Asianet Suvarna News Asianet Suvarna News

ICC U-19 World Cup ಕೊಹ್ಲಿಯಂತೆ ಬ್ಯಾಟಿಂಗ್, ಧೋನಿಯಂತೆ ತಂಡ ಮುನ್ನಡೆಸಿದರು: ಯಶ್ ಧುಳ್ ಗುಣಗಾನ..!

* ಅಂಡರ್ 19 ವಿಶ್ವಕಪ್ ಟೂರ್ನಿಯಲ್ಲಿ ಚಾಂಪಿಯನ್ ಪಟ್ಟ ಅಲಂಕರಿಸಿದ ಭಾರತ

* 5ನೇ ಬಾರಿಗೆ ಅಂಡರ್ 19 ವಿಶ್ವಕಪ್ ಟ್ರೋಫಿಗೆ ಮುತ್ತಿಕ್ಕಿದ ಭಾರತ

* ಯಶ್ ನಾಯಕತ್ವಕ್ಕೆ ಸಂತಸ ವ್ಯಕ್ತಪಡಿಸಿದ ಬಾಲ್ಯದ ಕೋಚ್

Bats like Virat Kohli leads like MS Dhoni Says Yash Dhull Childhood Coach kvn
Author
Bengaluru, First Published Feb 7, 2022, 6:20 PM IST

ನವದೆಹಲಿ(ಫೆ.07): ನಾನು ವಿರಾಟ್ ಕೊಹ್ಲಿಯಂತೆ(Virat Kohli) ಕ್ರಿಕೆಟಿಗನಾಗಬೇಕು. ಇದು ಶಾಲಾ ಟೂರ್ನಮೆಂಟ್‌ಗಳು ನಡೆಯುತ್ತಿದ್ದ ಸಂದರ್ಭದಲ್ಲಿ ಯಶ್ ಧುಳ್‌ (Yash Dhull) ತನ್ನ ಕೋಚ್ ರಾಜೇಶ್ ನಗರ್‌ಗೆ ಹೇಳುತ್ತಿದ್ದ ಮಾತುಗಳು. ಇದೀಗ ವಿರಾಟ್ ಕೊಹ್ಲಿಯಂತೆಯೇ ಯಶ್ ಧುಳ್ ಕೂಡಾ ಐಸಿಸಿ ಅಂಡರ್ 19 ವಿಶ್ವಕಪ್ (ICC U-19 World Cup) ಟೂರ್ನಿಯಲ್ಲಿ ಭಾರತ ಕಿರಿಯರ ತಂಡವನ್ನು ಚಾಂಪಿಯನ್‌ ಪಟ್ಟಕ್ಕೇರಿಸುವಲ್ಲಿ ಯಶ್ ಧುಳ್ ಯಶಸ್ವಿಯಾಗಿದ್ದಾರೆ.

ಈಗ ಯಶ್‌ ಧುಳ್ ತಮ್ಮ ಸ್ಪೂರ್ತಿ ಹಾಗೂ ಐಕಾನ್ ಆಟಗಾರ ಎನಿಸಿಕೊಂಡಿರುವ ವಿರಾಟ್ ಕೊಹ್ಲಿ ಜತೆ ತನ್ನ ಹೆಸರನ್ನು ಅಂಡರ್ 19 ಸಾಧಕರ ಸಾಲಿಗೆ ಸೇರಿಸಿದ್ದಾರೆ. ವೆಸ್ಟ್ ಇಂಡೀಸ್‌ನಲ್ಲಿ ನಡೆದ ಅಂಡರ್‌ 19 ವಿಶ್ವಕಪ್ ಫೈನಲ್‌ನಲ್ಲಿ ಇಂಗ್ಲೆಂಡ್ ಎದುರು 4 ವಿಕೆಟ್‌ಗಳ ಅಂತರದ ಭರ್ಜರಿ ಗೆಲುವು ಸಾಧಿಸುವ ಮೂಲಕ 5ನೇ ಬಾರಿಗೆ ಟೀಂ ಇಂಡಿಯಾ ಚಾಂಪಿಯನ್ ಆಗಿ ಹೊರಹೊಮ್ಮಿದೆ. ಇದೀಗ ಯಶ್‌ ಧುಳ್ ಅವರ ಬಾಲ್ಯದ ಕೋಚ್‌ ರಾಜೇಶ್ ನಗರ್‌ ತಮ್ಮ ಶಿಷ್ಯನ ಸಾಧನೆಯ ಬಗ್ಗೆ ಹೆಮ್ಮೆಯನ್ನು ವ್ಯಕ್ತಪಡಿಸಿದ್ದು, ಯಶ್ ಧುಳ್ ಅವರು ತವರಿಗೆ ವಾಪಸ್ಸಾಗುತ್ತಿದ್ದಂತೆಯೇ ಭೇಟಿಯಾಗಲು ಕಾತರದಿಂದ ಇರುವುದಾಗಿ ತಿಳಿಸಿದ್ದಾರೆ.

