ಮುಂಬೈ(ಮೇ.20): ಭಾರತ ಮಹಿಳಾ ಕ್ರಿಕೆಟ್ ಆಟಗಾರ್ತಿಯರ ಪರಿಷ್ಕೃತ ಪಟ್ಟಿಯನ್ನು ಬಿಸಿಸಿಐ ಪ್ರಕಟಿಸಿದ್ದು, 19 ಆಟಗಾರ್ತಿಯರು ಬಿಸಿಸಿಐ ಕೇಂದ್ರೀಯ ಗುತ್ತಿಗೆಯಲ್ಲಿ ಸ್ಥಾನ ಪಡೆದಿದ್ದಾರೆ. ಈ ಪೈಕಿ ಯುವ ಬ್ಯಾಟರ್‌ ಶಫಾಲಿ ವರ್ಮಾ 'ಬಿ' ಗ್ರೇಡ್‌ ಗೇರಿದರೆ, ಕನ್ನಡತಿ ವೇದಾ ಕೃಷ್ಣಮೂರ್ತಿ ಕೇಂದ್ರೀಯ ಗುತ್ತಿಗೆಯಿಂದ ಹೊರಬಿದ್ದಿದ್ದಾರೆ.

ಹೌದು, ಬಿಸಿಸಿಐ 2020ರ ಅಕ್ಟೋಬರ್‌ನಿಂದ 2021ರ ಸೆಪ್ಟೆಂಬರ್‌ವರೆಗಿನ ಕೇಂದ್ರೀಯ ಗುತ್ತಿಗೆಯನ್ನು ಪ್ರಕಟಿಸಿದೆ. 'ಎ' ಗ್ರೇಡ್‌ ಹೊಂದಿರುವವರು 50 ಲಕ್ಷ ರುಪಾಯಿ ಪಡೆದರೆ, 'ಬಿ' ಗ್ರೇಡ್‌ ಪಡೆದವರು 30 ಲಕ್ಷ ಹಾಗೂ 'ಸಿ' ಗ್ರೇಡ್‌ ಪಡೆದವರು 10 ಲಕ್ಷ ರುಪಾಯಿಗಳನ್ನು ಪಡೆಯಲಿದ್ದಾರೆ. 'ಎ' ಗ್ರೇಡ್‌ನಲ್ಲಿ ಮೂವರು ಆಟಗಾರ್ತಿಯರು ಸ್ಥಾನ ಪಡೆದಿದ್ದರೆ, 'ಬಿ' ಗ್ರೇಡ್‌ನಲ್ಲಿ 10 ಹಾಗೂ 'ಸಿ' ಗ್ರೇಡ್‌ನಲ್ಲಿ 6 ಆಟಗಾರ್ತಿಯರು ಸ್ಥಾನ ಪಡೆದಿದ್ದಾರೆ.

ಬಿಸಿಸಿಐ ವಾರ್ಷಿಕ ಗುತ್ತಿಗೆ ಪಟ್ಟಿ ಪ್ರಕಟ: ಕೊಹ್ಲಿ, ರೋಹಿತ್, ಬುಮ್ರಾಗೆ A+ ಗ್ರೇಡ್‌

ಕಳೆದ ಆವೃತ್ತಿಯಲ್ಲಿ 'ಸಿ' ಗ್ರೇಡ್‌ನಲ್ಲಿದ್ದ ಶಫಾಲಿ ವರ್ಮಾ ಈ ಬಾರಿ 'ಬಿ' ಗ್ರೇಡ್‌ಗೆ ಬಡ್ತಿ ಪಡೆದಿದ್ದಾರೆ. ಇನ್ನು ಟೆಸ್ಟ್ ಹಾಗೂ ಏಕದಿನ ತಂಡದ ನಾಯಕಿ ಮಿಥಾಲಿ ರಾಜ್‌, ಕನ್ನಡತಿ ರಾಜೇಶ್ವರಿ ಗಾಯಕ್ವಾಡ್ ಸೇರಿದಂತೆ 10 ಆಟಗಾರ್ತಿಯರು 'ಬಿ' ಗ್ರೇಡ್‌ನಲ್ಲಿದ್ದಾರೆ

