2025ರ ಐಸಿಸಿ ಚಾಂಪಿಯನ್ಸ್ ಟ್ರೋಫಿಯನ್ನು ರೋಹಿತ್ ಶರ್ಮಾ ನೇತೃತ್ವದ ಭಾರತ ತಂಡವು ನ್ಯೂಜಿಲೆಂಡ್ ವಿರುದ್ಧ ಗೆದ್ದಿದೆ. ದುಬೈನಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಭಾರತ 4 ವಿಕೆಟ್‌ಗಳಿಂದ ಜಯ ಸಾಧಿಸಿತು. ಈ ಗೆಲುವಿನಿಂದ ಭಾರತ ಮೂರನೇ ಬಾರಿಗೆ ಚಾಂಪಿಯನ್ಸ್ ಟ್ರೋಫಿ ಗೆದ್ದಂತಾಗಿದೆ. ತಂಡದ ಸಾಧನೆಗೆ ಬಿಸಿಸಿಐ 58 ಕೋಟಿ ರೂಪಾಯಿ ಬಹುಮಾನ ಘೋಷಿಸಿದೆ. ಶ್ರೇಯಸ್ ಅಯ್ಯರ್ ಗರಿಷ್ಠ ರನ್ ಗಳಿಸಿದರೆ, ಶಮಿ ಮತ್ತು ಚಕ್ರವರ್ತಿ ಹೆಚ್ಚು ವಿಕೆಟ್ ಪಡೆದರು.

ಮುಂಬೈ: 2025ರ ಐಸಿಸಿ ಚಾಂಪಿಯನ್ಸ್ ಟ್ರೋಫಿ ಟೂರ್ನಿಯಲ್ಲಿ ರೋಹಿತ್ ಶರ್ಮಾ ನೇತೃತ್ವದ ಟೀಂ ಇಂಡಿಯಾ ಚಾಂಪಿಯನ್ ಆಗಿ ಹೊರಹೊಮ್ಮಿತ್ತು. ಮಾರ್ಚ್ 09ರಂದು ದುಬೈ ಅಂತಾರಾಷ್ಟ್ರೀಯ ಮೈದಾನದಲ್ಲಿ ನಡೆದ ಚಾಂಪಿಯನ್ಸ್ ಟ್ರೋಫಿ ಫೈನಲ್ ಪಂದ್ಯದಲ್ಲಿ ಮಿಚೆಲ್ ಸ್ಯಾಂಟ್ನರ್ ನೇತೃತ್ವದ ನ್ಯೂಜಿಲೆಂಡ್ ತಂಡವನ್ನು 4 ವಿಕೆಟ್ ಅಂತರದಲ್ಲಿ ಮಣಿಸುವ ಮೂಲಕ ಟೀಂ ಇಂಡಿಯಾ ಮೂರನೇ ಬಾರಿಗೆ ಚಾಂಪಿಯನ್ಸ್ ಟ್ರೋಫಿ ಜಯಿಸುವಲ್ಲಿ ಯಶಸ್ವಿಯಾಗಿತ್ತು. ಇದಕ್ಕೂ ಮೊದಲು 2002ರಲ್ಲಿ(ಶ್ರೀಲಂಕಾ ಜತೆ ಜಂಟಿ) ಹಾಗೂ 2013ರಲ್ಲಿ ಭಾರತ ಐಸಿಸಿ ಚಾಂಪಿಯನ್ಸ್ ಟ್ರೋಫಿ ಜಯಿಸಿತ್ತು. ಇದೀಗ 2025ರ ಐಸಿಸಿ ಚಾಂಪಿಯನ್ಸ್ ಟ್ರೋಫಿ ಗೆದ್ದ ಭಾರತ ತಂಡಕ್ಕೆ ಬಿಸಿಸಿಐ ಬರೋಬ್ಬರಿ 58 ಕೋಟಿ ರುಪಾಯಿ ನಗದು ಬಹುಮಾನ ಘೋಷಿಸಿದೆ.

