ವಿರಾಟ್‌ ಕೊಹ್ಲಿ ಟಿ20 ಕ್ರಿಕೆಟ್‌ನಲ್ಲಿ ಬಾರಿಸಿದ ಚೊಚ್ಚಲ ಶತಕದ ಬಳಿಕ ಬೌಲಿಂಗ್‌ನಲ್ಲಿ ಭುವನೇಶ್ವರ್‌ ಕುಮಾರ್‌ ಮಾಡಿದ ಘಾತಕ ದಾಳಿಯ ಸಾಹಸದಿಂದ ಟೀಮ್ ಇಂಡಿಯಾ ಏಷ್ಯಾಕಪ್‌ ಟಿ20 ಕ್ರಿಕೆಟ್‌ ಟೂರ್ನಿಯಲ್ಲಿ ಅಫ್ಘಾನಿಸ್ತಾನ ತಂಡವನ್ನು 101 ರನ್‌ಗಳಿಂದ ಸೋಲಿಸುವ ಮೂಲಕ ಅಭಿಯಾನಕ್ಕೆ ವಿದಾಯ ಹೇಳಿದೆ. 

ದುಬೈ (ಸೆ.8): ಏಷ್ಯಾಕಪ್‌ ಟೂರ್ನಿಯ ತನ್ನ ಕೊನೆಯ ಪಂದ್ಯದಲ್ಲಿ ಹಾಲಿ ಚಾಂಪಿಯನ್‌ ಘನತೆಗೆ ತಕ್ಕಂತೆ ಆಟವಾಡಿದ ಟೀಮ್‌ ಇಂಡಿಯಾ, ಸೂಪರ್‌-4 ಹಂತದ ಕೊನೆಯ ಮುಖಾಮುಖಿಯಲ್ಲಿ ಅಫ್ಘಾನಿಸ್ತಾನ ತಂಡವನ್ನು 101 ರನ್‌ಗಳಿಂದ ಮಣಿಸಿ ಟೂರ್ನಿಗೆ ವಿದಾಯ ಹೇಳಿದೆ. ಇದು ಟಿ20 ಕ್ರಿಕೆಟ್‌ನಲ್ಲಿ ಟೀಮ್‌ ಇಂಡಿಯಾದ 2ನೇ ಅತೀದೊಡ್ಡ ರನ್‌ ಅಂತರದ ಗೆಲುವಾಗಿದೆ. ಇದಕ್ಕೂ ಮುನ್ನ 2018ರಲ್ಲಿ ಐರ್ಲೆಂಡ್‌ ವಿರುದ್ಧ ಮಲಾಹೈಡ್‌ನಲ್ಲಿ 143 ರನ್‌ಗಳಿಂದ ಗೆಲುವು ದಾಖಲಿಸಿದ್ದು ದಾಖಲೆಯಾಗಿದೆ. ದುಬೈ ಅಂತಾರಾಷ್ಟ್ರೀಯ ಸ್ಟೇಡಿಯಂನಲ್ಲಿ ಗುರುವಾರ ನಡೆದ ಪಂದ್ಯದಲ್ಲಿ ಟಾಸ್‌ ಸೋತು ಮೊದಲು ಬ್ಯಾಟಿಂಗ್‌ ಮಾಡಿದ ಭಾರತ ತಂಡ, ವಿರಾಟ್‌ ಕೊಹ್ಲಿ ಬಾರಿಸಿದ ಚೊಚ್ಚಲ ಟಿ20 ಶತಕ ಹಾಗೂ 1020 ದಿನಗಳ ಬಳಿಕ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಬಾರಿಸಿದ ಮೊದಲ ಶತಕದ ನೆರವಿನಿಂದ 2 ವಿಕೆಟ್‌ಗೆ 212 ರನ್‌ಗಳ ಬೃಹತ್‌ ಮೊತ್ತ ಪೇರಿಸಿತು. ಪ್ರತಿಯಾಗಿ ಭುವನೇಶ್ವರ್‌ ಕುಮಾರ್‌ ಅವರ (4 ರನ್‌ಗೆ 5 ವಿಕೆಟ್‌) ಮಾರಕ ದಾಳಿಗೆ ಧರಗೆರುಳಿದ ಅಫ್ಘಾನಿಸ್ತಾನ ತಂಡ 20 ಓವರ್‌ಗಳಲ್ಲಿ 8 ವಿಕೆಟ್‌ಗೆ 118 ರನ್‌ ಬಾರಿಸಿ ಸೋಲು ಕಂಡಿತು. ಇದು ಅಫ್ಘಾನಿಸ್ತಾನ ತಂಡಕ್ಕೆ ರನ್‌ ಲೆಕ್ಕಾಚಾರದಲ್ಲಿ 2ನೇ ಅತೀದೊಡ್ಡ ಸೋಲು ಎನಿಸಿದೆ. 2012ರಲ್ಲಿ ಇಂಗ್ಲೆಂಡ್‌ ವಿರುದ್ಧ ಪ್ರೇಮದಾಸ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ 116 ರನ್‌ಗಳಿಂದ ಸೋತಿದ್ದು ಕುಖ್ಯಾತಿಯಾಗಿದೆ.

