Asianet Suvarna News Asianet Suvarna News

Ashes Test Squad: ಮೊದಲ ಪಂದ್ಯಕ್ಕೆ ಬಲಿಷ್ಠ ಆಸ್ಟ್ರೇಲಿಯಾ ತಂಡ ಪ್ರಕಟ

*  ಆ್ಯಷಸ್‌ ಸರಣಿಯ ಮೊದಲ ಟೆಸ್ಟ್ ಪಂದ್ಯಕ್ಕೆ ಆಸ್ಟ್ರೇಲಿಯಾ ತಂಡ ಪ್ರಕಟ

*  ಡಿಸೆಂಬರ್ 08ರಿಂದ ಬ್ರಿಸ್ಬೇನ್‌ನಲ್ಲಿ ಮೊದಲ ಟೆಸ್ಟ್‌ ಆರಂಭ

* ತಂಡದಲ್ಲಿ ಸ್ಥಾನ ಗಿಟ್ಟಿಸಿದ ಟ್ರಾವಿಸ್ ಹೆಡ್‌, ಮಿಚೆಲ್ ಸ್ಟಾರ್ಕ್

Aus vs Eng Travis Head Mitchell Starc makes Australia XI for Ashes opening Match against England kvn
Author
Bengaluru, First Published Dec 5, 2021, 4:17 PM IST

ಮೆಲ್ಬೊರ್ನ್‌(ಡಿ.05): ತವರಿನಲ್ಲಿ ಇಂಗ್ಲೆಂಡ್ ಎದುರು ಡಿಸೆಂಬರ್ 08ರಿಂದ ಆರಂಭವಾಗಲಿರುವ ಆ್ಯಷಸ್‌ ಸರಣಿಯ (Ashes Test Series) ಮೊದಲ ಟೆಸ್ಟ್‌ ಪಂದ್ಯಕ್ಕೆ 11 ಆಟಗಾರರನ್ನೊಳಗೊಂಡ ಬಲಿಷ್ಠ ಆಸ್ಟ್ರೇಲಿಯಾ ಕ್ರಿಕೆಟ್‌ ತಂಡ (Australian Cricket Team) ಪ್ರಕಟವಾಗಿದ್ದು, ಮಾರಕ ವೇಗಿ ಮಿಚೆಲ್ ಸ್ಟಾರ್ಕ್‌ (Mitchell Starc) ಹಾಗೂ ಟ್ರಾವಿಸ್ ಹೆಡ್‌ (Travis Head) ಆಡುವ ಹನ್ನೊಂದರ ಬಳಗದಲ್ಲಿ ಸ್ಥಾನ ಪಡೆದಿದ್ದಾರೆ. ಬ್ರಿಸ್ಬೇನ್‌ನ ಗಾಬಾ ಮೈದಾನದಲ್ಲಿ ಆರಂಭವಾಗಲಿರುವ ಮೊದಲ ಟೆಸ್ಟ್‌ ಪಂದ್ಯದಲ್ಲಿ ಪ್ಯಾಟ್ ಕಮಿನ್ಸ್‌ (Pat Cummins) ನೇತೃತ್ವದ ಕಾಂಗರೂ ಪಡೆ ಶುಭಾರಂಭ ಮಾಡುವ ನಿರೀಕ್ಷೆಯಲ್ಲಿದೆ.

