ಸಿಡ್ನಿ(ಡಿ.23): ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯ ಮೊದಲ ಟೆಸ್ಟ್‌ ಪಂದ್ಯವನ್ನು ಗೆದ್ದು ಆತ್ಮವಿಶ್ವಾಸದಿಂದ ಬೀಗುತ್ತಿರುವ ಆತಿಥೇಯ ಆಸ್ಟ್ರೇಲಿಯಾ ತಂಡಕ್ಕೆ ಮತ್ತೊಂದು ಶಾಕ್ ಎದುರಾಗಿದೆ. ಡಿಸೆಂಬರ್ 26ರಿಂದ ಆರಂಭವಾಗಲಿರುವ ಬಾಕ್ಸಿಂಗ್ ಡೇ ಟೆಸ್ಟ್ ಪಂದ್ಯದಿಂದಲೂ ಸ್ಫೋಟಕ ಆರಂಭಿಕ ಬ್ಯಾಟ್ಸ್‌ಮನ್ ಡೇವಿಡ್ ವಾರ್ನರ್ ಹಾಗೂ ವೇಗಿ ಸೀನ್ ಅಬೋಟ್ ಫಿಟ್ನೆಸ್ ಸಮಸ್ಯೆಯಿಂದಾಗಿ ತಂಡದಿಂದ ಹೊರಬಿದ್ದಿದ್ದಾರೆ.

ಅಡಿಲೇಡ್‌ನಲ್ಲಿ ನಡೆದ ಪಿಂಕ್‌ ಬಾಲ್ ಟೆಸ್ಟ್‌ ಪಂದ್ಯದಿಂದಲೂ ಈ ಇಬ್ಬರು ಆಟಗಾರರು ಹೊರಗುಳಿದಿದ್ದರು. ಇದೀಗ ಮೆಲ್ಬರ್ನ್ ಕ್ರಿಕೆಟ್‌ ಮೈದಾನದಲ್ಲಿ ನಡೆಯಲಿರುವ ಬಾಕ್ಸಿಂಗ್ ಡೇ ಟೆಸ್ಟ್ ಪಂದ್ಯದಲ್ಲೂ ವಾರ್ನರ್ ಮತ್ತು ಅಬೋಟ್ ಪಾಲ್ಗೊಳ್ಳುತ್ತಿಲ್ಲ ಎಂದು ಕ್ರಿಕೆಟ್ ಆಸ್ಟ್ರೇಲಿಯಾ ಖಚಿತಪಡಿಸಿದೆ.

ಭಾರತಕ್ಕೆ ಮರಳುವ ಮುನ್ನ ತಂಡಕ್ಕೆ ಸ್ಪೂರ್ತಿ ತುಂಬಿದ ವಿರಾಟ್ ಕೊಹ್ಲಿ

ಭಾರತ ವಿರುದ್ದದ ಎರಡನೇ ಏಕದಿನ ಪಂದ್ಯದ ವೇಳೆ ಡೇವಿಡ್ ವಾರ್ನರ್ ತೊಡೆಸಂದಿನ ಗಾಯಕ್ಕೆ ತುತ್ತಾಗಿದ್ದರು, ಇನ್ನು ಅಬೋಟ್ ಕಾಲಿನ ಸ್ಯಾಯು ಸೆಳೆತಕ್ಕೆ ಒಳಗಾಗಿದ್ದರು. ಅಬೋಟ್ ಬದಲಿಗೆ ಮೊಯಿಸ್ ಹೆನ್ರಿಕೇಸ್‌ಗೆ ಕ್ರಿಕೆಟ್ ಆಸ್ಟ್ರೇಲಿಯಾ ಬುಲಾವ್ ನೀಡಿತ್ತು. ವಾರ್ನರ್ ಹಾಗೂ ಅಬೋಟ್‌ ಜನವರಿ 07ರಿಂದ ಸಿಡ್ನಿ ಕ್ರಿಕೆಟ್‌ ಮೈದಾನದಲ್ಲಿ ಆರಂಭವಾಗಲಿರುವ ಮೂರನೇ ಟೆಸ್ಟ್‌ ಪಂದ್ಯದ ವೇಳೆಗೆ ತಂಡ ಕೂಡಿಕೊಳ್ಳುವ ಸಾಧ್ಯತೆಯಿದೆ.

ಕ್ರಿಕೆಟ್‌ ಆಸ್ಟ್ರೇಲಿಯಾ ಬಯೋ ಸೆಕ್ಯುರಿಟಿ ಶಿಷ್ಟಾಚಾರ ನಿಯಮಾವಳಿಗಳು ಬಾಕ್ಸಿಂಗ್ ಡೇ ಟೆಸ್ಟ್‌ ಪಂದ್ಯಕ್ಕೆ ಈ ಇಬ್ಬರು ಆಟಗಾರರನ್ನು ತಂಡ ಕೂಡಿಕೊಳ್ಳಲು ಅನುವು ಮಾಡಿಕೊಟ್ಟಿಲ್ಲ ಎಂದು ಪ್ರಕಟಣೆಯಲ್ಲಿ ತಿಳಿಸಿದೆ ಎಂದು ಹಿಂದುಸ್ಥಾನ್ ಟೈಮ್ಸ್‌ ವರದಿ ಮಾಡಿದೆ.