ಟೀಂ ಇಂಡಿಯಾ ದ್ವಿಪಕ್ಷೀಯ ಸರಣಿಯನ್ನಾಡಲು ವರ್ಷಾಂತ್ಯದಲ್ಲಿ ಆಸೀಸ್ ಪ್ರವಾಸ ಕೈಗೊಳ್ಳಲಿದೆ. ಈ ವೇಳೆ 5 ಪಂದ್ಯಗಳ ಟೆಸ್ಟ್ ಸರಣಿ ಆಡಲು ಬಿಸಿಸಿಐ ಮುಂದೆ ಆಸ್ಟ್ರೇಲಿಯಾ ಪ್ರಸ್ತಾಪವನ್ನಿರಿಸಿತ್ತು. ಈ ಬಗ್ಗೆ ಬಿಸಿಸಿಐ ತುಟಿಬಿಚ್ಚಿದೆ. ಬಿಸಿಸಿಐ ಹೇಳಿದ್ದೇನು ನೀವೇ ನೋಡಿ.
ನವದೆಹಲಿ(ಏ.23): ಕ್ರಿಕೆಟ್ ಆಸ್ಪ್ರೇಲಿಯಾ ತನಗಾಗುವ ನಷ್ಟ ಸರಿದೂಗಿಸಲು ಭಾರತ ವಿರುದ್ಧ 4ರ ಬದಲು 5 ಪಂದ್ಯಗಳ ಟೆಸ್ಟ್ ಸರಣಿ ಆಯೋಜಿಸುವ ಬಗ್ಗೆ ಮಂಗಳವಾರವಷ್ಟೇ ಪ್ರಸ್ತಾಪಿಸಿತ್ತು. ಗುರುವಾರ ಪ್ರತಿಕ್ರಿಯಿಸಿರುವ ಬಿಸಿಸಿಐ ಹಿರಿಯ ಅಧಿಕಾರಿ ತಕ್ಷಣಕ್ಕೆ ಯಾವುದೇ ನಿರ್ಧಾರ ಕೈಗೊಳ್ಳುವುದಿಲ್ಲ ಎಂದು ತಿಳಿಸಿದ್ದಾರೆ.
‘ಕ್ರಿಕೆಟ್ ಆಸ್ಪ್ರೇಲಿಯಾ ಪ್ರಸ್ತಾಪಿಸಿದ್ದರ ಬಗ್ಗೆ ಚಿಂತನೆ ನಡೆಸಿಲ್ಲ. ಆಸ್ಪ್ರೇಲಿಯಾದಲ್ಲಿ ಸೆ.30ರ ವರೆಗೂ ವಿದೇಶಿ ಪ್ರವಾಸಿಗರ ಪ್ರವೇಶಕ್ಕೆ ನಿರ್ಬಂಧವಿದೆ. ಟಿ20 ವಿಶ್ವಕಪ್ ನಡೆಯಬೇಕಿದೆ. ಆನಂತರವಷ್ಟೇ ಟೆಸ್ಟ್ ಸರಣಿ ಬಗ್ಗೆ ಯೋಚನೆ. ಪರಿಸ್ಥಿತಿ ನೋಡಿಕೊಂಡು ನಿರ್ಧರಿಸುತ್ತೇವೆ’ ಎಂದು ಬಿಸಿಸಿಐ ಅಧಿಕಾರಿ ತಿಳಿಸಿದ್ದಾರೆ.
ಅಕ್ಟೋಬರ್ 18ರಿಂದ ನವೆಂಬರ್ 15ರವರೆಗೆ ಬಹುನಿರೀಕ್ಷಿತ ಟಿ20 ವಿಶ್ವಕಪ್ ಟೂರ್ನಿ ನಡೆಯಬೇಕಿದೆ. ಆದರೆ ಕರೋನಾ ಭೀತಿಯಿಂದಾಗಿ ಟೂರ್ನಿ ನಡೆಯುತ್ತಾ ಎನ್ನುವ ಅನುಮಾನ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಸಾಗುತ್ತಿದೆ. ಆಸ್ಟ್ರೇಲಿಯಾ ತನ್ನೆಲ್ಲಾ ಗಡಿಗಳನ್ನು ಬಂದ್ ಮಾಡಿದ್ದು, ವಿದೇಶಿ ಪ್ರವಾಸಿಗರ ಮೇಲೂ ನಿಷೇಧ ಹೇರಿದೆ.

