ಏಷ್ಯಾಕಪ್ ಟೂರ್ನಿಯಲ್ಲಿಂದು ಬಾಂಗ್ಲಾದೇಶ-ಆಫ್ಘಾನಿಸ್ತಾನ ಫೈಟ್ಶಾರ್ಜಾ ಮೈದಾನದಲ್ಲಿ ನಡೆಯಲಿರುವ ಪಂದ್ಯಆಫ್ಘನ್‌ ಸತತ 2ನೇ ಗೆಲುವಿನೊಂದಿಗೆ ಸೂಪರ್‌ 4 ಪ್ರವೇಶಿಸುವ ನಿರೀಕ್ಷೆಯಲ್ಲಿದೆ

ಶಾರ್ಜಾ(ಆ.30): 2022ರ ಏಷ್ಯಾಕಪ್‌ ಟಿ20 ಟೂರ್ನಿಯ ಮಂಗಳವಾರದ ಪಂದ್ಯದಲ್ಲಿ ಆಫ್ಘಾನಿಸ್ತಾನ ಹಾಗೂ ಬಾಂಗ್ಲಾದೇಶ ತಂಡಗಳು ಮುಖಾಮುಖಿಯಾಗಲಿವೆ. ಆಫ್ಘನ್‌ ಸತತ 2ನೇ ಗೆಲುವಿನೊಂದಿಗೆ ಸೂಪರ್‌ 4 ಪ್ರವೇಶಿಸುವ ನಿರೀಕ್ಷೆಯಲ್ಲಿದ್ದರೆ, ಬಾಂಗ್ಲಾದೇಶ ಶುಭಾರಂಭ ಮಾಡುವ ತವಕದಲ್ಲಿದೆ.

ಭಾನುವಾರ ನಡೆದಿದ್ದ ಉದ್ಘಾಟನಾ ಪಂದ್ಯದಲ್ಲಿ ಆಫ್ಘನ್‌, ಶ್ರೀಲಂಕಾ ವಿರುದ್ಧ ಅಧಿಕಾರಯುತ ಗೆಲುವು ಸಾಧಿಸಿತ್ತು. ಬೌಲಿಂಗ್‌ ಜೊತೆ ಬ್ಯಾಟಿಂಗ್‌ನಲ್ಲೂ ಪ್ರಾಬಲ್ಯ ಸಾಧಿಸಿದ್ದ ಆಫ್ಘನ್‌ ಈ ಮೂಲಕ ಇತರೆ ತಂಡಗಳಿಗೆ ಎಚ್ಚರಿಕೆಯನ್ನೂ ನೀಡಿತ್ತು. ಲಂಕಾವನ್ನು ಕೇವಲ 105ಕ್ಕೆ ನಿಯಂತ್ರಿಸಿದ್ದ ತಂಡ ಬಳಿಕ 10.1 ಓವರಲ್ಲಿ ಗುರಿ ಬೆನ್ನತ್ತಿ ಭರ್ಜರಿ ಜಯಗಳಿಸಿತ್ತು. ತಂಡ ಮತ್ತೊಂದು ಅಭೂವಪೂರ್ವ ಪ್ರದರ್ಶನ ನೀಡುವ ತವಕದಲ್ಲಿದ್ದು, ‘ಬಿ’ ಗುಂಪಿನಲ್ಲಿ ಅಜೇಯವಾಗಿಯೇ ಸೂಪರ್‌ 4 ಹಂತ ಪ್ರವೇಶಿಸುವ ಕಾತರದಲ್ಲಿದೆ. 

ಉದ್ಘಾಟನಾ ಪಂದ್ಯದಲ್ಲಿ ಶ್ರೀಲಂಕಾ ಕ್ರಿಕೆಟ್ ತಂಡವು ಒಂದು ಹಂತದಲ್ಲಿ ಕೇವಲ 75 ರನ್‌ಗಳಿಗೆ 9 ವಿಕೆಟ್ ಕಳೆದುಕೊಂಡಿತ್ತು. ಹೀಗಿದ್ದೂ ತಂಡದ ತಾರಾ ಲೆಗ್‌ಸ್ಪಿನ್ನರ್ ಎನಿಸಿಕೊಂಡಿರುವ ರಶೀದ್ ಖಾನ್, ಒಂದೇ ಒಂದು ವಿಕೆಟ್ ಕಬಳಿಸಲು ಯಶಸ್ವಿಯಾಗಿರಲಿಲ್ಲ. ಬಾಂಗ್ಲಾದೇಶ ಎದುರು ರಶೀದ್ ಖಾನ್ ಯಾವ ರೀತಿ ಪ್ರದರ್ಶನ ತೋರುತ್ತಾರೆ ಎನ್ನುವ ಕುತೂಹಲ ಜೋರಾಗಿದೆ. ಇನ್ನು ಸಾಧಾರಣ ಗುರಿ ಬೆನ್ನತ್ತಿದ ಆಫ್ಘಾನಿಸ್ತಾನ ತಂಡಕ್ಕೆ ಆರಂಭಿಕ ಬ್ಯಾಟರ್‌ಗಳಿಬ್ಬರು ಪವರ್‌ ಪ್ಲೇ ಓವರ್‌ಗಳಲ್ಲೇ 83 ರನ್‌ಗಳನ್ನು ಚಚ್ಚುವ ಮೂಲಕ ಲಂಕಾ ಎದುರು ಸುಲಭ ಗೆಲುವು ಸಾಧಿಸುವಲ್ಲಿ ಪ್ರಮುಖ ಪಾತ್ರ ವಹಿಸಿದರು.

ಬದ್ಧವೈರಿ ಪಾಕಿಸ್ತಾನ ಮಣಿಸಿದ ಟೀಂ ಇಂಡಿಯಾ, ಪಾಂಡ್ಯ ಸಿಕ್ಸರ್‌ಗೆ ಕೊನೆಯ ಓವರ್‌ನಲ್ಲಿ ರೋಚಕ ಗೆಲುವು!

ಇನ್ನೊಂದೆಡೆ ಇತ್ತೀಚೆಗೆ ಜಿಂಬಾಬ್ವೆ ವಿರುದ್ಧ ಟಿ20 ಸರಣಿ ಸೋತಿದ್ದ ಬಾಂಗ್ಲಾ ಟೂರ್ನಿಯಲ್ಲಿ ಶುಭಾರಂಭದ ನಿರೀಕ್ಷೆಯಲ್ಲಿದ್ದು, ಆಫ್ಘನ್‌ ಓಟಕ್ಕೆ ಬ್ರೇಕ್‌ ಹಾಕಿದರೆ ಮಾತ್ರ ಗೆಲುವು ದಕ್ಕಲಿದೆ. ಬಾಂಗ್ಲಾದೇಶ ಕ್ರಿಕೆಟ್ ತಂಡವು ಇತ್ತೀಚಿಗಿನ ದಿನಗಳಲ್ಲಿ ಏಕದಿನ ಕ್ರಿಕೆಟ್‌ನಲ್ಲಿ ಸಿಕ್ಕಷ್ಟು ಯಶಸ್ಸು ಟಿ20 ಕ್ರಿಕೆಟ್‌ನಲ್ಲಿ ಸಿಕ್ಕಿಲ್ಲ. ತಂಡದ ಅನುಭವಿ ತಾರಾ ಆಟಗಾರರಾದ ಶಕೀಬ್ ಅಲ್ ಹಸನ್, ಮುಷ್ಪಿಕುರ್ ರಹೀಂ, ಮೊಹಮ್ಮದುಲ್ಲಾ ಅವರಂತ ಆಟಗಾರರು ತಮ್ಮ ಜವಾಬ್ದಾರಿ ಅರಿತು ಬ್ಯಾಟ್ ಬೀಸಿದರೇ ಆಫ್ಘಾನ್‌ ಎದುರು ಗೆಲುವು ಸಾಧಿಸುವುದು ಕಷ್ಟವೇನಲ್ಲ. ಆಫ್ಘಾನ್‌ ಸ್ಪೋಟಕ ಬ್ಯಾಟರ್‌ಗಳನ್ನು ಮುಷ್ತಾಫಿಜುರ್ ರೆಹಮಾನ್‌, ಶಕೀಬ್ ಅಲ್ ಹಸನ್, ಮೊಹಮ್ಮದ್ ಸೈಫುದ್ದೀನ್ ಅವರಂತ ಬೌಲರ್‌ಗಳು ಆರಂಭದಲ್ಲೇ ವಿಕೆಟ್ ಕಬಳಿಸಬೇಕಿದೆ.

ಸಂಭಾವ್ಯ ತಂಡ ಹೀಗಿದೆ ನೋಡಿ

ಬಾಂಗ್ಲಾದೇಶ ಕ್ರಿಕೆಟ್ ತಂಡ

ಮೊಹಮ್ಮದ್ ನಯೀಂ, ಅನ್ಮುಲ್ ಹಕ್, ಶಕೀಬ್ ಅಲ್ ಹಸನ್(ನಾಯಕ), ಅಫಿಫ್ ಹೊಸೈನ್, ಮುಷ್ತಾಫಿಜುರ್ ರಹೀಂ(ವಿಕೆಟ್ ಕೀಪರ್), ಮೊಹಮ್ಮದುಲ್ಲಾ. ಶಬ್ಬೀರ್ ರೆಹಮಾನ್, ಮೆಹದಿ ಹಸನ್, ಮೊಹಮ್ಮದ್ ಸೈಫುದ್ದೀನ್, ನಸುಮ್‌ ಅಹಮದ್, ಮುಷ್ತಾಫಿಜುರ್ ರೆಹಮಾನ್.

ಆಫ್ಘಾನಿಸ್ತಾನ ಕ್ರಿಕೆಟ್ ತಂಡ

ಹಜರುತ್ತುಲ್ಲಾ ಝಝೈ, ರೆಹಮತುಲ್ಲಾ ಗುರ್ಬಾಜ್(ವಿಕೆಟ್ ಕೀಪರ್), ಇಬ್ರಾಹಿಂ ಜದ್ರಾನ್, ನಜೀಬುಲ್ಲಾ ಜದ್ರಾನ್, ಕರೀಂ ಜನ್ನತ್, ಮೊಹಮ್ಮದ್ ನಬಿ (ನಾಯಕ), ರಶೀದ್ ಖಾನ್, ಅಜಮತುಲ್ಲಾ ಒಮರಝೈ, ನವೀನ್ ಉಲ್ ಹಕ್, ಮಜೀಬ್‌ ಉರ್ ರೆಹಮನ್, ಫಜಲ್‌ಹಕ್ ಫಾರೂಕಿ.

ಪಂದ್ಯ: ಸಂಜೆ 7.30ಕ್ಕೆ
ನೇರ ಪ್ರಸಾರ: ಸ್ಟಾರ್‌ ಸ್ಪೋರ್ಟ್ಸ್‌