Asianet Suvarna News Asianet Suvarna News

Ban vs NZ ವಿಶ್ವ ಟೆಸ್ಟ್ ಚಾಂಪಿಯನ್‌ ಕಿವೀಸ್‌ ತಂಡವನ್ನು ಬಗ್ಗುಬಡಿದು ಇತಿಹಾಸ ನಿರ್ಮಿಸಿದ ಬಾಂಗ್ಲಾದೇಶ.!

* ಕಿವೀಸ್ ಮಣಿಸಿ ದೈತ್ಯ ಸಂಹಾರ ಮಾಡಿದ ಬಾಂಗ್ಲಾದೇಶ

* ನ್ಯೂಜಿಲೆಂಡ್ ನೆಲದಲ್ಲಿ ಚೊಚ್ಚಲ ಗೆಲುವಿನ ರುಚಿ ಸವಿದ ಬಾಂಗ್ಲಾ ಹುಲಿಗಳು

* 10 ವರ್ಷಗಳ ಬಳಿಕ ಏಷ್ಯಾದ ತಂಡದೆದುರು ಸೋಲೊಪ್ಪಿಕೊಂಡ ಕಿವೀಸ್

Ban vs NZ History Has Been Created Bangladesh Thrash New Zealand By 8 Wickets kvn
Author
Bengaluru, First Published Jan 5, 2022, 11:51 AM IST

ಮೌಂಟ್‌ ಮ್ಯಾಂಗ್ಯುಯಿನಿ(ಜ.05): ಬ್ಯಾಟಿಂಗ್ ಹಾಗೂ ಬೌಲಿಂಗ್‌ನಲ್ಲಿ ಸಂಘಟಿತ ಪ್ರದರ್ಶನ ತೋರಿದ ಬಾಂಗ್ಲಾದೇಶ ತಂಡವು (Bangladesh Cricket Team) ವಿಶ್ವ ಟೆಸ್ಟ್ ಚಾಂಪಿಯನ್‌ (World Test Champion) ನ್ಯೂಜಿಲೆಂಡ್ ಎದುರು 8 ವಿಕೆಟ್‌ಗಳ ಭರ್ಜರಿ ಜಯ ಸಾಧಿಸುವ ಮೂಲಕ ಐತಿಹಾಸಿಕ ಸಾಧನೆ ಮಾಡಿದೆ. ಬರೋಬ್ಬರಿ 10 ವರ್ಷಗಳ ಬಳಿಕ ಏಷ್ಯಾದ ತಂಡದ ಎದುರು ನ್ಯೂಜಿಲೆಂಡ್ ತಂಡವು (New Zealand Cricket Team) ತವರಿನಲ್ಲಿ ಸೋಲಿನ ಮುಖಭಂಗ ಅನುಭವಿಸಿದೆ. ಇದೇ ವೇಳೆ ಮೊಮಿನುಲ್ ಹಕ್ ಪಡೆಯು ಇದೇ ಮೊದಲ ಬಾರಿಗೆ ನ್ಯೂಜಿಲೆಂಡ್‌ ನೆಲದಲ್ಲಿ ಚೊಚ್ಚಲ ಗೆಲುವು ಸಾಧಿಸಿ ಬೀಗಿದೆ.

ಇಲ್ಲಿನ ಬೇ ಓವಲ್‌ ಮೈದಾನದಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯದಲ್ಲಿ ಗೆಲ್ಲಲು ಕೇವಲ 40 ರನ್‌ಗಳ ಗುರಿ ಪಡೆದ ಪ್ರವಾಸಿ ಬಾಂಗ್ಲಾದೇಶ ತಂಡವು 16.5 ಓವರ್‌ಗಳಲ್ಲಿ ಕೇವಲ 2 ವಿಕೆಟ್ ಕಳೆದುಕೊಂಡು ಗೆಲುವಿನ ನಗೆ ಬೀರಿತು. ನ್ಯೂಜಿಲೆಂಡ್ ಎದುರಿನ ಎರಡನೇ ಇನಿಂಗ್ಸ್‌ನಲ್ಲಿ 6 ವಿಕೆಟ್ ಕಬಳಿಸಿ ತಂಡದ ಗೆಲುವಿನಲ್ಲಿ ಮಹತ್ವದ ಪಾತ್ರ ನಿಭಾಯಿಸಿದ ಎಬೊದತ್ ಹೊಸೈನ್ (Ebadot Hussain) ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾಗಿದ್ದಾರೆ.