ಭಾರತ-ಆಸೀಸ್ ಟೆಸ್ಟ್ ಸರಣಿಯಲ್ಲಿ 5 ಪಂದ್ಯ?
ಕೊರೋನಾ ವೈರಸ್‌ನಿಂದಾಗಿ ಜಗತ್ತಿನಾದ್ಯಂತ ಎಲ್ಲಾ ಕ್ರೀಡಾ ಚಟುವಟಿಕೆಗಳು ಒಂದೋ ಮುಂದೂಡಲ್ಪಟ್ಟಿವೆ, ಇಲ್ಲವೇ ರದ್ದಾಗಿವೆ. ಟೋಕಿಯೋ ಒಲಿಂಪಿಕ್ಸ್ ಕ್ರೀಡಾಕೂಟ ಒಂದು ವರ್ಷಕ್ಕೆ ಮುಂದೂಡಲ್ಪಟ್ಟಿದೆ. ಇನ್ನು 13ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಅನಿರ್ದಿಷ್ಟಾವಧಿಗೆ ಮುಂದೂಡಲ್ಪಟ್ಟಿದೆ. ವರ್ಷಾಂತ್ಯದಲ್ಲಿ ಟೀಂ ಇಂಡಿಯಾ ಆಸ್ಟ್ರೇಲಿಯಾ ವಿರುದ್ದ ದೀರ್ಘಾಕಾಲಿಕ ದ್ವಿಪಕ್ಷೀಯ ಸರಣಿ ಆಡಲಿದೆ. ಇದೇ ಸರಣಿಯಲ್ಲಿ ಟೀಂ ಇಂಡಿಯಾ ಆಸ್ಟ್ರೇಲಿಯಾ ವಿರುದ್ಧ ಒಂದು ಅಹರ್ನಿಶಿ(ಡೇ ಅಂಡ್ ನೈಟ್) ಟೆಸ್ಟ್ ಪಂದ್ಯವನ್ನಾಡಲಿದೆ ಎನ್ನಲಾಗಿದೆ.
2018ರಲ್ಲಿ ಟೀಂ ಇಂಡಿಯಾ ಆಸ್ಟ್ರೇಲಿಯಾ ಪ್ರವಾಸ ಕೈಗೊಂಡಿತ್ತು. ಮೊಟ್ಟ ಮೊದಲ ಬಾರಿಗೆ ಆಸ್ಟ್ರೇಲಿಯಾ ನೆಲದಲ್ಲಿ ಟೆಸ್ಟ್ ಸರಣಿ ಗೆದ್ದು ವಿರಾಟ್ ಪಡೆ ಚಾರಿತ್ರಿಕ ಸಾಧನೆ ಮಾಡಿತ್ತು. ಆದರೆ ಆಗ ಆಸ್ಟ್ರೇಲಿಯಾ ತಂಡದಲ್ಲಿ ಡೇವಿಡ್ ವಾರ್ನರ್ ಹಾಗೂ ಸ್ಟೀವ್ ಸ್ಮಿತ್ ಅನುಪಸ್ಥಿತಿಯಲ್ಲಿ ಕಣಕ್ಕಿಳಿದು ಭಾರತದ ಎದುರು ಮುಖಭಂಗ ಅನುಭವಿಸಿತ್ತು. ಆದರೀಗ ಸ್ಮಿತ್ ಹಾಗೂ ವಾರ್ನರ್ ತಂಡದಲ್ಲಿದ್ದು ರೆಡ್ ಬಾಲ್ ಕ್ರಿಕೆಟ್‌ನಲ್ಲಿ ಅದ್ಭುತ ಫಾರ್ಮ್‌ನಲ್ಲಿದ್ದಾರೆ. ಹೀಗಾಗಿ ಐಸಿಸಿ ನಂ.1 ಟೆಸ್ಟ್ ತಂಡವಾದ ಭಾರತ, ಆಸೀಸ್ ವಿರುದ್ಧ ಯಾವ ರೀತಿಯ ಪ್ರದರ್ಶನ ನೀಡಲಿದೆ ಎನ್ನುವ ಕುತೂಹಲ ಜೋರಾಗಿದೆ. ಇದೆಲ್ಲವೂ ಸಾಧ್ಯವಾಗಬೇಕಿದ್ದರೆ ಕೊರೋನಾ ವೈರಸ್ ನಿಯಂತ್ರಣಕ್ಕೆ ಬರಬೇಕಿದೆ.

