* 24 ವರ್ಷಗಳ ಬಳಿಕ ಪಾಕ್ ಪ್ರವಾಸಕ್ಕೆ ಸಮ್ಮತಿ ಸೂಚಿಸಿದ ಆಸ್ಟ್ರೇಲಿಯಾ* 5 ವಾರಗಳ ಪ್ರವಾಸದಲ್ಲಿ ಟೆಸ್ಟ್, ಏಕದಿನ ಹಾಗೂ ಟಿ20 ಸರಣಿಯಾಡಲಿರುವ ಆಸೀಸ್* ಮಾರ್ಚ್‌ 4ರಿಂದ ಉಭಯ ತಂಡಗಳ ನಡುವಿನ ಸರಣಿ ಆರಂಭಗೊಳ್ಳಲಿದೆ

ಕರಾಚಿ(ಫೆ.05): ಬರೋಬ್ಬರಿ 24 ವರ್ಷಗಳ ನಂತರ ಪಾಕಿಸ್ತಾನ ಪ್ರವಾಸ ಕೈಗೊಳ್ಳುವುದನ್ನು ಆಸ್ಪ್ರೇಲಿಯಾ ಕ್ರಿಕೆಟ್‌ ಮಂಡಳಿ (Cricket Australia) ಖಚಿತಪಡಿಸಿದೆ. ಆಸ್ಟ್ರೇಲಿಯಾ ಕ್ರಿಕೆಟ್ ತಂಡ (Australian Cricket Team) ಪಾಕ್‌ನಲ್ಲಿ 3 ಪಂದ್ಯಗಳ ಟೆಸ್ಟ್‌ ಸರಣಿ, 3 ಏಕದಿನ ಹಾಗೂ 1 ಟಿ20 ಪಂದ್ಯವನ್ನು ಆಡಲಿದೆ ಎಂದು ಶುಕ್ರವಾರ ಅಧಿಕೃತವಾಗಿ ಘೋಷಿಸಿದೆ. ಮಾರ್ಚ್‌ 4ರಿಂದ ಉಭಯ ತಂಡಗಳ ನಡುವಿನ ಸರಣಿ ಆರಂಭಗೊಳ್ಳಲಿದೆ. 3 ಟೆಸ್ಟ್‌ ಬಳಿಕ ಮಾರ್ಚ್‌ 29ಕ್ಕೆ ಏಕದಿನ ಸರಣಿ ಆರಂಭವಾಗಲಿದ್ದು, ಟಿ20 ಪಂದ್ಯ ಏಪ್ರಿಲ್‌ 5ಕ್ಕೆ ನಿಗದಿಯಾಗಿದೆ.

1998ರಲ್ಲಿ ಆಸ್ಪ್ರೇಲಿಯಾ ಕ್ರಿಕೆಟ್‌ ತಂಡ ಕೊನೆಯದಾಗಿ ಪಾಕಿಸ್ತಾನ ಪ್ರವಾಸ (Pakistan Tour) ಕೈಗೊಂಡಿತ್ತು. 2009ರಲ್ಲಿ ಶ್ರೀಲಂಕಾ ಕ್ರಿಕೆಟ್‌ ತಂಡದ (Sri Lanka Cricket Team) ಮೇಲೆ ಉಗ್ರರ ದಾಳಿ ನಡೆದ ಬಳಿಕ ಹಲವು ವರ್ಷಗಳ ಕಾಲ ಯಾವುದೇ ತಂಡಗಳು ಪಾಕ್‌ ಪ್ರವಾಸ ಕೈಗೊಂಡಿರಲಿಲ್ಲ. ಕೆಲ ವರ್ಷಗಳ ಬಳಿಕ ಜಿಂಬಾಬ್ವೆ, ವೆಸ್ಟ್‌ಇಂಡೀಸ್‌ ಪಾಕ್‌ ಪ್ರವಾಸ ಕೈಗೊಂಡಿದೆ. ಇತ್ತೀಚೆಗಷ್ಟೇ ಪಾಕ್‌ ಪ್ರವಾಸ ಕೈಗೊಂಡಿದ್ದ ನ್ಯೂಜಿಲೆಂಡ್‌, ಭದ್ರತಾ ವೈಫಲ್ಯದ ಕಾರಣ ನೀಡಿ ಕೊನೆ ಕ್ಷಣದಲ್ಲಿ ಪಾಕ್‌ನಿಂದ ಮರಳಿತ್ತು. ಇದರ ಬೆನ್ನಲ್ಲೇ ಇಂಗ್ಲೆಂಡ್‌ ಸಹ ತನ್ನ ಪ್ರವಾಸವನ್ನು ಕೈಬಿಟ್ಟಿತ್ತು.

