ಕ್ಯಾನ್‌ಬೆರಾ(ಡಿ.01): ಭಾರತ ವಿರುದ್ಧದ ಸೀಮಿತ ಓವರ್‌ಗಳ ಸರಣಿಯಿಂದ ಆಸ್ಟ್ರೇಲಿಯಾದ ಸ್ಫೋಟಕ ಆರಂಭಿಕ ಬ್ಯಾಟ್ಸ್‌ಮನ್ ಡೇವಿಡ್ ವಾರ್ನರ್ ಹೊರಬಿದ್ದಿದ್ದಾರೆ. ಟೀಂ ಇಂಡಿಯಾ ವಿರುದ್ದದ ಎರಡನೇ ಏಕದಿನ ಪಂದ್ಯದ ಕ್ಷೇತ್ರ ರಕ್ಷಣೆ ಮಾಡುವ ವೇಳೆ ತೊಡೆಸಂದು ಸ್ನಾಯುಸೆಳತಕ್ಕೆ ಒಳಗಾದ ವಾರ್ನರ್ ಏಕದಿನ ಸರಣಿಯ ಕೊನೆಯ ಪಂದ್ಯ ಹಾಗೂ ಟಿ20 ಸರಣಿಯಿಂದ ಹೊರಬಿದ್ದಿದ್ದಾರೆ.

ಡೇವಿಡ್ ವಾರ್ನರ್ ಅನುಪಸ್ಥಿತಿ ಆಸ್ಟ್ರೇಲಿಯಾ ತಂಡಕ್ಕೆ ಕೊಂಚ ಹಿನ್ನಡೆಯಾಗುವ ಸಾಧ್ಯತೆಯಿದೆ. ಇದೆಲ್ಲದರ ನಡುವೆ ಆಸ್ಟ್ರೇಲಿಯಾ ಸೀಮಿತ ಓವರ್‌ಗಳ ತಂಡದ ನಾಯಕ ಆ್ಯರೋನ್ ಫಿಂಚ್ ತಮ್ಮ ಮುಂದೆ ಸಾಕಷ್ಟು ಆಯ್ಕೆಗಳಿವೆ ಎಂದು ಹೇಳಿದ್ದಾರೆ.

ಇಂಡೋ-ಆಸೀಸ್ 3ನೇ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾದಲ್ಲಿ 3 ಬದಲಾವಣೆ..?

ಅಲೆಕ್ಸ್ ಕ್ಯಾರಿ, ಮಾರ್ನಸ್ ಲಬುಶೇನ್ ಹಾಗೂ ಮ್ಯಾಥ್ಯೂ ವೇಡ್ ಮೂರನೇ ಏಕದಿನ ಪಂದ್ಯದಲ್ಲಿ ಆಸ್ಟ್ರೇಲಿಯಾ ಪರ ಇನಿಂಗ್ಸ್ ಆರಂಭಿಸಬಹುದು ಎಂದು ನಾಯಕ ಆ್ಯರೋನ್ ಫಿಂಚ್ ಸುಳಿವನ್ನು ನೀಡಿದ್ದಾರೆ. ಆಸ್ಟ್ರೇಲಿಯಾ ತಂಡ ಮೂರು ಪಂದ್ಯಗಳ ಸರಣಿಯಲ್ಲಿ ಈಗಾಗಲೇ 2-0 ಅಂತರದಲ್ಲಿ ಏಕದಿನ ಸರಣಿಯನ್ನು ಜಯಿಸಿದ್ದು, ಮೂರನೇ ಏಕದಿನ ಪಂದ್ಯದಲ್ಲಿ ಬೆಂಚ್ ಕಾಯಿಸಿದ್ದ ಕೆಲ ಆಟಗಾರರಿಗೆ ಆಡುವ ಹನ್ನೊಂದರ ಬಳಗದಲ್ಲಿ ಸ್ಥಾನ ನೀಡುವ ಸಾಧ್ಯತೆಯಿದೆ.

ಕೊನೆಯ ಪಂದ್ಯಕ್ಕೆ ನಾವಿನ್ನು ತಂಡವನ್ನು ಅಂತಿಮಗೊಳಿಸಿಲ್ಲ. ನಮ್ಮ ಮುಂದೆ ಸಾಕಷ್ಟು ಆಯ್ಕೆಗಳಿವೆ. ವೇಡ್, ಲಬುಶೇನ್ ಇಲ್ಲವೇ ಕ್ಯಾರಿ ಇನಿಂಗ್ಸ್ ಆರಂಭಿಸಬಹುದು. ಇನ್ನು ಮಧ್ಯಮ ಕ್ರಮಾಂಕದಿಂದಲೂ ಉತ್ತಮ ಪ್ರದರ್ಶನ ಮೂಡಿಬರುತ್ತಿರುವುದು ತಂಡದ ಆತ್ಮವಿಶ್ವಾಸ ಮತ್ತಷ್ಟು ಹೆಚ್ಚುವಂತೆ ಮಾಡಿದೆ ಎಂದು ಆ್ಯರೋನ್ ಫಿಂಚ್ ಹೇಳಿದ್ದಾರೆ.