147 ರನ್‌ಗಳಿಗೆ 5 ವಿಕೆಟ್ ಕಳೆದುಕೊಂಡು 5ನೇ ದಿನದಾಟವನ್ನು ಆರಂಭಿಸಿದ ನ್ಯೂಜಿಲೆಂಡ್ ತಂಡಕ್ಕೆ ಮತ್ತೊಮ್ಮೆ ಎಬೊದತ್ ಹೊಸೈನ್ ಕಾಟ ಕೊಟ್ಟರು. ಅನುಭವಿ ಬ್ಯಾಟರ್‌ ರಾಸ್ ಟೇಲರ್‌ (Ross Taylor) ತನ್ನ ಖಾತೆಗೆ 3 ರನ್ ಸೇರಿಸಿ ವಿಕೆಟ್ ಒಪ್ಪಿಸಿದರು. ಇನ್ನು ಆಲ್ರೌಂಡರ್ ರಚಿನ್ ರವೀಂದ್ರ ಬ್ಯಾಟಿಂಗ್ ಕೇವಲ 16 ರನ್‌ಗಳಿಗೆ ಸೀಮಿತವಾಯಿತು. ಟಿಮ್‌ ಸೌಥಿ ಹಾಗೂ ಕೈಲ್ ಜೇಮಿಸನ್ ಶೂನ್ಯ ಸುತ್ತಿದರೆ, ಟ್ರೆಂಟ್ ಬೌಲ್ಟ್ ಬ್ಯಾಟಿಂಗ್ 8 ರನ್‌ಗಳಿಗೆ ಸೀಮಿತವಾಯಿತು. ನ್ಯೂಜಿಲೆಂಡ್ ತಂಡವು ಕೊನೆಯ ದಿನಾದಾಟದಲ್ಲಿ ಕೇವಲ 23 ರನ್‌ ಸೇರಿಸಿ ಉಳಿದ 5 ವಿಕೆಟ್‌ಗಳನ್ನು ಕಳೆದುಕೊಂಡಿತು. 

ಬಾಂಗ್ಲಾದೇಶ ತಂಡವು ನ್ಯೂಜಿಲೆಂಡ್‌ ಪ್ರವಾಸದಲ್ಲಿ ಇದುವರೆಗೂ 9 ಟೆಸ್ಟ್ ಪಂದ್ಯಗಳನ್ನು ಸೇರಿದಂತೆ 32 ಪಂದ್ಯಗಳನ್ನಾಡಿತ್ತು. ಆದರೆ ಇದುವರೆಗೂ ಕಿವೀಸ್‌ ನೆಲದಲ್ಲಿ ಮೂರು ಮಾದರಿಯ ಕ್ರಿಕೆಟ್‌ನಲ್ಲಿ ಒಮ್ಮೆಯು ಗೆಲುವಿನ ರುಚಿ ಕಂಡಿರಲಿಲ್ಲ. ಇದೀಗ ಹಾಲಿ ವಿಶ್ವ ಟೆಸ್ಟ್ ಚಾಂಪಿಯನ್‌ ನ್ಯೂಜಿಲೆಂಡ್ ವಿರುದ್ದ ಐತಿಹಾಸಿಕ ಗೆಲುವಿನ ನಗೆ ಬೀರಿದೆ. ಇದರ ಜತೆಗೆ ತವರಿನಲ್ಲಿ ಕಳೆದ 17 ಟೆಸ್ಟ್ ಪಂದ್ಯಗಳಲ್ಲಿ ಸೋಲಿಲ್ಲದೇ ಬೀಗುತ್ತಿದ್ದ ಕಿವೀಸ್‌ ಪಡೆಗೆ ಬಾಂಗ್ಲಾದೇಶ ಶಾಕ್ ನೀಡುವಲ್ಲಿ ಯಶಸ್ವಿಯಾಗಿದೆ. 

