ಐಪಿಎಲ್‌ ಮುಗಿಯುತ್ತಿದ್ದಂತೆಯೇ ಆಸ್ಟ್ರೇಲಿಯಾ ಸರ್ಕಾರ ವಿಶೇಷ ವಿಮಾನದ ಮೂಲಕ ತಮ್ಮನ್ನು ವಾಪಾಸ್ ತವರಿಗೆ ಕರೆಸಿಕೊಳ್ಳಬೇಕು ಎನ್ನುವ ಆಸೀಸ್‌ ಆಟಗಾರರ ಮನವಿಯನ್ನು ಆಸ್ಟ್ರೇಲಿಯಾ ಪ್ರಧಾನಿ ಸಾರಾಸಗಟಾಗಿ ತಳ್ಳಿಹಾಕಿದ್ದಾರೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ. 

ಮೆಲ್ಬರ್ನ್(ಏ.28)‌: ಭಾರತದ ವಿಮಾನಗಳಿಗೆ ಆಸ್ಪ್ರೇಲಿಯಾ ನಿರ್ಬಂಧ ಹೇರಿರುವ ಹಿನ್ನೆಲೆಯಲ್ಲಿ ಐಪಿಎಲ್‌ನಲ್ಲಿ ಆಡುತ್ತಿರುವ ಆಸ್ಪ್ರೇಲಿಯಾ ಆಟಗಾರರು ಟೂರ್ನಿ ಮುಗಿದ ಬಳಿಕ ತಮ್ಮ ಪ್ರಯಾಣಕ್ಕೆ ವಿಶೇಷ ವಿಮಾನದ ವ್ಯವಸ್ಥೆ ಮಾಡುವಂತೆ ತಮ್ಮ ಸರ್ಕಾರ ಹಾಗೂ ಕ್ರಿಕೆಟ್‌ ಆಸ್ಪ್ರೇಲಿಯಾಗೆ ಮನವಿ ಮಾಡಿದ್ದರು. ಈ ಮನವಿಯನ್ನು ಆಸ್ಪ್ರೇಲಿಯಾ ಪ್ರಧಾನಿ ಸ್ಕಾಟ್‌ ಮೊರ್ರಿಸನ್‌ ತಿರಸ್ಕರಿಸಿದ್ದಾರೆ. 

‘ಆಟಗಾರರು ಖಾಸಗಿಯಾಗಿ ಐಪಿಎಲ್‌ಗೆ ತೆರಳಿದ್ದಾರೆ. ಇದು ಆಸ್ಪ್ರೇಲಿಯಾ ಪ್ರವಾಸದ ಭಾಗವಲ್ಲ. ತಮ್ಮ ಸ್ವಂತ ಸಂಪನ್ಮೂಲಗಳನ್ನು ಬಳಸಿಕೊಂಡು, ತಾವೇ ವ್ಯವಸ್ಥೆ ಮಾಡಿಕೊಂಡು ಬರಬೇಕು. ಆಸ್ಪ್ರೇಲಿಯಾ ಸರ್ಕಾರ ಯಾವುದೇ ನೆರವು ನೀಡುವುದಿಲ್ಲ’ ಎಂದು ಮೊರ್ರಿಸನ್‌ ಹೇಳಿದ್ದಾರೆ.

ಐಪಿಎಲ್ 2021: ನಮ್ಮನ್ನು ಕರೆದೊಯ್ಯಲು ವಿಮಾನ ಕಳಿಸಿ: ಕ್ರಿಸ್‌ ಲಿನ್‌

ಈ ಮೊದಲು ಮುಂಬೈ ಇಂಡಿಯನ್ಸ್‌ ಆಟಗಾರ ಕ್ರಿಸ್‌ ಲಿನ್‌, ಆಸ್ಟ್ರೇಲಿಯಾ ಕ್ರಿಕೆಟ್‌ ಮಂಡಳಿ ಬಳಿ ಐಪಿಎಲ್ ಮುಗಿಯುತ್ತಿದ್ದಂತೆಯೇ ಟೂರ್ನಿಯಲ್ಲಿ ಪಾಲ್ಗೊಂಡಿರು ಆಸೀಸ್‌ ಆಟಗಾರರನ್ನು ವಿಶೇಷ ವಿಮಾನದ ಮೂಲಕ ಕರೆಸಿಕೊಳ್ಳಬೇಕು ಎಂದು ಮನವಿ ಸಲ್ಲಿಸಿದ್ದರು.

ವಿದೇಶಿ ಆಟಗಾರರಿಗೆ ಬಿಸಿಸಿಐ ಅಭಯ!

ನವದೆಹಲಿ: ಭಾರತದಲ್ಲಿ ಕೊರೋನಾ ಸೋಂಕು ವ್ಯಾಪಕವಾಗಿ ಹರಡುತ್ತಿರುವ ಕಾರಣ, ಐಪಿಎಲ್‌ನಲ್ಲಿ ಆಡುತ್ತಿರುವ ವಿದೇಶಿ ಆಟಗಾರರು ಆತಂಕಗೊಂಡಿದ್ದಾರೆ. ಕೆಲವರು ಈಗಾಗಲೇ ಟೂರ್ನಿಯಿಂದ ಹಿಂದೆ ಸರಿದಿದ್ದಾರೆ. ಈ ಕಾರಣ, ಬಿಸಿಸಿಐ ವಿದೇಶಿ ಆಟಗಾರರಿಗೆ ಅಭಯ ನೀಡಿದೆ. 

‘ಹೆದರಬೇಡಿ, ಬಿಸಿಸಿಐ ಪರಿಸ್ಥಿತಿ ಮೇಲೆ ಕಣ್ಣಿಟ್ಟಿದ್ದು, ಸರ್ಕಾರದೊಂದಿಗೆ ಸಂಪರ್ಕದಲ್ಲಿದೆ. ನಿಮ್ಮನ್ನು ಸುರಕ್ಷಿತವಾಗಿ ಮನೆಗೆ ತಲುಪಿಸುವ ವರೆಗೂ ಐಪಿಎಲ್‌ ಮುಗಿಯುವುದಿಲ್ಲ’ ಎಂದು ಬಿಸಿಸಿಐ ಸಿಒಒ ಹೇಮಾಂಗ್‌ ಅಮಿನ್‌ ವಿದೇಶಿ ಆಟಗಾರರಿಗೆ ಪತ್ರ ಬರೆದಿದ್ದಾರೆ.