* ಆಸ್ಟ್ರೇಲಿಯಾ-ಪಾಕಿಸ್ತಾನ ನಡುವಿನ ಪಂದ್ಯ ರೋಚಕ ಘಟ್ಟ ತಲುಪಿದೆ* ಮೊದಲ ಪಂದ್ಯ ನೀರಸ ಡ್ರಾನಲ್ಲಿ ಅಂತ್ಯವಾಗಿತ್ತು.* ಆಸ್ಟ್ರೇಲಿಯಾ ಎದುರು ಕರಾಚಿ ಟೆಸ್ಟ್ ಪಂದ್ಯ ಗೆಲ್ಲಲು 314 ರನ್‌ಗಳ ಅಗತ್ಯ
ಕರಾಚಿ(ಮಾ.16): ಆಸ್ಪ್ರೇಲಿಯಾ ವಿರುದ್ಧದ 2ನೇ ಟೆಸ್ಟ್ ಪಂದ್ಯದಲ್ಲಿ ಸೋಲಿನತ್ತ ಮುಖ ಮಾಡಿದ್ದ ಪಾಕಿಸ್ತಾನ ದಿಟ್ಟ ಹೋರಾಟ ಪ್ರದರ್ಶಿಸಿದ್ದು, ಪಂದ್ಯ ರೋಚಕ ಘಟ್ಟತಲುಪಿದೆ. 3ನೇ ದಿನದಂತ್ಯಕ್ಕೆ 1 ವಿಕೆಟ್‌ಗೆ 81 ರನ್ ಗಳಿಸಿದ್ದ ಆಸೀಸ್, ಮಂಗಳವಾರ 2 ವಿಕೆಟ್‌ಗೆ 97 ರನ್ ಗಳಿಸಿ ಇನ್ನಿಂಗ್ಸ್ ಡಿಕ್ಲೇರ್ ಮಾಡಿತು. ಗೆಲುವಿಗೆ 506 ರನ್‌ಗಳ ಬೃಹತ್ ಗುರಿ ಪಡೆದ ಪಾಕ್ 4ನೇ ದಿನದಂತ್ಯಕ್ಕೆ 2 ವಿಕೆಟ್‌ಗೆ 192 ರನ್ ಗಳಿಸಿದ್ದು, ಕೊನೆ ದಿನ ಇನ್ನೂ 314 ರನ್ ಗಳಿಸಬೇಕಿದೆ.
21ಕ್ಕೆ 2 ವಿಕೆಟ್ ಕಳೆದುಕೊಂಡಿದ್ದ ತಂಡಕ್ಕೆ ನಾಯಕ ಬಾಬರ್ ಆಜಂ (Babar Azam) (102) ಹಾಗೂ ಅಬ್ದುಲ್ಲಾ ಶಫೀಕ್(71) ನೆರವಾದರು. ಈ ಜೋಡಿ ಮುರಿಯದ 3ನೇ ವಿಕೆಟ್‌ಗೆ 171 ರನ್ ಕಲೆಹಾಕಿದೆ. ಹೀಗಾಗಿ ಕೊನೆಯ ದಿನ ಪಾಕಿಸ್ತಾನ ತಂಡ ಯಾವ ರೀತಿ ಪ್ರತಿರೋಧ ತೋರಲಿದೆ ಎನ್ನುವುದನ್ನು ಕಾದು ನೋಡಬೇಕು.
ಮಹಿಳಾ ವಿಶ್ವಕಪ್: ಸತತ 4ನೇ ಜಯ ಗಳಿಸಿದ ಆಸೀಸ್
ವೆಲ್ಲಿಂಗ್ಟನ್: 6 ಬಾರಿ ಚಾಂಪಿಯನ್ ಆಸ್ಪ್ರೇಲಿಯಾ ಐಸಿಸಿ ಮಹಿಳಾ ಏಕದಿನ ವಿಶ್ವಕಪ್‌ನಲ್ಲಿ (ICC Women's World Cup) ತನ್ನ ಪ್ರಾಬಲ್ಯ ಮುಂದುವರಿಸಿದ್ದು, ಸತತ ನಾಲ್ಕನೇ ಜಯ ದಾಖಲಿಸಿದೆ. ಮಂಗಳವಾರ ವೆಸ್ಟ್‌ಇಂಡೀಸ್ ತಂಡವನ್ನು 7 ವಿಕೆಟ್‌ಗಳಿಂದ ಮಣಿಸಿದ ಆಸೀಸ್ 8 ಅಂಕದೊಂದಿಗೆ ಅಗ್ರಸ್ಥಾನ ಭದ್ರಪಡಿಸಿಕೊಂಡಿದೆ.
