Asianet Suvarna News Asianet Suvarna News

World Cup 2023 ಟೂರ್ನಿಗೆ 15 ಆಟಗಾರರನ್ನೊಳಗೊಂಡ ಬಲಿಷ್ಠ ಆಸ್ಟ್ರೇಲಿಯಾ ಕ್ರಿಕೆಟ್ ತಂಡ ಪ್ರಕಟ

ಆಸ್ಟ್ರೇಲಿಯಾ ತಂಡವು ಸದ್ಯ ದಕ್ಷಿಣ ಆಫ್ರಿಕಾ ಪ್ರವಾಸದಲ್ಲಿದ್ದು, ಹರಿಣಗಳ ಪಡೆ ಎದುರು 5 ಪಂದ್ಯಗಳ ಏಕದಿನ ಸರಣಿಯನ್ನಾಡುತ್ತಿದೆ. ಇದಾದ ಬಳಿಕ ಭಾರತಕ್ಕೆ ಪ್ರವಾಸ ಕೈಗೊಳ್ಳಲಿರುವ ಕಾಂಗರೂ ಪಡೆ, ಏಕದಿನ ವಿಶ್ವಕಪ್‌ಗೂ ಮುನ್ನ ಟೀಂ ಇಂಡಿಯಾ ಎದುರು ಕೊನೆಯದಾಗಿ 3 ಪಂದ್ಯಗಳ ಏಕದಿನ ಸರಣಿಯನ್ನಾಡಲಿದೆ. 

Australia Cricket lock in squad for 2023 World Cup kvn
Author
First Published Sep 6, 2023, 4:28 PM IST

ಮೆಲ್ಬೊರ್ನ್‌(ಸೆ.06): 5 ಬಾರಿಯ ಚಾಂಪಿಯನ್ ಆಸ್ಟ್ರೇಲಿಯಾ ಕ್ರಿಕೆಟ್ ತಂಡವು ಇದೀಗ 6ನೇ ಬಾರಿಗೆ ಐಸಿಸಿ ಏಕದಿನ ವಿಶ್ವಕಪ್ ಟ್ರೋಫಿ ಗೆಲ್ಲಲು ಹಾತೊರೆಯುತ್ತಿದೆ. ಮುಂಬರುವ ಅಕ್ಟೋಬರ್ 05ರಿಂದ ಭಾರತದಲ್ಲಿ ಆರಂಭವಾಗಲಿರುವ 2023ರ ಏಕದಿನ ವಿಶ್ವಕಪ್ ಟೂರ್ನಿಗೆ ಇದೀಗ 15 ಆಟಗಾರರನ್ನೊಳಗೊಂಡ ಆಸ್ಟ್ರೇಲಿಯಾ ಕ್ರಿಕೆಟ್ ತಂಡ ಪ್ರಕಟಿಸಲಾಗಿದ್ದು, ನಿರೀಕ್ಷೆಯಂತೆಯೇ ಪ್ಯಾಟ್ ಕಮಿನ್ಸ್‌ ನಾಯಕನಾಗಿ ಆಸ್ಟ್ರೇಲಿಯಾ ತಂಡವನ್ನು ಮುನ್ನಡೆಸಲಿದ್ದಾರೆ.

ಆಸ್ಟ್ರೇಲಿಯಾ ಕ್ರಿಕೆಟ್ ತಂಡವು ಈ ಮೊದಲು ಕಳೆದ ತಿಂಗಳಷ್ಟೇ 18 ಆಟಗಾರರನ್ನೊಳಗೊಂಡ ಪ್ರಾಥಮಿಕ ತಂಡವನ್ನು ಪ್ರಕಟಿಸಿತ್ತು. ಇದೀಗ ಏಕದಿನ ವಿಶ್ವಕಪ್ ಟೂರ್ನಿ ಆರಂಭಕ್ಕೆ ಸರಿಸುಮಾರು ಒಂದು ತಿಂಗಳು ಬಾಕಿ ಇರುವಂತೆಯೇ 15 ಆಟಗಾರರನ್ನೊಳಗೊಂಡ ಅಂತಿಮ ಆಸ್ಟ್ರೇಲಿಯಾ ಕ್ರಿಕೆಟ್ ತಂಡವನ್ನು ಕ್ರಿಕೆಟ್ ಆಸ್ಟ್ರೇಲಿಯಾ ಪ್ರಕಟಿಸಿದೆ.

