ಭಾರತ ತಂಡದ ಪರ ಅತ್ಯಂತ ಶಿಸ್ತುಬದ್ದ ದಾಳಿ ನಡೆಸಿದ ಪೂಜಾ ವಸ್ತ್ರಾಕರ್, 4 ಓವರ್‌ನಲ್ಲಿ ಕೇವಲ 17 ರನ್ ನೀಡಿ 4 ವಿಕೆಟ್ ಕಬಳಿಸಿದರು. ಇನ್ನುಳಿದಂತೆ ತಿತಾಸ್ ಸಧು, ಅಮನ್‌ಜೋತ್ ಕೌರ್, ರಾಜೇಶ್ವರಿ ಗಾಯಕ್ವಾಡ್‌ ಹಾಗೂ ದೇವಿಕಾ ವೈದ್ಯ ತಲಾ ಒಂದೊಂದು ವಿಕೆಟ್ ತಮ್ಮ ಖಾತೆಗೆ ಸೇರಿಸಿಕೊಂಡರು.

ಹಾಂಗ್ಝೂ(ಸೆ.24): ಪೂಜಾ ವಸ್ತ್ರಾಕರ್ ಮಾರಕ ದಾಳಿಯ ನೆರವಿನಿಂದ ಸ್ಮೃತಿ ಮಂಧನಾ ನೇತೃತ್ವದ ಭಾರತ ಮಹಿಳಾ ಕ್ರಿಕೆಟ್ ತಂಡವು 2023ರ ಏಷ್ಯನ್‌ ಗೇಮ್ಸ್‌ನಲ್ಲಿ ಫೈನಲ್‌ಗೆ ಲಗ್ಗೆಯಿಡುವಲ್ಲಿ ಯಶಸ್ವಿಯಾಗಿದೆ. ಬಾಂಗ್ಲಾದೇಶ ಎದುರಿನ ಸೆಮಿಫೈನಲ್ ಪಂದ್ಯದಲ್ಲಿ ಬಾಂಗ್ಲಾದೇಶವನ್ನು ಕೇವಲ 51 ರನ್‌ಗಳಿಗೆ ಆಲೌಟ್ ಮಾಡಿದ ಭಾರತ, ಸುಲಭ ಗುರಿಯನ್ನು ಕೇವಲ 2 ವಿಕೆಟ್ ಕಳೆದುಕೊಂಡು ಗೆಲುವಿನ ನಗೆ ಬೀರಿತು. ಈ ಮೂಲಕ ಕನಿಷ್ಠ ಬೆಳ್ಳಿ ಪದಕವನ್ನು ಖಚಿತಪಡಿಸಿಕೊಳ್ಳುವಲ್ಲಿ ಯಶಸ್ವಿಯಾಯಿತು.

ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ದುಕೊಂಡು ಬಾಂಗ್ಲಾದೇಶ ತಂಡವು ಮೊದಲ ಓವರ್‌ನಲ್ಲೇ ಎರಡು ವಿಕೆಟ್ ಕಳೆದುಕೊಂಡು ಕಂಗಾಲಾಯಿತು. ಬಾಂಗ್ಲಾದೇಶದ ಆರಂಭಿಕ ಆಟಗಾರ್ತಿಯರಿಬ್ಬರನ್ನು ಪೂಜಾ ವಸ್ತ್ರಾಕರ್ ಶೂನ್ಯಕ್ಕೆ ಪೆವಿಲಿಯನ್ನಿಗಟ್ಟುವಲ್ಲಿ ಯಶಸ್ವಿಯಾದರು. ಭಾರತೀಯ ಮಹಿಳಾ ತಂಡದ ಬೌಲರ್‌ಗಳೆದುರು ರನ್‌ ಗಳಿಸಲು ಬಾಂಗ್ಲಾ ಆಟಗಾರ್ತಿಯರು ಪರದಾಡಿದರು. ಪರಿಣಾಮ ನಾಯಕಿ ನಿಗರ್ ಸುಲ್ತಾನ(12) ಹೊರತುಪಡಿಸಿ ಬಾಂಗ್ಲಾದೇಶದ ಯಾವೊಬ್ಬ ಮಹಿಳಾ ಬ್ಯಾಟರ್ ಕೂಡಾ ಕನಿಷ್ಠ ಎರಡಂಕಿ ಮೊತ್ತ ದಾಖಲಿಸಲು ಸಫಲರಾಗಲಿಲ್ಲ. ಭಾರತೀಯ ಬೌಲರ್‌ಗಳೆದುರು ಬಾಂಗ್ಲಾದೇಶದ ಮಹಿಳಾ ಬ್ಯಾಟರ್‌ಗಳು ಪೆವಿಲಿಯನ್ ಪೆರೇಡ್ ನಡೆಸಿದರು. ಅಂತಿಮವಾಗಿ ಬಾಂಗ್ಲಾದೇಶ ತಂಡವು 17.5 ಓವರ್‌ಗಳಲ್ಲಿ 51 ರನ್‌ಗಳಿಗೆ ಸರ್ವಪತನ ಕಂಡಿತು.

