* ಲಾಹೋರ್ ಟೆಸ್ಟ್ ಪಂದ್ಯದ ಮೊದಲ ದಿನ ಅಸ್ಟ್ರೇಲಿಯಾ ಮೇಲುಗೈ* ಮೊದಲ ದಿನದಾಟದಂತ್ಯಕ್ಕೆ ಆಸ್ಟ್ರೇಲಿಯಾ 232/5* ಮತ್ತೊಮ್ಮೆ ಶತಕ ವಂಚಿತರಾದ ಆರಂಭಿಕ ಬ್ಯಾಟರ್ ಉಸ್ಮಾನ್ ಖವಾಜ
ಲಾಹೋರ್(ಮಾ.22): ಪಾಕಿಸ್ತಾನ ವಿರುದ್ಧದ 3ನೇ ಹಾಗೂ ಕೊನೆ ಟೆಸ್ಟ್ ಪಂದ್ಯದಲ್ಲಿ ಪ್ರವಾಸಿ ಆಸ್ಪ್ರೇಲಿಯಾ (Australia Cricket Team) ಮೊದಲ ದಿನ ಮೇಲುಗೈ ಸಾಧಿಸಿದೆ. ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಆಸೀಸ್ ಮೊದಲ ದಿನದಂತ್ಯಕ್ಕೆ 5 ವಿಕೆಟ್ ಕಳೆದುಕೊಂಡು 232 ರನ್ ಕಲೆ ಹಾಕಿದೆ. ಕೇವಲ 8 ರನ್ ಗಳಿಸುವಷ್ಟರಲ್ಲಿ ಡೇವಿಡ್ ವಾರ್ನರ್(07), ಮಾರ್ನಸ್ ಲಬುಶೇನ್(00) ವಿಕೆಟ್ ಕಳೆದುಕೊಂಡ ತಂಡ ಸಂಕಷ್ಟಕ್ಕೆ ಸಿಲುಕಿತು.
ಆರಂಭಿಕ ಆಘಾತದಲ್ಲಿದ್ದ ಆಸ್ಟ್ರೇಲಿಯಾ ತಂಡಕ್ಕೆ ಸ್ಟೀವ್ ಸ್ಮಿತ್ (Steve Smith) (59) ಅರ್ಧಶತಕ ಬಾರಿಸಿ ತಂಡಕ್ಕೆ ಚೇತರಿಕೆ ನೀಡಿದರೆ, ಉಸ್ಮಾನ್ ಖವಾಜ (91) ಟೂರ್ನಿಯಲ್ಲಿ 2ನೇ ಬಾರಿ ಶತಕ ವಂಚಿತರಾದರು. ಕ್ಯಾಮರೋನ್ ಗ್ರೀನ್(20), ಅಲೆಕ್ಸ್ ಕೇರಿ (08) 2ನೇ ದಿನಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ. ಪಾಕಿಸ್ತಾನ ತಂಡದ ಪರ ಶಾಹೀನ್ ಅಫ್ರಿದಿ ಹಾಗೂ ನಸೀಮ್ ಶಾ ತಲಾ ಎರಡು ವಿಕೆಟ್ ಪಡೆದರೆ, ಸಾಜಿದ್ ಖಾನ್ ಒಂದು ವಿಕೆಟ್ ಪಡೆದಿದ್ದಾರೆ.