ಈ ಕುರಿತಂತೆ ಮಾತನಾಡಿರುವ ಬಿಸಿಸಿಐ ಅಧ್ಯಕ್ಷ ರೋಜರ್ ಬಿನ್ನಿ, 'ಸತತವಾಗಿ ಎರಡು ಐಸಿಸಿ ಟ್ರೋಫಿ ಗೆದ್ದಿರುವುದು ನಿಜಕ್ಕೂ ವಿಶಿಷ್ಠ ಸಾಧನೆ. ಜಾಗತಿಕ ಮಟ್ಟದಲ್ಲಿ ತಮ್ಮ ಅದ್ಭುತ ಪ್ರತಿಭೆ ಅನಾವರಣ ಮಾಡಿದ್ದಕ್ಕಾಗಿ ಟೀಂ ಇಂಡಿಯಾಗೆ ಈ ಬಹುಮಾನ ನೀಡಲಾಗುತ್ತಿದೆ. ಚಾಂಪಿಯನ್ಸ್ ಟ್ರೋಫಿ ಯಶಸ್ಸಿಗೆ ಪಾತ್ರರಾದ ಎಲ್ಲರಿಗೂ ಈ ನಗದು ಬಹುಮಾನ ಸಲ್ಲಲಿದೆ' ಎಂದು ಹೇಳಿದ್ದಾರೆ.

ಇದನ್ನೂ ಓದಿ: ಈ ಐಪಿಎಲ್‌ನಲ್ಲಿ ಹಲವು ಹೊಸ ದಾಖಲೆ ನಿರ್ಮಾಣವಾಗುತ್ತೆ: ರಾಬಿನ್ ಉತ್ತಪ್ಪ

Scroll to load tweet…

ಚಾಂಪಿಯನ್ಸ್ ಟ್ರೋಫಿ ಟೂರ್ನಿಯಲ್ಲಿ ಭಾರತದ ಪ್ರದರ್ಶನ ಹೇಗಿತ್ತು?

ಹೈಬ್ರಿಡ್ ಮಾದರಿಯಲ್ಲಿ ನಡೆದ ಐಸಿಸಿ ಚಾಂಪಿಯನ್ಸ್ ಟ್ರೋಫಿ ಟೂರ್ನಿಯಲ್ಲಿ ಟೀಂ ಇಂಡಿಯಾ, ತಾನಾಡಿದ ಗ್ರೂಪ್ ಹಂತದ ಮೊದಲ ಪಂದ್ಯದಲ್ಲಿ ಬಾಂಗ್ಲಾದೇಶ ಎದುರು 6 ವಿಕೆಟ್ ಅಂತರದ ಭರ್ಜರಿ ಗೆಲುವು ಸಾಧಿಸುವ ಮೂಲಕ ಶುಭಾರಂಭ ಮಾಡಿತ್ತು. ಇದಾದ ಬಳಿಕ ಎರಡನೇ ಪಂದ್ಯದಲ್ಲಿ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ಎದುರು 6 ವಿಕೆಟ್ ಅಂತರದ ಗೆಲುವು ಸಾಧಿಸಿತ್ತು. ಇನ್ನು ಗ್ರೂಪ್ ಹಂತದ ಮೂರನೇ ಹಾಗೂ ಕೊನೆಯ ಪಂದ್ಯದಲ್ಲಿ ಭಾರತ ತಂಡವು ನ್ಯೂಜಿಲೆಂಡ್ ತಂಡದ ಎದರು ಭರ್ಜರಿ ಗೆಲುವು ಸಾಧಿಸಿ, ಅಜೇಯವಾಗಿ ಸೆಮೀಸ್‌ಗೆ ಎಂಟ್ರಿಕೊಟ್ಟಿತ್ತು.

