ಸಿಡ್ನಿ(ನ.27): ನಾಯಕ ಆ್ಯರೋನ್ ಫಿಂಚ್ ಹಾಗೂ ಸ್ಟೀವ್ ಸ್ಮಿತ್ ಆಕರ್ಷಕ ಶತಕಗಳ ನೆರವಿನಿಂದ ಮೊದಲ ಏಕದಿನ ಪಂದ್ಯದಲ್ಲಿ ಆಸ್ಟ್ರೇಲಿಯಾ 6 ವಿಕೆಟ್‌ ಕಳೆದುಕೊಂಡು 374 ರನ್ ಬಾರಿಸಿದ್ದು, ಟೀಂ ಇಂಡಿಯಾಗೆ ಕಠಿಣ ಗುರಿ ನೀಡಿದೆ.

ಇಲ್ಲಿನ ಸಿಡ್ನಿ ಕ್ರಿಕೆಟ್‌ ಮೈದಾನದಲ್ಲಿ ಟಾಸ್ ಆಸ್ಟ್ರೇಲಿಯಾ ತಂಡದ ನಾಯಕ ಆ್ಯರೋನ್ ಫಿಂಚ್ ಮೊದಲು ಬ್ಯಾಟಿಂಗ್ ಮಾಡುವ ತೀರ್ಮಾನ ತೆಗೆದುಕೊಂಡರು. ಮೊದಲ ವಿಕೆಟ್‌ಗೆ ಆಸ್ಟ್ರೇಲಿಯಾ ಆರಂಭಿಕ ಬ್ಯಾಟ್ಸ್‌ಮನ್‌ಗಳಾದ ಡೇವಿಡ್ ವಾರ್ನರ್ ಹಾಗೂ ಆ್ಯರೋನ್ ಫಿಂಚ್ ತಂಡಕ್ಕೆ ಉತ್ತಮ ಆರಂಭ ಒದಗಿಸಿಕೊಟ್ಟರು. ಮೊದಲ ವಿಕೆಟ್‌ಗೆ ಈ ಜೋಡಿ 27.5 ಓವರ್‌ಗಳಲ್ಲಿ 156 ರನ್‌ಗಳ ಜತೆಯಾಟವಾಡುವ ಮೂಲಕ ತಂಡಕ್ಕೆ ಉತ್ತಮ ಆರಂಭ ಒದಗಿಸಿಕೊಟ್ಟರು. ಬೃಹತ್ ಇನಿಂಗ್ಸ್‌ ಕಟ್ಟುವ ಮುನ್ಸೂಚನೆ ನೀಡಿದ್ದ ವಾರ್ನರ್ 76 ಎಸೆತಗಳಲ್ಲಿ 6 ಬೌಂಡರಿ ಸಹಿತ 69 ರನ್ ಬಾರಿಸಿ ಮೊಹಮ್ಮದ್ ಶಮಿಗೆ ವಿಕೆಟ್‌ ಒಪ್ಪಿಸಿದರು. 

ಫಿಂಚ್-ಸ್ಮಿತ್ ಜುಗಲ್‌ಬಂದಿ: ವಾರ್ನರ್ ವಿಕೆಟ್‌ ಪತನದ ಬಳಿಕ ನಾಯಕ ಫಿಂಚ್ ಕೂಡಿಕೊಂಡ ಸ್ಟೀವ್ ಸ್ಮಿತ್ ತಂಡದ ರನ್‌ಗಳಿಗೆ ಚುರುಕು ಮುಟ್ಟಿಸಿದರು. ಇದರ ಜತೆಗೆ ಮತ್ತೊಂದು ಶತಕದ ಜತೆಯಾಟವಾಡುವ ಮೂಲಕ ತಂಡದ ಮೊತ್ತವನ್ನು 260ರ ಗಡಿ ದಾಟಿಸಿದರು. ನಾಯಕ ಫಿಂಚ್ 117 ಎಸೆತಗಳಲ್ಲಿ ತಮ್ಮ ವೃತ್ತಿ ಜೀವನದ 17ನೇ ಏಕದಿನ ಶತಕ ಬಾರಿಸಿದರು. ಇದರೊಂದಿಗೆ ಭಾರತ ವಿರುದ್ಧ 4ನೇ, ನಾಯಕನಾಗಿ ಆರನೇ ಹಾಗೂ ಸಿಡ್ನಿ ಮೈದಾನದಲ್ಲಿ ಮೊದಲ ಶತಕ ಬಾರಿಸಿದರು. ಅಂತಿಮವಾಗಿ ಫಿಂಚ್ 124 ಎಸೆತಗಳಲ್ಲಿ 9 ಬೌಂಡರಿ ಹಾಗೂ 2 ಸಿಕ್ಸರ್ ನೆರವಿನಿಂದ 114 ರನ್ ಬಾರಿಸಿ ಬುಮ್ರಾಗೆ ವಿಕೆಟ್‌ ಒಪ್ಪಿಸಿದರು. 

ಇನ್ನು ಐಪಿಎಲ್‌ ಟೂರ್ನಿಯಲ್ಲಿ ರನ್‌ ಗಳಿಸಲು ಅಕ್ಷರಶಃ ಪರದಾಡಿದ್ದ ಗ್ಲೆನ್ ಮ್ಯಾಕ್ಸ್‌ವೆಲ್ ಭಾರತ ವಿರುದ್ಧ ಬ್ಯಾಟಿಂಗ್‌ ಲಯಕ್ಕೆ ಮರಳುವಲ್ಲಿ ಯಶಸ್ವಿಯಾದರು. ಕೇವಲ 19 ಎಸೆತಗಳನ್ನು ಎದುರಿಸಿದ ಮ್ಯಾಕ್ಸಿ 5 ಬೌಂಡರಿ ಹಾಗೂ 3 ಮನಮೋಹಕ ಸಿಕ್ಸರ್‌ಗಳ ನೆರವಿನಿಂದ 45 ರನ್ ಬಾರಿಸಿ ಶಮಿಗೆ ಎರಡನೇ ಬಲಿಯಾದರು.

ಮೂರನೇ ಕ್ರಮಾಂಕದಲ್ಲಿ ಬ್ಯಾಟಿಂಗ್‌ ಮಾಡಲಿಳಿದ ಸ್ಟೀವ್ ಸ್ಮಿತ್ ಕೇವಲ 62 ಎಸೆತಗಳಲ್ಲಿ 10 ಬೌಂಡರಿ ಹಾಗೂ 4 ಸಿಕ್ಸರ್‌ಗಳ ನೆರವಿನಿಂದ ಮೂರಂಕಿ ಮೊತ್ತ ದಾಖಲಿಸಲು ಯಶಸ್ವಿಯಾದರು. ಇದರೊಂದಿಗೆ ಆಸೀಸ್‌ ಪರ ಅತಿವೇಗವಾಗಿ ಶತಕ ಬಾರಿಸಿದ ಮೂರನೇ ಬ್ಯಾಟ್ಸ್‌ಮನ್‌ ಎನ್ನುವ ಗೌರವಕ್ಕೆ ಸ್ಮಿತ್ ಪಾತ್ರರಾದರು.

ಭಾರತ ಪರ ಮೊಹಮ್ಮದ್ ಶಮಿ 3 ವಿಕೆಟ್ ಪಡೆದರೆ, ಜಸ್ಪ್ರೀತ್ ಬುಮ್ರಾ, ಯುಜುವೇಂದ್ರ ಚಹಲ್, ನವದೀಪ್ ಸೈನಿ ತಲಾ ಒಂದೊಂದು ವಿಕೆಟ್‌ ಪಡೆದರು.