* ಬ್ರಿಸ್ಬೇನ್‌ನ ಗಾಬಾ ಟೆಸ್ಟ್ ಪಂದ್ಯದಲ್ಲಿ ಭರ್ಜರಿ ಗೆಲುವು ಸಾಧಿಸಿದ ಆಸ್ಟ್ರೇಲಿಯಾ* ಪ್ಯಾಟ್ ಕಮಿನ್ಸ್‌ ನಾಯಕತ್ವವನ್ನು ಗುಣಗಾನ ಮಾಡಿದ ಕ್ರಿಕೆಟ್ ಜಗತ್ತು* ಆ್ಯಷಸ್‌ ಟೆಸ್ಟ್‌ ಸರಣಿಯಲ್ಲಿ ಶುಭಾರಂಭ ಮಾಡಿದ ಆತಿಥೇಯ ಆಸ್ಟ್ರೇಲಿಯಾ 

ಬೆಂಗಳೂರು(ಡಿ.11): ಪ್ಯಾಟ್ ಕಮಿನ್ಸ್‌ (Pat Cummins) ನೇತೃತ್ವದ ಆಸ್ಟ್ರೇಲಿಯಾ ಕ್ರಿಕೆಟ್ ತಂಡವು (Australia Cricket Team) ಆ್ಯಷಸ್‌ ಟೆಸ್ಟ್‌ ಸರಣಿಯ (Ashes Test Series) ಮೊದಲ ಪಂದ್ಯದಲ್ಲಿ 9 ವಿಕೆಟ್‌ಗಳ ಭರ್ಜರಿ ಗೆಲುವು ಸಾಧಿಸುವ ಮೂಲಕ 5 ಪಂದ್ಯಗಳ ಸರಣಿಯಲ್ಲಿ ಶುಭಾರಂಭ ಮಾಡಿದೆ. ಆ್ಯಷಸ್‌ ಸರಣಿ ಆರಂಭಕ್ಕೆ ಕೆಲವೇ ದಿನಗಳ ಮುಂಚೆ ತಂಡದ ಚುಕ್ಕಾಣಿ ಹಿಡಿದಿರುವ ಪ್ಯಾಟ್‌ ಕಮಿನ್ಸ್ ಅವರ ಆಕ್ರಮಣಕಾರಿ ನಾಯಕತ್ವದ ಬಗ್ಗೆ ಇಡೀ ಕ್ರಿಕೆಟ್‌ ಜಗತ್ತು (Cricket World) ಸಾಮಾಜಿಕ ಜಾಲತಾಣಗಳ ಮೂಲಕ ಮೆಚ್ಚುಗೆ ವ್ಯಕ್ತಪಡಿಸಿದೆ.