213 ರನ್‌ಗಳ ಬೃಹತ್‌ ಮೊತ್ತವನ್ನು ಬೆನ್ನಟ್ಟುವ ವೇಳೆ ಅಫ್ಘಾನಿಸ್ತಾನ ತಂಡಕ್ಕೆ ಉತ್ತಮ ಆರಂಭ ಸಿಗಲಿಲ್ಲ. ಮೊದಲ ಓವರ್‌ನಲ್ಲಿಯೇ ಭುವನೇಶ್ವರ್‌ ಕುಮಾರ್‌, ಹಜ್ರತುಲ್ಲಾ ಜಜೈ ಹಾಗೂ ಗುರ್ಬಾಜ್‌ರನ್ನುಔಟ್‌ ಮಾಡಿದ್ದರು. ಮೂರನೇ ಓವರ್‌ ಎಸೆಯಲು ಬಂದ ಭುವನೇಶ್ವರ್‌ ಆ ಓವರ್‌ನಲ್ಲಿ ಕರೀಂ ಜನತ್‌ ಹಾಗೂ ನಜೀಮುಲ್ಲಾ ಜದ್ರಾನ್‌ ವಿಕೆಟ್‌ ಉರುಳಿಸುವುದರೊಂದಿಗೆ ಪಂದ್ಯದಲ್ಲಿ ಅಫ್ಘಾನಿಸ್ತಾನ ಯಾವ ಹೋರಾಟವನ್ನೂ ತೋರದೇ ಶರಣಾಗಲಿದೆ ಎನ್ನುವುದು ಖಚಿತಗೊಂಡಿತ್ತು.

Virat Kohli 71st Century: ಮೂರು ವರ್ಷಗಳ ಬಳಿಕ ಕೊಹ್ಲಿ ಸೆಂಚುರಿ, ಟಿ20ಯಲ್ಲಿ ಮೊಟ್ಟಮೊದಲ ಶತಕ