ಸತತ 2ನೇ ಸೋಲುಂಡ ವಿಂಡೀಸ್ 4 ಅಂಕದೊಂದಿಗೆ 5ನೇ ಸ್ಥಾನದಲ್ಲಿದೆ. ಮೊದಲು ಬ್ಯಾಟ್ ಮಾಡಿದ ವಿಂಡೀಸ್ 45.5 ಓವರ್‌ಗಳಲ್ಲಿ 131 ರನ್‌ಗೆ ಸರ್ವಪತನ ಕಂಡಿತು. ನಾಯಕಿ ಸ್ಟಫಾನೀ ಟೇಲರ್(50) ಏಕಾಂಗಿ ಹೋರಾಟ ಪ್ರದರ್ಶಿಸಿದರು. ಎಲೈಸಿ ಪೆರ್ರಿ, ಆ್ಯಶ್ಲೆ ಗಾರ್ಡ್‌ನರ್ ತಲಾ 3 ವಿಕೆಟ್ ಕಿತ್ತರು. ಸುಲಭ ಗುರಿ ಬೆನ್ನತ್ತಿದ ಆಸೀಸ್ 30.2 ಓವರ್‌ಗಳಲ್ಲಿ 3 ವಿಕೆಟ್ ಕಳೆದುಕೊಂಡು ಗೆಲುವು ಸಾಧಿಸಿತು. ರೇಚೆಲ್ ಹೇನ್ಸ್ ಅಜೇಯ 83 ರನ್ ಬಾರಿಸಿದರು.
ರಣಜಿ ಟ್ರೋಫಿ: ಕ್ವಾರ್ಟರ್ ಫೈನಲ್‌ನತ್ತ ಜಾರ್ಖಂಡ್
ಕೋಲ್ಕತಾ: ರಣಜಿ ಟ್ರೋಫಿ (Ranji Trophy) ಕ್ವಾರ್ಟರ್ ಫೈನಲ್ ಸ್ಥಾನ ಬಹುತೇಕ ಖಚಿತಪಡಿಸಿಕೊಂಡಿರುವ ಜಾರ್ಖಂಡ್, ನಾಗಾಲ್ಯಾಂಡ್ ವಿರುದ್ಧದ ಪ್ರಿ ಕ್ವಾರ್ಟರ್ ಪಂದ್ಯದ 4ನೇ ದಿನವೂ ಪ್ರಾಬಲ್ಯ ಸಾಧಿಸಿದೆ. 3ನೇ ದಿನದಂತ್ಯಕ್ಕೆ 4 ವಿಕೆಟ್‌ಗೆ 130 ರನ್ ಗಳಿಸಿದ್ದ ನಾಗಾಲ್ಯಾಂಡ್ ಮಂಗಳವಾರ 289 ರನ್‌ಗೆ ಅಲೌಟಾಯಿತು.
ಢಾಕಾ ಪ್ರೀಮಿಯರ್ ಲೀಗ್ ಆಡಲು ರೆಡಿಯಾದ ಟೀಂ ಇಂಡಿಯಾ ಕ್ರಿಕೆಟಿಗ ಹನುಮ ವಿಹಾರಿ..!
ಚೇತನ್ ಬಿಸ್ತ್(ಔಟಾಗದೆ 122) ಏಕಾಂಗಿ ಹೋರಾಟ ನಡೆಸಿದರು. ಮೊದಲ ಇನ್ನಿಂಗ್ಸಲ್ಲಿ 591 ರನ್‌ಗಳ ಬೃಹತ್ ಮುನ್ನಡೆ ಪಡೆದರೂ ಫಾಲೋ ಆನ್ ಹೇರದೆ ಬ್ಯಾಟಿಂಗ್ ಆರಂಭಿಸಿದ ಜಾರ್ಖಂಡ್ 4ನೇ ದಿನದಂತ್ಯಕ್ಕೆ 2 ವಿಕೆಟ್‌ಗೆ 132 ರನ್ ಗಳಿಸಿದ್ದು, ಒಟ್ಟಾರೆ 723 ರನ್ ಮುನ್ನಡೆ ಗಳಿಸಿದೆ. ಪಂದ್ಯ ಡ್ರಾ ಆದರೂ ಮೊದಲ ಇನ್ನಿಂಗ್ಸ್ ಮುನ್ನಡೆ ಪಡೆದ ಜಾರ್ಖಂಡ್ ಕ್ವಾರ್ಟರ್ ಪ್ರವೇಶಿಸಲಿದೆ.
