* ಆಶಿಶ್ ನೆಹ್ರಾ ಮಾರ್ಗದರ್ಶನದಲ್ಲಿ ಗುಜರಾತ್ ಟೈಟಾನ್ಸ್ ಚಾಂಪಿಯನ್* ಐಪಿಎಲ್ ಟ್ರೋಫಿ ಗೆದ್ದ ಮೊದಲ ಭಾರತೀಯ ಕೋಚ್ ಆಶಿಶ್ ನೆಹ್ರಾ* ಆಶಿಶ್ ನೆಹ್ರಾ ಐಪಿಎಲ್‌ನ ಬೆಸ್ಟ್‌ ಕೋಚ್ ಎಂದ ಗ್ಯಾರಿ ಕರ್ಸ್ಟನ್‌

ನವದೆಹಲಿ(ಜೂ.03): 15ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ (Indian Premier League) ಟೂರ್ನಿಯ ಫೈನಲ್‌ನಲ್ಲಿ ರಾಜಸ್ಥಾನ ರಾಯಲ್ಸ್ (Rajasthan Royals) ತಂಡವನ್ನು ಬಗ್ಗುಬಡಿದು ಗುಜರಾತ್ ಟೈಟಾನ್ಸ್ (Gujarat Titans) ಚಾಂಪಿಯನ್ ಆಗಿ ಹೊರಹೊಮ್ಮಿದೆ. ಹಾರ್ದಿಕ್ ಪಾಂಡ್ಯ (Hardik Pandya) ನೇತೃತ್ವದ ಗುಜರಾತ್ ಟೈಟಾನ್ಸ್‌ ತಂಡವು ಚೊಚ್ಚಲ ಪ್ರಯತ್ನದಲ್ಲೇ ಚಾಂಪಿಯನ್ ಪಟ್ಟ ಅಲಂಕರಿಸುವಲ್ಲಿ ಯಶಸ್ವಿಯಾಗಿದೆ. ಈ ಗುಜರಾತ್ ಟೈಟಾನ್ಸ್‌ ತಂಡದ ಯಶಸ್ಸಿನ ಹಿಂದೆ ಗ್ಯಾರಿ ಕರ್ಸ್ಟನ್ ಹಾಗೂ ಆಶಿಶ್ ನೆಹ್ರಾ ಅವರ 'ಕೈವಾಡ'ವಿದೆ. ಇದೀಗ ಗ್ಯಾರಿ ಕರ್ಸ್ಟನ್‌, ಆಶಿಶ್ ನೆಹ್ರಾ ಅವರ ಕೋಚ್ ಕೌಶಲ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಗುಜರಾತ್ ಟೈಟಾನ್ಸ್ ಚಾಂಪಿಯನ್ ಆಗುತ್ತಿದ್ದಂತೆಯೇ, 14 ವರ್ಷಗಳ ಸುದೀರ್ಘ ಇತಿಹಾಸವಿರುವ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಟ್ರೋಫಿ ಗೆದ್ದ ಮೊದಲ ಭಾರತೀಯ ಕೋಚ್ ಎನ್ನುವ ಕೀರ್ತಿಗೆ ಆಶಿಶ್ ನೆಹ್ರಾ ಪಾತ್ರರಾಗಿದ್ದರಾರೆ. ಆಶಿಶ್ ನೆಹ್ರಾ (Ashish Nehra) ಕೋಚ್ ಆಗಿ ಅವರ ತಂತ್ರಗಾರಿಗಳು ಹೇಗಿದ್ದವು ಎನ್ನುವುದನ್ನು ಗುಜರಾತ್ ಟೈಟಾನ್ಸ್ ತಂಡದ ಮೆಂಟರ್ ಗ್ಯಾರಿ ಕರ್ಸ್ಟನ್‌ ಹೊರಗೆಡವಿದ್ದಾರೆ. ಸಂಕಷ್ಟದ ಸಂದರ್ಭದಲ್ಲಿ ಆಶಿಶ್ ನೆಹ್ರಾ ಹೆಣೆಯುವ ತಂತ್ರಗಾರಿಕೆಯ ಬಗ್ಗೆ ಗ್ಯಾರಿ ಕರ್ಸ್ಟನ್ (Gary Kirsten) ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. 

