ಟೆಸ್ಟ್ ಕ್ರಿಕೆಟ್‌ನಲ್ಲಿ ಗೌತಮ್ ಗಂಭೀರ್ ಅವರ ಕಳಪೆ ದಾಖಲೆಯಿಂದಾಗಿ ಬಿಸಿಸಿಐ ಹೊಸ ಕೋಚ್‌ಗಾಗಿ ಹುಡುಕಾಟ ನಡೆಸುತ್ತಿದೆ. ಈ ಹಿನ್ನೆಲೆಯಲ್ಲಿ ವಿವಿಎಸ್ ಲಕ್ಷ್ಮಣ್ ಅವರನ್ನು ಸಂಪರ್ಕಿಸಲಾಗಿದ್ದು, ಅವರು ಈ ಪ್ರಸ್ತಾಪವನ್ನು ನಿರಾಕರಿಸಿದ್ದಾರೆ. 2026ರ ಆಗಸ್ಟ್‌ ವೇಳೆಗೆ ಹೊಸ ಕೋಚ್ ನೇಮಕವಾಗುವ ಸಾಧ್ಯತೆಯಿದೆ.

ಜೈಪುರ: ಏಕದಿನ, ಟಿ20 ಮಾದರಿಯಲ್ಲಿ ಭಾರತ ತಂಡದ ಕೋಚ್‌ ಆಗಿ ಗೌತಮ್‌ ಗಂಭೀರ್‌ ಉತ್ತಮ ದಾಖಲೆ ಹೊಂದಿದ್ದರೂ, ತಮ್ಮ ಅವಧಿಯಲ್ಲಿ ಈಗಾಗಲೇ 10 ಟೆಸ್ಟ್‌ ಸೋತಿರುವ ಅವರನ್ನು ಬದಲಿಸಲು ಬಿಸಿಸಿಐ ಮತ್ತೊಮ್ಮೆ ಪ್ರಯತ್ನ ಆರಂಭಿಸಿದೆ ಎಂದು ಹೇಳಲಾಗುತ್ತಿದೆ.

ಈ ಬಗ್ಗೆ ಸುದ್ದಿ ಸಂಸ್ಥೆಯೊಂದು ವರದಿ ಮಾಡಿದ್ದು, ಇತ್ತೀಚೆಗೆ ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿ ಸೋಲಿನ ಬಳಿಕ ಬಿಸಿಸಿಐನ ಪ್ರಮುಖ ಪದಾಧಿಕಾರಿಯೊಬ್ಬರು, ಟೆಸ್ಟ್‌ ತಂಡಕ್ಕೆ ಕೋಚ್‌ ಆಗುವಂತೆ ವಿವಿಎಸ್‌ ಲಕ್ಷ್ಮಣ್‌ರನ್ನು ಮತ್ತೊಮ್ಮೆ ಅನೌಪಚಾರಿಕವಾಗಿ ಸಂಪರ್ಕಿಸಿದ್ದರು ಎನ್ನಲಾಗಿದೆ. ಬಿಸಿಸಿಐನ ಸೆಂಟರ್‌ ಆಫ್‌ ಎಕ್ಸಲೆನ್ಸ್‌ನ ಮುಖ್ಯಸ್ಥರಾಗಿ ಕಾರ್ಯನಿರ್ವಹಿಸುತ್ತಿರುವ ಲಕ್ಷ್ಮಣ್‌, ಕ್ರಿಕೆಟ್‌ ಬೋರ್ಡ್‌ನ ಪ್ರಸ್ತಾಪವನ್ನು ನಯವಾಗಿಯೇ ತಿರಸ್ಕರಿಸಿದ್ದು, ಕೋಚ್‌ ಆಗಲು ತಮಗೆ ಮನಸಿಲ್ಲ ಎಂದಿದ್ದಾರೆ ಎಂದು ವರದಿಯಲ್ಲಿ ಹೇಳಲಾಗಿದೆ. ಈ ಹಿಂದೆಯೂ ಗಂಭೀರ್‌ರ ಸ್ಥಾನಕ್ಕೆ ಲಕ್ಷ್ಮಣ್‌ರನ್ನು ತರಲು ಬಿಸಿಸಿಐ ಪ್ರಯತ್ನ ನಡೆಸಿತ್ತು. ಆದರೆ ಆ ಪ್ರಯತ್ನಕ್ಕೆ ಆಗಲೂ ಫಲ ಸಿಕ್ಕಿರಲಿಲ್ಲ.

ಭಾರತ ತಂಡಕ್ಕೆ ಮುಂದಿನ ಟೆಸ್ಟ್‌ ಇರುವುದು 2026ರ ಆಗಸ್ಟ್‌ನಲ್ಲಿ. 2025-27ರ ವಿಶ್ವ ಟೆಸ್ಟ್‌ ಚಾಂಪಿಯನ್‌ಶಿಪ್‌ನಲ್ಲಿ ತಂಡಕ್ಕೆ ಇನ್ನು 3 ಸರಣಿ ಬಾಕಿ ಇದೆ. ಅಷ್ಟೊತ್ತಿಗೆ ಹೊಸ ಕೋಚ್‌ ಅನ್ನು ಹುಡುಕುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.