ಬ್ರಿಸ್ಬೇನ್ ಟೆಸ್ಟ್‌ಗೂ (Brisbane Test) ಮುನ್ನ ನಡೆದ ದೇಶಿ ಕ್ರಿಕೆಟ್‌ ಟೂರ್ನಿಯಲ್ಲಿ ಟ್ರಾವಿಸ್ ಹೆಡ್ ಅಮೋಘ ಪ್ರದರ್ಶನ ತೋರುವ ಮೂಲಕ ಆಯ್ಕೆಗಾರರ ಮನ ಗೆಲ್ಲುವಲ್ಲಿ ಯಶಸ್ವಿಯಾಗಿದ್ದರು. ಹೀಗಾಗಿ ಉಸ್ಮಾನ್ ಖವಾಜಾ (Usman Khawaja) ಅವರನ್ನು ಹಿಂದಿಕ್ಕಿ ಮೊದಲ ಟೆಸ್ಟ್‌ಗೆ ಆಡುವ ಹನ್ನೊಂದರ ಬಳಗದಲ್ಲಿ ಸ್ಥಾನಗಿಟ್ಟಿಸಿಕೊಂಡಿದ್ದಾರೆ. ಟ್ರಾವಿಸ್ ಹೆಡ್‌ ಆಸ್ಟ್ರೇಲಿಯಾ ಪರ 5ನೇ ಕ್ರಮಾಂಕದ ಬ್ಯಾಟರ್‌ ಆಗಿ ಕಣಕ್ಕಿಳಿಯಲಿದ್ದಾರೆ. ಟ್ರಾವಿಸ್‌ ಹೆಡ್‌ ಹಾಗೂ ಉಸ್ಮಾನ್ ಖವಾಜಾ ಶೆಫಾಲ್ಡ್ ಶೀಲ್ಡ್‌ ಸರಣಿಯಲ್ಲಿ ತಲಾ 2 ಶತಕ ಬಾರಿಸಿದ್ದರು. ಈ ಪೈಕಿ ಕೆಲದಿನಗಳ ಹಿಂದಷ್ಟೇ ಟ್ರಾವಿಸ್ ಹೆಡ್‌, ಖವಾಜಾ ತಂಡವಾದ ಕ್ವೀನ್ಸ್‌ಲ್ಯಾಂಡ್ ಎದುರು 101 ರನ್ ಸಿಡಿಸಿ ಗಮನ ಸೆಳೆದಿದ್ದರು.

ಇತ್ತೀಚೆಗೆ ಟೆಸ್ಟ್ ಕ್ರಿಕೆಟ್‌ನಲ್ಲಿ ಫಾರ್ಮ್‌ ಸಮಸ್ಯೆ ಎದುರಿಸುತ್ತಾ ಬಂದಿರುವ ಎಡಗೈ ವೇಗಿ ಮಿಚೆಲ್‌ ಸ್ಟಾರ್ಕ್‌, ಮೊದಲ ಟೆಸ್ಟ್‌ ಪಂದ್ಯದಲ್ಲಿ ಸ್ಥಾನ ಪಡೆಯುವುದು ಅನುಮಾನ ಎನ್ನಲಾಗುತ್ತಿತ್ತು. ಆಸ್ಟ್ರೇಲಿಯಾದ ಮಾಜಿ ಕ್ರಿಕೆಟಿಗ ಶೇನ್ ವಾರ್ನ್‌ (Shane Warne), ಜೇ ರಿಚರ್ಡ್‌ಸನ್ ಪರ ಬ್ಯಾಟ್ ಬೀಸಿದ್ದರು. ಶೆಫಲ್ಡ್‌ ಶೀಲ್ಡ್‌ ಟೂರ್ನಿಯಲ್ಲಿ ಜೇ ರಿಚರ್ಡ್‌ಸನ್‌ 4 ಪಂದ್ಯಗಳಿಂದ 23 ವಿಕೆಟ್ ಕಬಳಿಸಿ ಗಮನ ಸೆಳೆದಿದ್ದರು. ಆಲ್ರೌಂಡರ್ ರೂಪದಲ್ಲಿ ಕ್ಯಾಮರೋನ್ ಗ್ರೀನ್‌ (Cameron Green) ತಂಡದಲ್ಲಿ ಸ್ಥಾನ ಪಡೆದಿರುವುದರಿಂದ ತಜ್ಞ ಅನುಭವಿ ವೇಗಿಯ ರೂಪದಲ್ಲಿ ಮಿಚೆಲ್ ಸ್ಟಾರ್ಕ್‌ ತಂಡದಲ್ಲಿ ಸ್ಥಾನ ಪಡೆದಿದ್ದಾರೆ.

