ಏಷ್ಯಾಕಪ್‌ನ ಅಂತಿಮ ಪಂದ್ಯದಿಂದ ವಿಶ್ರಾಂತಿ ಪಡೆದುಕೊಂಡಿದ್ದ ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮ, ಅಫ್ಘಾನಿಸ್ತಾನ ವಿರುದ್ಧ ಅಬ್ಬರದ ಶತಕ ಸಿಡಿಸುವ ಮೂಲಕ ಮೂರು ವರ್ಷಗಳ ಬಳಿಕ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಶತಕ ಬಾರಿಸಿದ ವಿರಾಟ್ ಕೊಹ್ಲಿಯ ಸಂದರ್ಶನವನ್ನು ಮಾಡಿದರು. ಇಬ್ಬರ ನಡುವೆ ಎಲ್ಲವೂ ಸರಿ ಇಲ್ಲ ಎನ್ನುವ ಮಾತುಗಳ ನಡುವೆಯೇ ಬಿಸಿಸಿಐ ಈ ವಿಡಿಯೋವನ್ನು ಬಿಡುಗಡೆ ಮಾಡಿದೆ.
ದುಬೈ (ಸೆ.9): ಟೀಮ್ ಇಂಡಿಯಾ ಮಾಜಿ ನಾಯಕ ವಿರಾಟ್ ಕೊಹ್ಲಿ ಅಂದಾಜು ಒಂದು ತಿಂಗಳ ವಿಶ್ರಾಂತಿಯ ಬಳಿಕ ಏಷ್ಯಾಕಪ್ ಟೂರ್ನಿಯೊಂದಿಗೆ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಮರಳಿದ್ದರು. ಏಷ್ಯಾಕಪ್‌ನ ಮೊದಲ ಪಂದ್ಯದಿಂದಲೂ ಉತ್ತಮ ಲಯದಲ್ಲಿರುವಂಥೆ ಕಂಡುಬಂದಿದ್ದ ಮಾಜಿ ನಾಯಕ, ಟೂರ್ನಿ ಸಾಗುತ್ತಿದ್ದಂತೆ ತಮ್ಮ ಎಂದಿನ ಲಯ ಕಂಡುಕೊಂಡರು. ಅಫ್ಘಾನಿಸ್ತಾನ ವಿರುದ್ಧ ಗುರುವಾರ ನಡೆದ ಟೂರ್ನಿಯ ತನ್ನ ಕೊನೆಯ ಪಂದ್ಯದಲ್ಲಿ ಕೊಹ್ಲಿಯ ಆಟ ಎಷ್ಟು ಭರ್ಜರಿಯಾಗಿತ್ತು ಎಂದರೆ, ಅಂದಾಜು 1019 ದಿನಗಳ ಬಳಿಕ ಅಂತಾರಾಷ್ಟ್ರೀಯ ಕ್ರಿಕಟ್‌ನಲ್ಲಿ ಶತಕದ ಸಾಧನೆ ಮಾಡಿದರು. ಬರೀ 61 ಎಸೆತಗಳನ್ನು ಎದುರಿಸಿದ ವಿರಾಟ್ ಕೊಹ್ಲಿ 122 ರನ್ ಬಾರಿಸಿ ಟಿ20ಯಲ್ಲಿ ತಮ್ಮ ಮೊಟ್ಟಮೊದಲ ಶತಕ ಬಾರಿಸಿದರು. ಪಂದ್ಯದ ಬಳಿಕ ಹಾಲಿ ನಾಯಕ ರೋಹಿತ್ ಶರ್ಮ, ಮಾಜಿ ನಾಯಕ ವಿರಾಟ್ ಕೊಹ್ಲಿಯ ಸಂದರ್ಶನ ಮಾಡಿದರು. ಆಧುನಿಕ-ದಿನದ ಇಬ್ಬರು ಶ್ರೇಷ್ಠ ಆಟಗಾರರು ಜಗತ್ತಿನಾದ್ಯಂತ ಅಪಾರ ಅಭಿಮಾನಿಗಳನ್ನು ಹೊಂದಿದ್ದಾರೆ. ಬಹಳ ದಿನದ ಬಳಿಕ ಶತಕವನ್ನು ಬಾರಿಸಿದ ಬಗ್ಗೆ ನಿಮ್ಮ ಅನಿಸಿಕೆ ಏನು ಎಂದು ರೋಹಿತ್ ಶರ್ಮ ಕೇಳಿದಾಗ ಕೊಹ್ಲಿಗೆ ನಗು ತಡೆಯಲಾಗಲಿಲ್ಲ. ರೋಹಿತ್ ಶರ್ಮ ಅವರ ಶುದ್ಧ ಹಿಂದಿ ಮಾತಿನ ಸಂದರ್ಶನಕ್ಕೆ ವಿರಾಟ್ ಕೊಹ್ಲಿ ಸಖತ್ ಆಗಿ ಕಾಲೆಳೆದರು.