ವೆಸ್ಟ್‌ಇಂಡೀಸ್-ಇಂಗ್ಲೆಂಡ್ 2ನೇ ಟೆಸ್ಟ್ ಪಂದ್ಯವೂ ಡ್ರಾ
ಬ್ರಿಡ್ಜ್‌ಟೌನ್: ಆತಿಥೇಯ ವೆಸ್ಟ್‌ಇಂಡೀಸ್ ಹಾಗೂ ಇಂಗ್ಲೆಂಡ್ (West Indies vs England) ನಡುವಿನ 2ನೇ ಟೆಸ್ಟ್ ಪಂದ್ಯ ಡ್ರಾದಲ್ಲಿ ಅಂತ್ಯಗೊಂಡಿದೆ. ಇದರೊಂದಿಗೆ 3 ಪಂದ್ಯಗಳ ಸರಣಿ 0-0ಯಲ್ಲಿ ಸಮಗೊಂಡಿದೆ. ಗೆಲ್ಲಲು 282 ರನ್ ಗುರಿ ಬೆನ್ನತ್ತಿದ್ದ ವಿಂಡೀಸ್ 2ನೇ ಇನ್ನಿಂಗ್ಸಲ್ಲಿ 5 ವಿಕೆಟ್ ಕಳೆದುಕೊಂಡು 135 ರನ್ ಗಳಿಸಿದ್ದಾಗ ಪಂದ್ಯ ಡ್ರಾ ಮಾಡಿಕೊಳ್ಳಲು ಉಭಯ ತಂಡಗಳ ನಾಯಕರು ಒಪ್ಪಿಕೊಂಡರು. ಮೊದಲ ಇನ್ನಿಂಗ್ಸ್‌ನಲ್ಲಿ 160 ರನ್ ಗಳಿಸಿದ್ದ ನಾಯಕ ಕ್ರೇಗ್ ಬ್ರಾಥ್‌ವೇಟ್ 2ನೇ ಇನ್ನಿಂಗ್ಸ್‌ನಲ್ಲಿ ಔಟಾಗದೆ 56 ರನ್ ಗಳಿಸಿ, ವಿಂಡೀಸ್ ಡ್ರಾ ಸಾಧಿಸಲು ನೆರವಾದರು. ಇದಕ್ಕೂ ಮೊದಲು ಪ್ರಥಮ ಇನ್ನಿಂಗ್ಸಲ್ಲಿ 9 ವಿಕೆಟ್‌ಗೆ 507 ರನ್ ಗಳಿಸಿದ್ದ ಇಂಗ್ಲೆಂಡ್, ವಿಂಡೀಸನ್ನು 411ಕ್ಕೆ ನಿಯಂತ್ರಿಸಿತ್ತು. 2ನೇ ಇನ್ನಿಂಗ್ಸಲ್ಲಿ 6 ವಿಕೆಟ್‌ಗೆ 186 ರನ್ ಗಳಿಸಿ ಡಿಕ್ಲೇರ್ ಮಾಡಿಕೊಂಡಿತ್ತು.
ಬ್ರಾಥ್‌ವೇಟ್ ದಾಖಲೆ
ಪಂದ್ಯದಲ್ಲಿ ಸುಮಾರು 16 ಗಂಟೆ ಬ್ಯಾಟಿಂಗ್ ಮಾಡಿ ಒಟ್ಟು 673 ಎಸೆತಗಳನ್ನು ಎದುರಿಸಿದ ಕ್ರೇಗ್ ಬ್ರಾಥ್‌ವೇಟ್, ಟೆಸ್ಟ್ ಪಂದ್ಯವೊಂದರಲ್ಲಿ ಅತಿಹೆಚ್ಚು ಎಸೆತ ಎದುರಿಸಿದ ವಿಂಡೀಸ್ ಆಟಗಾರ ಎನ್ನುವ ದಾಖಲೆ ಬರೆದರು. ಬ್ರಿಯಾನ್ ಲಾರಾ (582 ಎಸೆತ) ಅವರ ದಾಖಲೆಯನ್ನು ಮುರಿದರು. ಪಂದ್ಯದಲ್ಲಿ ಅತಿಹೆಚ್ಚು ಎಸೆತ ಎದುರಿಸಿದ ವಿಶ್ವ ದಾಖಲೆ ಇಂಗ್ಲೆಂಡ್‌ನ ವ್ಯಾಲಿ ಹ್ಯಾಮಂಡ್ ಹೆಸರಲ್ಲಿದೆ. 1929ರಲ್ಲಿ ಆಸೀಸ್ ವಿರುದ್ಧ ಅಡಿಲೇಡ್ ಟೆಸ್ಟ್‌ನಲ್ಲಿ ಅವರು ಒಟ್ಟು 977 ಎಸೆತ ಎದುರಿಸಿದ್ದರು. ಮೊದಲ ಇನ್ನಿಂಗ್ಸಲ್ಲಿ ಔಟಾಗದೆ 119, 2ನೇ ಇನ್ನಿಂಗ್ಸಲ್ಲಿ 177 ರನ್ ಗಳಿಸಿದ್ದರು.
