* ಢಾಕಾ ಪ್ರೀಮಿಯರ್ ಲೀಗ್‌ನಲ್ಲಿ ಪಾಲ್ಗೊಳ್ಳಲಿದ್ದಾರೆ ಭಾರತದ 6 ಕ್ರಿಕೆಟಿಗರು* ಹನುಮ ವಿಹಾರಿ, ಅಭಿಮನ್ಯು ಈಶ್ವರನ್ ಸೇರಿ ಆರು ಆಟಗಾರರು ಭಾಗಿ* ಐಪಿಎಲ್ ನಡೆಯುವ ಸಂದರ್ಭದಲ್ಲೇ ಢಾಕಾ ಪ್ರೀಮಿಯರ್ ಲೀಗ್ ಆಯೋಜನೆ
ನವದೆಹಲಿ(ಮಾ.15): ಹನುಮ ವಿಹಾರಿ(Hanuma Vihari), ಅಭಿಮನ್ಯು ಈಶ್ವರನ್ (Abhimanyu Easwaran) ಸೇರಿದಂತೆ ಭಾರತದ ಆರು ಕ್ರಿಕೆಟಿಗರು 2022ನೇ ಸಾಲಿನ ಢಾಕಾ ಪ್ರೀಮಿಯರ್ ಲೀಗ್ (Dhaka Premier League) ಆಡಲು ಸಜ್ಜಾಗಿದ್ದಾರೆ. ಬಾಂಗ್ಲಾದೇಶದಲ್ಲಿ ನಡೆಯಲಿರುವ 50 ಓವರ್‌ಗಳ ಕ್ರಿಕೆಟ್ ಟೂರ್ನಿಯಲ್ಲಿ ಮಿಂಚಲು ಭಾರತೀಯ ಆಟಗಾರರು ಸಜ್ಜಾಗಿದ್ದಾರೆ. ಐಪಿಎಲ್ ಜತೆ ಜತೆಯಲ್ಲಿಯೇ ಬಾಂಗ್ಲಾದೇಶ ಪ್ರೀಮಿಯರ್ ಲೀಗ್ ಟೂರ್ನಿಯು ನಡೆಯಲಿದೆ.
15ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ (Indian Premier League) ಟೂರ್ನಿಯು ಮಾರ್ಚ್ 26ರಿಂದ ಆರಂಭವಾಗಲಿದೆ. ಇನ್ನು ಢಾಕಾ ಪ್ರೀಮಿಯರ್ ಲೀಗ್ ಟೂರ್ನಿಯು ಏಪ್ರಿಲ್ 28ರ ವರೆಗೆ ನಡೆಯಲಿದೆ. ಭಾರತ ಟೆಸ್ಟ್ ತಂಡದಲ್ಲಿ ಮೂರನೇ ಕ್ರಮಾಂಕದಲ್ಲಿ ಗಮನಾರ್ಹ ಪ್ರದರ್ಶನ ತೋರಲು ಯಶಸ್ವಿಯಾಗಿದ್ದ ಹನುಮ ವಿಹಾರಿ, ಈ ಬಾರಿಯ ಢಾಕಾ ಪ್ರೀಮಿಯರ್ ಲೀಗ್‌ನಲ್ಲಿ ಅಬಹಾನಿ ಲಿಮಿಟೆಡ್ ತಂಡವನ್ನು ಪ್ರತಿನಿಧಿಸಲಿದ್ದಾರೆ. ಇನ್ನು ಅಭಿಮನ್ಯು ಈಶ್ವರನ್ ಪ್ರೈಮ್ ಬ್ಯಾಂಕ್ ತಂಡವನ್ನು ಪ್ರತಿನಿಧಿಸಲಿದ್ದಾರೆ. ಈ ಇಬ್ಬರು ಆಟಗಾರರು ಈ ಹಿಂದೆಯೂ ಢಾಕಾ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಪಾಲ್ಗೊಂಡಿದ್ದರು. ಆದರೆ ಕಳೆದೆರಡು ವರ್ಷಗಳಿಂದ ವಿದೇಶಿ ಪ್ರವಾಸಕ್ಕೆ ಅಡ್ಡಿಯಾಗಿದ್ದರಿಂದ ಈ ಇಬ್ಬರು ಆಟಗಾರರು ಟೂರ್ನಿಯಿಂದ ಹೊರಗುಳಿದಿದ್ದರು.
