ಸಿಡ್ನಿ(ನ.27): ಹಾರ್ದಿಕ್ ಪಾಂಡ್ಯ(90) ಹಾಗೂ ಶಿಖರ್ ಧವನ್(74) ಸಮಯೋಚಿತ ಅರ್ಧಶತಕದ ಹೊರತಾಗಿಯೂ ಮೊದಲ ಏಕದಿನ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ 66 ರನ್‌ಗಳ ಹೀನಾಯ ಸೋಲು ಕಂಡಿದೆ. ಈ ಗೆಲುವಿನೊಂದಿಗೆ 3 ಪಂದ್ಯಗಳ ಏಕದಿನ ಸರಣಿಯಲ್ಲಿ ಫಿಂಚ್ ನೇತೃತ್ವದ ಆಸ್ಟ್ರೇಲಿಯಾ ತಂಡ 1-0 ಮುನ್ನಡೆ ಸಾಧಿಸಿದೆ.

ಹೌದು, ಇಲ್ಲಿನ ಸಿಡ್ನಿ ಕ್ರಿಕೆಟ್‌ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಅಸ್ಟ್ರೇಲಿಯಾ ನೀಡಿದ್ದ 375 ರನ್‌ಗಳ ಗುರಿ ಬೆನ್ನತ್ತಿದ ಟೀಂ ಇಂಡಿಯಾ ಉತ್ತಮ ಆರಂಭವನ್ನೇ ಪಡೆಯಿತು. ಮೊದಲ ವಿಕೆಟ್‌ಗೆ ಮಯಾಂಕ್ ಅಗರ್‌ವಾಲ್ ಹಾಗೂ ಶಿಖರ್ ಧವನ್ ಜೋಡಿ 53 ರನ್‌ಗಳ ಜತೆಯಾಟ ನಿಭಾಯಿಸಿತು. 22 ರನ್ ಬಾರಿಸಿ ಮಯಾಂಕ್ ವೇಗಿ ಹೇಜಲ್‌ವುಡ್‌ಗೆ ವಿಕೆಟ್ ಒಪ್ಪಿಸಿದರು. ಇನ್ನು ವಿರಾಟ್ ಕೊಹ್ಲಿ(21) ಶ್ರೇಯಸ್ ಅಯ್ಯರ್ ಹಾಗೂ ಕೆ.ಎಲ್ ರಾಹುಲ್(12) ಜವಾಬ್ದಾರಿಯುತ ಬ್ಯಾಟಿಂಗ್ ನಡೆಸಲು ವಿಫಲರಾದರು. ಈ ವೇಳೆಗೆ ಟೀಂ ಇಂಡಿಯಾ 101 ರನ್‌ಗಳಿಗೆ 4 ವಿಕೆಟ್‌ ಕಳೆದುಕೊಂಡು ಆಘಾತಕಾರಿ ಸೋಲಿನತ್ತ ಮುಖಮಾಡಿತ್ತು.

ಹೀನಾಯ ಸೋಲು ತಪ್ಪಿಸಿದ ಪಾಂಡ್ಯ-ಧವನ್: ಅಗ್ರ ಕ್ರಮಾಂಕದ 4 ವಿಕೆಟ್‌ ಕಳೆದುಕೊಂಡು ತಳಮಳಕ್ಕೀಡಾಗಿದ್ದ ಟೀಂ ಇಂಡಿಯಾಗೆ ಗಬ್ಬರ್ ಸಿಂಗ್ ಖ್ಯಾತಿಯ ಶಿಖರ್ ಧವನ್ ಹಾಗೂ ಹಾರ್ದಿಕ್ ಪಾಂಡ್ಯ 5ನೇ ವಿಕೆಟ್‌ಗೆ 128 ರನ್‌ಗಳ ಜತೆಯಾಟವಾಡುವ ಮೂಲಕ ತಂಡಕ್ಕೆ ಆಸರೆಯಾದರು. ಈ ಜೋಡಿ ಟೀಂ ಇಂಡಿಯಾ ಅಭಿಮಾನಿಗಳಲ್ಲಿ ಗೆಲುವಿನ ಆಸೆ ಮೂಡುವಂತೆ ಮಾಡಿದರು. ಆದರೆ ಧವನ್(74) ಹಾಗೂ ಹಾರ್ದಿಕ್ ಪಾಂಡ್ಯ(90) ವಿಕೆಟ್ ಪತನವಾಗುತ್ತಿದ್ದಂತೆ ಟೀಂ ಇಂಡಿಯಾ ಸೋಲು ಖಚಿತವಾಯಿತು.

ಫಿಂಚ್, ಸ್ಮಿತ್ ಶತಕದಬ್ಬರ; ಟೀಂ ಇಂಡಿಯಾಗೆ ಕಠಿಣ ಗುರಿ ನೀಡಿದ ಆಸೀಸ್

ಆಸ್ಟ್ರೇಲಿಯಾ ಪರ ಆಡಂ ಜಂಪಾ 4 ವಿಕೆಟ್ ಪಡೆದರೆ, ಜೋಸ್ ಹೇಜಲ್‌ವುಡ್ 3 ಹಾಗೂ ಮಿಚೆಲ್ ಸ್ಟಾರ್ಕ್ 1 ವಿಕೆಟ್ ಪಡೆದರು.

ಇದಕ್ಕೂ ಮೊದಲು ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಆಸ್ಟ್ರೇಲಿಯಾ, ನಾಯಕ ಆ್ಯರೋನ್ ಫಿಂಚ್ ಹಾಗೂ ಸ್ಟೀವ್ ಸ್ಮಿತ್ ಆಕರ್ಷಕ ಶತಕಗಳ ನೆರವಿನಿಂದ 6 ವಿಕೆಟ್ ಕಳೆದುಕೊಂಡು 374 ರನ್ ಬಾರಿಸಿತ್ತು. ಇನ್ನು ಐಪಿಎಲ್‌ನಲ್ಲಿ ರನ್‌ ಗಳಿಸಲು ಪರದಾಡಿದ್ದ ಗ್ಲೆನ್ ಮ್ಯಾಕ್ಸ್‌ವೆಲ್ ಕೂಡಾ (45) ಸ್ಫೋಟಕ ಬ್ಯಾಟಿಂಗ್ ನಡೆಸುವ ಮೂಲಕ ತಂಡ ಬೃಹತ್ ಮೊತ್ತ ಕಲೆಹಾಕಲು ನೆರವಾದರು.