ವಿಜಯ್‌ ಹಜಾರೆ: ಅಭಿಯಾನ ಮುಗಿಸಿದ ರೋಹಿತ್‌ ಶರ್ಮಾ

ನವದೆಹಲಿ: ಭಾರತ ತಂಡದ ಮಾಜಿ ನಾಯಕ ರೋಹಿತ್‌ ಶರ್ಮಾ ವಿಜಯ್‌ ಹಜಾರೆ ಟೂರ್ನಿಯಲ್ಲಿ ತಮ್ಮ ಅಭಿಯಾನ ಮುಗಿಸಿದ್ದಾರೆ. ಬಿಸಿಸಿಐ ಸೂಚನೆಯಂತೆ 2 ಪಂದ್ಯಗಳನ್ನಾಡಿರುವ ರೋಹಿತ್‌, ಶುಕ್ರವಾರ ಉತ್ತರಾಖಂಡ ವಿರುದ್ಧದ ಪಂದ್ಯ ಮುಕ್ತಾಯಗೊಂಡ ಬಳಿಕ ಜೈಪುರದಿಂದ ಮುಂಬೈಗೆ ತೆರಳಿದ್ದಾಗಿ ತಿಳಿದುಬಂದಿದೆ.

ಇನ್ನು ವಿರಾಟ್‌ ಕೊಹ್ಲಿ ಮತ್ತೊಂದು ಪಂದ್ಯ ಆಡಲು ಇಚ್ಛಿಸಿದ್ದಾರೆ ಎನ್ನಲಾಗಿದೆ. ಅವರು ಗುಜರಾತ್‌ ವಿರುದ್ಧದ ಪಂದ್ಯದ ಬಳಿಕ ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡರು. ಆದರೆ ಕೊಹ್ಲಿ ಜ.6ರಂದು ರೈಲ್ವೇಸ್‌ ವಿರುದ್ಧ ನಡೆಯಲಿರುವ ಪಂದ್ಯದಲ್ಲಿ ಆಡಲು ವಾಪಸಾಗಬಹುದು ಎನ್ನಲಾಗುತ್ತಿದೆ. ಜ.11ರಿಂದ ನ್ಯೂಜಿಲೆಂಡ್‌ ವಿರುದ್ಧ ಏಕದಿನ ಸರಣಿ ನಡೆಯಲಿದ್ದು, ರೋಹಿತ್‌ ಹಾಗೂ ಕೊಹ್ಲಿ ಇಬ್ಬರೂ ಆ ಸರಣಿಯಲ್ಲೂ ತಮ್ಮ ಲಯ ಮುಂದುವರಿಸಲು ಎದುರು ನೋಡುತ್ತಿದ್ದಾರೆ.

ಸತತ 5 ಶತಕ: ಧೃವ್‌ ಶೋರೆ ಹೊಸ ದಾಖಲೆ!

ರಾಜ್‌ಕೋಟ್‌: ವಿದರ್ಭ ತಂಡದ ಬ್ಯಾಟರ್‌ ಧೃವ್‌ ಶೋರೆ ಲಿಸ್ಟ್‌ ‘ಎ’ ಕ್ರಿಕೆಟ್‌ನಲ್ಲಿ ಅತಿಹೆಚ್ಚು ಸತತ ಶತಕಗಳನ್ನು ಬಾರಿಸಿದ ವಿಶ್ವ ದಾಖಲೆಯನ್ನು ಸರಿಗಟ್ಟಿದ್ದಾರೆ. ಅವರು ಶುಕ್ರವಾರ ಹೈದ್ರಾಬಾದ್‌ ವಿರುದ್ಧ ನಡೆದ ಪಂದ್ಯದಲ್ಲಿ ಅಜೇಯ 109 ರನ್‌ ಗಳಿಸಿದರು. ಇದು ಅವರ ಸತತ 5ನೇ ಶತಕ. ಕಳೆದ ಆವೃತ್ತಿಯ ವಿಜಯ್‌ ಹಜಾರೆ ಟೂರ್ನಿಯ ಕ್ವಾರ್ಟರ್‌ ಫೈನಲ್‌, ಸೆಮಿಫೈನಲ್‌ ಹಾಗೂ ಫೈನಲ್‌ನಲ್ಲಿ ಶತಕ ಸಿಡಿಸಿದ್ದ ಧೃವ್‌, ಈ ವರ್ಷ ವಿಜಯ್‌ ಹಜಾರೆ ಟೂರ್ನಿಯ ಮೊದಲ ಪಂದ್ಯದಲ್ಲೂ ಸೆಂಚುರಿ ಬಾರಿಸಿದ್ದರು. 2022-23ರ ವಿಜಯ್‌ ಹಜಾರೆ ಟೂರ್ನಿಯಲ್ಲಿ ತ.ನಾಡಿನ ಎನ್‌.ಜಗದೀಶ್‌ ಸತತ 5 ಶತಕ ಬಾರಿಸಿ ವಿಶ್ವದಾಖಲೆ ಬರೆದಿದ್ದರು.