ಮಹಿಳಾ ವಿಶ್ವಕಪ್: 13 ವರ್ಷ ಬಳಿಕ ಪಾಕ್‌ಗೆ ಜಯ!
ಹ್ಯಾಮಿಲ್ಟನ್: ಐಸಿಸಿ ಮಹಿಳಾ ಏಕದಿನ ವಿಶ್ವಕಪ್‌ನಲ್ಲಿ (ICC Women's World Cup) ವೆಸ್ಟ್‌ಇಂಡೀಸ್ ವಿರುದ್ಧ ಪಾಕಿಸ್ತಾನ 8 ವಿಕೆಟ್‌ಗಳಿಂದ ಅಚ್ಚರಿಯ ಗೆಲುವು ಸಾಧಿಸಿದೆ. 2009ರಿಂದ ವಿಶ್ವಕಪ್‌ನಲ್ಲಿ ಸತತ 18 ಪಂದ್ಯಗಳಲ್ಲಿ ಸೋಲುಂಡಿದ್ದ ಪಾಕಿಸ್ತಾನ, 13 ವರ್ಷಗಳಲ್ಲಿ ಮೊದಲ ಜಯ ದಾಖಲಿಸಿತು. ಮಳೆಯಿಂದಾಗಿ ಪಂದ್ಯವನ್ನು 20 ಓವರ್‌ಗೆ ಕಡಿತಗೊಳಿಸಲಾಗಿತ್ತು.
ICC Women's World Cup: ಬಾಂಗ್ಲಾದೇಶ ಎದುರು ದೊಡ್ಡ ಗೆಲುವಿನ ನಿರೀಕ್ಷೆಯಲ್ಲಿ ಮಿಥಾಲಿ ಪಡೆ
ಮೊದಲು ಬ್ಯಾಟ್ ಮಾಡಿದ ವಿಂಡೀಸ್ 7 ವಿಕೆಟ್‌ಗೆ 89 ರನ್ ಗಳಿಸಿತು. ನಿದಾ ದಾರ್ 10 ರನ್‌ಗೆ 4 ವಿಕೆಟ್ ಕಿತ್ತರು. ಸುಲಭ ಗುರಿ ಬೆನ್ನತ್ತಿದ ಪಾಕ್ 18.5 ಓವರ್‌ಗಳಲ್ಲಿ ಗೆಲುವು ಸಾಧಿಸಿತು. ಈ ಪಂದ್ಯದಲ್ಲಿ ವಿಂಡೀಸ್ ಸೋತಿದ್ದರಿಂದ ಭಾರತಕ್ಕೆ ಲಾಭವಾಗಲಿದ್ದು, ಮಂಗಳವಾರ ಬಾಂಗ್ಲಾದೇಶ ವಿರುದ್ಧ ದೊಡ್ಡ ಗೆಲುವು ಗಳಿಸಿ ನೆಟ್ ರನ್‌ರೇಟ್ ಉತ್ತಮಗೊಳಿಸಿಕೊಂಡರೆ ಸೆಮಿಫೈನಲ್‌ಗೇರುವ ಸಾಧ್ಯತೆ ಹೆಚ್ಚಾಗಲಿದೆ.
