* ಐಸಿಸಿ ಟಿ20 ವಿಶ್ವಕಪ್ ಟೂರ್ನಿಗೆ ಸ್ವಯಂ ಪ್ರೇರಿತರಾಗಿ ಹಿಂದೆ ಸರಿದ ತಮೀಮ್ ಇಕ್ಬಾಲ್‌* ತಮೀಮ್‌ ಇಕ್ಬಾಲ್‌ ಬಾಂಗ್ಲಾದೇಶ ತಂಡದ ಅನುಭವಿ ಆರಂಭಿಕ ಬ್ಯಾಟ್ಸ್‌ಮನ್‌* ಐಸಿಸಿ ಟಿ20 ವಿಶ್ವಕಪ್ ಟೂರ್ನಿಯು ಅಕ್ಟೋಬರ್ 17ರಿಂದ ಆರಂಭ

ಢಾಕಾ(ಸೆ.01): ಬಾಂಗ್ಲಾದೇಶ ಆರಂಭಿಕ ಬ್ಯಾಟ್ಸ್‌ಮನ್‌ ತಮೀಮ್‌ ಇಕ್ಬಾಲ್‌ ಯುಎಇನಲ್ಲಿ ನಡೆಯಲಿರುವ ಟಿ20 ವಿಶ್ವಕಪ್‌ನಲ್ಲಿ ಭಾಗವಹಿಸದಿರಲು ತೀರ್ಮಾನಿಸಿದ್ದಾರೆ. ಜಿಂಬಾಬ್ವೆ ವಿರುದ್ದದ ಸರಣಿಯ ಬಳಿಕ ತಮೀಮ್‌ ಇಕ್ಬಾಲ್‌ ಗಾಯದ ಸಮಸ್ಯೆಯಿಂದಾಗಿ ಹೊರಗುಳಿದಿದ್ದರು. ಮೊಣಕಾಲಿನ ಗಾಯದ ಸಮಸ್ಯೆಯಿಂದಾಗಿ ತವರಿನಲ್ಲಿ ನಡೆದ ಆಸ್ಟ್ರೇಲಿಯಾ ವಿರುದ್ದದ ಸೀಮಿತ ಓವರ್‌ಗಳ ಸರಣಿಯಿಂದಲೂ ಎಡಗೈ ಆರಂಭಿಕ ಬ್ಯಾಟ್ಸ್‌ಮನ್‌ ಹೊರಗುಳಿದಿದ್ದರು.

ಅಕ್ಟೋಬರ್ 17ರಿಂದ ಯುಎಇನಲ್ಲಿ ಬಹುನಿರೀಕ್ಷಿತ ಟಿ20 ವಿಶ್ವಕಪ್‌ ಟೂರ್ನಿಗೆ ಅಧಿಕೃತ ಚಾಲನೆ ಸಿಗಲಿದ್ದು, ಈ ವೇಳೆಗೆ ಇಕ್ಬಾಲ್‌ ಸಂಪೂರ್ಣ ಚೇತರಿಸಿಕೊಳ್ಳುವ ಸಾಧ್ಯತೆಯಿತ್ತು. ಹೀಗಿದ್ದೂ, ಜಾಗತಿಕ ಚುಟುಕು ಕ್ರಿಕೆಟ್‌ ಜಾತ್ರೆಯಲ್ಲಿ ಪಾಲ್ಗೊಳ್ಳದಿರಲು ಬಾಂಗ್ಲಾದೇಶ ಆರಂಭಿಕ ಬ್ಯಾಟ್ಸ್‌ಮನ್ ತೀರ್ಮಾನಿಸಿದ್ದಾರೆ.