ಇನ್ನು ಸೆಮಿಫೈನಲ್‌ನಲ್ಲಿ ಬಲಿಷ್ಠ ಆಸ್ಟ್ರೇಲಿಯಾ ಎದುರು ಟೀಂ ಇಂಡಿಯಾ 4 ವಿಕೆಟ್ ಅಂತರದ ಗೆಲುವು ಸಾಧಿಸಿತ್ತು. ಇದರೊಂದಿಗೆ 2013, ಹಾಗೂ 2017ರ ಬಳಿಕ ಸತತ ಮೂರನೇ ಬಾರಿಗೆ ಚಾಂಪಿಯನ್ಸ್ ಟ್ರೋಫಿ ಟೂರ್ನಿಯಲ್ಲಿ ಭಾರತ ತಂಡವು ಫೈನಲ್ ಪ್ರವೇಶಿಸಲು ಯಶಸ್ವಿಯಾಗಿತ್ತು. ಇನ್ನು ಫೈನಲ್‌ನಲ್ಲಿ ಮತ್ತೊಮ್ಮೆ ಕಿವೀಸ್ ಕಿವಿ ಹಿಂಡಿ ಕಪ್ ತಮ್ಮದಾಗಿಸಿಕೊಳ್ಳುವಲ್ಲಿ ಯಶಸ್ವಿಯಾಗಿತ್ತು. 

ಇದನ್ನೂ ಓದಿ: ಆರ್‌ಸಿಬಿ ತವರಿನ ಪಂದ್ಯಗಳ ಟಿಕೆಟ್‌ ಈ ಸಲವೂ ದುಬಾರಿ! ಒಂದು ಟಿಕೆಟ್ ಬೆಲೆ ಕೇವಲ ₹42,000

ಬ್ಯಾಟಿಂಗ್‌ನಲ್ಲಿ ಶ್ರೇಯಸ್ ಅಯ್ಯರ್ 243 ರನ್ ಸಿಡಿಸುವ ಮೂಲಕ ಚಾಂಪಿಯನ್ಸ್ ಟ್ರೋಫಿ ಟೂರ್ನಿಯಲ್ಲಿ ಭಾರತ ಪರ ಗರಿಷ್ಠ ರನ್ ಸರದಾರರಾಗಿ ಹೊರಹೊಮ್ಮಿದ್ದಾರೆ. ಇನ್ನು ಮೊಹಮ್ಮದ್ ಶಮಿ ಹಾಗೂ ವರುಣ್ ಚಕ್ರವರ್ತಿ ತಲಾ 9 ವಿಕೆಟ್ ಕಬಳಿಸುವ ಮೂಲಕ ಭಾರತದ ಯಶಸ್ವಿ ಬೌಲರ್ ಆಗಿ ಹೊರಹೊಮ್ಮಿದ್ದಾರೆ. ಸೆಮಿಫೈನಲ್‌ನಲ್ಲಿ ವಿರಾಟ್ ಕೊಹ್ಲಿ ಹಾಗೂ ಫೈನಲ್‌ನಲ್ಲಿ ರೋಹಿತ್ ಶರ್ಮಾ ಜವಾಬ್ದಾರಿಯುತ ಆಟವಾಡುವ ಮೂಲಕ ಟೀಂ ಇಂಡಿಯಾ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.

ಟೂರ್ನಿಯುದ್ದಕ್ಕೂ ಸಂಘಟಿತ ಪ್ರದರ್ಶನ ತೋರಿದ ರೋಹಿತ್ ಶರ್ಮಾ ಪಡೆ ಸತತ ಎರಡನೇ ಐಸಿಸಿ ಟ್ರೋಫಿ ಜಯಿಸುವಲ್ಲಿ ಯಶಸ್ವಿಯಾಗಿದೆ. ಇದಕ್ಕೂ ಮೊದಲು ಕಳೆದ ವರ್ಷ ನಡೆದ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯಲ್ಲಿ ರೋಹಿತ್ ಶರ್ಮಾ ನೇತೃತ್ವದ ಟೀಂ ಇಂಡಿಯಾ, ದಕ್ಷಿಣ ಆಫ್ರಿಕಾ ತಂಡವನ್ನು ರೋಚಕವಾಗಿ ಮಣಿಸಿ ಚಾಂಪಿಯನ್ ಆಗಿ ಹೊರಹೊಮ್ಮಿತ್ತು. ಈ ಮೂಲಕ ಬರೋಬ್ಬರಿ ಒಂದು ದಶಕದ ಬಳಿಕ ಭಾರತ ತಂಡವು ಐಸಿಸಿ ಟ್ರೋಫಿ ಬರ ನೀಗಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ.