* ಏಷ್ಯಾಕಪ್ ಟೂರ್ನಿಯಲ್ಲಿ ಪಾಕಿಸ್ತಾನ ಎದುರು ಮುಗ್ಗರಿಸಿದ್ದ ಟೀಂ ಇಂಡಿಯಾ* ಸೂಪರ್ 4 ಹಂತದಲ್ಲಿ ಪಾಕ್ ಎದುರು ಮುಗ್ಗರಿಸಿದ್ದ ರೋಹಿತ್ ಶರ್ಮಾ ಪಡೆ* ಟೀಂ ಇಂಡಿಯಾ ಆಯ್ಕೆ ಸಮಿತಿಯ ಬಗ್ಗೆ ಟೀಕೆ ವ್ಯಕ್ತಪಡಿಸಿದ ಶೋಯೆಬ್‌ ಅಖ್ತರ್

ದುಬೈ(ಸೆ.06): ಏಷ್ಯಾಕಪ್‌ ಕ್ರಿಕೆಟ್‌ ಟೂರ್ನಿಯ ಸೂಪರ್ 4 ಹಂತದ ಪಂದ್ಯದಲ್ಲಿ ರೋಹಿತ್ ಶರ್ಮಾ ನೇತೃತ್ವದ ಟೀಂ ಇಂಡಿಯಾ, ಪಾಕಿಸ್ತಾನ ಎದುರು ಆಘಾತಕಾರಿ ಸೋಲು ಅನುಭವಿಸಿದೆ. ದುಬೈನಲ್ಲಿ ನಡೆದ ಹೈವೋಲ್ಟೇಜ್ ಪಂದ್ಯದಲ್ಲಿ ಇನ್ನೂ ಒಂದು ಎಸೆತ ಬಾಕಿ ಇರುವಂತೆಯೇ ಪಾಕಿಸ್ತಾನ ತಂಡವು 5 ವಿಕೆಟ್‌ಗಳ ಅಂತರ ರೋಚಕ ಜಯ ಸಾಧಿಸಿದೆ. ಕೆಲ ಬದಲಾವಣೆಗಳೊಂದಿಗೆ ಕಣಕ್ಕಿಳಿದಿದ್ದ ಟೀಂ ಇಂಡಿಯಾದ ಆಯ್ಕೆ ಬಗ್ಗೆ ಪಾಕಿಸ್ತಾನ ಮಾಜಿ ನಾಯಕ ಶೋಯೆಬ್ ಅಖ್ತರ್ ಟೀಕೆ ವ್ಯಕ್ತಪಡಿಸಿದ್ದಾರೆ.

ಏಷ್ಯಾಕಪ್ ಟೂರ್ನಿಯ ಮೊದಲ ಪಂದ್ಯದಲ್ಲಿ ಪಾಕಿಸ್ತಾನ ಎದುರು ಸ್ಟಾರ್ ವಿಕೆಟ್‌ ಕೀಪರ್ ರಿಷಭ್‌ ಪಂತ್‌ ಅವರಿಗೆ ಅವಕಾಶ ನೀಡಿರಲಿಲ್ಲ. ಆದರೆ ಹಾಂಕಾಂಗ್‌ ಎದುರು ಪಂತ್‌ಗೆ ಅವಕಾಶ ಸಿಕ್ಕಿತ್ತಾದರೂ ಬ್ಯಾಟಿಂಗ್ ಮಾಡುವ ಅವಕಾಶ ಸಿಕ್ಕಿರಲಿಲ್ಲ. ಆದರೆ ಪಾಕ್‌ ವಿರುದ್ದ ಆಲ್ರೌಂಡ್ ಪ್ರದರ್ಶನ ತೋರಿದ್ದ ಹಾರ್ದಿಕ್ ಪಾಂಡ್ಯ ಅವರಿಗೆ ಹಾಂಕಾಂಗ್ ಎದುರಿನ ಪಂದ್ಯದ ವೇಳೆ ವಿಶ್ರಾಂತಿ ನೀಡಲಾಗಿತ್ತು. ಹೀಗಾಗಿ ಹಲವು ಬದಲಾವಣೆಗಳನ್ನು ಟೀಂ ಇಂಡಿಯಾ ಮಾಡಿತ್ತು. 