ನನ್ನ ಅನುಪಸ್ಥಿತಿಯಲ್ಲಿ ಬಾಂಗ್ಲಾದೇಶದ ಆರಂಭಿಕ ಬ್ಯಾಟ್ಸ್‌ಮನ್‌ಗಳು ಅತ್ಯುತ್ತಮ ಪ್ರದರ್ಶನ ತೋರಿದ್ದಾರೆ. ನಾನೀಗ ಅವರ ಸ್ಥಾನವನ್ನು ಕಿತ್ತುಕೊಳ್ಳುವುದು ನ್ಯಾಯವಲ್ಲ ಎಂದು ತಮೀಮ್‌ ಇಕ್ಬಾಲ್ ಅಭಿಪ್ರಾಯಪಟ್ಟಿದ್ದಾರೆ. ಬಾಂಗ್ಲಾದೇಶ ತಂಡವು ತವರಿನಲ್ಲಿ ನಡೆದ ಆಸ್ಟ್ರೇಲಿಯಾ ವಿರುದ್ದದ 5 ಪಂದ್ಯಗಳ ಟಿ20 ಸರಣಿಯನ್ನು 4-1ರಲ್ಲಿ ಗೆದ್ದು ಬೀಗಿತ್ತು. ಮೊಹಮ್ಮದ್ ನಯೀಮ್ ಹಾಗೂ ಸೌಮ್ಯ ಸರ್ಕಾರ್ ಬಾಂಗ್ಲಾದೇಶ ತಂಡಕ್ಕೆ ಉತ್ತಮ ಆರಂಭ ಒದಗಿಸಿಕೊಟ್ಟಿದ್ದರು. ಹೀಗಾಗಿ ಈ ಇಬ್ಬರು ಆಟಗಾರರೇ ಮುಂಬರುವ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಬಾಂಗ್ಲಾದೇಶ ಆರಂಭಿಕರಾಗಿ ಕಾಣಿಸಿಕೊಳ್ಳುವ ಸಾಧ್ಯತೆಯಿದೆ.

ಕೌನ್‌ ಬನೇಗಾ ಕರೋಡ್‌ಪತಿಯಲ್ಲಿ ವೀರೂ-ದಾದಾ; ಸೆಹ್ವಾಗ್‌ ಮಾತಿಗೆ ಬಿದ್ದು ಬಿದ್ದು ನಕ್ಕ ಸೌರವ್‌..!

ಬಾಂಗ್ಲಾದೇಶಿ ಪತ್ರಕರ್ತ ನೈಫು ಕಬಿರ್ ಜತೆ ಮಾತನಾಡಿದ ತಮೀಮ್‌ ಇಕ್ಬಾಲ್‌, ನಾನು ನಿವೃತ್ತಿ ಪಡೆಯುತ್ತಿಲ್ಲ. ಆದರೆ ನಾನು ಈ ವಿಶ್ವಕಪ್‌ನಲ್ಲಿ ಪಾಲ್ಗೊಳ್ಳುತ್ತಿಲ್ಲ. ಬಾಂಗ್ಲಾದೇಶ ಪರ ಕಳೆದ 15-16 ಟಿ20 ಪಂದ್ಯಗಳಲ್ಲಿ ಯುವ ಆರಂಭಿಕರು ಅತ್ಯುತ್ತಮ ಪ್ರದರ್ಶನ ತೋರಿದ್ದಾರೆ. ನಾನೀಗ ತಂಡ ಕೂಡಿಕೊಂಡು ಅವರ ಸ್ಥಾನವನ್ನು ಕಿತ್ತುಕೊಳ್ಳುವುದು ಸರಿಯಲ್ಲ. ಅವರು ನನಗಿಂತ ಉತ್ತಮ ಪ್ರದರ್ಶನ ತೋರುವ ವಿಶ್ವಾಸವಿದೆ ಎಂದು ಹೇಳಿದ್ದಾರೆ

ನಾನೀಗ ಈ ವಿಚಾರದ ಕುರಿತಂತೆ ದೃಢ ನಿರ್ಧಾರವನ್ನು ತೆಗೆದುಕೊಂಡಿದ್ದೇನೆ ಹಾಗೂ ನಾನದಕ್ಕೆ ಬದ್ದನಾಗಿದ್ದೇನೆ. ಟಿ20 ವಿಶ್ವಕಪ್ ಮುಕ್ತಾಯದ ಬಳಿಕ ನಡೆಯಲಿರುವ ದ್ವಿಪಕ್ಷೀಯ ಸರಣಿಗಳನ್ನು ಆಡಲು ಲಭ್ಯವಿದ್ದೇನೆ ಎಂದು 32 ವರ್ಷದ ತಮೀಮ್ ಇಕ್ಬಾಲ್ ತಿಳಿಸಿದ್ದಾರೆ.