ಈ ಮೊದಲು ಪ್ರಕಟಿಸಿದ ಪ್ರಾಥಮಿಕ ತಂಡದಲ್ಲಿ ಸ್ಥಾನ ಪಡೆದಿದ್ದ ಆಲ್ರೌಂಡರ್ ಆರೋನ್ ಹಾರ್ಡಿ, ವೇಗಿ ನೇಥನ್ ಎಲ್ಲೀಸ್ ಹಾಗೂ ಯುವ ಸ್ಪಿನ್ನರ್ ತನ್ವೀರ್ ಸಂಘಾ ಇದೀಗ ವಿಶ್ವಕಪ್ ತಂಡದಿಂದ ಹೊರಬಿದ್ದಿದ್ದಾರೆ. ಇನ್ನು ಇದೇ ವೇಳೆ ಟೆಸ್ಟ್ ಸ್ಪೆಷಲಿಸ್ಟ್ ಮಾರ್ನಸ್ ಲಬುಶೇನ್ ಕೂಡಾ ವಿಶ್ವಕಪ್ ಆಸ್ಟ್ರೇಲಿಯಾ ತಂಡದಲ್ಲಿ ಸ್ಥಾನ ಪಡೆಯಲು ವಿಫಲವಾಗಿದ್ದಾರೆ.

ಪಾಕಿಸ್ತಾನ ವೇಗಿಗೆ ಗಾಳ ಹಾಕಿದ ರಿಷಭ್ ಪಂತ್ ಪ್ರೇಯಸಿ..! ಊರ್ವಶಿ ಸ್ಟೇಟಸ್ ವೈರಲ್

ಆಸ್ಟ್ರೇಲಿಯಾ ತಂಡದ ಬ್ಯಾಟಿಂಗ್‌ ವಿಭಾಗದಲ್ಲಿ ಡೇವಿಡ್ ವಾರ್ನರ್, ಸ್ಟೀವ್ ಸ್ಮಿತ್ ಹಾಗೂ ಟ್ರಾವಿಸ್ ಹೆಡ್‌ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ. ಇನ್ನು ಮಿಚೆಲ್ ಮಾರ್ಶ್‌, ಗ್ಲೆನ್ ಮ್ಯಾಕ್ಸ್‌ವೆಲ್, ಮಾರ್ಕಸ್‌ ಸ್ಟೋನಿಸ್ ಹಾಗೂ ಕ್ಯಾಮರೋನ್ ಗ್ರೀನ್ ಅವರಂತಹ ವಿಶ್ವ ಶ್ರೇಷ್ಠ ಆಲ್ರೌಂಡರ್‌ಗಳ ಬಲ ಆಸ್ಟ್ರೇಲಿಯಾ ತಂಡಕ್ಕಿದೆ.

ಇನ್ನು ಅಲೆಕ್ಸ್ ಕ್ಯಾರಿ ಹಾಗೂ ಜೋಶ್ ಇಂಗ್ಲಿಶ್‌ ವಿಕೆಟ್ ಕೀಪರ್ ಬ್ಯಾಟರ್ ರೂಪದಲ್ಲಿ ಕಾಂಗರೂ ಪಡೆಯಲ್ಲಿ ಸ್ಥಾನ ಪಡೆದಿದ್ದಾರೆ. 2019ರ ವಿಶ್ವಕಪ್ ಬಳಿಕ ಅಲೆಕ್ಸ್‌ ಕ್ಯಾರಿ ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ಮೊದಲ ಆಯ್ಕೆಯ ವಿಕೆಟ್ ಕೀಪರ್ ಆಗಿ ಗುರುತಿಸಿಕೊಂಡಿದ್ದಾರೆ. 

ಬೌಲಿಂಗ್ ವಿಭಾಗವನ್ನು ನಾಯಕ ಪ್ಯಾಟ್ ಕಮಿನ್ಸ್ ಮುನ್ನಡೆಸಲಿದ್ದು, ಇವರಿಗೆ ಮಾರಕ ವೇಗಿಗಳಾದ ಜೋಶ್ ಹೇಜಲ್‌ವುಡ್ ಹಾಗೂ ಮಿಚೆಲ್ ಸ್ಟಾರ್ಕ್‌ ಸಾಥ್ ನೀಡಲಿದ್ದಾರೆ. ಇನ್ನು ಬ್ಯಾಕ್ ಅಪ್ ವೇಗಿಯಾಗಿ ನೇಥನ್ ಎಲ್ಲೀಸ್ ಹಿಂದಿಕ್ಕಿ ನೀಳಕಾಯದ ವೇಗಿ ಶಾನ್ ಅಬ್ಬೋಟ್ ಆಸೀಸ್ ಪಡೆಯಲ್ಲಿ ಸ್ಥಾನ ಪಡೆದಿದ್ದಾರೆ. ಇನ್ನುಳಿದಂತೆ ಆಸ್ಟನ್ ಏಗಾರ್ ಹಾಗೂ ಆಡಂ ಜಂಪಾ ಸ್ಪಿನ್ನರ್‌ಗಳಾಗಿ ಆಸ್ಟ್ರೇಲಿಯಾ ತಂಡದಲ್ಲಿ ಸ್ಥಾನಗಿಟ್ಟಿಸಿಕೊಂಡಿದ್ದಾರೆ.