ಮಾರ್ಚ್‌ 04ರಂದು ನಡೆಯಲಿರುವ ಮೊದಲ ಟೆಸ್ಟ್ ಪಂದ್ಯಕ್ಕೆ ರಾವುಲ್ಪಿಂಡಿ ಆತಿಥ್ಯವನ್ನು ವಹಿಸಲಿದೆ. ಇನ್ನು ಮಾರ್ಚ್‌ 12ರಿಂದ ಆರಂಭವಾಗಲಿರುವ ಎರಡನೇ ಟೆಸ್ಟ್ ಪಂದ್ಯಕ್ಕೆ ಕರಾಚಿ ಕ್ರಿಕೆಟ್‌ ಮೈದಾನ ಸಾಕ್ಷಿಯಾಗಲಿದೆ. ಇನ್ನು ಮೂರನೇ ಹಾಗೂ ಕೊನೆಯ ಟೆಸ್ಟ್ ಪಂದ್ಯಕ್ಕೆ ಲಾಹೋರ್‌ನಲ್ಲಿರುವ ಗಡಾಫಿ ಸ್ಟೇಡಿಯಂ ಆತಿಥ್ಯವನ್ನು ವಹಿಸಲಿದೆ. 

ಆಸ್ಟ್ರೇಲಿಯಾ ಕ್ರಿಕೆಟ್ ಮಂಡಳಿಯು ಐದು ವಾರಗಳ ಕಾಲ ಪಾಕಿಸ್ತಾನ ಪ್ರವಾಸ ಮಾಡಲು ಒಪ್ಪಿಕೊಂಡಿದೆ ಎನ್ನುವ ವಿಷಯವನ್ನು ನಿಮ್ಮ ಜತೆ ಹಂಚಿಕೊಳ್ಳಲು ಸಂತೋಷವಾಗುತ್ತಿದೆ. 24 ವರ್ಷಗಳ ಬಳಿಕ ಮೊದಲ ಬಾರಿಗೆ ಪಾಕಿಸ್ತಾನ ಪ್ರವಾಸ ಕೈಗೊಳ್ಳಲಿರುವ ಆಸ್ಟ್ರೇಲಿಯಾ ತಂಡವು ಅತ್ಯುತ್ತಮ ಆಟಗಾರರನ್ನು ಕಳಿಸಿಕೊಡುವುದಾಗಿ ತಿಳಿಸಿದೆ ಎಂದು ಪಾಕಿಸ್ತಾನ ಕ್ರಿಕೆಟ್ ಮಂಡಳಿಯ ಮುಖ್ಯ ಕಾರ್ಯನಿರ್ವಾಹಕಾಧಿಕಾರಿ ಫೈಸಲ್ ಹಸ್ನೈನ್ ತಿಳಿಸಿದ್ದಾರೆ.

ಭಾರತ, ನ್ಯೂಜಿಲೆಂಡ್‌ ಮಹಿಳಾ ಸರಣಿಯ ವೇಳಾಪಟ್ಟಿ ಪರಿಷ್ಕರಣೆ

ಆಕ್ಲೆಂಡ್‌: ಭಾರತ ಮತ್ತು ನ್ಯೂಜಿಲೆಂಡ್‌ (India vs New Zealand) ಮಹಿಳಾ ತಂಡಗಳ ನಡುವಿನ ಸರಣಿಯ ವೇಳಾಪಟ್ಟಿ ಪರಿಷ್ಕರಣೆ ಮಾಡಲಾಗಿದೆ. ಏಕೈಕ ಟಿ20 ಪಂದ್ಯ ಪೂರ್ವ ನಿಗದಿಯಂತೆ ಫೆ.9ಕ್ಕೆ ನಡೆಯಲಿದೆ. ಆದರೆ, 5 ಪಂದ್ಯಗಳ ಏಕದಿನ ಸರಣಿಯಲ್ಲಿ ಮೊದಲ ಮೂರು ಪಂದ್ಯಗಳ ದಿನಾಂಕಗಳನ್ನು ಪರಿಷ್ಕರಣೆ ಮಾಡಲಾಗಿದೆ.