ಇನ್ನುಳಿದಂತೆ ಕೆಲವು ವರ್ಷಗಳ ಕಾಲ ಬ್ರದರ್ಸ್ ಯೂನಿಯನ್ ತಂಡವನ್ನು ಪ್ರತಿನಿಧಿಸಿದ್ದ ಸೌರಾಷ್ಟ್ರದ ಆಲ್ರೌಂಡರ್ ಚಿರಾಗ್ ಜಾನಿ, ಈ ಬಾರಿ ಲೆಜೆಂಡ್ಸ್ ಆಫ್ ರೀಪಂಜ್ ತಂಡದ ಪರ ಕಣಕ್ಕಿಳಿಯಲಿದ್ದಾರೆ. ತಮಿಳುನಾಡಿನ ಆಲ್ರೌಂಡರ್ ಬಾಬಾ ಅಪರಾಜಿತ್ ರುಪಂಜ್ ಟೈಗರ್ಸ್ ತಂಡವನ್ನು ಪ್ರತಿನಿಧಿಸಿದರೆ, ರಾಜಸ್ಥಾನದ ಅಶೋಕ್ ಮೆನಾರಿಯಾ ಖಲೆಂಜರ್ಸ್ ಜೆರ್ಸಿ ತೊಟ್ಟು ಕಣಕ್ಕಿಳಿಯಲಿದ್ದಾರೆ. ಇನ್ನು ಜಮ್ಮು-ಕಾಶ್ಮೀರದ ಆಲ್ರೌಂಡರ್ ಪರ್ವೇಜ್ ರಸೂಲ್ ಶೇಕ್ ಜಮಾಲ್ ದಾನಮಂಡಿ ಕ್ಲಬ್ ತಂಡವನ್ನು ಪ್ರತಿನಿಧಿಸಲಿದ್ದಾರೆ.
ಹನುಮ ವಿಹಾರಿ, ಇತ್ತೀಚೆಗಷ್ಟೇ ಮುಕ್ತಾಯವಾದ ಶ್ರೀಲಂಕಾ ವಿರುದ್ದದ ಎರಡು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಸ್ಥಿರ ಬ್ಯಾಟಿಂಗ್ ಪ್ರದರ್ಶನದ ಮೂಲಕ ಗಮನ ಸೆಳೆದಿದ್ದರು. ಶ್ರೀಲಂಕಾ ಎದುರು ರೋಹಿತ್ ಶರ್ಮಾ ನೇತೃತ್ವದ ಟೀಂ ಇಂಡಿಯಾ ಎರಡು ಪಂದ್ಯಗಳ ಟೆಸ್ಟ್ ಸರಣಿಯನ್ನು 2-0 ಅಂತರದಲ್ಲಿ ಕ್ಲೀನ್ ಸ್ವೀಪ್ ಮಾಡಿಕೊಂಡಿತ್ತು. ಚೇತೇಶ್ವರ್ ಪೂಜಾರ ಬದಲಿಗೆ ಭಾರತದ ಮೂರನೇ ಕ್ರಮಾಂಕದಲ್ಲಿ ಉತ್ತಮ ಬ್ಯಾಟಿಂಗ್ ಪ್ರದರ್ಶನ ತೋರಿದ್ದ ಹನುಮ ವಿಹಾರಿ, ಮಾರ್ಚ್ 21ರಿಂದ ಢಾಕಾ ಪ್ರೀಮಿಯರ್ ಲೀಗ್‌ನಲ್ಲಿ ಕಾಣಿಸಿಕೊಳ್ಳಲಿದ್ದಾರೆ.
IPL 2022: ಸಹಾಯಕ ಕೋಚ್ ಆಗಿ ಡೆಲ್ಲಿ ಕ್ಯಾಪಿಟಲ್ಸ್ ಕೂಡಿಕೊಂಡ ಶೇನ್ ವಾಟ್ಸನ್..!
