Asianet Suvarna News Asianet Suvarna News

Asia Cup 2022: ಅಪರೂಪದ ಶತಕವನ್ನು ಪತ್ನಿ ಅನುಷ್ಕಾ ಶರ್ಮಾಗೆ ಅರ್ಪಿಸಿದ ಕಿಂಗ್ ಕೊಹ್ಲಿ..!

ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲಿ ಚೊಚ್ಚಲ ಶತಕ ಸಿಡಿಸಿದ ವಿರಾಟ್ ಕೊಹ್ಲಿ
ಬರೋಬ್ಬರಿ 1020 ದಿನಗಳ ಬಳಿಕ ಮೂರಂಕಿ ಮೊತ್ತ ದಾಖಲಿಸಿದ ಮಾಜಿ ನಾಯಕ
ಈ ವಿಶೇಷ ಶತಕವನ್ನು ಪತ್ನಿ ಹಾಗೂ ಪುತ್ರಿಗೆ ಅರ್ಪಿಸಿದ ವಿರಾಟ್ ಕೊಹ್ಲಿ

Asia Cup 2022 Virat Kohli dedicate the 71st Century to his wife Anushka Sharma and daughter Vamika kvn
Author
First Published Sep 9, 2022, 10:01 AM IST

ದುಬೈ(ಸೆ.09) ಭಾರತದ ‘ರನ್‌ ಮಷಿನ್‌’ ವಿರಾಟ್‌ ಕೊಹ್ಲಿಯ ಬಹುನಿರೀಕ್ಷಿತ 71ನೇ ಅಂತಾರಾಷ್ಟ್ರೀಯ ಶತಕ ಕೊನೆಗೂ ದಾಖಲಾಗಿದೆ. 2019ರ ನವೆಂಬರ್‌ ಬಳಿಕ ಶತಕದ ಬರ ಎದುರಿಸುತ್ತಿದ್ದ ಕೊಹ್ಲಿ, ಆಫ್ಘಾನಿಸ್ತಾನ ವಿರುದ್ಧ ಗುರುವಾರ ನಡೆದ ಏಷ್ಯಾಕಪ್‌ ಸೂಪರ್‌-4 ಪಂದ್ಯದಲ್ಲಿ ಅಮೋಘ ಸೆಂಚುರಿ ಸಿಡಿಸಿದರು. ಇದು ಅಂತಾರಾಷ್ಟ್ರೀಯ ಟಿ20ಯಲ್ಲಿ ಇದು ಅವರ ಮೊದಲ ಶತಕ ಎನ್ನುವುದು ವಿಶೇಷ. ಇನ್ನು ಈ ವಿಶೇಷ ಶತಕವನ್ನು ಕಿಂಗ್ ಕೊಹ್ಲಿ ತಮ್ಮ ಪತ್ನಿ ಅನುಷ್ಕಾ ಶರ್ಮಾ ಹಾಗೂ ಪುತ್ರಿ ವಾಮಿಕಾಗೆ ಅರ್ಪಿಸಿದ್ದಾರೆ. 

ಆಫ್ಘಾನಿಸ್ತಾನ ವಿರುದ್ದ ರೋಹಿತ್ ಶರ್ಮಾ ಅನುಪಸ್ಥಿತಿಯಲ್ಲಿ ಆರಂಭಿಕನಾಗಿ ಕ್ರೀಸ್‌ಗಿಳಿದ ವಿರಾಟ್‌ ಕೊಹ್ಲಿ ಕೇವಲ 53 ಎಸೆತಗಳಲ್ಲಿ ಶತಕ ಪೂರೈಸಿದರು. 61 ಎಸೆತಗಳಲ್ಲಿ 12 ಬೌಂಡರಿ, 6 ಸಿಕ್ಸರ್‌ನೊಂದಿಗೆ ಔಟಾಗದೆ 122 ರನ್‌ ಗಳಿಸಿದರು. ಅಂತಾರಾಷ್ಟ್ರೀಯ ಟಿ20ಯಲ್ಲಿ ಇದು ಭಾರತ ಪರ ದಾಖಲಾದ ವೈಯಕ್ತಿಕ ಗರಿಷ್ಠ ಮೊತ್ತ ಕೂಡಾ ಹೌದು ಎನಿಸಿತು. 2017ರಲ್ಲಿ ಶ್ರೀಲಂಕಾ ವಿರುದ್ಧ ಇಂದೋರ್‌ನಲ್ಲಿ ರೋಹಿತ್‌ ಶರ್ಮಾ ಗಳಿಸಿದ್ದ 118 ರನ್‌ ಇದುವರೆಗಿನ ವೈಯಕ್ತಿಕ ಗರಿಷ್ಠ ಸ್ಕೋರ್ ಎನಿಸಿತ್ತು.