ಕ್ರಿಕೆಟ್‌ ಇತಿಹಾಸದಲ್ಲಿ ಎರಡು ಸಾಂಪ್ರದಾಯಿಕ ಎದುರಾಳಿಗಳೆಂದು ಕರೆಯಲ್ಪಡುವ ಆಸ್ಟ್ರೇಲಿಯಾ ಹಾಗೂ ಇಂಗ್ಲೆಂಡ್ (Australia vs England) ನಡುವಿನ ಪ್ರತಿಷ್ಠಿತ ಆ್ಯಷಸ್‌ ಟೆಸ್ಟ್‌ ಸರಣಿಯ ಮೊದಲ ಪಂದ್ಯಕ್ಕೆ ಬ್ರಿಸ್ಬೇನ್‌ನ ಗಾಬಾ ಮೈದಾನ ಆತಿಥ್ಯವನ್ನು ವಹಿಸಿತ್ತು. ಪ್ಯಾಟ್‌ ಕಮಿನ್ಸ್‌ ನೇತೃತ್ವದ ಆತಿಥೇಯ ಆಸ್ಟ್ರೇಲಿಯಾ ತಂಡವು ಕೇವಲ ನಾಲ್ಕೇ ದಿನಗಳಲ್ಲಿ ಸುಲಭ ಗೆಲುವು ದಾಖಲಿಸುವ ಮೂಲಕ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ. ಗೆಲ್ಲಲು ಕೇವಲ 20 ರನ್‌ಗಳ ಸಾಧಾರಣ ಗುರಿ ಪಡೆದ ಆಸ್ಟ್ರೇಲಿಯಾ ತಂಡವು ಒಂದು ವಿಕೆಟ್‌ ಕಳೆದುಕೊಂಡು 9 ವಿಕೆಟ್‌ಗಳ ಭರ್ಜರಿ ಗೆಲುವು ಸಾಧಿಸಿದೆ. ಅನುಭವಿ ಸ್ಪಿನ್ನರ್ ನೇಥನ್ ಲಯನ್‌ (Nathan Lyon) ಮಿಂಚಿನ ಸ್ಪಿನ್ ದಾಳಿ ಹಾಗೂ ಕ್ಯಾಮರೋನ್ ಗ್ರೀನ್ ಅವರ ಮಾರಕ ದಾಳಿಯ ನೆರವಿನಿಂದ ಎರಡನೇ ಇನಿಂಗ್ಸ್‌ನಲ್ಲಿ ಇಂಗ್ಲೆಂಡ್ ತಂಡವನ್ನು ಕೇವಲ 297 ರನ್‌ಗಳಿಗೆ ಕಟ್ಟಿ ಹಾಕುವಲ್ಲಿ ಕಾಂಗರೂ ಪಡೆ ಯಶಸ್ವಿಯಾಯಿತು. ಇದಾದ ಬಳಿಕ ಅಲೆಕ್ಸ್‌ ಕ್ಯಾರಿ ವಿಕೆಟ್‌ ಕಳೆದುಕೊಂಡು ಅಸ್ಟ್ರೇಲಿಯಾ 5.1 ಓವರ್‌ಗಳಲ್ಲಿ ಸುಲಭ ಗೆಲುವು ದಾಖಲಿಸಿತು.

ಕಳೆದ 326 ದಿನಗಳಿಂದ ಟೆಸ್ಟ್ ವಿಕೆಟ್‌ ಕಬಳಿಸಲು ಹೆಣಗಾಡುತ್ತಿದ್ದ ಆಫ್‌ಸ್ಪಿನ್ನರ್ ನೇಥನ್‌ ಲಯನ್‌ ಕೊನೆಗೂ ವಿಕೆಟ್‌ ಬರ ನೀಗಿಸಿಕೊಂಡಿದ್ದಾರೆ. ಇದರ ಜತೆಗೆ 400 ವಿಕೆಟ್‌ ಕ್ಲಬ್‌ಗೆ ಸೇರ್ಪಡೆಯಾಗಿದ್ದಾರೆ. ಈ ಮೂಲಕ ಶೇನ್‌ ವಾರ್ನ್‌ (Shane Warne) ಹಾಗೂ ಗ್ಲೆನ್ ಮೆಗ್ರಾತ್ (Glenn Mcgrath) ಬಳಿಕ ಟೆಸ್ಟ್ ಕ್ರಿಕೆಟ್‌ನಲ್ಲಿ 400+ ವಿಕೆಟ್ ಕಬಳಿಸಿದ ಆಸ್ಟ್ರೇಲಿಯಾದ ಮೂರನೇ ಹಾಗೂ ಜಗತ್ತಿನ 17ನೇ ಬೌಲರ್‌ ಎನ್ನುವ ಕೀರ್ತಿಗೆ ನೇಥನ್ ಲಯನ್ ಯಶಸ್ವಿಯಾದರು.

ಪ್ಯಾಟ್ ಕಮಿನ್ಸ್‌ ಆಸ್ಟ್ರೇಲಿಯಾ ಟೆಸ್ಟ್ ತಂಡದ ನಾಯಕರಾದ ಬಳಿಕ ಮೊದಲ ಪಂದ್ಯದಲ್ಲೇ ತಂಡವನ್ನು ಗೆಲುವಿನತ್ತ ಮುನ್ನಡೆಸಿದ್ದಕ್ಕೆ ಕ್ರಿಕೆಟ್‌ ಜಗತ್ತಿನಿಂದ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ. ಹಾಲಿ ಹಾಗೂ ಮಾಜಿ ಕ್ರಿಕೆಟಿಗರು ಪ್ಯಾಟ್ ಕಮಿನ್ಸ್‌ ನಾಯಕತ್ವಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. 

