ಗಾಯದ ಸಮಸ್ಯೆಯಿಂದ ಬಳಲುತ್ತಿರುವ ಜಸ್ಪ್ರೀತ್ ಬುಮ್ರಾ ಅವರಿಗೆ ಇಂಗ್ಲೆಂಡ್ ಸರಣಿಯಲ್ಲಿ ನಾಯಕತ್ವ ನೀಡುವ ಸಾಧ್ಯತೆ ಇಲ್ಲ. ಬದಲಾಗಿ ಶುಭ್‌ಮನ್ ಗಿಲ್ ಅವರಿಗೆ ಉಪನಾಯಕತ್ವದ ಹೊಣೆ ನೀಡುವ ಸಾಧ್ಯತೆ ಇದೆ ಎಂದು ವರದಿಯಾಗಿದೆ. ರೋಹಿತ್ ಶರ್ಮಾ ನಾಯಕರಾಗಿ ಮುಂದುವರಿಯಲಿದ್ದಾರೆ.

ನವದೆಹಲಿ: ಪದೇ ಪದೇ ಗಾಯಗೊಳ್ಳುತ್ತಿರುವ ಕಾರಣ ವೇಗಿ ಜಸ್‌ಪ್ರೀತ್‌ ಬುಮ್ರಾ ಕಾರ್ಯದೊತ್ತಡ ತಗ್ಗಿಸಲು ಚಿಂತನೆ ನಡೆಸುತ್ತಿರುವ ಬಿಸಿಸಿಐ, ಅವರಿಗೆ ಇಂಗ್ಲೆಂಡ್‌ ಸರಣಿಯಲ್ಲಿ ನಾಯಕತ್ವದ ಹೊಣೆಗಾರಿಕೆ ನೀಡುವ ಸಾಧ್ಯತೆಯಿಲ್ಲ ಎಂದು ಮೂಲಗಳು ತಿಳಿಸಿದ್ದಾಗಿ ಮಾಧ್ಯಮಗಳಲ್ಲಿ ವರದಿಯಾಗಿದೆ.

ಬಿಸಿಸಿಐ ಅಧಿಕಾರಿಯೊಬ್ಬರ ಪ್ರಕಾರ, ರೋಹಿತ್‌ ಶರ್ಮಾ ನಾಯಕರಾಗಿ ಮುಂದುವರಿಯಲಿದ್ದಾರೆ. ಆದರೆ ಗಾಯದ ಭೀತಿ ಕಾರಣ ಜಸ್ಪ್ರೀತ್ ಬುಮ್ರಾ ಇಂಗ್ಲೆಂಡ್‌ ಸರಣಿಯ ಎಲ್ಲಾ 5 ಪಂದ್ಯಗಳಲ್ಲಿ ಆಡುವುದಿಲ್ಲ. ಕಾರ್ಯದೊತ್ತಡ ಕಡಿಮೆ ಮಾಡಲು ಅವರನ್ನು ಒಂದೆರಡು ಪಂದ್ಯಗಳಿಂದ ಹೊರಗಿಡಲು ಬಿಸಿಸಿಐ ಚಿಂತಿಸುತ್ತಿದೆ. ಹೀಗಾಗಿ ಬುಮ್ರಾಗೆ ಉಪನಾಯಕತ್ವ ನೀಡುವುದಿಲ್ಲ. ಬದಲಾಗಿ ಶುಭ್‌ಮನ್‌ ಗಿಲ್‌ಗೆ ಹೊಣೆಗಾರಿಕೆ ನೀಡಲಾಗುತ್ತದೆ ಎಂದು ತಿಳಿದುಬಂದಿದೆ.

ರೇಸ್‌ನಲ್ಲಿ ಕೆ.ಎಲ್‌.ರಾಹುಲ್‌ ಕೂಡಾ ಇದ್ದರೂ, ಭವಿಷ್ಯದ ದೃಷ್ಟಿಯಿಂದ ಗಿಲ್‌ಗೆ ಮಣೆ ಹಾಕುವ ಸಾಧ್ಯತೆಯಿದೆ. ಇಂಗ್ಲೆಂಡ್‌ ಸರಣಿ ಜೂ.20ಕ್ಕೆ ಆರಂಭಗೊಳ್ಳಲಿದ್ದು, ಕೊನೆ ಪಂದ್ಯ ಜುಲೈ 31ಕ್ಕೆ ಶುರುವಾಗಲಿದೆ.

