ಆಸ್ಟ್ರೇಲಿಯಾ-ವಿಂಡೀಸ್ ಎದುರಿನ ಎರಡನೇ ಟೆಸ್ಟ್ ಪಂದ್ಯದಲ್ಲಿ ಆಸೀಸ್ ದಿಟ್ಟ ಬ್ಯಾಟಿಂಗ್ಪ್ಯಾಟ್ ಕಮಿನ್ಸ್ ಅನುಪಸ್ಥಿತಿಯಲ್ಲಿ ತಂಡವನ್ನು ಮುನ್ನಡೆಸುತ್ತಿರುವ ಸ್ಟೀವ್ ಸ್ಮಿತ್ಆರಂಭಿಕ ಆಘಾತದ ನಡುವೆಯೂ ದಿಟ್ಟ ಆರಂಭ ಪಡೆದ ಆಸ್ಟ್ರೇಲಿಯಾ

ಅಡಿಲೇಡ್‌(ಡಿ.08): ಆಸ್ಟ್ರೇಲಿಯಾ ಹಾಗೂ ವೆಸ್ಟ್ ಇಂಡೀಸ್ ತಂಡಗಳ ನಡುವಿನ ಎರಡನೇ ಟೆಸ್ಟ್ ಪಂದ್ಯದಲ್ಲಿ ಸ್ಟೀವ್ ಸ್ಮಿತ್ ನೇತೃತ್ವದ ಆಸ್ಟ್ರೇಲಿಯಾ ತಂಡವು ದಿಟ್ಟ ಆರಂಭ ಪಡೆದಿದೆ. ಆರಂಭಿಕ ಆಘಾತದ ಹೊರತಾಗಿಯೂ ಆಸ್ಟ್ರೇಲಿಯಾ ತಂಡವು ಎರಡನೇ ಟೆಸ್ಟ್ ಪಂದ್ಯದ ಮೊದಲ ಸೆಷನ್‌ನ 25 ಓವರ್‌ ಅಂತ್ಯದ ವೇಳೆಗೆ ಕೇವಲ ಒಂದು ವಿಕೆಟ್ ಕಳೆದುಕೊಂಡು 85 ರನ್ ಬಾರಿಸಿದ್ದು, ಭರ್ಜರಿ ಆರಂಭ ಪಡೆದಿದೆ.

ಆಸ್ಟ್ರೇಲಿಯಾ ಹಾಗೂ ವೆಸ್ಟ್ ಇಂಡೀಸ್ ತಂಡಗಳ ನಡುವಿನ ಎರಡನೇ ಟೆಸ್ಟ್ ಪಂದ್ಯಕ್ಕೆ ಇಲ್ಲಿನ ಅಡಿಲೇಡ್ ಓವಲ್ ಮೈದಾನ ಆತಿಥ್ಯವನ್ನು ವಹಿಸಿದೆ. ಪ್ಯಾಟ್ ಕಮಿನ್ಸ್‌ ಅನುಪಸ್ಥಿತಿಯಲ್ಲಿ ಟಾಸ್ ಗೆದ್ದ ಆಸ್ಟ್ರೇಲಿಯಾ ತಂಡದ ನಾಯಕ ಸ್ಟೀವ್ ಸ್ಮಿತ್, ಮೊದಲು ಬ್ಯಾಟಿಂಗ್ ಮಾಡುವ ತೀರ್ಮಾನ ತೆಗೆದುಕೊಂಡರು. ಆದರೆ ಸ್ಪೋಟಕ ಬ್ಯಾಟಿಂಗ್ ನಡೆಸುವ ಮುನ್ಸೂಚನೆ ನೀಡಿದ್ದ ಆರಂಭಿಕ ಬ್ಯಾಟರ್ ಡೇವಿಡ್ ವಾರ್ನರ್ 29 ಎಸೆತಗಳಲ್ಲಿ 4 ಬೌಂಡರಿ ಸಹಿತ 21 ರನ್ ಬಾರಿಸಿ ಅಲ್ಜೆರಿ ಜೋಸೆಫ್‌ಗೆ ವಿಕೆಟ್‌ ಒಪ್ಪಿಸಿದರು. 9 ಓವರ್‌ ಅಂತ್ಯದ ವೇಳೆಗೆ 34 ರನ್ ಗಳಿಸುವಷ್ಟರಲ್ಲಿ ಮೊದಲ ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು.

IND vs BAN ಗಾಯಗೊಂಡ ರೋಹಿತ್ ಬಾಂಗ್ಲಾ ಸರಣಿಗೆ ಡೌಟ್, ಐಪಿಎಲ್‌ಗೆ ಕಮ್‌ಬ್ಯಾಕ್!

ಇದಾದ ಬಳಿಕ ಎರಡನೇ ವಿಕೆಟ್‌ಗೆ ಜತೆಯಾದ ಮಾರ್ನಸ್‌ ಲಬುಶೇನ್‌ ಹಾಗೂ ಉಸ್ಮಾನ್ ಖವಾಜ ಜೋಡಿ ಎರಡನೇ ವಿಕೆಟ್‌ಗೆ ಮುರಿಯದ ಅರ್ಧಶತಕದ ಜತೆಯಾಟವಾಡುವ ಮೂಲಕ ತಂಡಕ್ಕೆ ಆಸರೆಯಾಗಿದ್ದಾರೆ. ಮೊದಲ 25 ಓವರ್ ಅಂತ್ಯದ ವೇಳೆಗೆ ಆಸ್ಟ್ರೇಲಿಯಾ ತಂಡವು ಒಂದು ವಿಕೆಟ್ ಕಳೆದುಕೊಂಡು 85 ರನ್ ಬಾರಿಸಿದ್ದು, ಖವಾಜ ಅಜೇಯ 49 ರನ್ ಹಾಗೂ ಲಬುಶೇನ್ 11 ರನ್ ಬಾರಿಸಿ ಕ್ರೀಸ್ ಕಾಯ್ದುಕೊಂಡಿದ್ದಾರೆ. 