ನನಗೆ ಯಶ್‌ ಧುಳ್ ಭಾರತಕ್ಕೆ ಟ್ರೋಫಿ ಗೆದ್ದುಕೊಡುತ್ತಾರೆ ಎನ್ನುವ ವಿಶ್ವಾಸವಿತ್ತು. ಆತ ಯಾವಾಗಲೂ ಗೆಲುವಿಗಾಗಿ ಹಾತೊರೆಯುತ್ತಿರುತ್ತಾನೆ. ಆತನ ಬಗ್ಗೆ ನನಗೆ ತುಂಬಾ ಹೆಮ್ಮೆಯಿದೆ. ಆತನ ಕೋಚ್ ಎನಿಸಿಕೊಳ್ಳುತ್ತಿರುವುದಕ್ಕೆ ನನಗೆ ಅತೀವ ಹೆಮ್ಮೆ ಎನಿಸುತ್ತಿದೆ. ಯಶ್‌ ಧುಳ್ ತಂಡವನ್ನು ಅತ್ಯಂತ ಯಶಸ್ವಿಯಾಗಿ ಮುನ್ನಡೆಸಿದ್ದಾನೆ, ಉಳಿದ ಆಟಗಾರರು ಉತ್ತಮವಾಗಿ ಸಾಥ್ ನೀಡಿದರು. ಇದೊಂದು ಒಳ್ಳೆಯ ತಂಡ. ಅಂಡರ್ 19 ವಿಶ್ವಕಪ್ ಟೂರ್ನಿಯಲ್ಲಿ ಟೀಂ ಇಂಡಿಯಾ ಈ ಹಿಂದೆಯೂ ಪ್ರಾಬಲ್ಯ ಮೆರೆದಿದೆ. ಮುಂದೆಯೂ ಅಂಡರ್‌ 19 ವಿಶ್ವಕಪ್ ಟೂರ್ನಿಯಲ್ಲಿ ಭಾರತದ ಪ್ರಾಬಲ್ಯ ಮುಂದುವರೆಯುವುದು ಎಂದು ಟೈಮ್ಸ್ ಆಫ್‌ ಇಂಡಿಯಾಗೆ ನೀಡಿದ ಸಂದರ್ಶನದಲ್ಲಿ ರಾಜೇಶ್ ನಗರ್‌ ತಿಳಿಸಿದ್ದಾರೆ 

ICC U-19 World Cup: ಅಂಡರ್ 19 ವಿಶ್ವಕಪ್ ಚಾಂಪಿಯನ್‌ ಭಾರತಕ್ಕೆ ಬಿಸಿಸಿಐ ಬಂಪರ್ ಬಹುಮಾನ..!

