ನವದೆಹಲಿ(ಏ.18): ಕೊರೋನಾ ಸೋಂಕಿನಿಂದಾಗಿ ದೇಶೀಯ ಕ್ರಿಕೆಟ್‌ ಪಂದ್ಯಾವಳಿಗಳನ್ನು ನಡೆಸಲು ಹೆಣಗಾಡುತ್ತಿರುವ ಬಿಸಿಸಿಐ ಇದೀಗ ಈ ಸಾಲಿನ ಪ್ರತಿಷ್ಠಿತ ರಣಜಿ ಪಂದ್ಯಾವಳಿಯನ್ನು ಡಿಸೆಂಬರ್‌ನಿಂದ ನಡೆಸಲು ಚಿಂತನೆ ನಡೆಸಿದೆ. 

ಇದಕ್ಕೂ ಮುನ್ನ ಸೆಪ್ಟೆಂಬರ್‌ನಲ್ಲಿ ಸಯ್ಯದ್‌ ಮುಸ್ತಾಕ್‌ ಅಲಿ ಟಿ20 ಪಂದ್ಯಾವಳಿಯನ್ನು ಆಡಿಸಲು ಸಿದ್ಧತೆ ನಡೆದಿದೆ. ಆದರೆ ಇರಾನಿ ಟ್ರೋಫಿ, ದೇವಧರ್‌ ಟ್ರೋಫಿ ಮತ್ತು ದುಲೀಪ್‌ ಕಪ್‌ ಪಂದ್ಯಾವಳಿಗಳನ್ನು ನಡೆಸದಿರುವ ಬಗ್ಗೆ ನಿರ್ಧರಿಸಲಾಗಿದೆ ಎಂದು ಸ್ಪಷ್ಟಪಡಿಸಿದೆ.

2028ರ ಒಲಿಂಪಿಕ್ಸ್‌ಗೆ ಭಾರತ ಕ್ರಿಕೆಟ್‌ ತಂಡ: ಬಿಸಿಸಿಐ ಗ್ರೀನ್ ಸಿಗ್ನಲ್‌

ಅಕ್ಟೋಬರ್ ಹಾಗೂ ನವೆಂಬರ್‌ನಲ್ಲಿ ಭಾರತದಲ್ಲೇ ಐಸಿಸಿ ಟಿ20 ವಿಶ್ವಕಪ್ ಜರುಗಲಿದೆ. 15ನೇ ಆವೃತ್ತಿಯ ಐಪಿಎಲ್‌ ಟೂರ್ನಿಗೂ ಮುನ್ನ ಮೆಗಾ ಹರಾಜು ನಡೆಯಲಿದೆ. ಇದಕ್ಕೂ ಮುನ್ನ ಫ್ರಾಂಚೈಸಿಗಳು ತಮಗೆ ಬೇಕಾದ ಆಟಗಾರರನ್ನು ಖರೀದಿಸಲು ಸಹಾಯವಾಗಲಿದೆ ಎಂದು ಸೀಮಿತ ಓವರ್‌ಗಳ ಸರಣಿಯಾದ ವಿಜಯ್ ಹಜಾರೆ ಟೂರ್ನಿ ಹಾಗೂ ಸಯ್ಯದ್ ಮುಷ್ತಾಕ್ ಅಲಿ ಟಿ20 ಟೂರ್ನಿ ಆಯೋಜಿಸುವ ಲೆಕ್ಕಾಚಾರ ಹಾಕಿಕೊಂಡಿದೆ ಬಿಸಿಸಿಐ. 87 ವರ್ಷಗಳ ಇತಿಹಾಸದಲ್ಲಿ ಮೊಟ್ಟ ಮೊದಲ ಬಾರಿಗೆ ಕಳೆದ ವರ್ಷ(2020) ಕೊರೋನಾ ಕಾರಣದಿಂದಾಗಿ ರಣಜಿ ಟೂರ್ನಿಯನ್ನು ರದ್ದು ಮಾಡಲಾಗಿತ್ತು.