Ban vs NZ: ಕಿವೀಸ್ ನೆಲದಲ್ಲಿ ಚೊಚ್ಚಲ ಟೆಸ್ಟ್ ಗೆಲುವಿನ ಹೊಸ್ತಿಲಲ್ಲಿ ಬಾಂಗ್ಲಾದೇಶ..!
* ಕುತೂಹಲಘಟ್ಟ ತಲುಪಿದ ಬಾಂಗ್ಲಾದೇಶ-ನ್ಯೂಜಿಲೆಂಡ್ ನಡುವಿನ ಮೊದಲ ಟೆಸ್ಟ್
* 4ನೇ ದಿನದಾಟದಂತ್ಯಕ್ಕೆ ಕೇವಲ 17 ರನ್‌ಗಳ ಮುನ್ನಡೆ ಸಾಧಿಸಿರುವ ನ್ಯೂಜಿಲೆಂಡ್
* ಕಿವೀಸ್ ನೆಲದಲ್ಲಿ ಚೊಚ್ಚಲ ಗೆಲುವಿನ ಸಿಹಿ ಸವಿಯಲು ಕನವರಿಸುತ್ತಿರುವ ಬಾಂಗ್ಲಾದೇಶ
ಮೌಂಟ್ ಮ್ಯಾಂಗ್ಯುಯಿನಿ(ಜ.04): ಬಾಂಗ್ಲಾದೇಶ ಹಾಗೂ ನ್ಯೂಜಿಲೆಂಡ್ (Bangladesh vs New Zealand) ತಂಡಗಳ ನಡುವಿನ ಮೊದಲ ಟೆಸ್ಟ್ ಪಂದ್ಯ ರೋಚಕಘಟ್ಟ ತಲುಪಿದೆ. ಇದುವರೆಗೂ ಕಿವೀಸ್ ನೆಲದಲ್ಲಿ ಮೂರು ಮಾದರಿಯ ಕ್ರಿಕೆಟ್‌ನಲ್ಲಿ ಒಟ್ಟು 33 ಪಂದ್ಯಗಳನ್ನಾಡಿ ಒಮ್ಮೆಯೂ ಗೆಲುವು ಸಾಧಿಸಲು ಯಶಸ್ವಿಯಾಗದ ಬಾಂಗ್ಲಾದೇಶ, ಇದೀಗ ಮೊದಲ ಟೆಸ್ಟ್ ಗೆದ್ದು ಇತಿಹಾಸ ಬರೆಯುವ ಕನವರಿಕೆಯಲ್ಲಿದೆ. ನಾಲ್ಕನೇ ದಿನದಾಟದಂತ್ಯದ ವೇಳೆಗೆ ನ್ಯೂಜಿಲೆಂಡ್ ತಂಡವು 5 ವಿಕೆಟ್ ಕಳೆದುಕೊಂಡು 147 ರನ್ ಬಾರಿಸಿದ್ದು, ಕೇವಲ 17 ರನ್‌ಗಳ ಅಲ್ಪ ಮುನ್ನಡೆ ಸಾಧಿಸಿದೆ. ಅನುಭವಿ ಬ್ಯಾಟರ್ ರಾಸ್ ಟೇಲರ್ (Ross Taylor) 37 ರನ್ ಬಾರಿಸಿ ಕೊನೆಯ ದಿನದಾಟಕ್ಕೆ ಕ್ರೀಸ್ ಕಾಯ್ದುಕೊಂಡಿದ್ದಾರೆ. ಮತ್ತೊಂದೆಡೆ ಬಾಂಗ್ಲಾದೇಶದ ಮಧ್ಯಮ ವೇಗಿ ಎಬೊದತ್ ಹೊಸೈನ್ (Ebadot Hossain) 4 ವಿಕೆಟ್ ಕಬಳಿಸಿ ಕಿವೀಸ್ ಪಾಳಯದಲ್ಲಿ ನಡುಕ ಹುಟ್ಟಿಸಿದ್ದಾರೆ.
