* ಭಾರತದಲ್ಲಿ ಅಚ್ಚುಕಟ್ಟಾಗಿ ಆಯೋಜನೆಗೊಂಡ 15ನೇ ಆವೃತ್ತಿಯ ಐಪಿಎಲ್* ರಾಜಸ್ಥಾನ ರಾಯಲ್ಸ್ ಮಣಿಸಿ ಚಾಂಪಿಯನ್ ಪಟ್ಟ ಅಲಂಕರಿಸಿದ ಗುಜರಾತ್ ಟೈಟಾನ್ಸ್* ಸ್ಪರ್ಧಾತ್ಮಕ ಪಿಚ್ ತಯಾರಿಸಿದ ಮೈದಾನದ ಸಿಬ್ಬಂದಿಗಳಿಗೆ ಬಂಪರ್ ಬಹುಮಾನ ಘೋಷಿಸಿದ ಬಿಸಿಸಿಐ
ಮುಂಬೈ(ಮೇ.31): ಬಹುನಿರೀಕ್ಷಿತ 2022ನೇ ಸಾಲಿನ ಇಂಡಿಯನ್ ಪ್ರೀಮಿಯರ್ ಲೀಗ್ (Indian Premier League) ಫೈನಲ್‌ನಲ್ಲಿ ಗುಜರಾತ್ ಟೈಟಾನ್ಸ್ (Gujarat Titans) ತಂಡವು ಟ್ರೋಫಿ ಗೆಲ್ಲುವುದರೊಂದಿಗೆ ಅಧಿಕೃತವಾಗಿ ಟೂರ್ನಿಗೆ ತೆರೆ ಬಿದ್ದಿದೆ. ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ (Narendra Modi Stadium) ನಡೆದ ಫೈನಲ್ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್ ವಿರುದ್ದ 7 ವಿಕೆಟ್‌ಗಳ ಭರ್ಜರಿ ಜಯ ದಾಖಲಿಸಿದ ಗುಜರಾತ್ ಟೈಟಾನ್ಸ್ ತಂಡವು ಚೊಚ್ಚಲ ಬಾರಿಗೆ ಐಪಿಎಲ್ ಟ್ರೋಫಿ ಜಯಿಸುವಲ್ಲಿ ಯಶಸ್ವಿಯಾಗಿದೆ. ಇನ್ನು ಕೋವಿಡ್ ಆತಂಕದ ನಡುವೆಯೇ ಅಚ್ಚುಕಟ್ಟಾಗಿ ಮೈದಾನಗಳನ್ನು ಸಜ್ಜುಗೊಳಿಸಿದ ಪಿಚ್ ಕ್ಯುರೇಟರ್‌ಗಳು ಹಾಗೂ ಮೈದಾನ ಸಿಬ್ಬಂದಿಗೆ ಬಿಸಿಸಿಐ ಬಂಪರ್ ಬಹುಮಾನ ಘೋಷಿಸಿದೆ.
ಹೌದು, 15ನೇ ಆವೃತ್ತಿ ಐಪಿಎಲ್‌ನ ಯಶಸ್ಸಿನಲ್ಲಿ ಕೈಜೋಡಿಸಿದ ಪಿಚ್ ಕ್ಯುರೇಟರ್‌ಗಳು ಹಾಗೂ ಮೈದಾನ ಸಿಬ್ಬಂದಿಗೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ) ಸೋಮವಾರ 1.25 ಕೋಟಿ ರು. ನಗದು ಬಹುಮಾನ ಘೋಷಿಸಿದೆ. ಈ ಬಗ್ಗೆ ಬಿಸಿಸಿಐ ಕಾರ‍್ಯದರ್ಶಿ ಜಯ್ ಶಾ (Jay Shah) ಮಾಹಿತಿ ನೀಡಿದ್ದು, ‘ಐಪಿಎಲ್ ಯಶಸ್ಸಿನ ಹಿಂದಿರುವ ಎಲ್ಲಾ 6 ಕ್ರೀಡಾಂಗಣಗಳ ಕ್ಯುರೇಟರ್, ಮೈದಾನ ಸಿಬ್ಬಂದಿಯ ಕಠಿಣ ಪರಿಶ್ರಮ ನಿಜಕ್ಕೂ ಅಭಿನಂದನಾರ್ಹ. ಬಿಸಿಸಿಐ ವತಿಯಿಂದ ಮುಂಬೈನ ಬ್ರೆಬೋರ್ನ್, ವಾಂಖೇಡೆ, ಡಿ.ವೈ.ಪಾಟೀಲ್ ಹಾಗೂ ಪುಣೆಯ ಎಂಸಿಎ ಕ್ರೀಡಾಂಗಣ ಸಿಬ್ಬಂದಿಗೆ ತಲಾ 25 ಲಕ್ಷ, ಕೋಲ್ಕತಾ ಹಾಗೂ ಅಹಮದಾಬಾದ್ ಕ್ರೀಡಾಂಗಣ ಸಿಬ್ಬಂದಿಗೆ ತಲಾ 12.5 ಲಕ್ಷ ರು. ನೀಡಲಿದ್ದೇವೆ’ ಎಂದು ತಿಳಿಸಿದ್ದಾರೆ.