ಆಸೀಸ್‌ ಟೆಸ್ಟ್‌ ತಂಡಕ್ಕೆ ಮತ್ತೆ ಸ್ಮಿತ್‌ ನಾಯಕ

ಆಸ್ಪ್ರೇಲಿಯಾ ಟೆಸ್ಟ್‌ ತಂಡದ ನಾಯಕ ಪ್ಯಾಟ್‌ ಕಮಿನ್ಸ್‌ ಗಾಯದ ಸಮಸ್ಯೆಯಿಂದಾಗಿ ವೆಸ್ಟ್‌ ಇಂಡೀಸ್‌ ವಿರುದ್ಧದ 2ನೇ ಟೆಸ್ಟ್‌ ಪಂದ್ಯಕ್ಕೆ ಅಲಭ್ಯರಾಗಿರುವುದರಿಂದ ಮಾಜಿ ನಾಯಕ ಸ್ಟೀವ್‌ ಸ್ಮಿತ್‌ಗೆ ಮತ್ತೊಮ್ಮೆ ನಾಯಕನ ಪಟ್ಟ ಒಲಿದಿದೆ. 2018ರಲ್ಲಿ ದಕ್ಷಿಣ ಆಫ್ರಿಕಾದಲ್ಲಿ ನಡೆದ ಚೆಂಡು ವಿರೂಪ ಪ್ರಕರಣದ ಬಳಿಕ ಸ್ಮಿತ್‌ ನಾಯಕತ್ವ ಕಳೆದುಕೊಳ್ಳುವುದರ ಜೊತೆಗೆ 1 ವರ್ಷ ನಿಷೇಧಕ್ಕೂ ಒಳಗಾಗಿದ್ದರು. 

ಆಸ್ಟ್ರೇಲಿಯಾ ತಂಡದ ನಾಯಕ ಪ್ಯಾಟ್ ಕಮಿನ್ಸ್, ವೆಸ್ಟ್‌ ಇಂಡೀಸ್ ಎದುರಿನ ಮೊದಲ ಟೆಸ್ಟ್ ಪಂದ್ಯದ ವೇಳೆಯಲ್ಲಿಯೇ ತೊಡೆಸಂದು ನೋವಿಗೆ ಒಳಗಾಗಿದ್ದರು. ಹೀಗಾಗಿ ಕೊನೆಯ ಎರಡು ದಿನಗಳು ಕಮಿನ್ಸ್‌ ಬೌಲಿಂಗ್‌ ಮಾಡಲು ಕಣಕ್ಕಿಳಿದಿರಲಿಲ್ಲ. ಪ್ಯಾಟ್ ಕಮಿನ್ಸ್‌ ಅನುಪಸ್ಥಿತಿಯಲ್ಲಿ ಸ್ಟೀವ್ ಸ್ಮಿತ್ ನಾಯಕನಾಗಿ ತಂಡವನ್ನು ಮುನ್ನಡೆಸಿದ್ದರು. ಪರ್ತ್‌ನಲ್ಲಿ ನಡೆದ ಮೊದಲ ಟೆಸ್ಟ್‌ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ಎದುರು ಆಸ್ಟ್ರೇಲಿಯಾ ತಂಡವು 164 ರನ್‌ಗಳ ಅಂತರದ ಭರ್ಜರಿ ಗೆಲುವು ದಾಖಲಿಸಿತ್ತು. ಇನ್ನು ಪಂದ್ಯ ಮುಕ್ತಾಯದ ಬಳಿಕ ಮಾತನಾಡಿದ್ದ ಪ್ಯಾಟ್ ಕಮಿನ್ಸ್‌, ಎರಡನೇ ಟೆಸ್ಟ್‌ ಪಂದ್ಯಕ್ಕೂ ಮುನ್ನ ಚೇತರಿಸಿಕೊಂಡು ಕಣಕ್ಕಿಳಿಯುವ ವಿಶ್ವಾಸ ವ್ಯಕ್ತಪಡಿಸಿದ್ದರು. ಆದರೆ ನಿಯಮಿತ ಸಮಯದಲ್ಲಿ ಚೇತರಿಸಿಕೊಳ್ಳದ ಹಿನ್ನೆಲೆಯಲ್ಲಿ ಕಮಿನ್ಸ್‌ ಎರಡನೇ ಟೆಸ್ಟ್‌ ಪಂದ್ಯದಿಂದ ಹೊರಬಿದ್ದಿದ್ದಾರೆ.

ನಿಷೇಧ ಅವಧಿ ಮುಗಿದ ಬಳಿಕ ಸ್ಟೀವ ಸ್ಮಿತ್‌ಗೆ ತಂಡದಲ್ಲಿ ಸ್ಥಾನ ದೊರೆತಿತ್ತಾದರೂ ನಾಯಕತ್ವಕ್ಕೆ ಅವರನ್ನು ಪರಿಗಣಿಸುವುದಿಲ್ಲ ಎಂದು ಕ್ರಿಕೆಟ್‌ ಆಸ್ಪ್ರೇಲಿಯಾ ಹೇಳಿತ್ತು. ತನ್ನ ನಿರ್ಧಾರವನ್ನು ಕ್ರಿಕೆಟ್‌ ಆಸ್ಪ್ರೇಲಿಯಾ ಈಗ ಬದಲಿಸಿದೆ.