ಆಶಿಶ್ ನೆಹ್ರಾ ಯಾವಾಗಲೂ ತಮ್ಮ ತಂಡದ ಆಟಗಾರರನ್ನು ವಿವಿಧ ಆಯ್ಕೆಯ ರೂಪದಲ್ಲಿ ಬಳಸಿಕೊಳ್ಳಲು ಬಯಸುತ್ತಾರೆ. ಐಪಿಎಲ್‌ (IPL) ಟೂರ್ನಿಯಲ್ಲಿ ನಿರ್ದಿಷ್ಟವಾದ ಗೇಮ್ ಪ್ಲಾನ್ ಮಾಡಲು ಸಾಧ್ಯವಿಲ್ಲ. ಯಾವಾಗಲೂ ಐಪಿಎಲ್ ಪಂದ್ಯಗಳು ಹೊಸ ಸವಾಲುಗಳನ್ನು ಹಾಗೂ ಸಾಧ್ಯಾಸಾಧ್ಯತೆಗಳನ್ನು ಹುಟ್ಟುಹಾಕುತ್ತವೆ. ಹೀಗಾಗಿ ಸಂದರ್ಭಕ್ಕೆ ತಕ್ಕಂತೆ ಗೇಮ್ ಪ್ಲಾನ್ ರೂಪಿಸಬೇಕಾಗುತ್ತದೆ. ಆಟಗಾರರು ಪರಿಸ್ಥಿತಿಗೆ ತಕ್ಕಂತೆ ಹೊಂದಿಕೊಂಡು ಗೇಮ್ ಪ್ಲಾನ್ ಅರ್ಥಮಾಡಿಕೊಳ್ಳಬೇಕಾಗುತ್ತದೆ. ಕೋಚ್‌ಗಳಾಗಿ ನಾವು ಆಟಗಾರರು ಕೂಡಾ ಅದೇ ರೀತಿ ಆಲೋಚಿಸುವಂತೆ ಮಾಡಲು ಸಹಾಯ ಮಾಡುತ್ತಿದ್ದೆವು ಎಂದು ಗ್ಯಾರಿ ಕರ್ಸ್ಟನ್‌ ಖ್ಯಾತ ಕ್ರಿಕೆಟ್ ವೆಬ್‌ಸೈಟ್‌ Cricbuzz ಗೆ ತಿಳಿಸಿದ್ದಾರೆ. 

ಆಶಿಶ್ ನೆಹ್ರಾ ನನ್ನ ಆತ್ಮೀಯ ಸ್ನೇಹಿತ ಎಂದ ಗ್ಯಾರಿ ಕರ್ಸ್ಟನ್‌:

ದಕ್ಷಿಣ ಅಫ್ರಿಕಾದ ಮಾಜಿ ಕ್ರಿಕೆಟಿಗ ಗ್ಯಾರಿ ಕರ್ಸ್ಟನ್‌, ಟೀಂ ಇಂಡಿಯಾ ಹೆಡ್ ಕೋಚ್ ಆಗಿ ಭಾರತ ಐಸಿಸಿ ಏಕದಿನ ವಿಶ್ವಕಪ್‌ ಗೆಲ್ಲುವಲ್ಲಿ ಮಹತ್ವದ ಪಾತ್ರ ವಹಿಸಿದ್ದರು. 2011ರಲ್ಲಿ ನಡೆದ ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಮಹೇಂದ್ರ ಸಿಂಗ್ ಧೋನಿ ನೇತೃತ್ವದ ಟೀಂ ಇಂಡಿಯಾ (Team India) ಚಾಂಪಿಯನ್ ಆಗಿ ಹೊರಹೊಮ್ಮಿತ್ತು. ಇನ್ನು ಆಶಿಶ್ ನೆಹ್ರಾ ಹಾಗೂ ಗ್ಯಾರಿ ಕರ್ಸ್ಟನ್‌ ಜೋಡಿ ಒಟ್ಟಾಗಿ ಈ ಹಿಂದೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಕೋಚ್ ಆಗಿಯೂ ಕಾರ್ಯ ನಿರ್ವಹಿಸಿತ್ತು. 

IPL 2022 Champion ಗುಜರಾತ್ ಟೈಟಾನ್ಸ್‌ ಭರ್ಜರಿ ರೋಡ್‌ ಶೋ..!

ಆಶಿಶ್ ನೆಹ್ರಾ ನನ್ನ ಆತ್ಮೀಯ ಸ್ನೇಹಿತರಲ್ಲಿ ಒಬ್ಬರು. ನಾವಿಬ್ಬರು ಒಟ್ಟಾಗಿ ಸಾಕಷ್ಟು ದೂರ ಪಯಣ ನಡೆಸಿದ್ದೇವೆ. ಓರ್ವ ಆಟಗಾರನಾಗಿ ನಾನು, ಆಶಿಶ್ ನೆಹ್ರಾ ಅವರಲ್ಲಿರುವ ವೃತ್ತಿಪರತೆ ಹಾಗೂ ಕ್ರೀಡೆಯನ್ನು ಅರ್ಥಮಾಡಿಕೊಳ್ಳುವ ರೀತಿ ಹಾಗೂ ಆಟಗಾರರ ಮೇಲಿಡುವ ನಂಬಿಕೆಯನ್ನು ನಾನು ಇಷ್ಟಪಡುತ್ತೇನೆ. ತಮ್ಮ ಹೃದಯದಿಂದ ಅವರು ಕೋಚ್ ಮಾಡುತ್ತಾರೆ ಹಾಗೂ ಆಟಗಾರರು ತಂಡಕ್ಕೆ ಹೇಗೆ ನೆರವಾಗಬಲ್ಲರು ಎನ್ನುವುದನ್ನು ಸದಾ ಚಿಂತಿಸುತ್ತಿರುತ್ತಾರೆ. ತಾಂತ್ರಿಕವಾಗಿ ಹೇಳಬೇಕೆಂದರೆ ಅವರೊಬ್ಬ ಐಪಿಎಲ್‌ನ ಅತ್ಯುತ್ತಮ ಕೋಚ್. ಆಟಗಾರರು ಉತ್ತಮ ಪ್ರದರ್ಶನ ತೋರುವಂತೆ ಮಾಡಲು ನೆಹ್ರಾ ಸದಾ ಚಿಂತಿಸುತ್ತಿರುತ್ತಾರೆ ಎಂದು ಗ್ಯಾರಿ ಕರ್ಸ್ಟನ್‌ ಹೇಳಿದ್ದಾರೆ.