ಈ ಬಾರಿಯ ಐಪಿಎಲ್ ಟೂರ್ನಿಯಲ್ಲಿ ನಾವು ಸಾಕಷ್ಟು ಸ್ಪರ್ಧಾತ್ಮಕ ಹಾಗೂ ರೋಚಕ ಪಂದ್ಯಗಳಿಗೆ ಸಾಕ್ಷಿಯಾಗಿದ್ದೇವೆ. ನಾನು ಮೈದಾನದ ಪ್ರತಿಯೊಬ್ಬ ಸಿಬ್ಬಂದಿ ಹಾಗೂ ಕ್ಯೂರೇಟರ್‌ಗಳ ಪರಿಶ್ರಮಕ್ಕೆ ಧನ್ಯವಾದಗಳನ್ನು ಅರ್ಪಿಸುತ್ತೇನೆ ಎಂದು ಜಯ್ ಶಾ ಟ್ವೀಟ್ ಮಾಡಿದ್ದಾರೆ.
15ನೇ ಆವೃತ್ತಿಯ ಐಪಿಎಲ್ ಟೂರ್ನಿಯನ್ನು ಕೋವಿಡ್ ಭೀತಿಯ ನಡುವೆಯೂ ಭಾರತದಲ್ಲೇ ಅಚ್ಚುಕಟ್ಟಾಗಿ ನಡೆಸುವ ಚಾಲೆಂಜ್ ಅನ್ನು ಬಿಸಿಸಿಐ ಸ್ವೀಕರಿಸಿತ್ತು. ಅದೇ ರೀತಿ ಲೀಗ್ ಹಂತದ 70 ಪಂದ್ಯಗಳಿಗೆ ಮಹಾರಾಷ್ಟ್ರದ ಬ್ರೆಬೋರ್ನ್, ವಾಂಖೇಡೆ, ಡಿ.ವೈ.ಪಾಟೀಲ್ ಹಾಗ ಎಂಸಿಎ ಮೈದಾನಗಳು ಆತಿಥ್ಯವನ್ನು ವಹಿಸಿದ್ದವು. ಇನ್ನು ಪ್ಲೇ ಆಫ್ ಪಂದ್ಯಗಳಿಗೆ ಕೋಲ್ಕತಾದ ಈಡನ್ ಗಾರ್ಡನ್ಸ್ ಹಾಗೂ ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂಗಳು ಸಾಕ್ಷಿಯಾಗಿದ್ದವು.
IPL 2022 ಆರೆಂಜ್ ಕ್ಯಾಪ್ ಒಡೆಯ ಜೋಸ್ ಬಟ್ಲರ್ ಈ ಬಾರಿ ಪ್ರಶಸ್ತಿ ಮೂಲಕ ಗಳಿಸಿದ ಮೊತ್ತವೆಷ್ಟು?
2021ನೇ ಸಾಲಿನ ಐಪಿಎಲ್ ಟೂರ್ನಿಯನ್ನು ಬಿಸಿಸಿಐ ಭಾರತದಲ್ಲೇ ಆಯೋಜಿಸಿತ್ತು. ಆದರೆ ಟೂರ್ನಿಯ ಮಧ್ಯಭಾಗದಲ್ಲಿ ಬಯೋ ಬಬಲ್‌ನೊಳಗೆ ಕೋವಿಡ್ ಪ್ರಕರಣಗಳು ಪತ್ತೆಯಾಗಿದ್ದವು. ಆಟಗಾರರಿಗೆ ಹಾಗೂ ಸಹಾಯಕ ಸಿಬ್ಬಂದಿಗಳಿಗೆ ಕೋವಿಡ್ ದೃಢಪಟ್ಟ ಬೆನ್ನಲ್ಲೇ ಟೂರ್ನಿಯನ್ನು ಅರ್ಧಕ್ಕೆ ಸ್ಥಗಿತಗೊಳಿಸಿ, ಇನ್ನುಳಿದ ಪಂದ್ಯಗಳನ್ನು ಯುಎಇನಲ್ಲಿ ನಡೆಸಲಾಗಿತ್ತು. ಈ ಹಿಂದಿನ ಸವಾಲುಗಳಿಂದ ಪಾಠ ಕಲಿತ ಬಿಸಿಸಿಐ 15ನೇ ಆವೃತ್ತಿಯ ಐಪಿಎಲ್ ಟೂರ್ನಿಯ ಲೀಗ್ ಹಂತದ ಪಂದ್ಯಗಳನ್ನು ಮಹರಾಷ್ಟ್ರದ ನಾಲ್ಕು ಸ್ಟೇಡಿಯಂಗಳಲ್ಲಿ ಆಯೋಜಿಸಿ ಸೈ ಎನಿಸಿಕೊಂಡಿತು. ಇನ್ನು ಪ್ಲೇ ಆಫ್ ಪಂದ್ಯಗಳು ಕೋಲ್ಕತಾ ಹಾಗೂ ಅಹಮದಾಬಾದ್‌ನಲ್ಲಿ ನಡೆದವು. ಈ ಎಲ್ಲಾ ಪಂದ್ಯಗಳು ಬಯೋ ಬಬಲ್‌ನೊಳಗೆ ಯಾವುದೇ ಅಡ್ಡಿ ಆತಂಕವಿಲ್ಲದೇ ನಡೆಯಿತು.