ಪವರ್‌ ಪ್ಲೇ ಮುಗಿಯುವ ವೇಳೆಗಾಗಲೇ ನಾಯಕ ಮೊಹಮದ್‌ ನಬಿಯ ವಿಕೆಟ್‌ ಕಳೆದುಕೊಂಡು ಅಫ್ಘಾನಿಸ್ತಾನ 21 ರನ್‌ ಬಾರಿಸಿತ್ತು. ಆರ್ಶ್‌ದೀಪ್‌ ಸಿಂಗ್‌ ಈ ವಿಕೆಟ್‌ ಉರುಳಿಸಿ ತಂಡಕ್ಕೆ ಮೇಲುಗೈ ನೀಡಿದ್ದರು. ಇದರಿಂದಾಗಿ ಭಾರತ ನಿಗದಿಗಿಂತ ಮುಂಚಿತವಾಗಿಯೇ ಗೆಲುವು ಸಾಧಿಸಲಿದೆ ಎಂದು ಅಂದಾಜಿಸಲಾಗಿತ್ತು. 7ನೇ ಓವರ್‌ನಲ್ಲಿ ಮತ್ತೆ ದಾಳಿಗಿಳಿದ ಭುವನೇಶ್ವರ್‌ ಕುಮಾರ್‌ ಮತ್ತೊಂದು ವಿಕೆಟ್‌ ಉರುಳಿಸಿ 5 ವಿಕೆಟ್‌ ಸಾಧನೆ ಮಾಡಿದರು. ತಮ್ಮ ನಾಲ್ಕು ಓವರ್‌ ಕೋಟಾದಲ್ಲಿ 1 ಮೇಡನ್‌ನೊಂದಿಗೆ 4 ರನ್‌ ನೀಡಿ 5 ವಿಕೆಟ್‌ ಉರುಳಿಸಿದ್ದರು. ಈ ಹಂತದಲ್ಲಿ ಜೊತೆಯಾದ ಇಬ್ರಾಹಿಂ ಜದ್ರಾನ್‌ ಹಾಗೂ ರಶೀದ್‌ ಖಾನ್ ವಿಕೆಟ್‌ ಉರುಳುವುದನ್ನು ನಿಯಂತ್ರಣ ಮಾಡಿದರಾದರೂ, ಭಾರತದ ದೊಡ್ಡ ಗೆಲುವು ಇಲ್ಲಿ ಖಚಿತವಾಗಿತ್ತು. 14ನೇ ಓವರ್‌ ವೇಳೆಗ 7 ವಿಕೆಟ್‌ಗೆ 57 ರನ್‌ ಬಾರಿಸಿದ್ದ ಅಫ್ಘಾನಿಸ್ತಾನ ತಂಡಕ್ಕೆ ಮುಜೀಬ್‌ ಕೆಲವೊಂದು ಬೌಂಡರಿ, ಸಿಕ್ಸರ್‌ಗಳನ್ನು ಬಾರಿಸುವ ಮೂಲಕ ತಂಡದ ಮೊತ್ತವನ್ನು ಏರಿಸಿದರು. ಕೊನೆಗೆ ಭಾರತದ ಬೌಲಿಂಗ್‌ ದಾಳಿಗೆ ಅಫ್ಘಾನಿಸ್ತಾನ ಆಲೌಟ್‌ ಆಗದೇ ಉಳಿದಿದ್ದೇ ಸಾಧನೆ ಎನಿಸಿತು.

10 ವರ್ಷದಲ್ಲಿ ಮೊದಲ ಬಾರಿಗೆ ಒಂದು ತಿಂಗಳು ಬ್ಯಾಟ್‌ ಮುಟ್ಟಿರಲಿಲ್ಲ..! ವಿರಾಟ್ ಕೊಹ್ಲಿ ಹೀಗಂದಿದ್ದೇಕೆ?

ಭುವನೇಶ್ವರ್‌ ಕುಮಾರ್‌ ದಾಖಲೆ: ಭುವನೇಶ್ವರ್‌ ಕುಮಾರ್‌ ಟಿ20ಯಲ್ಲಿ 2ನೇ ಬಾರಿಗೆ ಐದು ವಿಕೆಟ್‌ ಸಾಧನೆ ಮಾಡಿದರು. 2018ರಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಜೊಹಾನ್ಸ್‌ಬರ್ಗ್‌ನಲ್ಲಿ 24 ರನ್‌ಗೆ 5 ವಿಕೆಟ್‌ ಸಾಧನೆ ಮಾಡಿದ್ದರು. ಅದಲ್ಲದೆ, ಟಿ20ಯಲ್ಲಿ ಭಾರತೀಯ ಬೌಲರ್‌ನ 3ನೇ ಶ್ರೇಷ್ಠ ನಿರ್ವಹಣೆ ಎನಿಸಿದೆ. ದೀಪಕ್‌ ಚಹರ್‌ (7 ರನ್‌ಗೆ 6 ವಿಕೆಟ್‌) ಹಾಗೂ ಯಜುವೇಂದ್ರ ಚಾಹಲ್‌ (25ರನ್‌ಗೆ 6 ವಿಕೆಟ್‌) ಮೇಲಿನ ಸ್ಥಾನದಲ್ಲಿದೆ. ಅದಲ್ಲದೆ, ಅಫ್ಘಾನಿಸ್ತಾನ ಒಂದೇ ಪಂದ್ಯದಲ್ಲಿ ಎದುರಾಳಿ ತಂಡಕ್ಕೆ ಶತಕ ಹಾಗೂ 5 ವಿಕೆಟ್‌ ಬಿಟ್ಟುಕೊಟ್ಟಿದ್ದು ಇದು ಮೊದಲ ಬಾರಿಯಾಗಿದೆ.