ICC U-19 World Cup: 5ನೇ ವಿಶ್ವ ಕಿರೀಟದ ಹೊಸ್ತಿಲಲ್ಲಿ ಭಾರತದ ಕಿರಿಯರು..!

ಫೆ.11ರಂದು ನಡೆಯಬೇಕಿದ್ದ ಮೊದಲ ಏಕದಿನ ಪಂದ್ಯ 12ರಂದು ಆಯೋಜನೆಗೊಂಡಿದೆ. 14ರಂದು ನಡೆಯಬೇಕಿದ್ದ 2ನೇ ಪಂದ್ಯ 15ಕ್ಕೆ, ಫೆ.16ರಂದು ಆಯೋಜನೆಗೊಂಡಿದ್ದ 3ನೇ ಪಂದ್ಯ 18ರಂದು ನಡೆಯಲಿದೆ. ಕೊನೆಯ ಉಳಿದೆರಡು ಪಂದ್ಯಗಳು ಪೂರ್ವ ನಿಗದಿಯಂತೆ 22 ಮತ್ತು 24ರಂದೇ ನಡೆಯಲಿವೆ. ಕೋವಿಡ್‌ ಕಾರಣ ಆಟಗಾರ್ತಿಯರ ಪ್ರಯಾಣವನ್ನು ಕಡಿತಗೊಳಿಸುವ ಸಲುವಾಗಿ ಸರಣಿಯ ಎಲ್ಲಾ ಪಂದ್ಯಗಳನ್ನು ಕ್ವೀನ್ಸ್‌ಟೌನ್‌ನ ಜಾನ್‌ಡೇವಿಸ್‌ ಓವಲ್‌ಗೆ ಸ್ಥಳಾಂತರಿಸಲಾಗಿದೆ. ಮೊದಲಿಗೆ 3 ಸ್ಥಳಗಳಲ್ಲಿ ಸರಣಿಯನ್ನು ನಡೆಸಲು ಉದ್ದೇಶಿಸಲಾಗಿತ್ತು.

ರಣಜಿ ಟ್ರೋಫಿ: ಎಲೈಟ್ 'ಸಿ' ಗುಂಪಿನಲ್ಲಿ ಕರ್ನಾಟಕ

ಬೆಂಗಳೂರು: ಫೆಬ್ರವರಿ 10ರಿಂದ ಆರಂಭವಾಗಲಿರುವ ರಣಜಿ ಟ್ರೋಫಿ (Ranji Trophy) ಕ್ರಿಕೆಟ್ ಟೂರ್ನಿಯಲ್ಲಿ ಎಂಟು ಬಾರಿಯ ರಣಜಿ ಚಾಂಪಿಯನ್ ಕರ್ನಾಟಕ ಕ್ರಿಕೆಟ್ ತಂಡವು ಎಲೈಟ್ 'ಸಿ' ಗುಂಪಿನಲ್ಲಿ ಸ್ಥಾನ ಪಡೆದಿದೆ. ಎಲೈಟ್ 'ಸಿ' ಗುಂಪಿನ ಪಂದ್ಯಗಳು ಚೆನ್ನೈನಲ್ಲಿ ನಡೆಯಲಿದ್ದು, ರಾಜ್ಯ ತಂಡದ ಜತೆ ರೈಲ್ವೇಸ್, ಜಮ್ಮು ಮತ್ತು ಕಾಶ್ಮೀರ ಹಾಗೂ ಪುದುಚೆರಿ ತಂಡಗಳು ಸಹ ಸ್ಥಾನ ಪಡೆದಿವೆ. ಪಂದ್ಯದ ವೇಳಾಪಟ್ಟಿ ಇನ್ನಷ್ಟೇ ಪ್ರಕಟವಾಗಬೇಕಿದೆ.