South Africa Squad: ವಿಶ್ವಕಪ್ ಟೂರ್ನಿಗೆ ಬಲಾಢ್ಯ ದಕ್ಷಿಣ ಆಫ್ರಿಕಾ ಕ್ರಿಕೆಟ್ ತಂಡ ಪ್ರಕಟ

ಆಸ್ಟ್ರೇಲಿಯಾ ತಂಡವು ಸದ್ಯ ದಕ್ಷಿಣ ಆಫ್ರಿಕಾ ಪ್ರವಾಸದಲ್ಲಿದ್ದು, ಹರಿಣಗಳ ಪಡೆ ಎದುರು 5 ಪಂದ್ಯಗಳ ಏಕದಿನ ಸರಣಿಯನ್ನಾಡುತ್ತಿದೆ. ಇದಾದ ಬಳಿಕ ಭಾರತಕ್ಕೆ ಪ್ರವಾಸ ಕೈಗೊಳ್ಳಲಿರುವ ಕಾಂಗರೂ ಪಡೆ, ಏಕದಿನ ವಿಶ್ವಕಪ್‌ಗೂ ಮುನ್ನ ಟೀಂ ಇಂಡಿಯಾ ಎದುರು ಕೊನೆಯದಾಗಿ 3 ಪಂದ್ಯಗಳ ಏಕದಿನ ಸರಣಿಯನ್ನಾಡಲಿದೆ. 

ಇದಾದ ಬಳಿಕ ಏಕದಿನ ವಿಶ್ವಕಪ್ ಟೂರ್ನಿಗೂ ಮುನ್ನ ಆಸ್ಟ್ರೇಲಿಯಾ ಕ್ರಿಕೆಟ್ ತಂಡವು ನೆದರ್‌ಲೆಂಡ್ಸ್ ಹಾಗೂ ಪಾಕಿಸ್ತಾನ ಎದುರು ತಲಾ ಒಂದೊಂದು ಅಭ್ಯಾಸ ಪಂದ್ಯವನ್ನಾಡಲಿದೆ. 2023ರ ಏಕದಿನ ವಿಶ್ವಕಪ್ ಟೂರ್ನಿಯು ಅಕ್ಟೋಬರ್ 05ರಿಂದ ಆರಂಭವಾಗಲಿದ್ದು, ಆಸ್ಟ್ರೇಲಿಯಾ ತಂಡವು ಅಕ್ಟೋಬರ್ 08ರಂದು ಚೆನ್ನೈನಲ್ಲಿ ಆತಿಥೇಯ ಭಾರತ ವಿರುದ್ದ ಕಣಕ್ಕಿಳಿಯುವ ಮೂಲಕ ತನ್ನ ಅಭಿಯಾನ ಆರಂಭಿಸಲಿದೆ.

ವಿಶ್ವಕಪ್ ಟೂರ್ನಿಗೆ 15 ಆಟಗಾರರನ್ನೊಳಗೊಂಡ ಆಸ್ಟ್ರೇಲಿಯಾ ತಂಡ ಹೀಗಿದೆ ನೋಡಿ:

ಪ್ಯಾಟ್ ಕಮಿನ್ಸ್(ನಾಯಕ), ಸ್ಟೀವ್ ಸ್ಮಿತ್, ಅಲೆಕ್ಸ್ ಕ್ಯಾರಿ, ಜೋಶ್ ಇಂಗ್ಲಿಶ್, ಶಾನ್ ಅಬ್ಬೋಟ್, ಆಸ್ಟನ್ ಏಗಾರ್, ಕ್ಯಾಮರೋನ್ ಗ್ರೀನ್, ಜೋಶ್ ಹೇಜಲ್‌ವುಡ್, ಟ್ರಾವಿಸ್ ಹೆಡ್, ಮಿಚೆಲ್ ಮಾರ್ಶ್, ಗ್ಲೆನ್ ಮ್ಯಾಕ್ಸ್‌ವೆಲ್, ಮಾರ್ಕಸ್ ಸ್ಟೋನಿಸ್, ಡೇವಿಡ್ ವಾರ್ನರ್, ಆಡಂ ಜಂಪಾ, ಮಿಚೆಲ್ ಸ್ಟಾರ್ಕ್.

Follow Us:
Download App:
  • android
  • ios