ಇಲ್ಲಿನ ಬೇ ಓವಲ್ ಮೈದಾನದಲ್ಲಿ ನಡೆಯುತ್ತಿರುವ ಮೊದಲ ಟೆಸ್ಟ್ ಪಂದ್ಯದಲ್ಲಿ ಮೂರನೇ ದಿನದಾಟದಂತ್ಯದ ವೇಳೆಗೆ 6 ವಿಕೆಟ್ ಕಳೆದುಕೊಂಡು 401 ರನ್ ಬಾರಿಸಿದ್ದ ಬಾಂಗ್ಲಾದೇಶ ತಂಡವು, ನಾಲ್ಕನೇ ದಿನದಾಟದಲ್ಲಿ ಚುರುಕಿನ ರನ್ ಗಳಿಕೆಗೆ ಮುಂದಾಯಿತು. ಏಳನೇ ವಿಕೆಟ್‌ಗೆ ಮೆಹದಿ ಹಸನ್ (Mehidy Hasan) ಹಾಗೂ ಯಾಸಿರ್ ಅಲಿ ಜೋಡಿ 75 ರನ್‌ಗಳ ಜತೆಯಾಟವಾಡುವ ಮೂಲಕ ತಂಡಕ್ಕೆ ಆಸರೆಯಾದರು. ಉತ್ತಮವಾಗಿ ಬ್ಯಾಟ್ ಬೀಸುತ್ತಿದ್ದ ಮೆಹದಿ ಹಸನ್ 88 ಎಸೆತಗಳಲ್ಲಿ 8 ಬೌಂಡರಿ ಸಹಿತ 47 ರನ್ ಬಾರಿಸಿ ಟಿಮ್ ಸೌಥಿಗೆ ವಿಕೆಟ್ ಒಪ್ಪಿಸಿದರು. ಇನ್ನು ಇದರ ಬೆನ್ನಲ್ಲೇ ಯಾಸಿರ್ ಅಲಿಗೆ ನೀಳಕಾಯದ ವೇಗಿ ಕೈಲ್ ಜೇಮಿಸನ್ ಪೆವಿಲಿಯನ್ ಹಾದಿ ತೋರಿಸಿದರು. ಇದಾದ ಬಳಿಕ ಟಸ್ಕಿನ್ ಅಹಮ್ಮದ್ ಹಾಗೂ ಶೌರಿಫುಲ್ ಇಸ್ಲಾಂ ಹೆಚ್ಚು ಪ್ರತಿರೋಧ ತೋರಲಿಲ್ಲ. ಅಂತಿಮವಾಗಿ ಬಾಂಗ್ಲಾದೇಶ ತಂಡವು ಮೊದಲ ಇನಿಂಗ್ಸ್‌ನಲ್ಲಿ 458 ರನ್‌ಗಳಿಗೆ ಸರ್ವಪತನ ಕಂಡಿತು. ಈ ಮೂಲಕ ಬಾಂಗ್ಲಾದೇಶ ತಂಡವು ಮೊದಲ ಇನಿಂಗ್ಸ್‌ನಲ್ಲಿ 130 ರನ್‌ಗಳ ಅಮೂಲ್ಯ ಮುನ್ನಡೆ ಗಳಿಸಿತು.
ಇನ್ನು ಬೃಹತ್ ಹಿನ್ನೆಡೆಯೊಂದಿಗೆ ಎರಡನೇ ಇನಿಂಗ್ಸ್ ಆರಂಭಿಸಿದ ನ್ಯೂಜಿಲೆಂಡ್ ತಂಡವು (New Zealand Cricket Team) ಮತ್ತೊಮ್ಮೆ ಉತ್ತಮ ಆರಂಭ ಪಡೆಯಲು ವಿಫಲವಾಯಿತು. ಮೊದಲ ಇನಿಂಗ್ಸ್‌ನಲ್ಲಿ ಕೇವಲ ಒಂದು ರನ್ ಬಾರಿಸಿ ವಿಕೆಟ್ ಒಪ್ಪಿಸಿದ್ದ ಕಿವೀಸ್ ಹಂಗಾಮಿ ನಾಯಕ ಟಾಮ್ ಲೇಥಮ್ (Tom Latham) ಎರಡನೇ ಇನಿಂಗ್ಸ್‌ನಲ್ಲಿ 14 ರನ್ ಬಾರಿಸಿ ವಿಕೆಟ್ ಒಪ್ಪಿಸಿದರು. ಇನ್ನು ವರ್ಷದ ಮೊದಲ ಶತಕ ಬಾರಿಸಿದ್ದ ಡೆವೊನ್ ಕಾನ್‌ವೇ (Devon Conway) ಆಟ ಕೇವಲ 13 ರನ್‌ಗಳಿಗೆ ಸೀಮಿತವಾಯಿತು. ಇನ್ನು ಮೂರನೇ ವಿಕೆಟ್‌ಗೆ ವಿಲ್ ಯಂಗ್ (Will Young) ಹಾಗೂ ರಾಸ್ ಟೇಲರ್ (Ross Taylor) 73 ರನ್‌ಗಳ ಜತೆಯಾಟವಾಡುವ ಮೂಲಕ ತಂಡಕ್ಕೆ ಆಸರೆಯಾದರು. ಆರಂಭಿಕ ಬ್ಯಾಟರ್ ವಿಲ್ ಯಂಗ್ 172 ಎಸೆತಗಳನ್ನು ಎದುರಿಸಿ 7 ಬೌಂಡರಿ ಸಹಿತ 69 ರನ್ ಬಾರಿಸಿ ಎಬೊದತ್ ಹೊಸೈನ್ ಬೌಲಿಂಗ್‌ನಲ್ಲಿ ಕ್ಲೀನ್ ಬೌಲ್ಡ್ ಆಗಿ ಪೆವಿಲಿಯನ್ ಸೇರಿದರು.
