* ಟಿ20 ಕ್ರಿಕೆಟ್‌ನಲ್ಲಿ ಹೊಸ ಇತಿಹಾಸ ನಿರ್ಮಿಸಿದ ಬಹ್ರೈನ್ ಮಹಿಳಾ ಕ್ರಿಕೆಟ್ ತಂಡ* ಟಿ20 ಪಂದ್ಯವೊಂದರಲ್ಲಿ ಬರೋಬ್ಬರಿ 318 ರನ್ ಸಿಡಿಸಿದ ಬಹ್ರೈನ್ ತಂಡ* ಜಿಸಿಸಿ ಮಹಿಳಾ ಟಿ20 ಚಾಂಪಿಯನ್‌ಶಿಪ್‌ನಲ್ಲಿ ಸೌದಿ ಅರೇಬಿಯಾ ರನ್ ಸುರಿಮಳೆ

ಅಲ್‌ ಅಮೆರಾತ್‌(ಮಾ.23‌): ಟಿ20 ಪಂದ್ಯವೊಂದರಲ್ಲಿ ಬರೋಬ್ಬರಿ 318 ರನ್‌ ಕಲೆ ಹಾಕಿದ ಬಹ್ರೈನ್‌ ಮಹಿಳಾ ಕ್ರಿಕೆಟ್‌ ತಂಡ (Bahrain women’s cricket team) ಹೊಸ ದಾಖಲೆ ಬರೆದಿದೆ. ಮಂಗಳವಾರ ಜಿಸಿಸಿ ಮಹಿಳಾ ಟಿ20 ಚಾಂಪಿಯನ್‌ಶಿಪ್‌ನಲ್ಲಿ ಸೌದಿ ಅರೇಬಿಯಾ (Saudi Arabia) ವಿರುದ್ಧ ಬಹ್ರೈನ್‌ ಕೇವಲ 1 ವಿಕೆಟ್‌ ನಷ್ಟದಲ್ಲಿ ಒಂದೂ ಸಿಕ್ಸರ್‌ ಸಿಡಿಸದೆ ಈ ಬೃಹತ್‌ ಮೊತ್ತ ಗಳಿಸಿತು. ಇದು ಅಂತಾರಾಷ್ಟ್ರೀಯ ಟಿ20 ಪಂದ್ಯದಲ್ಲಿ ತಂಡವೊಂದು ಗಳಿಸಿದ ಗರಿಷ್ಠ ರನ್‌. 

ಬಹ್ರೈನ್‌ ತಂಡದ ಇನ್ನಿಂಗ್ಸಲ್ಲಿ ಬರೋಬ್ಬರಿ 50 ಬೌಂಡರಿಗಳಿದ್ದಿದ್ದು ವಿಶೇಷ. 2019ರಲ್ಲಿ ಮಾಲಿ ವಿರುದ್ಧ ಉಗಾಂಡ 2 ವಿಕೆಟ್‌ಗೆ 314 ರನ್‌ ಬಾರಿಸಿದ್ದು ಈವರೆಗಿನ ದಾಖಲೆಯಾಗಿತ್ತು. ಪಂದ್ಯದಲ್ಲಿ ಸೌದಿ ಅರೇಬಿಯಾವನ್ನು ಕೇವಲ 49/8ಕ್ಕೆ ನಿಯಂತ್ರಿಸಿದ ಬಹ್ರೈನ್‌‌, 269 ರನ್‌ಗಳಿಂದ ಪಂದ್ಯ ಗೆದ್ದು ಮಹಿಳಾ ಟಿ20ಯಲ್ಲಿ 2ನೇ ಗರಿಷ್ಠ ರನ್‌ ಅಂತರದ ಗೆಲುವಿನ ದಾಖಲೆ ಬರೆಯಿತು. ಇನ್ನು, 66 ಎಸೆತಗಳಲ್ಲಿ 161 ರನ್‌ ಸಿಡಿಸಿದ ಬಹರೇನ್‌ ನಾಯಕಿ ದೀಪಿಕಾ ರಾಸಂಗಿಕ ಮಹಿಳಾ ಟಿ20ಯಲ್ಲಿ 150+ ರನ್‌ ಗಳಿಸಿದ ಮೊದಲ ಬ್ಯಾಟರ್‌ ಎನಿಸಿಕೊಂಡರು.

ಟೆಸ್ಟ್‌: ಆಸೀಸ್‌ 391ಕ್ಕೆ ಆಲೌಟ್‌, ಪಾಕ್‌ 90/1

ಲಾಹೋರ್‌: ಪಾಕಿಸ್ತಾನ ವಿರುದ್ಧದ 3ನೇ ಟೆಸ್ಟ್‌ನಲ್ಲಿ ಆಸ್ಪ್ರೇಲಿಯಾ ಉತ್ತಮ ಮೊತ್ತ ಗಳಿಸಿದ್ದು, ಪಾಕಿಸ್ತಾನವೂ ಎಚ್ಚರಿಕೆಯ ಆಟವಾಡಿ ತಿರುಗೇಟು ನೀಡಿದೆ. ಮೊದಲ ದಿನ 5 ವಿಕೆಟ್‌ಗೆ 232 ರನ್‌ ಗಳಿಸಿದ್ದ ಆಸೀಸ್‌, ಮಂಗಳವಾರ 391 ರನ್‌ಗೆ ಆಲೌಟಾಯಿತು. ಕ್ಯಾಮರೋನ್‌ ಗ್ರೀನ್‌(79), ಅಲೆಕ್ಸ್‌ ಕೇರಿ (67) ತಲಾ ಅರ್ಧಶತಕ ಬಾರಿಸಿ ತಂಡಕ್ಕೆ ನೆರವಾದರು. ಪಾಕಿಸ್ತಾನ ಕ್ರಿಕೆಟ್ ತಂಡದ ಪರ ಶಾಹೀನ್‌ ಅಫ್ರಿದಿ, ನಸೀಮ್‌ ಶಾ ತಲಾ 4 ವಿಕೆಟ್‌ ಕಿತ್ತರು. 