ಇನ್ನು ಈ ಕುರಿತಂತೆ ತಮ್ಮದೇ ಯೂಟ್ಯೂಬ್ ಚಾನೆಲ್‌ನಲ್ಲಿ ಪ್ರತಿಕ್ರಿಯೆ ನೀಡಿರುವ ಶೋಯೆಬ್ ಅಖ್ತರ್, ಟೀಂ ಇಂಡಿಯಾ ಮುಂಬರುವ ಟೂರ್ನಿಯಲ್ಲಿ ಆಡುವ ಹನ್ನೊಂದರ ಬಳಗ ಹೇಗಿರಬೇಕು ಎಂದು ಮೊದಲೇ ತೀರ್ಮಾನಿಸಬೇಕು. ತಂಡದೊಳಗೆ ರಿಷಭ್‌ ಪಂತ್, ದಿನೇಶ್ ಕಾರ್ತಿಕ್‌, ದೀಪಕ್ ಹೂಡಾ ಅಥವಾ ರವಿ ಬಿಷ್ಣೋಯಿ ಇವರನ್ನು ಆಡುವ ಹನ್ನೊಂದರ ಬಳಗದಲ್ಲಿ ಯಾರು ಕಣಕ್ಕಿಳಿಯಬೇಕು ಎನ್ನುವುದನ್ನು ಮೊದಲು ತೀರ್ಮಾನಿಸಬೇಕು. ಆದರೆ ಭಾರತ ತಂಡವು ಯಾಕಿಷ್ಟು ಗೊಂದಲದಲ್ಲಿದೆ ಎಂದು ನನಗಂತು ತಿಳಿಯುತ್ತಿಲ್ಲ ಎಂದು ಅಖ್ತರ್‌ ಅಭಿಪ್ರಾಯಪಟ್ಟಿದ್ದಾರೆ.

Asia Cup 2022: ಲಂಕಾ ಎದುರಿನ ಪಂದ್ಯಕ್ಕೆ ಭಾರತ ಸಂಭಾವ್ಯ ತಂಡ: ಸ್ಟಾರ್ ಆಟಗಾರನ ಕೈಬಿಡುತ್ತಾ ಟೀಂ ಇಂಡಿಯಾ?

ರೋಹಿತ್ ಶರ್ಮಾ ನೇತೃತ್ವದ ಟೀಂ ಇಂಡಿಯಾ ಇಂದು ಏಷ್ಯಾಕಪ್ ಟೂರ್ನಿಯ ಸೂಪರ್ 4 ಹಂತದ ಪಂದ್ಯದಲ್ಲಿಂದು ಶ್ರೀಲಂಕಾ ತಂಡವನ್ನು ಎದುರಿಸಲಿದೆ. ಭಾರತ ತಂಡವು ಏಷ್ಯಾಕಪ್‌ ಫೈನಲ್‌ ಪ್ರವೇಶಿಸಬೇಕಿದ್ದರೇ ಈ ಪಂದ್ಯವನ್ನು ಗೆಲ್ಲಲೇಬೇಕಾದ ಒತ್ತಡಕ್ಕೆ ಸಿಲುಕಿದೆ. ಇದಾದ ಬಳಿಕ ಆಫ್ಘಾನಿಸ್ತಾನ ವಿರುದ್ದ ಗೆದ್ದರಷ್ಟೇ ಟೀಂ ಇಂಡಿಯಾ ಏಷ್ಯಾಕಪ್ ಫೈನಲ್‌ ಪ್ರವೇಶಿಸಲಿದೆ.

ಭಾರತ ಕ್ರಿಕೆಟ್‌ ತಂಡವು ಏಷ್ಯಾಕಪ್ ಟೂರ್ನಿಯ ಗ್ರೂಪ್‌ ಹಂತದ ಪಂದ್ಯದಲ್ಲಿ ಪಾಕಿಸ್ತಾನ ಹಾಗೂ ಹಾಂಕಾಂಗ್ ಎದುರು ಗೆಲುವು ಸಾಧಿಸಿತ್ತು. ಆದರೆ ಸೂಪರ್ 4 ಹಂತದಲ್ಲಿ ಪಾಕಿಸ್ತಾನ ಎದುರು ಸೋಲು ಅನುಭವಿಸುವ ಮೂಲಕ ಕೊಂಚ ಒತ್ತಡಕ್ಕೆ ಸಿಲುಕಿದೆ.