ನವದೆಹಲಿ(ಮೇ.12): ಐಸಿಸಿ ಟೆಸ್ಟ್‌ ರ‍್ಯಾಂಕಿಂಗ್‌ನಲ್ಲಿ ಭಾರತ ಈಗಲೂ ನಂ.1 ಆಗುವುದಕ್ಕೆ ಅರ್ಹವಾಗಿದೆ. ಆದರೆ ಭಾರತವನ್ನು 3ನೇ ಸ್ಥಾನಕ್ಕೆ ತಳ್ಳಿ, ಆಸ್ಪ್ರೇಲಿಯಾಕ್ಕೆ ಅಗ್ರಸ್ಥಾನ ನೀಡಿರುವ ಐಸಿಸಿ ರ‍್ಯಾಂಕಿಂಗ್ ಮಾನದಂಡ ಸರಿಯಾಗಿಲ್ಲ ಎಂದು ಭಾರತದ ಮಾಜಿ ಆರಂಭಿಕ ಬ್ಯಾಟ್ಸ್‌ಮನ್‌ ಗೌತಮ್‌ ಗಂಭೀರ್‌ ಟೀಕಿಸಿದ್ದಾರೆ. 

2016-17ರ ಸಾಲಿನಲ್ಲಿ ಭಾರತ ಟೆಸ್ಟ್‌ ತಂಡ ರೇಟಿಂಗ್ಸ್‌ ಕಳೆದುಕೊಂಡಿದ್ದರ ಹಿನ್ನೆಲೆಯಲ್ಲಿ ರ‍್ಯಾಂಕಿಂಗ್‌‌ನಲ್ಲಿ ಕುಸಿತ ಕಂಡಿದೆ ಎಂದು ಐಸಿಸಿ ಹೇಳಿದೆ. ಈ ಅವಧಿಯಲ್ಲಿ ಕೊಹ್ಲಿ ಪಡೆ ಒಟ್ಟು 12 ಟೆಸ್ಟ್‌ ಆಡಿದ್ದು 11ರಲ್ಲಿ ಗೆದ್ದಿದೆ. ಆದರೂ ಭಾರತಕ್ಕೆ ರ‍್ಯಾಂಕಿಂಗ್‌ನಲ್ಲಿ ಹಿನ್ನಡೆಯಾಗಿದೆ.

ನನ್ನ ಪ್ರಕಾರ ಭಾರತ ನಂ.1 ಸ್ಥಾನದಲ್ಲಿರಬೇಕಿತ್ತು. ಆಸ್ಟ್ರೇಲಿಯಾ ನಂ.1 ಸ್ಥಾನ ಸಿಕ್ಕಿದ್ದು ಹೇಗೆಂದು ಅರ್ಥವಾಗುತ್ತಿಲ್ಲ. ತವರಿನಾಚೆಗೆ ಅದರಲ್ಲೂ ಉಪಖಂಡದಲ್ಲಿ ಆಸ್ಟ್ರೇಲಿಯಾ ತಂಡದ ಟೆಸ್ಟ್ ಪ್ರದರ್ಶನ ಹೀನಾಯವಾಗಿದೆ ಎಂದು ಗಂಭೀರ್ ಹೇಳಿದ್ದಾರೆ.

ಐಸಿಸಿ ಟೆಸ್ಟ್‌ ರ‍್ಯಾಂಕಿಂಗ್‌: 4 ವರ್ಷಗಳ ಬಳಿಕ ಅಗ್ರಸ್ಥಾನ ಕಳೆದುಕೊಂಡ ಭಾರತ..!

ವಿರಾಟ್ ಕೊಹ್ಲಿ ನೇತೃತ್ವದ ಟೀಂ ಇಂಡಿಯಾ 42 ತಿಂಗಳುಗಳ ಕಾಲ ಐಸಿಸಿ ಟೆಸ್ಟ್ ರ‍್ಯಾಂಕಿಂಗ್‌ನಲ್ಲಿ ನಂ.1 ಸ್ಥಾನದಲ್ಲಿ ಭದ್ರವಾಗಿತ್ತು. ಆದರೆ ಈ ತಿಂಗಳ ಆರಂಭದಲ್ಲಿ ನಂ.1 ಪಟ್ಟವನ್ನು ಕಳೆದುಕೊಂಡಿತ್ತು.  ಆಸ್ಟ್ರೇಲಿಯಾ ನಂ.1 ಸ್ಥಾನ ಆಕ್ರಮಿಸಿಕೊಂಡರೆ, ನ್ಯೂಜಿಲೆಂಡ್ ಎರಡನೇ ಸ್ಥಾನಕ್ಕೆ ಲಗ್ಗೆಯಿಟ್ಟಿದೆ.