ಇದಾದ ಬಳಿಕ ಬ್ಯಾಟಿಂಗ್‌ ಆರಂಭಿಸಿದ ಪಾಕಿಸ್ತಾನ 2ನೇ ದಿನದಂತ್ಯಕ್ಕೆ 1 ವಿಕೆಟ್‌ ಕಳೆದುಕೊಂಡು 90 ರನ್‌ ಕಲೆ ಹಾಕಿದ್ದು, 301 ರನ್‌ ಹಿನ್ನಡೆಯಲ್ಲಿದೆ. ಅಬ್ದುಲ್ಲಾ ಶಫೀಕ್‌(45), ಅಝರ್‌ ಅಲಿ(30) 3ನೇ ದಿನಕ್ಕೆ ಕ್ರೀಸ್‌ ಕಾಯ್ದುಕೊಂಡಿದ್ದಾರೆ.

ಪಾಕ್ ಪ್ರವಾಸದಿಂದ ಹೊರಬಿದ್ದ ವೇಗಿ ಕೇನ್ ರಿಚರ್ಡ್‌ಸನ್

ಪಾಕಿಸ್ತಾನ ಎದುರಿನ ಏಕದಿನ ಸರಣಿ ಆರಂಭಕ್ಕೂ ಮುನ್ನ ಪ್ರವಾಸಿ ಆಸ್ಟ್ರೇಲಿಯಾ ತಂಡಕ್ಕೆ ಬಿಗ್ ಶಾಕ್ ಎದುರಾಗಿದ್ದು, ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ಅನುಭವಿ ವೇಗದ ಬೌಲರ್ ಕೇನ್ ರಿಚರ್ಡ್‌ಸನ್‌ ಗಾಯದ ಸಮಸ್ಯೆಯಿಂದಾಗಿ ತಂಡದಿಂದ ಹೊರಬಿದ್ದಿದ್ದಾರೆ. ಪಾಕ್ ಪ್ರವಾಸಕ್ಕೆ ಆಸ್ಟ್ರೇಲಿಯಾ ಸೀಮಿತ ಓವರ್‌ಗಳ ತಂಡದಲ್ಲಿ ಸ್ಥಾನ ಪಡೆದಿದ್ದ ಕೇನ್ ರಿಚರ್ಡ್‌ಸನ್, ಮೆಲ್ಬೊರ್ನ್‌ನಲ್ಲಿ ಅಭ್ಯಾಸ ನಡೆಸುತ್ತಿರುವ ವೇಳೆಯಲ್ಲಿ ಸ್ನಾಯು ಸೆಳೆತಕ್ಕೆ ಒಳಗಾಗಿದ್ದಾರೆ.

ಕೇನ್ ರಿಚರ್ಡ್‌ಸನ್ ಸ್ನಾಯು ಸೆಳೆತಕ್ಕೆ ಒಳಗಾಗಿ ಪಾಕಿಸ್ತಾನ ಪ್ರವಾಸದಿಂದ ಹೊರಬಿದ್ದ ಹಿನ್ನೆಲೆಯಲ್ಲಿ, ಎಡಗೈ ವೇಗಿ ಬೆನ್ ದೌರ್ಶಿಯಸ್‌ ತಂಡ ಕೂಡಿಕೊಂಡಿದ್ದಾರೆ. ಪಾಕಿಸ್ತಾನ ಎದುರಿನ ಮೂರು ಪಂದ್ಯಗಳ ಟೆಸ್ಟ್ ಸರಣಿ ಮುಕ್ತಯದ ಬಳಿಕ, ಆಸ್ಟ್ರೇಲಿಯಾ ತಂಡವು ಪಾಕ್ ಎದುರು ಮೂರು ಪಂದ್ಯಗಳ ಏಕದಿನ ಸರಣಿ ಹಾಗೂ ಏಕೈಕ ಟಿ20 ಪಂದ್ಯವನ್ನಾಡಲಿದೆ. ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ಮೊದಲ ಆಯ್ಕೆಯ ಬೌಲರ್‌ಗಳಾದ ಪ್ಯಾಟ್ ಕಮಿನ್ಸ್, ಮಿಚೆಲ್ ಸ್ಟಾರ್ಕ್‌ ಹಾಗೂ ಜೋಶ್ ಹೇಜಲ್‌ವುಡ್‌ ಪಾಕ್‌ ಎದುರಿನ ಸೀಮಿತ ಓವರ್‌ಗಳ ಸರಣಿಯಿಂದ ಹೊರಗುಳಿಯಲು ತೀರ್ಮಾನಿಸಿದ್ದಾರೆ. ಹೀಗಾಗಿ ಆಸ್ಟ್ರೇಲಿಯಾ ತಂಡದಲ್ಲಿ ಅನನುಭವಿ ಬೌಲರ್‌ಗಳು ವೇಗದ ಬೌಲಿಂಗ್‌ ಸಾರಥ್ಯವನ್ನು ವಹಿಸಲಿದ್ದಾರೆ. ಸದ್ಯ 11 ಸೀಮಿತ ಓವರ್‌ಗಳ ಪಂದ್ಯವನ್ನಾಡಿರುವ ಜೇಸನ್ ಬೆಹ್ರನ್‌ಡ್ರಾಫ್‌ ಆಸೀಸ್‌ ತಂಡದ ಅತ್ಯಂತ ಅನುಭವಿ ವೇಗದ ಬೌಲರ್ ಎನಿಸಿದ್ದಾರೆ.