ಆತನ ಬ್ಯಾಟಿಂಗ್ ಶೈಲಿಯನ್ನು ಗಮನಿಸಿದರೆ, ಯಶ್‌ ಧುಳ್‌ ಅವರ ಬ್ಯಾಟಿಂಗ್‌ನಲ್ಲಿ ವಿರಾಟ್ ಕೊಹ್ಲಿಯ ಬ್ಯಾಟಿಂಗ್ ಛಾಯೆ ಎದ್ದು ಕಾಣುತ್ತದೆ. ಬ್ಯಾಟಿಂಗ್ ವೇಳೆ ಆಕ್ರಮಣಕಾರಿ ಪ್ರದರ್ಶನ ತೋರುವುದನ್ನು ನಾವು ಕಂಡಿದ್ದೇವೆ. ಇನ್ನು ಫೀಲ್ಡಿಂಗ್ ಮಾಡುವ ವೇಳೆಯೂ ಯಶ್ ಧುಳ್ ಅವರಲ್ಲಿ ಕೊಹ್ಲಿಯ ಆಕ್ರಮಣಕಾರಿ ಮನೋಭಾವ ಎದ್ದು ಕಾಣುತ್ತದೆ. ಫೀಲ್ಡಿಂಗ್ ವೇಳೆ ಯಾವುದೇ ಅವಕಾಶವನ್ನು ಹಾಳು ಮಾಡಿಕೊಳ್ಳಲು ಯಶ್ ಧುಳ್ ಬಯಸುವುದಿಲ್ಲ. ಇನ್ನು ನಾಯಕನಾಗಿ ಯಶ್ ಧುಳ್ ಅವರಲ್ಲಿ ಧೋನಿಯನ್ನು (MS Dhoni) ಕಾಣಬಹುದಾಗಿದೆ. ಧೋನಿಯಂತೆಯೇ ಮೈದಾನದಲ್ಲಿ ನಾಯಕನಾಗಿ ಯಾವಾಗಲೂ ಕೂಲ್ ಅಗಿರುತ್ತಾರೆ. ಸಹ ಆಟಗಾರರಿಗೆ ಯಶ್ ಧುಳ್ ಸದಾ ಬೆಂಬಲ ನೀಡುತ್ತಿದ್ದರೂ ಹಾಗೂ ಅಗತ್ಯ ಸಂದರ್ಭಗಳಲ್ಲಿ ಸೂಕ್ತ ಮಾರ್ಗದರ್ಶನ ಹಾಗೂ ಸಲಹೆ ಸೂಚನೆಗಳನ್ನು ನೀಡುತ್ತಾರೆ. ಇನ್ನು ನಿರ್ಧಾರ ತೆಗೆದುಕೊಳ್ಳುವಾಗಲೂ ಸಹಾ ಸದಾ ಶಾಂತ ರೀತಿಯಲ್ಲಿ ವರ್ತಿಸುತ್ತಾರೆ. ಅವರು ಧೋನಿ ಹಾಗೂ ವಿರಾಟ್ ಕೊಹ್ಲಿಯ ಮಿಶ್ರಣ. ಯಶ್ ಧುಳ್, ವಿರಾಟ್ ಕೊಹ್ಲಿಯಂತೆ ಬ್ಯಾಟ್ ಬೀಸುತ್ತಾರೆ ಹಾಗೂ ಧೋನಿಯಂತೆ ತಂಡವನ್ನು ಮುನ್ನಡೆಸುತ್ತಾರೆ ಎಂದು ರಾಜೇಶ್ ನಗರ್‌ ಹೇಳಿದ್ದಾರೆ.

ಅಂಡರ್ 19 ವಿಶ್ವಕಪ್ ಟೂರ್ನಿಯ ಸೆಮಿಫೈನಲ್‌ ಪಂದ್ಯದಲ್ಲಿ ಅಸ್ಟ್ರೇಲಿಯಾ ಎದುರು ಟೀಂ ಇಂಡಿಯಾ 37 ರನ್‌ಗಳಿಗೆ ಎರಡು ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿತ್ತು. ಈ ವೇಳೆ ಉಪನಾಯಕ ಶೇಖ್ ರಶೀದ್ ಜತೆಗೂಡಿ ಯಶ್ ಧುಳ್ ಮೂರನೇ ವಿಕೆಟ್‌ಗೆ ದ್ವಿಶತಕದ ಜತೆಯಾಟವಾಡುವ ಮೂಲಕ ತಂಡಕ್ಕೆ ಆಸರೆಯಾಗಿದ್ದರು. ಆಸ್ಟ್ರೇಲಿಯಾ ಎದುರಿನ ಮಹತ್ವದ ಪಂದ್ಯದಲ್ಲಿ ಯಶ್ ಧುಳ್ 110 ಎಸೆತಗಳಲ್ಲಿ 110 ಬಾರಿಸಿ ಮಿಂಚಿದ್ದರು. ಈ ಮೂಲಕ ಅಂಡರ್ 19 ವಿಶ್ವಕಪ್‌ನಲ್ಲಿ ಶತಕ ಬಾರಿಸಿದ ಭಾರತದ ಮೂರನೇ ನಾಯಕ ಎನ್ನುವ ಕೀರ್ತಿಗೂ ಯಶ್ ಧುಳ್ ಪಾತ್ರರಾಗಿದ್ದರು. ಈ ಮೊದಲು ವಿರಾಟ್ ಕೊಹ್ಲಿ ಹಾಗೂ ಉನ್ಮುಕ್ತ್ ಚಾಂದ್ ಅಂಡರ್ 19 ವಿಶ್ವಕಪ್ ಟೂರ್ನಿಯಲ್ಲಿ ಭಾರತ ತಂಡದ ನಾಯಕರಾಗಿ ಮೂರಂಕಿ ಮೊತ್ತ ದಾಖಲಿಸುವಲ್ಲಿ ಯಶಸ್ವಿಯಾಗಿದ್ದರು.

Follow Us:
Download App:
  • android
  • ios