ಕೆಲವೇ ವಾರಗಳಲ್ಲಿ ನಂ.1 ಸ್ಥಾನ ಕಳಕೊಂಡ ಮೆಡ್ವೆಡೆವ್
ಕ್ಯಾಲಿಫೋರ್ನಿಯಾ: ಇಂಡಿಯಾನಾ ವೆಲ್ಸ್ ಟೂರ್ನಿಯ 3ನೇ ಸುತ್ತಿನಲ್ಲಿ ಫ್ರಾನ್ಸ್‌ನ ಗೇಲ್ ಮೋನ್ಫಿಲ್ಸ್ ವಿರುದ್ಧ ಆಘಾತಕಾರಿ ಸೋಲುಂಡ ರಷ್ಯಾದ ಡ್ಯಾನಿಲ್ ಮೆಡ್ವೆಡೆವ್ (Daniil Medvedev) ಟೆನಿಸ್ ವಿಶ್ವ ರ‍್ಯಾಂಕಿಂಗ್‌ನಲ್ಲಿ ಅಗ್ರ ಸ್ಥಾನ ಕಳೆದುಕೊಂಡಿದ್ದಾರೆ. ಕಳೆದ ತಿಂಗಳಷ್ಟೇ ಸರ್ಬಿಯಾದ ನೋವಾಕ್ ಜೋಕೋವಿಚ್‌ರನ್ನು (Novak Djokovic) ಹಿಂದಿಕ್ಕಿ ನಂ.1 ಸ್ಥಾನ ಪಡೆದಿದ್ದ ಮೆಡ್ವೆಡೆವ್ ಕೆಲವೇ ವಾರಗಳಲ್ಲಿ ಈ ಸ್ಥಾನವನ್ನು ಕಳೆದುಕೊಂಡಿದ್ದಾರೆ. 2020ರ ಫೆ.3ರಂದು ನಂ.1 ಸ್ಥಾನಕ್ಕೇರಿದ್ದ ಜೋಕೋವಿಚ್, ಒಟ್ಟಾರೆ 361 ವಾರಗಳ ಅಗ್ರಸ್ಥಾನದಲ್ಲಿದ್ದು ದಾಖಲೆ ಬರೆದಿದ್ದರು. 2ನೇ ಸ್ಥಾನದಲ್ಲಿದ್ದ ಮೆಡ್ವೆಡೆವ್ ಅಗ್ರಸ್ಥಾನಕ್ಕೇರಿ, ಈ ಸಾಧನೆ ಮಾಡಿದ 27ನೇ ಆಟಗಾರ ಎನಿಸಿಕೊಂಡಿದ್ದರು.
ಐಎಸ್‌ಎಲ್: ಕೇರಳ ಫೈನಲ್‌ಗೆ
ವಾಸ್ಕೋ ಡಾ ಗಾಮಾ: 8ನೇ ಆವೃತ್ತಿಯ ಇಂಡಿಯನ್ ಸೂಪರ್ ಲೀಗ್(ಐಎಸ್‌ಎಲ್) ಫುಟ್ಬಾಲ್ ಟೂರ್ನಿಯಲ್ಲಿ ಕೇರಳ ಬ್ಲಾಸ್ಟರ್ಸ್ ಫೈನಲ್‌ಗೆ ಲಗ್ಗೆ ಇಟ್ಟಿದೆ. ಮಂಗಳವಾರ ಜಮ್ಶೇಡ್‌ಪುರ ಎಫ್‌ಸಿ ವಿರುದ್ಧದ ಸೆಮಿಫೈನಲ್‌ನ 2ನೇ ಚರಣದ ಪಂದ್ಯ 1-1ರಿಂದ ಡ್ರಾ ಆಯಿತು. ಆದರೆ ಮೊದಲ ಚರಣದಲ್ಲಿ 1-0 ಗೋಲಿನಿಂದ ಗೆದ್ದು ಮುನ್ನಡೆಯಲ್ಲಿದ್ದ ಕೇರಳ ಫೈನಲ್‌ಗೆ ಅರ್ಹತೆ ಪಡೆಯಿತು. ಮಾರ್ಚ್ 20ಕ್ಕೆ ನಡೆಯಲಿರುವ ಫೈನಲ್‌ನಲ್ಲಿ ಎಟಿಕೆ ಮೋಹನ್ ಬಗಾನ್ ಅಥವಾ ಹೈದರಾಬಾದ್ ಎಫ್‌ಸಿ ವಿರುದ್ಧ ಸೆಣಸಲಿದೆ.