ಇದಕ್ಕೂ ಮೊದಲು ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯಲ್ಲಿ ಜಸ್ಪ್ರೀತ್ ಬುಮ್ರಾ, ಆಸ್ಟ್ರೇಲಿಯಾ ಎದುರು ರೋಹಿತ್ ಶರ್ಮಾ ಅನುಪಸ್ಥಿತಿಯಲ್ಲಿ ಮೊದಲ ಹಾಗೂ ಕೊನೆಯ ಟೆಸ್ಟ್ ಪಂದ್ಯದಲ್ಲಿ ನಾಯಕನಾಗಿ ಭಾರತ ತಂಡವನ್ನು ಮುನ್ನಡೆಸಿದ್ದರು. ಇನ್ನು ಗಾಯದ ಸಮಸ್ಯೆಯಿಂದಾಗಿ ಬುಮ್ರಾ, 2025ರ ಐಸಿಸಿ ಚಾಂಪಿಯನ್ಸ್ ಟ್ರೋಫಿ ಹಾಗೂ 18ನೇ ಆವೃತ್ತಿಯ ಐಪಿಎಲ್‌ನ ಮೊದಲಾರ್ಧದಲ್ಲೂ ಹೊರಗುಳಿದಿದ್ದರು.

ವಾರ್ಷಿಕ ರ್‍ಯಾಂಕಿಂಗ್‌: ಏಕದಿನ, ಟಿ20ಯಲ್ಲಿ ಭಾರತ ನಂಬರ್‌ 1

ದುಬೈ: ಅಂತಾರಾಷ್ಟ್ರೀಯ ಕ್ರಿಕೆಟ್‌ ಕೌನ್ಸಿಲ್‌(ಐಸಿಸಿ) ಸೋಮವಾರ ಬಿಡುಗಡೆ ಮಾಡಿದ ವಾರ್ಷಿಕ ರ್‍ಯಾಂಕಿಂಗ್‌ನಲ್ಲಿ ಟೀಂ ಇಂಡಿಯಾ ಏಕದಿನ ಹಾಗೂ ಟಿ20 ವಿಭಾಗದಲ್ಲಿ ಅಗ್ರಸ್ಥಾನ ಪಡೆದುಕೊಂಡಿದೆ. ಆದರೆ ಟೆಸ್ಟ್‌ನಲ್ಲಿ 4ನೇ ಸ್ಥಾನಕ್ಕೆ ಕುಸಿದಿದೆ.

2024ರ ಮೇ ತಿಂಗಳಿನಿಂದ ಈ ವರೆಗೂ ಆಡಿದ ಎಲ್ಲಾ ಪಂದ್ಯಗಳಿಗೆ ಶೇ.100 ಹಾಗೂ ಅದಕ್ಕಿಂತ ಹಿಂದಿನ 2 ವರ್ಷಗಳ ಪಂದ್ಯಗಳಿಗೆ ತಲಾ ಶೇ.50ರಷ್ಟು ರೇಟಿಂಗ್‌ ನೀಡಿ ವಾರ್ಷಿಕ ರ್‍ಯಾಂಕಿಂಗ್‌ ಪಟ್ಟಿ ಸಿದ್ಧಪಡಿಸಲಾಗಿದೆ. 2023ರ ಏಕದಿನ ವಿಶ್ವಕಪ್‌ ಫೈನಲಿಸ್ಟ್‌ ಭಾರತ 124 ಅಂಕದೊಂದಿಗೆ ಅಗ್ರಸ್ಥಾನ ಪಡೆದಿದ್ದರೆ, ನ್ಯೂಜಿಲೆಂಡ್‌ 2ನೇ, ಆಸ್ಟ್ರೇಲಿಯಾ 3ನೇ ಸ್ಥಾನದಲ್ಲಿದೆ. ಇನ್ನು, ಟಿ20 ಕ್ರಿಕೆಟ್‌ನಲ್ಲಿ ಭಾರತದ ಬಳಿಕ ಆಸ್ಟ್ರೇಲಿಯಾ 2ನೇ, ಇಂಗ್ಲೆಂಡ್‌ 3ನೇ, ನ್ಯೂಜಿಲೆಂಡ್‌ 4ನೇ, ವೆಸ್ಟ್‌ಇಂಡೀಸ್‌ 5ನೇ ಸ್ಥಾನದಲ್ಲಿದೆ.

