ಮೆಲ್ಬೊರ್ನ್(ಮಾ.03): ಐಸಿಸಿ ಮಹಿಳಾ ಟಿ20 ವಿಶ್ವಕಪ್ ಟೂರ್ನಿಯಲ್ಲಿ ನ್ಯೂಜಿಲೆಂಡ್ ಮಣಿಸಿ ಸೆಮಿಫೈನಲ್‌ಗೆ ಲಗ್ಗೆಯಿಟ್ಟಿರುವ ಹಾಲಿ ಚಾಂಪಿಯನ್ ಆಸ್ಟ್ರೇಲಿಯಾಗೆ ಆಘಾತ ಎದುರಾಗಿದೆ. ಕಿವೀಸ್ ಎದುರಿನ ಪಂದ್ಯದಲ್ಲಿ ಗಾಯಕ್ಕೆ ತುತ್ತಾಗಿರುವ ತಂಡದ ಸ್ಟಾರ್ ಆಲ್ರೌಂಡರ್ ಏಲಿಸಾ ಪೆರ್ರಿ ಟೂರ್ನಿಯಿಂದಲೇ ಹೊರಬಿದ್ದಿದ್ದಾರೆ.

ಮಹಿಳಾ ಟಿ20 ವಿಶ್ವಕಪ್‌: ಕಿವೀಸ್ ಮಣಿಸಿ ಆಸೀಸ್‌ ಸೆಮಿಫೈನಲ್‌ಗೆ

ನ್ಯೂಜಿಲೆಂಡ್ ವಿರುದ್ಧದ ಪಂದ್ಯದಲ್ಲಿ ಮಿಡ್ ಆಫ್‌ನಲ್ಲಿ ಫೀಲ್ಡಿಂಗ್ ಮಾಡುತ್ತಿದ್ದ ಪೆರ್ರಿ, ಸೋಫಿ ಡಿವೈನ್ ರನೌಟ್ ಮಾಡುವ ಯತ್ನದಲ್ಲಿ ಬ್ಯಾಲೆನ್ಸ್ ತಪ್ಪಿ ಬಿದ್ದಿದ್ದರು. ಆ ಬಳಿಕ ಮೈದಾನ ತೊರೆದಿದ್ದರು. ಬ್ಯಾಟಿಂಗ್ ಹಾಗೂ ಬೌಲಿಂಗ್‌ನಲ್ಲಿ  ಏಕಾಂಗಿಯಾಗಿ ಗೆಲುವು ತಂದುಕೊಡಬಲ್ಲ ಸಾಮರ್ಥ್ಯ ಹೊಂದಿದ್ದ ಪೆರ್ರಿ ಅನುಪಸ್ಥಿತಿ ಆಸೀಸ್‌ ತಂಡಕ್ಕೆ ಕಾಡಲಿದೆ.  

ಟಿ20 ವಿಶ್ವಕಪ್‌: ಸೆಮೀಸ್‌ಗೆ ದ.ಆಫ್ರಿಕಾ, ಇಂಗ್ಲೆಂಡ್‌

ಏಲಿಸಾ ಗಂಭೀರ ಮಂಡಿರಜ್ಜು ಗಾಯಕ್ಕೆ ತುತ್ತಾಗಿದ್ದು, ಕೆಲಕಾಲ ತಂಡದಿಂದ ಹೊರಗುಳಿಯ ಬೇಕಾಗುತ್ತದೆ. ಮ್ಯಾನೇಜ್‌ಮೆಂಟ್ ಅವರು ಗುಣಮುಖರಾಗಲು ಸೂಕ್ತ ನೆರವು ನೀಡಲಿದೆ ಎಂದು ತಂಡದ ಡೈರೆಕ್ಟರ್ ಪಿಪ್ ಇಂಗ್ ಹೇಳಿದ್ದಾರೆ. 

ಆಸ್ಟ್ರೇಲಿಯಾ ತಂಡವು ಮಾರ್ಚ್‌ 5ರಂದು ಸಿಡ್ನಿ ಮೈದಾನದಲ್ಲಿ ನಡೆಯಲಿರುವ ಸೆಮಿಫೈನಲ್ ಪಂದ್ಯದಲ್ಲಿ 'ಬಿ' ಗುಂಪಿನಲ್ಲಿ ಅಗ್ರಸ್ಥಾನ ಪಡೆಯುವ ತಂಡದ ವಿರುದ್ಧ ಸೆಣಸಲಿದೆ. 'ಬಿ' ಗುಂಪಿನಲ್ಲಿ ದಕ್ಷಿಣ ಆಫ್ರಿಕಾ ಹಾಗೂ ಇಂಗ್ಲೆಂಡ್ ತಂಡಗಳು ಸೆಮಿಫೈನಲ್ ಪ್ರವೇಶಿಸಿವೆ. ಇಂದು ದಕ್ಷಿಣ ಆಫ್ರಿಕಾ-ವೆಸ್ಟ್ ಇಂಡೀಸ್ ನಡುವಿನ ಪಂದ್ಯದ ಫಲಿತಾಂಶ ಸೆಮಿಫೈನಲ್ ಪೈಪೋಟಿ ನಿರ್ಧರಿಸಲಿದೆ.