'ವಿರಾಟ್ ಬಹು ಬಹುತ್ ಬದಾಯಿ ಆಪ್ಕೋ, ಆಪ್ಕಾ 71 ಹಂಡ್ರೆಡ್. ಪೂರಿ ಇಂಡಿಯಾ ವೇಟ್ ಕರ್ ರಹೀ ಥೀ, ಐ ಆಮ್ ಶ್ಯೂರ್ ಆಪ್ ಜ್ಯಾದಾ ವೇಟ್ ಕರ್ ರಹೆ ಥೆ. ಆಪ್ನೆ ಜೋ ಇನ್ನಿಂಗ್ಸ್ ಖೇಲಿ ಉಸ್ಮೆ ಖಾಫಿ ಕುಚ್ ದೇಕ್ನೇ ಕೋ ಮಿಲಾ, ಆಪ್ನೆ ಗ್ಯಾಪ್ಸ್ ಅಚ್ಚೆ ಢೂಂಡೇ, ಶಾಟ್ಸ್ ಅಚ್ಚೆ ಲಗಾಯೆ, ತೋ ಅಪ್ನಿ ಇನ್ನಿಂಗ್ಸ್ ಕೆ ಬಾರೆ ಮೇ ಬತಾಯಿಯೇ, ಕೈಸಿ ಶುರುವಾತ್ ಹುಯಿ, ಔರ್ ಉಸ್ಕೆ ಬಾದ್ ಕೈಸಿ ಥೀ ಫೀಲಿಂಗ್ (ನಿಮ್ಮ 71 ನೇ ಶತಕಕ್ಕೆ ಅನೇಕ ಅಭಿನಂದನೆಗಳು. ಇಡೀ ದೇಶವೇ ಕಾಯುತ್ತಿತ್ತು ಮತ್ತು ನೀವು ಕೂಡ ಕಾಯುತ್ತಿದ್ದೀರಿ ಎಂದು ನನಗೆ ನಂಬಿಕೆ ಇದೆ. ಇಂದಿನ ಇನ್ನಿಂಗ್ಸ್‌ನಲ್ಲಿ, ನೀವು ಉತ್ತಮವಾದ ಸ್ಟ್ರೋಕ್‌ಗಳನ್ನು ಆಡುತ್ತಿರುವುದನ್ನು ನಾವು ನೋಡಿದ್ದೇವೆ. ನಿಮ್ಮ ಆಟದ ಮೂಲಕ ಬಗ್ಗೆ ಏನಿಸುತ್ತಿದೆ ಮತ್ತು ಭಾವನೆ ಹೇಗಿದೆ ಎಂದು ನಮಗೆ ತಿಳಿಸಿ) ಎಂದು ರೋಹಿತ್ ಶರ್ಮ (Rohit Sharma) ಸಂಪೂರ್ಣ ಹಿಂದಿ ಭಾಷೆಯಲ್ಲಿ ಪ್ರಶ್ನೆ ಮಾಡಿದರು.
ಇದಕ್ಕೆ ತಮಾಷೆಯಿಂದಲೇ ಪ್ರತಿಕ್ರಿಯೆ ನೀಡಿದ ವಿರಾಟ್ ಕೊಹ್ಲಿ, "ಇತ್ನಿ ಶುದ್ಧ್ ಹಿಂದಿ ಬೋಲಾ ರಹಾ ಹೇ ಮೇರೆ ಸಾಥ್ ಪೆಹಲಿ ಬಾರ್' (ನನ್ನ ಜೊತೆ ಇದೇ ಮೊದಲ ಬಾರಿಗೆ ಇಷ್ಟು ಸಂಪೂರ್ಣ ಶುದ್ಧ ಹಿಂದಿಯಲ್ಲಿ ಮಾತನಾಡುತ್ತಿದ್ದೀರಿ) ಎಂದು ಕ್ಯಾಮೆರಾ ಹಾಗೂ ರೋಹಿತ್ ಶರ್ಮ ಅವರನ್ನು ನೋಡುತ್ತಲೇ ವಿರಾಟ್ ಕೊಹ್ಲಿ ಹೇಳಿದರು. ಶತಕ ದಾಖಲಿಸಿದ ಬಳಿಕ ವಿರಾಟ್ ಕೊಹ್ಲಿ (Virat Kohli) ತಮ್ಮ ಶತಕವನ್ನು ಪತ್ನಿ ಅನುಷ್ಕಾ ಶರ್ಮ (Anushka Sharma) ಹಾಗೂ ಮಗಳು ವಮಿಕಾಗೆ (Vamika) ಅರ್ಪಣೆ ಮಾಡಿದರು.
