ಸಿಡ್ನಿ(ಡಿ.08): ನಾಯಕ ವಿರಾಟ್ ಕೊಹ್ಲಿ(85) ಕೆಚ್ಚೆದೆಯ ಅರ್ಧಶತಕದ ಹೊರತಾಗಿಯೂ ಆಸ್ಟ್ರೇಲಿಯಾ ಆಲ್ರೌಂಡ್ ಪ್ರದರ್ಶನಕ್ಕೆ ಟೀಂ ಇಂಡಿಯಾ ಶರಣಾಗಿದ್ದು, 12 ರನ್‌ಗಳ ರೋಚಕ ಸೋಲು ಕಂಡಿದೆ. ಈ ಸೋಲಿನ ಹೊರತಾಗಿಯೂ ಟೀಂ ಇಂಡಿಯಾ 2-1 ಅಂತರದಲ್ಲಿ ಟಿ20 ಸರಣಿಯನ್ನು ಕೈವಶ ಮಾಡಿಕೊಂಡಿದೆ.

ಆಸ್ಟ್ರೇಲಿಯಾ ನೀಡಿದ್ದ 187 ರನ್‌ಗಳ ಸವಾಲಿನ ಗುರಿ ಬೆನ್ನತ್ತಿದ ಟೀಂ ಇಂಡಿಯಾ ಮೊದಲ ಓವರ್‌ನಲ್ಲಿ ಕನ್ನಡಿಗ ಕೆ.ಎಲ್. ರಾಹುಲ್ ವಿಕೆಟ್‌ ಕಳೆದುಕೊಂಡಿತು. ಇನ್ನು ಎರಡನೇ ವಿಕೆಟ್‌ಗೆ ಜತೆಯಾದ ನಾಯಕ ವಿರಾಟ್ ಕೊಹ್ಲಿ ಹಾಗೂ ಶಿಖರ್ ಧವನ್ ಜೋಡಿ 74 ರನ್‌ಗಳ ಜತೆಯಾಟವಾಡುವ ಮೂಲಕ ತಂಡಕ್ಕೆ ಆಸರೆಯಾದರು. ಧವನ್ 21 ಎಸೆತಗಳಲ್ಲಿ 28 ರನ್ ಬಾರಿಸಿ ವಿಕೆಟ್ ಒಪ್ಪಿಸಿದರು. ಇದಾದ ಬಳಿಕ ಮೂರನೇ ವಿಕೆಟ್‌ಗೆ ಸಂಜು ಸ್ಯಾಮ್ಸನ್‌-ಕೊಹ್ಲಿ 23 ರನ್‌ಗಳ ಜತೆಯಾಟವಾಡಿದರು.

ಬ್ಯಾಟಿಂಗ್ ಬೆನ್ನೆಲುಬು ಮುರಿದ ಸ್ವೆಪ್ಸನ್: ಒಂದು ಹಂತದಲ್ಲಿ ಗೆಲುವಿನತ್ತ ದಾಪುಗಾಲಿಡುತ್ತಿದ್ದ ಭಾರತ ತಂಡಕ್ಕೆ ಸ್ಪಿನ್ನರ್ ಮಿಚೆಲ್ ಸ್ವೆಪ್ಸನ್‌ ಆಘಾತ ನೀಡಿದರು. ಮೊದಲಿಗೆ ಧವನ್ ವಿಕೆಟ್‌ ಕಬಳಿಸಿದ್ದ ಸ್ವೆಪ್ಸನ್, ಆ ಬಳಿಕ ಕೊನೆಯ ಓವರ್‌ನಲ್ಲಿ ಸಂಜು ಸ್ಯಾಮ್ಸನ್ ಹಾಗೂ ಶ್ರೇಯಸ್‌ ಅಯ್ಯರ್‌ ಅವರನ್ನು ಪೆವಿಲಿಯನ್ನಿಗಟ್ಟುವ ಮೂಲಕ ಭಾರತಕ್ಕೆ ಶಾಕ್ ನೀಡಿದರು.'

ಏಕಾಂಗಿ ಹೋರಾಟ ನಡೆಸಿದ ವಿರಾಟ್ ಕೊಹ್ಲಿ: ಒಂದು ಕಡೆ ನಿರಂತರ ವಿಕೆಟ್‌ ಬೀಳುತ್ತಿದ್ದರೂ ಕೆಚ್ಚೆದೆಯ ಬ್ಯಾಟಿಂಗ್ ನಡೆಸಿದ ವಿರಾಟ್ ಕೊಹ್ಲಿ ತಂಡವನ್ನು ಗೆಲುವಿನ ದಡ ಸೇರಿಸಲು ಏಕಾಂಗಿ ಹೋರಾಟ ನಡೆಸಿದರು. 59 ಎಸೆತಗಳನ್ನು ಎದುರಿಸಿ ಕೊಹ್ಲಿ 4 ಬೌಂಡರಿ ಹಾಗೂ 3 ಸಿಕ್ಸರ್‌ಗಳ ನೆರವಿನಿಂದ 84 ರನ್ ಬಾರಿಸಿ ವಿಕೆಟ್ ಒಪ್ಪಿಸಿದರು.  ಕೊನೆಯಲ್ಲಿ ಹಾರ್ದಿಕ್ ಪಾಂಡ್ಯ(20) ಹಾಗೂ ಶಾರ್ದೂಲ್ ಠಾಕೂರ್(17) ರನ್ ಬಾರಿಸಿದರಾದರೂ ತಂಡವನ್ನು ಸೋಲಿನಿಂದ ಪಾರು ಮಾಡಲು ಸಾಧ್ಯವಾಗಲಿಲ್ಲ.

ಇದಕ್ಕೂ ಮೊದಲು ಮ್ಯಾಥ್ಯೂ ವೇಡ್ ಹಾಗೂ ಗ್ಲೆನ್‌ ಮ್ಯಾಕ್ಸ್‌ವೆಲ್ ಆಕರ್ಷಕ ಅರ್ಧಶತಕದ ನೆರವಿನಿಂದ 5 ವಿಕೆಟ್ ಕಳೆದುಕೊಂಡು 186 ರನ್ ಬಾರಿಸಿತ್ತು.