Scroll to load tweet…

ಭಾರತ ತಂಡದ ಪರ ಅತ್ಯಂತ ಶಿಸ್ತುಬದ್ದ ದಾಳಿ ನಡೆಸಿದ ಪೂಜಾ ವಸ್ತ್ರಾಕರ್, 4 ಓವರ್‌ನಲ್ಲಿ ಕೇವಲ 17 ರನ್ ನೀಡಿ 4 ವಿಕೆಟ್ ಕಬಳಿಸಿದರು. ಇನ್ನುಳಿದಂತೆ ತಿತಾಸ್ ಸಧು, ಅಮನ್‌ಜೋತ್ ಕೌರ್, ರಾಜೇಶ್ವರಿ ಗಾಯಕ್ವಾಡ್‌ ಹಾಗೂ ದೇವಿಕಾ ವೈದ್ಯ ತಲಾ ಒಂದೊಂದು ವಿಕೆಟ್ ತಮ್ಮ ಖಾತೆಗೆ ಸೇರಿಸಿಕೊಂಡರು.

ಇನ್ನು ಸಾಧಾರಣ ಗುರಿ ಬೆನ್ನತ್ತಿದ ಭಾರತ ತಂಡವು ಆರಂಭದಲ್ಲೇ ನಾಯಕಿ ಸ್ಮೃತಿ ಮಂಧನಾ ವಿಕೆಟ್ ಕಳೆದುಕೊಂಡಿತು. ಮಂಧನಾ 7 ರನ್ ಗಳಿಸಿ ಮರೂಫಾ ಅಖ್ತರ್‌ಗೆ ವಿಕೆಟ್ ಒಪ್ಪಿಸಿದರು. ಮತ್ತೋರ್ವ ಆರಂಭಿಕ ಬ್ಯಾಟರ್ ಶಫಾಲಿ ವರ್ಮಾ 21 ಎಸೆತಗಳನ್ನು ಎದುರಿಸಿ 2 ಬೌಂಡರಿ ಸಹಿತ 17 ರನ್ ಬಾರಿಸಿ ಫಾಹಿಮಾ ಖತುನ್‌ಗೆ ವಿಕೆಟ್ ಒಪ್ಪಿಸಿದರು. ಇನ್ನು ಕೊನೆಯಲ್ಲಿ ಜೆಮಿಯಾ ರೋಡ್ರಿಗ್ಸ್‌ ಅಜೇಯ 20 ರನ್ ಬಾರಿಸುವ ಮೂಲಕ ಯಾವುದೇ ಅಪಾಯವಿಲ್ಲದೇ ತಂಡವನ್ನು ಗೆಲುವಿನ ದಡ ಸೇರಿಸುವಲ್ಲಿ ಯಶಸ್ವಿಯಾದರು.

ಸಂಕ್ಷಿಪ್ತ ಸ್ಕೋರ್:

ಬಾಂಗ್ಲಾದೇಶ ಮಹಿಳಾ ಕ್ರಿಕೆಟ್ ತಂಡ: 51/10(17.5 ಓವರ್)

ನಿಗರ್ ಸುಲ್ತಾನ: 12
ನಾಹಿದಾ ಅಖ್ತರ್: 9*

ಪೂಜಾ ವಸ್ತ್ರಾಕರ್: 17/4

ಭಾರತ: 52/2(8.2 ಓವರ್)
ಜೆಮಿಯಾ ರೋಡ್ರಿಗ್ಸ್‌: 20*
ಶಫಾಲಿ ವರ್ಮಾ: 17

ಫಾಹಿಮಾ ಖತುನ್: 7/1