ ಭಾಗವು ಯುಎಇಗೆ ಸ್ಥಳಾಂತರವಾಗಿದ್ದರಿಂದ, ಮಹಿಳಾ ಐಪಿಎಲ್ ಪಂದ್ಯಗಳನ್ನು ಆಯೋಜಿಸಲು ಬಿಸಿಸಿಐಗೆ ಸಾಧ್ಯವಾಗಿರಲಿಲ್ಲ. ಆದರೆ 2020ರ ಸಂಪೂರ್ಣ ಐಪಿಎಲ್ ಟೂರ್ನಿಯು ಯುಎಇನಲ್ಲಿಯೇ ನಡೆದಿದ್ದರಿಂದ, ಆ ವರ್ಷ ಮಹಿಳಾ ಐಪಿಎಲ್ ಪಂದ್ಯಗಳು ನಡೆದಿದ್ದರು. 2020ರ ಮಹಿಳಾ ಐಪಿಎಲ್ ಟೂರ್ನಿಯಲ್ಲಿ ಟ್ರಯಲ್‌ಬ್ಲೇಸರ್ ತಂಡವು ಚಾಂಪಿಯನ್ ಪಟ್ಟ ಅಲಂಕರಿಸಿತ್ತು.
ಮಹಿಳಾ ವಿಶ್ವಕಪ್: ಭಾರತ ನಾಳೆ ಗೆದ್ದರೆ ಸೆಮೀಸ್‌ಗೆ ಸೋತರೆ ಮನೆಗೆ!
ಕ್ರೈಸ್ಟ್‌ಚರ್ಚ್: ಐಸಿಸಿ ಮಹಿಳಾ ಏಕದಿನ ವಿಶ್ವಕಪ್‌ನಲ್ಲಿ (ICC Women's World Cup) ಸೆಮಿಫೈನಲ್ ಪ್ರವೇಶಿಸುವ ನಿರೀಕ್ಷೆಯಲ್ಲಿರುವ ಕಳೆದ ಬಾರಿ ರನ್ನರ್-ಅಪ್ ಭಾರತ ನಿರ್ಣಾಯಕ ಪಂದ್ಯದಲ್ಲಿ ಭಾನುವಾರ ದಕ್ಷಿಣ ಆಫ್ರಿಕಾ ವಿರುದ್ಧ ಸೆಣಸಲಿದೆ. ಆಡಿರುವ 6 ಪಂದ್ಯಗಳಲ್ಲಿ 3ರಲ್ಲಿ ಗೆದ್ದಿರುವ ಮಿಥಾಲಿ ರಾಜ್ (Mithali Raj) ನೇತೃತ್ವದ ಭಾರತ ಅಂಕಪಟ್ಟಿಯಲ್ಲಿ 5ನೇ ಸ್ಥಾನದಲ್ಲಿದ್ದು, ಗೆದ್ದರೆ ಮಾತ್ರ ಸೆಮೀಸ್‌ಗೆ ಲಗ್ಗೆ ಇಡಲಿದೆ. ಸೋತರೆ ಟೂರ್ನಿಯಿಂದ ಹೊರಬೀಳಲಿದೆ.
ಈಗಾಗಲೇ ಆಸ್ಪ್ರೇಲಿಯಾ ಮತ್ತು ದ.ಆಫ್ರಿಕಾ ಸೆಮೀಸ್ ಪ್ರವೇಶಿಸಿದ್ದು, ಉಳಿದ 2 ಸ್ಥಾನಗಳಿಗಾಗಿ ಭಾರತ, ಇಂಗ್ಲೆಂಡ್ ಮತ್ತು ವಿಂಡೀಸ್ ನಡುವೆ ಪೈಪೋಟಿ ಏರ್ಪಟ್ಟಿದೆ. ರೌಂಡ್ ರಾಬಿನ್ ಹಂತದ ಪಂದ್ಯಗಳನ್ನು ಪೂರ್ಣಗೊಳಿಸಿರುವ ವಿಂಡೀಸ್ 7 ಅಂಕ ಸಂಪಾದಿಸಿದ್ದು, ಇಂಗ್ಲೆಂಡ್ ಬಳಿ 6 ಅಂಕ ಇದೆ. ಶನಿವಾರ ಬಾಂಗ್ಲಾದೇಶ ವಿರುದ್ಧ ಇಂಗ್ಲೆಂಡ್ ಸೆಣಸಲಿದ್ದು, ಗೆದ್ದರೆ 3ನೇ ತಂಡವಾಗಿ ಸೆಮೀಸ್ ಪ್ರವೇಶಿಸಲಿದೆ. ಆಗ ನಾಲ್ಕನೇ ಸ್ಥಾನಕ್ಕಾಗಿ ಭಾರತ ಹಾಗೂ ವಿಂಡೀಸ್ ನಡುವೆ ನೇರ ಸ್ಪರ್ಧೆ ಏರ್ಪಡಲಿದೆ. ಒಂದು ವೇಳೆ ಭಾರತ-ದ.ಆಫ್ರಿಕಾ ಪಂದ್ಯ ಮಳೆಯಿಂದ ರದ್ದಾದರೆ ಭಾರತಕ್ಕೆ ಲಾಭವಾಗಲಿದೆ. ನೆಟ್ ರನ್‌ರೇಟ್ ಆಧಾರದಲ್ಲಿ ವಿಂಡೀಸನ್ನು ಹಿಂದಿಕ್ಕಿ ಮಿಥಾಲಿ ಪಡೆ ನಾಕೌಟ್‌ಗೆ ಲಗ್ಗೆ ಇಡಲಿದೆ. ಒಂದು ವೇಳೆ ಬಾಂಗ್ಲಾ ವಿರುದ್ಧ ಇಂಗ್ಲೆಂಡ್, ದ.ಆಫ್ರಿಕಾ ವಿರುದ್ಧ ಭಾರತ ಸೋತರೆ ವಿಂಡೀಸ್ ನೇರವಾಗಿ ಸೆಮೀಸ್ ತಲುಪಲಿದೆ. ನೆಟ್ ರನ್‌ರೇಟ್ ಅಧಾರದಲ್ಲಿ ಇಂಗ್ಲೆಂಡ್ ಅಥವಾ ಭಾರತ ಅಂತಿಮ 4ರ ಘಟ್ಟಕ್ಕೆ ಅರ್ಹತೆ ಪಡೆಯಲಿದೆ.
ಪಂದ್ಯ ಆರಂಭ: ಬೆಳಗ್ಗೆ 6.30ಕ್ಕೆ
ನೇರ ಪ್ರಸಾರ: ಸ್ಟಾರ್ ಸ್ಪೋರ್ಟ್ಸ್