ಭಾರತದ ಪುರುಷರ ಕ್ರಿಕೆಟ್‌ ಆಟಗಾರರಿಗೆ ಬಿಸಿಸಿಐ 4 ಗ್ರೇಡ್‌ಗಳಾಗಿ ವಿಂಗಡಿಸಿದೆ. ಪುರುಷರ ಕ್ರಿಕೆಟ್ ಹಾಗೂ ಭಾರತ ಮಹಿಳಾ ಕ್ರಿಕೆಟ್‌ನಲ್ಲಿ ಸಾಕಷ್ಟು ವೇತನ  ತಾರತಮ್ಯವಿದೆ. ಪುರುಷರ ಕ್ರಿಕೆಟ್‌ನಲ್ಲಿ 'ಎ+' ಗ್ರೇಡ್ ಹೊಂದಿರುವವರು 7 ಕೋಟಿ ರುಪಾಯಿ ವೇತನ ಪಡೆದರೆ, 'ಎ' ಗ್ರೇಡ್ ಹೊಂದಿರುವ ಕ್ರಿಕೆಟಿಗರು 5 ಕೋಟಿ ರುಪಾಯಿ, 'ಬಿ' ಗ್ರೇಡ್ 3 ಕೋಟಿ ಹಾಗೂ 'ಸಿ' ಗ್ರೇಡ್‌ ಹೊಂದಿರುವವರು ಒಂದು ಕೋಟಿ ರುಪಾಯಿ ವೇತನ ಜೇಬಿಗಿಳಿಸಲಿದ್ದಾರೆ.

2020-21ನೇ ಸಾಲಿನಲ್ಲಿ ಬಿಸಿಸಿಐ ಸೆಂಟ್ರಲ್ ಕಾಂಟ್ರ್ಯಾಕ್ಟ್‌ ಪಡೆದ ಮಹಿಳಾ ಕ್ರಿಕೆಟ್ ಆಟಗಾರ್ತಿಯರ ವಿವರ ಇಲ್ಲಿದೆ ನೋಡಿ:

ಗ್ರೇಡ್‌ ಎ(50 ಲಕ್ಷ): ಹರ್ಮನ್‌ಪ್ರೀತ್ ಕೌರ್, ಸ್ಮೃತಿ ಮಂಧಾನ, ಪೂನಂ ಯಾದವ್

ಗ್ರೇಡ್‌ ಬಿ(30 ಲಕ್ಷ): ಮಿಥಾಲಿ ರಾಜ್, ಜೂಲನ್ ಗೋಸ್ವಾಮಿ, ದೀಪ್ತಿ ಶರ್ಮಾ, ಪೂನಂ ರಾವತ್, ರಾಜೇಶ್ವರಿ ಗಾಯಕ್ವಾಡ್‌, ಶಫಾಲಿ ವರ್ಮಾ, ರಾಧಾ ಯಾದವ್, ಶಿಖಾ ಪಾಂಡೆ, ತಾನಿಯಾ ಭಾಟಿಯಾ, ಜೆಮಿಯಾ  ರೋಡ್ರಿಗಸ್.

ಗ್ರೇಡ್‌ ಸಿ(10 ಲಕ್ಷ): ಮಾನಸಿ ಜೋಶಿ, ಅರುಂದತಿ ರೆಡ್ಡಿ, ಪೂಜಾ ವಸ್ತ್ರಾಕರ್, ಹರ್ಲಿನ್ ಡಿಯೋಲ್, ಪ್ರಿಯಾ ಪೂನಿಯಾ, ರಿಚಾ ಘೋಷ್.