ವಿಶೇಷ ಶತಕವನ್ನು ಪತ್ನಿ ಅನುಷ್ಕಾಗೆ ಅರ್ಪಿಸಿದ ಕಿಂಗ್ ಕೊಹ್ಲಿ:

ಕಳೆದ ಎರಡೂವರೆ ವರ್ಷ ನನಗೆ ಹಲವು ಪಾಠಗಳನ್ನು ಕಲಿಸಿದೆ. ಅಂತಾರಾಷ್ಟ್ರೀಯ ಟಿ20ಯಲ್ಲಿ ನನ್ನ ಶತಕದ ಬರ ನೀಗಲಿದೆ ಎಂದು ಭಾವಿಸಿರಲಿಲ್ಲ. ಕಠಿಣ ಸಮಯದಲ್ಲಿ ನನ್ನೊಂದಿಗೆ ನನ್ನ ತಂಡ ನಿಂತಿದೆ. ಶತಕ ಬಾರಿಸುತ್ತಿಲ್ಲ ಎನ್ನುವ ಬಗ್ಗೆ ಹೊರಗೆ ಸಾಕಷ್ಟು ಚರ್ಚೆಯಾಗುತ್ತಿತ್ತು ಎಂದು ನನಗೆ ಗೊತ್ತು. ನಾನಿಲ್ಲಿ ಇಂದು ನಿಂತಿದ್ದೇನೆ ಎಂದರೆ ಅದಕ್ಕೆ ಒಬ್ಬ ವ್ಯಕ್ತಿ ಪ್ರಮುಖ ಕಾರಣ. ಅದು ನನ್ನ ಪತ್ನಿ ಅನುಷ್ಕಾ. ಈ ಶತಕ ಆಕೆ ಹಾಗೂ ನಮ್ಮ ಪುತ್ರಿ ವಾಮಿಕಾಗೆ ಅರ್ಪಿಸುವೆ. ನನ್ನ ಪ್ರತಿಯೊಂದು ಹೆಜ್ಜೆಯಲ್ಲೂ ಅನುಷ್ಕಾ ನನ್ನ ಜೊತೆಗಿದ್ದಾರೆ. ಅವರಿಂದ ಸಾಕಷ್ಟು ವಿಷಯಗಳನ್ನು ಕಲಿತಿದ್ದೇನೆ ಎಂದು ವಿರಾಟ್ ಕೊಹ್ಲಿ ಹೇಳಿದ್ದಾರೆ.

Asia Cup 2022: ಅಫ್ಘಾನಿಸ್ತಾನ ವಿರುದ್ಧ ಟೀಮ್‌ ಇಂಡಿಯಾ 101 ರನ್‌ ಗಳ ಗೆಲುವು

2019ರಲ್ಲಿ ಕೊನೆಯ ಶತಕ ಬಾರಿಸಿದ್ದ ವಿರಾಟ್ ಕೊಹ್ಲಿ:

ನವೆಂಬರ್ 23, 2019ರಂದು ಕೋಲ್ಕತಾದಲ್ಲಿ ನಡೆದಿದ್ದ ಬಾಂಗ್ಲಾದೇಶ ವಿರುದ್ಧದ ಪಿಂಕ್ ಬಾಲ್ ಟೆಸ್ಟ್‌ನಲ್ಲಿ ವಿರಾಟ್‌ ಕೊಹ್ಲಿ ಶತಕ ಬಾರಿಸಿದ್ದರು. ಆ ಬಳಿಕ ಮತ್ತೊಂದು ಶತಕಕ್ಕೆ 1020 ದಿನ ಕಾಯಬೇಕಾಯಿತು. 70 ಹಾಗೂ 71ನೇ ಶತಕದ ನಡುವೆ ವಿರಾಟ್‌ 72 ಅಂತಾರಾಷ್ಟ್ರೀಯ ಪಂದ್ಯಗಳನ್ನಾಡಿದ್ದು 2,708 ರನ್‌ ಗಳಿಸಿದ್ದರು. 26 ಅರ್ಧಶತಕ ಬಾರಿಸಿದ್ದ ಅವರ ವೈಯಕ್ತಿಕ ಗರಿಷ್ಠ ಮೊತ್ತ ಔಟಾಗದೆ 94 ರನ್‌ ಆಗಿತ್ತು. ಆದರೆ ಬರೋಬ್ಬರಿ 1020 ದಿನಗಳ ಬಳಿಕ ಕೊನೆಗೂ ವಿರಾಟ್ ಕೊಹ್ಲಿ, ಮೂರಂಕಿ ಮೊತ್ತ ದಾಖಲಿಸುವ ಮೂಲಕ ಎಲ್ಲಾ ಟೀಕಾಕಾರರಿಗೆ ಬ್ಯಾಟ್‌ ಮೂಲಕವೇ ಉತ್ತರಿಸಿದ್ದಾರೆ. 

ಕ್ರಿಕೆಟ್ ದಿಗ್ಗಜ ರಿಕಿ ಪಾಂಟಿಂಗ್‌ ದಾಖಲೆ ಸಮ

ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅತಿಹೆಚ್ಚು ಶತಕ ಬಾರಿಸಿದ ಬ್ಯಾಟರ್‌ಗಳ ಪಟ್ಟಿಯಲ್ಲಿ ವಿರಾಟ್‌ ಕೊಹ್ಲಿ ಇದೀಗ ರಿಕಿ ಪಾಂಟಿಂಗ್ ಜತೆ ಜಂಟಿ 2ನೇ ಸ್ಥಾನಕ್ಕೇರಿದ್ದಾರೆ. ಆಸ್ಪ್ರೇಲಿಯಾದ ರಿಕಿ ಪಾಂಟಿಂಗ್‌ರ 71 ಶತಕಗಳ ದಾಖಲೆಯನ್ನು ಕೊಹ್ಲಿ ಸರಿಗಟ್ಟಿದ್ದಾರೆ. ಸಚಿನ್‌ ತೆಂಡುಲ್ಕರ್‌ 100 ಶತಕಗಳೊಂದಿಗೆ ಈ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದ್ದಾರೆ.

ಟೀಂ ಇಂಡಿಯಾ ಮಾಜಿ ನಾಯಕ ವಿರಾಟ್ ಕೊಹ್ಲಿ 71 ಅಂತಾರಾಷ್ಟ್ರೀಯ ಶತಕ ಸಿಡಿಸಲು ಕೇವಲ 522 ಇನಿಂಗ್ಸ್‌ ತೆಗೆದುಕೊಂಡಿದ್ದಾರೆ. ಆದರೆ ಇಷ್ಟು ಶತಕ ಸಿಡಿಸಲು ರಿಕಿ ಪಾಂಟಿಂಗ್ ಬರೋಬ್ಬರಿ 668 ಇನಿಂಗ್ಸ್‌ಗಳನ್ನಾಡಿದ್ದಾರೆ. ಇನ್ನು ಕ್ರಿಕೆಟ್ ದಂತಕಥೆ ಸಚಿನ್ ತೆಂಡುಲ್ಕರ್ 100 ಶತಕ ಸಿಡಿಸಲು ಬರೋಬ್ಬರಿ 782 ಇನಿಂಗ್ಸ್‌ಗಳನ್ನಾಡಿದ್ದಾರೆ.

Follow Us:
Download App:
  • android
  • ios