Asia Cup 2022: ಪಾಂಟಿಂಗ್ ಶತಕದ ದಾಖಲೆ ಸರಿಗಟ್ಟಿದ ಕೊಹ್ಲಿ, ಅಫ್ಘಾನ್‌ಗೆ ಬೃಹತ್ ಸವಾಲು
"ಹೊರಗೆ ಬಹಳಷ್ಟು ಸಂಗತಿಗಳು ನಡೆಯುತ್ತಿವೆ ಎಂದು ನನಗೆ ತಿಳಿದಿದೆ. ಮತ್ತು ನಾನು ನನ್ನ ಉಂಗುರಕ್ಕೆ ಮುತ್ತಿಟ್ಟಿದ್ದೇನೆ. ಒಬ್ಬ ವ್ಯಕ್ತಿ ನನಗೆ ದೃಷ್ಟಿಕೋನದಿಂದ ವಿಷಯಗಳನ್ನು ತಿಳಿಸಿದ್ದರಿಂದ ನಾನು ಇಲ್ಲಿ ನಿಂತಿರುವುದನ್ನು ನೀವು ನೋಡುತ್ತೀರಿ. ಅದು ಅನುಷ್ಕಾ. ಈ ಶತಕ ಅವಳಿಗೆ ಮತ್ತು ನನ್ನ ಪುಟ್ಟ ಮಗಳು ವಮಿಕಾಗೆ ಅರ್ಪಣೆ ಮಾಡುತ್ತಿದ್ದೇನೆ' ಎಂದು ಪಂದ್ಯದ ಬಳಿಕ ಕೊಹ್ಲಿ ಹೇಳಿದ್ದರು.
Virat Kohli 71st Century: ಮೂರು ವರ್ಷಗಳ ಬಳಿಕ ಕೊಹ್ಲಿ ಸೆಂಚುರಿ, ಟಿ20ಯಲ್ಲಿ ಮೊಟ್ಟಮೊದಲ ಶತಕ
ಜವಾಬ್ದಾರಿಗಳ ಬಗ್ಗೆ ಮಾತನಾಡಿದ ಕೊಹ್ಲಿ: ವಿರಾಟ್ ಕೊಹ್ಲಿ, ರೋಹಿತ್ ಜೊತೆಗಿನ ಸಂದರ್ಶನದಲ್ಲಿ ತಮ್ಮ ಜವಾಬ್ದಾರಿಯ ಕುರಿತಾಗಿ ಮಾತನಾಡಿದರು. ತಂಡದ ಸಲುವಾಗಿ ರಕ್ಷಣಾತ್ಮಕವಾಗಿ ಆಟವಾಡುವುದು ಅಗತ್ಯ ಎಂದಿದ್ದಲ್ಲಿ, ನಾನು ಆ ರೀತಿ ಆಡುತ್ತೇನೆ. ಸ್ಪೋಟಕವಾಗಿ ಆಡಬೇಕಿದ್ದಲ್ಲಿ ಸ್ಪೋಟಕವಾಗಿ ಆಡುತ್ತೇನೆ. ತಂಡದ ಪರಿಸ್ಥಿತಿಗೆ ತಕ್ಕಂತೆ ಆಡುವುದೇ ನನ್ನ ಜವಾಬ್ದಾರಿಯಾಗಿದೆ ಎಂದು ಕೊಹ್ಲಿ (Virat Kohli Interview) ಹೇಳಿದರು. ಇನ್ನು ಕೆಎಲ್ ರಾಹುಲ್ ತಂಡಕ್ಕೆ ಹಾಗೂ ಮುಂದಿನ ವಿಶ್ವಕಪ್‌ಗೆ ಬಹಳ ಪ್ರಮುಖ ಆಟಗಾರ ಎಂದೂ ಕೊಹ್ಲಿ ಹೇಳಿದ್ದಾರೆ. ಇನ್ನು ಟಿ20 ಮಾದರಿಯ ಮೂಲಕ ನಾನು 71ನೇ ಶತಕ ಬಾರಿಸುತ್ತೇನೆ ಎಂದು ಅಂದುಕೊಂಡಿರಲಿಲ್ಲ. ಶತಕದ ಬರ ನೀಗಿದ್ದಕ್ಕೆ ಖುಷಿಯಾಗಿದೆ ಎಂದರು.
