ಸಿಡ್ನಿ(ಏ.22): ಕೊರೋನಾ ಸೋಂಕಿನಿಂದಾಗಿ ಆಗಿರುವ ನಷ್ಟವನ್ನು ಸರಿದೂಗಿಸಲು ಕ್ರಿಕೆಟ್‌ ಆಸ್ಪ್ರೇಲಿಯಾ ವಿವಿಧ ಯೋಜನೆಗಳನ್ನು ರೂಪಿಸುತ್ತಿದ್ದು, ಈ ವರ್ಷಾಂತ್ಯದಲ್ಲಿ ಭಾರತ ವಿರುದ್ಧ ನಡೆಯಲಿರುವ ಟೆಸ್ಟ್‌ ಸರಣಿಯಲ್ಲಿ 4 ಪಂದ್ಯಗಳ ಬದಲಿಗೆ 5 ಪಂದ್ಯಗಳನ್ನು ನಡೆಸಲು ಚಿಂತಿಸಿದೆ. 

ಈ ಬಗ್ಗೆ ಬಿಸಿಸಿಐನೊಂದಿಗೆ ಚರ್ಚಿಸುವುದಾಗಿ ಕ್ರಿಕೆಟ್‌ ಆಸ್ಪ್ರೇಲಿಯಾ ಅಧಿಕಾರಿಗಳು ತಿಳಿಸಿದ್ದಾರೆ. ಟಿ20 ವಿಶ್ವಕಪ್‌ ಬಳಿಕ ಟೆಸ್ಟ್‌ ಸರಣಿ ಆರಂಭಗೊಳ್ಳಲಿದೆ. ಇದೇ ವೇಳೆ ಖಾಲಿ ಕ್ರೀಡಾಂಗಣಗಳಲ್ಲಿ ಪಂದ್ಯ ನಡೆಸುವ ಬಗ್ಗೆಯೂ ಚಿಂತನೆ ನಡೆಸಲಾಗುತ್ತಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಭಾರತದಲ್ಲೇ ಮಹಿಳಾ ವಿಶ್ವಕಪ್ ವೀಕ್ಷಿಸಿದರ ಸಂಖ್ಯೆ ಬರೋಬ್ಬರಿ 90 ಲಕ್ಷ..!

ಕೊರೋನಾ ವೈರಸ್ ಭೀತಿಯಿಂದಾಗಿ ಆಸ್ಟ್ರೇಲಿಯಾ ತನ್ನೆಲ್ಲಾ ಗಡಿಗಳನ್ನು ಬಂದ್ ಮಾಡಿದ್ದು, ವಿದೇಶಿ ಪ್ರವಾಸಿಗರ ಮೇಲೆ ನಿಷೇಧ ಹೇರಿದೆ. ಮಾರ್ಚ್ 08ರಂದು ಮಹಿಳಾ ಟಿ20 ವಿಶ್ವಕಪ್ ಫೈನಲ್ ಪಂದ್ಯಕ್ಕೆ ಮೆಲ್ಬರ್ನ್ ಕ್ರಿಕೆಟ್ ಮೈದಾನ ಆತಿಥ್ಯವನ್ನು ವಹಿಸಿತ್ತು. ಈ ಪಂದ್ಯದಲ್ಲಿ ಭಾರತವನ್ನು 85 ರನ್‌ಗಳಿಂದ ಮಣಿಸಿ ಆಸ್ಟ್ರೇಲಿಯಾ ಚಾಂಪಿಯನ್ ಪಟ್ಟ ಅಲಂಕರಿಸಿತ್ತು. ಈ ಪಂದ್ಯವನ್ನು ವೀಕ್ಷಿಸಲು 86 ಸಾವಿರಕ್ಕೂ ಅಧಿಕ ಮಂದಿ ಮೈದಾನಕ್ಕೆ ಆಗಮಿಸಿದ್ದರು. ಇದಾದ ಬಳಿಕ ಆಸೀಸ್‌ನಲ್ಲಿ ಯಾವುದೇ ಕ್ರೀಡಾಚಟುವಟಿಕೆಗಳು ಜರುಗಿಲ್ಲ.

ಸಾಮಾನ್ಯವಾಗಿ ಭಾರತ-ಆಸ್ಟ್ರೇಲಿಯಾ ನಡುವೆ 4 ಪಂದ್ಯಗಳ ಟೆಸ್ಟ್ ಸರಣಿ ನಡೆಯುತ್ತದೆ. ಇನ್ನು ಸಾಂಪ್ರದಾಯಿಕ ಎದುರಾಳಿಗಳಾದ ಇಂಗ್ಲೆಂಡ್ ಹಾಗೂ ಆಸ್ಟ್ರೇಲಿಯಾ ನಡುವೆ ಆಷಸ್ ಸರಣಿಯು ಐದು ಪಂದ್ಯಗಳ ಸರಣಿಯಾಗಿರುತ್ತದೆ.