Ban vs NZ: ಕಿವೀಸ್‌ ನೆಲದಲ್ಲಿ ಚೊಚ್ಚಲ ಟೆಸ್ಟ್‌ ಗೆಲುವಿನ ಹೊಸ್ತಿಲಲ್ಲಿ ಬಾಂಗ್ಲಾದೇಶ..!

ಹೇಗಿತ್ತು ಮೊದಲ ಟೆಸ್ಟ್: ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಲಿಳಿದ ಆತಿಥೇಯ ನ್ಯೂಜಿಲೆಂಡ್ ತಂಡವು ಡೆವೊನ್ ಕಾನ್‌ವೇ ಬಾರಿಸಿದ ಆಕರ್ಷಕ ಶತಕದ ನೆರವಿನಿಂದ ಮೊದಲ ಇನಿಂಗ್ಸ್‌ನಲ್ಲಿ 328 ರನ್‌ ಬಾರಿಸಿ ಸರ್ವಪತನ ಕಂಡಿತು. ಇದಾದ ಬಳಿಕ ಮೊದಲ ಇನಿಂಗ್ಸ್‌ ಆರಂಭಿಸಿದ ಬಾಂಗ್ಲಾದೇಶ ತಂಡವು ನಾಯಕ ಮೊಮಿನುಲ್ ಹಕ್‌(88), ಲಿಟನ್ ದಾಸ್(86) ಬಾರಿಸಿದ ಆಕರ್ಷಕ ಅರ್ಧಶತಕದ ನೆರವಿನಿಂದ 458 ರನ್ ಬಾರಿಸಿ ಸರ್ವಪತನ ಕಂಡಿತು. ಈ ಮೂಲಕ ಮೊದಲ ಇನಿಂಗ್ಸ್‌ನಲ್ಲಿ 130 ರನ್‌ಗಳ ಮುನ್ನಡೆ ಗಳಿಸಿತು. ಇನ್ನು ಎರಡನೇ ಇನಿಂಗ್ಸ್ ಆರಂಭಿಸಿದ ಕಿವೀಸ್‌ಗೆ ವೇಗಿ ಎಬೊದತ್ ಹೊಸೈನ್ ಮಾರಕ ದಾಳಿ ನಡೆಸಿ ಶಾಕ್ ನೀಡಿದರು. ಪರಿಣಾಮ ನ್ಯೂಜಿಲೆಂಡ್ ತಂಡವು ಎರಡನೇ ಇನಿಂಗ್ಸ್‌ನಲ್ಲಿ ಕೇವಲ 169 ರನ್ ಬಾರಿಸಿ ಆಲೌಟ್ ಆಯಿತು. ಈ ಮೂಲಕ ಬಾಂಗ್ಲಾಗೆ ಗೆಲ್ಲಲು ಕೇವಲ 40 ರನ್‌ಗಳ ಸಾಧಾರಣ ಗುರಿ ನೀಡಿತು.

ಸಂಕ್ಷಿಪ್ತ ಸ್ಕೋರ್

ನ್ಯೂಜಿಲೆಂಡ್: 328/10 (ಮೊದಲ ಇನಿಂಗ್ಸ್‌)
ಡೆವೊನ್ ಕಾನ್‌ವೇ: 122
ಶೌರಿಫುಲ್ ಇಸ್ಲಾಂ: 69/3

ಬಾಂಗ್ಲಾದೇಶ: 458/10(ಮೊದಲ ಇನಿಂಗ್ಸ್)
ಮೊಮಿನುಲ್ ಹಕ್‌: 88
ಟ್ರೆಂಟ್ ಬೌಲ್ಟ್‌: 85/4

ನ್ಯೂಜಿಲೆಂಡ್: 169/5(ಎರಡನೇ ಇನಿಂಗ್ಸ್‌)
ವಿಲ್ ಯಂಗ್: 69
ಎಬೊದತ್ ಹೊಸೈನ್‌: 46/4

ಬಾಂಗ್ಲಾದೇಶ: 42/2
ನಜ್ಮುಲ್‌ ಹೊಸೈನ್: 17
ಕೈಲ್ ಜೇಮಿಸನ್: 12/1

Follow Us:
Download App:
  • android
  • ios