Scroll to load tweet…

Ashes Test: ಇಂಗ್ಲೆಂಡ್ ಬಗ್ಗುಬಡಿದು ಶುಭಾರಂಭ ಮಾಡಿದ ಆತಿಥೇಯ ಆಸ್ಟ್ರೇಲಿಯಾ

ಈ ಕುರಿತಂತೆ ಟೀಂ ಇಂಡಿಯಾ ಕ್ರಿಕೆಟಿಗ ದಿನೇಶ್ ಕಾರ್ತಿಕ್‌ (Dinesh Karthik), ವೇಗಿ ಕಮಿನ್ಸ್‌ ನಾಯಕತ್ವದ ಗುಣಗಾನ ಮಾಡಿದ್ದಾರೆ. ನಾಯಕನಾಗಿ ಎಂತಹ ಒಳ್ಳೆಯ ಆರಂಭವಿದು. ಅಭಿನಂದನೆಗಳು ಕಮಿನ್ಸ್‌ ಅವರಿಗೆ. ಬಲಿಷ್ಠ ನಾಯಕರಾಗುವಂತೆ ಕಾಣುತ್ತಿದ್ದಾರೆ ಎಂದು ಟೀಂ ಇಂಡಿಯಾ ವಿಕೆಟ್‌ ಕೀಪರ್ ಟ್ವೀಟ್ ಮಾಡಿದ್ದಾರೆ.

Scroll to load tweet…

ಆಸ್ಟ್ರೇಲಿಯಾದ ದಿಗ್ಗಜ ಸ್ಪಿನ್ನರ್‌ ಶೇನ್‌ ವಾರ್ನ್‌ ಕೂಡಾ ಆಸ್ಟ್ರೇಲಿಯಾ ತಂಡದ ಪ್ರದರ್ಶನಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಆ್ಯಷಸ್‌ ಟೆಸ್ಟ್‌ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದ ಪ್ಯಾಟ್ ಕಮಿನ್ಸ್ ಮತ್ತು ಆಸ್ಟ್ರೇಲಿಯಾ ಕ್ರಿಕೆಟ್ ತಂಡಕ್ಕೆ ಅಭಿನಂದನೆಗಳು. ಅಡಿಲೇಡ್ ಟೆಸ್ಟ್‌ನಲ್ಲಿ ಮತ್ತೆ ಭೇಟಿಯಾಗೋಣ ಎಂದು ವಾರ್ನ್‌ ಟ್ವೀಟ್‌ ಮಾಡಿದ್ದಾರೆ. 

Scroll to load tweet…

ಇನ್ನು 400 ಟೆಸ್ಟ್‌ ವಿಕೆಟ್‌ ಕಬಳಿಸಿದ ನೇಥನ್ ಲಯನ್ ಅವರ ಸಾಧನೆಗೆ ಟೀಂ ಇಂಡಿಯಾ ಮಾಜಿ ಕ್ರಿಕೆಟಿಗರಾದ ವಿವಿಎಸ್ ಲಕ್ಷ್ಮಣ್ (VVS Laxman), ಪಾರ್ಥಿವ್ ಪಟೇಲ್ ಸೇರಿದಂತೆ ಹಲವು ಹಿರಿಯ ಕ್ರಿಕೆಟಿಗರು ಅಭಿನಂದನೆ ಸಲ್ಲಿಸಿದ್ದಾರೆ.

Scroll to load tweet…
Scroll to load tweet…

5 ಪಂದ್ಯಗಳ ಆ್ಯಷಸ್‌ ಸರಣಿಯಲ್ಲಿ ಇದೀಗ ಆತಿಥೇಯ ಆಸ್ಟ್ರೇಲಿಯಾ ತಂಡವು 1-0 ಮುನ್ನಡೆ ಸಾಧಿಸಿದ್ದು, ಎರಡನೇ ಟೆಸ್ಟ್‌ ಪಂದ್ಯವು ಡಿಸೆಂಬರ್ 16ರಿಂದ ಅಡಿಲೇಡ್‌ನ ಓವಲ್‌ ಮೈದಾನದಲ್ಲಿ ಆರಂಭವಾಗಲಿದೆ.