Pat Cummins: ಆಸ್ಟ್ರೇಲಿಯಾ ಟೆಸ್ಟ್ ತಂಡದ ನಾಯಕನಾಗಿ ಪ್ಯಾಟ್ ಕಮಿನ್ಸ್‌ ನೇಮಕ

ತಂಡದ ಆಯ್ಕೆಯ ಬಗ್ಗೆ ಆಸ್ಟ್ರೇಲಿಯಾದ ನೂತನ ಟೆಸ್ಟ್ ನಾಯಕ ಪ್ಯಾಟ್ ಕಮಿನ್ಸ್‌ ಸಂತಸ ವ್ಯಕ್ತಪಡಿಸಿದ್ದಾರೆ. ಆದರೆ ಇಂಗ್ಲೆಂಡ್ ತಂಡವು ಇದುವರೆಗೂ ತಾನಾಡುವ ಹನ್ನೊಂದರ ಬಳಗವನ್ನು ಹೆಸರಿಸಿಲ್ಲ. ನಮ್ಮ ಮುಂದೆ ಸಾಕಷ್ಟು ಆಯ್ಕೆಗಳಿವೆ. ಆದರೆ ನಾವೀಗಲೇ ಮೊದಲ ಟೆಸ್ಟ್‌ ಪಂದ್ಯಕ್ಕೆ ತಂಡವನ್ನು ಪ್ರಕಟಿಸುವುದಿಲ್ಲ. ಮುಂಬರುವ ದಿನಗಳಲ್ಲಿ ಪರಿಸ್ಥಿತಿಗನುಗುಣವಾಗಿ ಆಡುವ ಹನ್ನೊಂದರ ಬಳಗವನ್ನು ಆಯ್ಕೆ ಮಾಡಿಕೊಳ್ಳಲಿದ್ದೇವೆ ಎಂದು ಇಂಗ್ಲೆಂಡ್ ಟೆಸ್ಟ್ ತಂಡದ ನಾಯಕ ಜೋ ರೂಟ್ (Joe Root) ಹೇಳಿದ್ದಾರೆ.

ಮೇಲ್ನೋಟಕ್ಕೆ ಬ್ರಿಸ್ಬೇನ್‌ನ ಗಾಬ್ ಪಿಚ್‌ ಸ್ಪಿನ್ನರ್‌ಗಳಿಗೆ ನೆರವು ನೀಡುವಂತೆ ಕಂಡು ಬರುತ್ತಿದೆ. ಈಗಲೇ ತಂಡವನ್ನು ಪ್ರಕಟಿಸುವುದು ಸೂಕ್ತ ನಡೆಯಲ್ಲ ಎಂದೆನಿಸುತ್ತಿದೆ ಎಂದು ರೂಟ್ ಹೇಳಿದ್ದಾರೆ. ಇಂಗ್ಲೆಂಡ್ ತಂಡದಲ್ಲಿ ಬಹುತೇಕ ಸ್ಪಿನ್ನರ್ ಜಾಕ್ ಲೀಚ್‌ ತಂಡದಲ್ಲಿ ಸ್ಥಾನ ಪಡೆಯುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ.

ಮೊದಲ ಟೆಸ್ಟ್‌ಗೆ ಆಸ್ಟ್ರೇಲಿಯಾ ತಂಡ ಹೀಗಿದೆ ನೋಡಿ: 

ಡೇವಿಡ್ ವಾರ್ನರ್‌, ಮಾರ್ಕಸ್ ಹ್ಯಾರಿಸ್, ಮಾರ್ನಸ್ ಲಬುಶೆನ್, ಸ್ಟೀವ್ ಸ್ಮಿತ್, ಟ್ರಾವಿಸ್ ಹೆಡ್, ಕ್ಯಾಮರೋನ್ ಗ್ರೀನ್, ಅಲೆಕ್ಸ್ ಕ್ಯಾರಿ(ವಿಕೆಟ್ ಕೀಪರ್), ಪ್ಯಾಟ್ ಕಮಿನ್ಸ್(ನಾಯಕ), ಮಿಚೆಲ್ ಸ್ಟಾರ್ಕ್, ನೇಥನ್ ಲಯನ್, ಜೋಶ್ ಹೇಜಲ್‌ವುಡ್‌.
 

Follow Us:
Download App:
  • android
  • ios