Ban vs NZ: ಕಿವೀಸ್ ಎದುರು ಬಾಂಗ್ಲಾಗೆ ಮೊದಲ ಇನಿಂಗ್ಸ್ ಮುನ್ನಡೆ
ಕೈಕೊಟ್ಟ ಮಧ್ಯಮ ಕ್ರಮಾಂಕ: ನ್ಯೂಜಿಲೆಂಡ್ ತಂಡದ ನಾಯಕ ಕೇನ್ ವಿಲಿಯಮ್ಸನ್ ಅನುಪಸ್ಥಿತಿಯಲ್ಲಿ ಕಿವೀಸ್ ಮಧ್ಯಮ ಬ್ಯಾಟಿಂಗ್ ಕ್ರಮಾಂಕ ಮತ್ತೊಮ್ಮೆ ದುರ್ಬಲ ಎನಿಸಿಕೊಂಡಿತು. ಹೆನ್ರಿ ನಿಕೋಲ್ಸ್ ಹಾಗೂ ಟಾಮ್ ಬ್ಲಂಡೆಲ್ ಶೂನ್ಯ ಸುತ್ತಿ ಎಬೊದತ್ ಹೊಸೈನ್ ಬೌಲಿಂಗ್‌ನಲ್ಲಿ ಶೂನ್ಯ ಸುತ್ತಿ ಪೆವಿಲಿಯನ್ ಸೇರಿದರು. ಒಂದೇ ಓವರ್‌ನಲ್ಲಿ ಈ ಇಬ್ಬರು ಬ್ಯಾಟರ್‌ಗಳು ವಿಕೆಟ್ ಒಪ್ಪಿಸುವ ಮೂಲಕ ನಿರಾಸೆ ಅನುಭವಿಸಿದ್ದಾರೆ.
ರಾಸ್ ಟೇಲರ್ ಮೇಲೆ ಎಲ್ಲರ ಚಿತ್ತ: ವೃತ್ತಿ ಜೀವನ ಕೊನೆಯ ಟೆಸ್ಟ್ ಸರಣಿಯನ್ನಾಡುತ್ತಿರುವ ರಾಸ್ ಟೇಲರ್ ಎರಡನೇ ಇನಿಂಗ್ಸ್‌ನಲ್ಲಿ ನೆಲಕಚ್ಚಿ ಆಡುವ ಮೂಲಕ ತಂಡವನ್ನು ಸಂಕಷ್ಟದಿಂದ ಪಾರು ಮಾಡಲು ಹೋರಾಡುತ್ತಿದ್ದಾರೆ. ಒಟ್ಟು 101 ಎಸೆತಗಳನ್ನು ಎದುರಿಸಿರುವ ರಾಸ್ ಟೇಲರ್ ಕೇವಲ 2 ಬೌಂಡರಿ ಸಹಿತ 37 ರನ್ ಬಾರಿಸಿ ಅಜೇಯರಾಗುಳಿದಿದ್ದಾರೆ. ಮತ್ತೊಂದು ತುದಿಯಲ್ಲಿ ಭಾರತೀಯ ಮೂಲದ ರಚಿನ್ ರವೀಂದ್ರ 6 ರನ್ ಬಾರಿಸಿ ಕೊನೆಯ ದಿನದಾಟಕ್ಕೆ ಕ್ರೀಸ್ ಕಾಯ್ದುಕೊಂಡಿದ್ದಾರೆ. ಈ ಜೋಡಿ ಕಿವೀಸ್ ತಂಡವನ್ನು ಸೋಲಿನಿಂದ ಬಚಾವ್ ಮಾಡುತ್ತಾ ಎನ್ನುವುದನ್ನು ಕಾದು ನೋಡಬೇಕಿದೆ.
ಸಂಕ್ಷಿಪ್ತ ಸ್ಕೋರ್
ನ್ಯೂಜಿಲೆಂಡ್: 328/10 (ಮೊದಲ ಇನಿಂಗ್ಸ್)
ಡೆವೊನ್ ಕಾನ್‌ವೇ: 122
ಶೌರಿಫುಲ್ ಇಸ್ಲಾಂ: 69/3
ಬಾಂಗ್ಲಾದೇಶ: 458/10(ಮೊದಲ ಇನಿಂಗ್ಸ್)
ಮೊಮಿನುಲ್ ಹಕ್: 88
ಟ್ರೆಂಟ್ ಬೌಲ್ಟ್: 85/4
ನ್ಯೂಜಿಲೆಂಡ್: 147/5(ಎರಡನೇ ಇನಿಂಗ್ಸ್)
ವಿಲ್ ಯಂಗ್: 69
ಎಬೊದತ್ ಹೊಸೈನ್: 39/4
(* ನಾಲ್ಕನೇ ದಿನದಾಟದಂತ್ಯದ ವೇಳೆಗೆ)