ಟೆಸ್ಟ್‌ನಲ್ಲಿ ಕುಸಿತ: ಕಳೆದ ವರ್ಷ ಟೆಸ್ಟ್‌ನಲ್ಲಿ ಸತತ ಸೋಲುಂಡ ಪರಿಣಾಮ ಭಾರತ 4ನೇ ಸ್ಥಾನಕ್ಕೆ ಕುಸಿದಿದೆ. ಹಾಲಿ ವಿಶ್ವ ಚಾಂಪಿಯನ್‌ ಆಸ್ಟ್ರೇಲಿಯಾ ಅಗ್ರಸ್ಥಾನದಲ್ಲಿದ್ದರೆ, ಇಂಗ್ಲೆಂಡ್‌ ಹಾಗೂ ದ.ಆಫ್ರಿಕಾ ಕ್ರಮವಾಗಿ 2, 3ನೇ ಸ್ಥಾನಗಳಲ್ಲಿವೆ.

ಮೊದಲ ಬಾರಿ ಟಿ20 ಪಟ್ಟಿಯಲ್ಲಿ 100 ಟೀಂ

ಇದೇ ಮೊದಲ ಬಾರಿ ವಾರ್ಷಿಕ ಟಿ20 ರ್‍ಯಾಂಕಿಂಗ್‌ನಲ್ಲಿ ವಿಶ್ವದ 100 ದೇಶಗಳ ತಂಡಗಳು ಸ್ಥಾನ ಪಡೆದಿವೆ. 2019ರಲ್ಲಿ 80 ತಂಡಗಳನ್ನು ಸೇರಿಸಿ ಮೊದಲ ಬಾರಿ ಟಿ20 ರ್‍ಯಾಂಕಿಂಗ್‌ ನೀಡಲಾಗಿತ್ತು.

ಸಣ್ಣ ವಯಸ್ಸಲ್ಲೇ ಎಂಥಾ ಶ್ರೇಷ್ಠ ಸಾಧನೆ: ವೈಭವ್‌ ಬಗ್ಗೆ ಮೋದಿ

ಪಟನಾ: ಐಪಿಎಲ್‌ನಲ್ಲಿ ಗುಜರಾತ್‌ ವಿರುದ್ಧ ಪಂದ್ಯದಲ್ಲಿ ಶತಕ ಸಿಡಿಸಿ ದೇಶದ ಗಮನ ಸೆಳೆದಿರುವ 14 ವರ್ಷದ ಬಾಲಕ, ರಾಜಸ್ಥಾನ ರಾಯಲ್ಸ್ ತಂಡದ ಆಟಗಾರ ವೈಭವ್‌ ಸೂರ್ಯವಂಶಿಯನ್ನು ಪ್ರಧಾನಿ ನರೇಂದ್ರ ಮೋದಿ ಶ್ಲಾಘಿಸಿದ್ದಾರೆ.

ಬಿಹಾರದಲ್ಲಿ ನಡೆದ ಖೇಲೋ ಇಂಡಿಯಾ ಉದ್ಘಾಟನೆಯ ಸಂದರ್ಭದಲ್ಲಿ ವೈಭವ್ ಹೆಸರು ಉಲ್ಲೇಖಿಸಿದ ಪ್ರಧಾನಿ ‘ಐಪಿಎಲ್‌ನಲ್ಲಿ ಬಿಹಾರದ ಹುಡುಗ ವೈಭವ್‌ ಸೂರ್ಯವಂಶಿ ಅವರ ಅದ್ಭುತ ಪ್ರದರ್ಶನವನ್ನು ನಾನು ನೋಡಿದ್ದೇನೆ. ಇಷ್ಟು ಚಿಕ್ಕ ವಯಸ್ಸಿನಲ್ಲಿ ಎಷ್ಟು ದೊಡ್ಡ ಸಾಧನೆ ಮಾಡಿದ್ದಾರೆ. ವೈಭವ್ ಅವರ ಪ್ರದರ್ಶನದ ಹಿಂದೆ ಸಾಕಷ್ಟು ಪರಿಶ್ರಮವಿದೆ’ ಎಂದಿದ್ದಾರೆ.