2020-21ರಲ್ಲಿ ಟೀಂ ಇಂಡಿಯಾ ಆಸ್ಟ್ರೇಲಿಯಾ ಪ್ರವಾಸ ಮಾಡಿದ್ದಾಗ, ಸಿಡ್ನಿ ಟೆಸ್ಟ್ ಪಂದ್ಯದ ವೇಳೆ ನಾನು ಹನುಮ ವಿಹಾರಿ ಜತೆ ಮಾತುಕತೆ ನಡೆಸಿದ್ದೆ. ನಮ್ಮ ತಂಡದ ಪಾಲಿಗೆ ಖುಷಿಯ ವಿಚಾರವೆಂದರೆ, ಅವರು ನಮ್ಮ ತಂಡವನ್ನು ಪ್ರತಿನಿಧಿಸಲು ಒಪ್ಪಿಕೊಂಡಿದ್ದಾರೆ. ವಿಹಾರಿ ನಮ್ಮ ತಂಡದ ಪರ ಆಡಬೇಕು ಎನ್ನುವುದನ್ನು ಖಾಲಿದ್ ಮೊಹಮೂದ್ ಹಾಗೂ ಇತರ ಆಟಗಾರರು ಬಯಸಿದ್ದರು. ಹನುಮ ವಿಹಾರಿ ನಮ್ಮ ತಂಡ ಕೂಡಿಕೊಳ್ಳುವವರೆಗೂ ಆಫ್ಘಾನಿಸ್ತಾನದ ನಜೀಬುಲ್ಲಾ ಜದ್ರಾನ್ ನಮ್ಮ ತಂಡವನ್ನು ಪ್ರತಿನಿಧಿಸಲಿದ್ದಾರೆ ಎಂದು ಅಬಹಾನಿ ಲಿಮಿಟೆಡ್ ತಂಡ ಜಂಟಿ ಕಾರ್ಯದರ್ಶಿ ಅಜೀಜುರ್ ರಹೀಮ್ ಸ್ಪೋರ್ಟ್ಸ್ ಸ್ಟಾರ್‌ಗೆ ತಿಳಿಸಿದ್ದಾರೆಂದು ವರದಿಯಾಗಿದೆ.
ಢಾಕಾ ಪ್ರೀಮಿಯರ್ ಲೀಗ್ ಟೂರ್ನಿಯನ್ನು ಪ್ರತಿನಿಧಿಸುವ ವಿದೇಶಿ ಆಟಗಾರರಿಗೆ ವಿವಿಧ ರೀತಿಯಲ್ಲಿ ಸಂಭಾವನೆ ನೀಡಲಾಗುತ್ತದೆ. ಇನ್ನು ಭಾರತೀಯ ಕ್ರಿಕೆಟಿಗರಿಗೆ ಚೆಕ್ ಮೂಲಕ ಸಂಭಾವನೆ ನೀಡಲಾಗುತ್ತದೆ. ಭಾರತದ ಉತ್ತಮ ಆಟಗಾರರಿಗೆ ಸಾಮಾನ್ಯವಾಗಿ 2,500 ರಿಂದ 5,000 ಅಮೆರಿಕನ್ ಡಾಲರ್ ಹಣವನ್ನು ನೀಡಲಾಗುತ್ತದೆ. 5,000 ಡಾಲರ್‌ಗಳನ್ನು ಭಾರತೀಯ ರುಪಾಯಿಗೆ ಪರಿವರ್ತಿಸಿದರೆ, ಪ್ರತಿ ಪಂದ್ಯಕ್ಕೆ ಆಟಗಾರರು ಸುಮಾರು 3,82,000 ರುಪಾಯಿ ಸಂಭಾವನೆಯನ್ನು ಪಡೆಯಲಿದ್ದಾರೆ. ಇನ್ನುಳಿದಂತೆ ಊಟ, ವಸತಿ ಹಾಗೂ ಪ್ರಯಾಣದ ಖರ್ಚು ವೆಚ್ಚಗಳನ್ನು ಸಂಬಂಧಿತ ಕ್ಲಬ್‌ಗಳು ನಿರ್ವಹಿಸಲಿವೆ.
