ಬಿಸಿಸಿಐ ಕಳೆದ 10 ತಿಂಗಳಿನಿಂದ ಟೀಂ ಇಂಡಿಯಾ ಕ್ರಿಕೆಟಿಗರಿಗೆ ಸಂಬಳವನ್ನೇ ನೀಡಿಲ್ಲ..!
ವಿಶ್ವದ ಅತ್ಯಂತ ಶ್ರೀಮಂತ ಕ್ರಿಕೆಟ್ ಸಂಸ್ಥೆಯಾದ ಬಿಸಿಸಿಐ ಕೇಂದ್ರೀಯ ಗುತ್ತಿಗೆಗೆ ಒಳಪಟ್ಟ ಆಟಗಾರರು ಕಳೆದ 10 ತಿಂಗಳಿನಿಂದ ಸಂಬಳವನ್ನೇ ಪಡೆದಿಲ್ಲ ಎನ್ನುವ ಮಾಹಿತಿ ಹೊರಬಿದ್ದಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.
ಮುಂಬೈ(ಆ.04): ಟೀಂ ಇಂಡಿಯಾ ಸ್ಟಾರ್ ಕ್ರಿಕೆಟಿಗರು ಕಳೆದ 10 ತಿಂಗಳಿನಿಂದ ಜಗತ್ತಿನ ಅತ್ಯಂತ ಶ್ರೀಮಂತ ಕ್ರಿಕೆಟ್ ಸಂಸ್ಥೆಯಾದ ಬಿಸಿಸಿಐನಿಂದ
ಸಂಬಳವನ್ನೇ ಪಡೆದುಕೊಂಡಿಲ್ಲ ಎಂದು ವರದಿಯಾಗಿದೆ.
ಕೊರೋನಾ ವೈರಸ್‌ನಿಂದಾಗಿ ಮಾರ್ಚ್ ತಿಂಗಳ ಎರಡನೇ ವಾರದಿಂದ ಇಲ್ಲಿಯವರೆಗೆ ದೇಶದಲ್ಲಿ ಯಾವುದೇ ಕ್ರೀಡಾಚಟುವಟಿಕೆಗಳು ನಡೆದಿಲ್ಲ. ಇದೀಗ ಬಿಸಿಸಿಐ ಯುನೈಟೈಡ್ ಅರಬ್ ಎಮಿರಾಟ್ಸ್‌ನಲ್ಲಿ 13ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಆಯೋಜಿಸಲು ಸಜ್ಜಾಗಿದೆ.
ಖಾಸಗಿ ಆಂಗ್ಲ ಮಾಧ್ಯಮವಾದ ಇಂಡಿಯನ್ ಎಕ್ಸ್‌ಪ್ರೆಸ್ ವರದಿಯ ಪ್ರಕಾರ ವಿರಾಟ್ ಕೊಹ್ಲಿ ನೇತೃತ್ವದ ಟೀಂ ಇಂಡಿಯಾದ ಕೇಂದ್ರ ಗುತ್ತಿಗೆಗೆ ಒಳಪಟ್ಟ ಆಟಗಾರರು ಕಳೆದ 10 ತಿಂಗಳಿನಿಂದ ಸಂಬಳವನ್ನೇ ಪಡೆದಿಲ್ಲ. ಇದುವರೆಗೂ ನನ್ನ ಖಾತೆಗೆ ಸಂಬಳ ಬಂದಿಲ್ಲ ಎಂದು ಖಾಸಗಿ ಮಾಧ್ಯಮಕ್ಕೆ ಭಾರತ ಕ್ರಿಕೆಟ್ ಆಟಗಾರರೊಬ್ಬರು ತಿಳಿಸಿದ್ದಾರೆ ಎಂದು ವರದಿಯಾಗಿದೆ.
ಟೀಂ ಇಂಡಿಯಾದ 27 ಆಟಗಾರರಲ್ಲಿ ಯಾರಿಗೆಷ್ಟು ಸಂಬಳ..?
ನೂತನ ಗುತ್ತಿಗೆಗೆ ಒಳಪಟ್ಟ ಬಳಿಕ ನಾವು ಸಂಬಳದ ಮುಖವನ್ನೇ ನೋಡಿಲ್ಲ. ಸಾಮಾನ್ಯವಾಗಿ ಬಿಸಿಸಿಐ 4 ಹಂತದಲ್ಲಿ ಆಟಗಾರರಿಗೆ ಸಂಬಳವನ್ನು ವಿತರಿಸುತ್ತದೆ. ಆದರೆ ಈ ಸಲ ನಮಗೆ ಯಾವಾಗ ಸಂಬಳ ಸಿಗುತ್ತದೆ ಎನ್ನುವುದೇ ಗೊತ್ತಿಲ್ಲ. ಈ ಬಗ್ಗೆ ನಮಗೆ ಸಣ್ಣ ಸುಳಿವೂ ಇಲ್ಲ. ಒಟ್ಟಿನಲ್ಲಿ ನಮಗೆ ಸಂಬಳ ಖಾತೆಗೆ ಬಂದಿಲ್ಲ ಎಂದು ಹೆಸರು ಹೇಳಲು ಇಚ್ಚಿಸಿದ ಟೀಂ ಇಂಡಿಯಾ ಆಟಗಾರ ಹೇಳಿದ್ದಾರೆ.
ಒಟ್ಟು 27 ಆಟಗಾರರು A+, A B ಮತ್ತು C ಕೆಟೆಗೆರೆಯಲ್ಲಿ ಬಿಸಿಸಿಐ ಕೇಂದ್ರ ಗುತ್ತಿಗೆಯಲ್ಲಿ ಸ್ಥಾನ ಪಡೆದಿದ್ದಾರೆ. ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ಹಾಗೂ ಜಸ್ಪ್ರೀತ್ ಬುಮ್ರಾ A+ ಶ್ರೇಣಿ ಪಡೆದಿದ್ದು, ವಾರ್ಷಿಕ 7 ಕೋಟಿ ರುಪಾಯಿ ಸಂಭಾವನೆ ಪಡೆಯಲಿದ್ದಾರೆ. ಆದರೆ ದಶಕಗಳ ಬಳಿಕ ಎಂ. ಎಸ್. ಕೇಂದ್ರ ಗುತ್ತಿಗೆಯಿಂದ ಹೊರಬಿದ್ದಿದ್ದರು.