Asianet Suvarna News Asianet Suvarna News

Ashes Test: ಇಂಗ್ಲೆಂಡ್ ಬಗ್ಗುಬಡಿದು ಶುಭಾರಂಭ ಮಾಡಿದ ಆತಿಥೇಯ ಆಸ್ಟ್ರೇಲಿಯಾ

* ಆ್ಯಷಸ್‌ ಸರಣಿಯಲ್ಲಿ ಶುಭಾರಂಭ ಮಾಡಿದ ಆತಿಥೇಯ ಆಸ್ಟ್ರೇಲಿಯಾ

* ಗಾಬಾ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್ ಎದುರು ಆಸ್ಟ್ರೇಲಿಯಾಗೆ 9 ವಿಕೆಟ್‌ಗಳ ಜಯ

* 400 ಟೆಸ್ಟ್ ವಿಕೆಟ್‌ಗಳ ಗಡಿ ದಾಟಿದ ನೇಥನ್ ಲಯನ್

Ashes Test Australia Cricket Team Thrash England By 9 Wickets at Brisbane Gabba kvn
Author
Bengaluru, First Published Dec 11, 2021, 10:02 AM IST

ಬ್ರಿಸ್ಬೇನ್‌(ಡಿ.11): ಪ್ರವಾಸಿ ಇಂಗ್ಲೆಂಡ್ ಎದುರು ಬ್ಯಾಟಿಂಗ್ ಹಾಗೂ ಬೌಲಿಂಗ್‌ನಲ್ಲಿ ಸಂಘಟಿತ ಪ್ರದರ್ಶನ ತೋರಿದ ಆಸ್ಟ್ರೇಲಿಯಾ ತಂಡವು (Australia Cricket Team) ಗಾಬಾ ಟೆಸ್ಟ್‌ ಪಂದ್ಯದಲ್ಲಿ 9  ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿದೆ. ಇದರೊಂದಿಗೆ 5 ಪಂದ್ಯಗಳ ಪ್ರತಿಷ್ಠಿತ ಆ್ಯಷಸ್‌ ಸರಣಿಯಲ್ಲಿ (Ashes Test Series) ಆತಿಥೇಯ ಆಸ್ಟ್ರೇಲಿಯಾ ತಂಡವು 1-0 ಮುನ್ನಡೆ ಸಾಧಿಸಿದೆ. ಮೊದಲ ಇನಿಂಗ್ಸ್‌ನಲ್ಲಿ ಸ್ಪೋಟಕ ಶತಕ ಬಾರಿಸಿದ್ದ ಟ್ರಾವಿಸ್ ಹೆಡ್‌ (Travis Head) ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾಗಿದ್ದಾರೆ.

ಇಲ್ಲಿನ ಗಾಬಾ ಮೈದಾನದಲ್ಲಿ 58 ರನ್‌ಗಳ ಹಿನ್ನೆಡೆಯೊಂದಿಗೆ ನಾಲ್ಕನೇ ದಿನದಾಟ ಆರಂಭಿಸಿದ್ದ ಪ್ರವಾಸಿ ಇಂಗ್ಲೆಂಡ್ ತಂಡಕ್ಕೆ ಆರಂಭದಲ್ಲೇ ಆಸೀಸ್ ಆಫ್‌ ಸ್ಪಿನ್ನರ್‌ ನೇಥನ್ ಲಯನ್‌ (Nathan Lyon) ಶಾಕ್‌ ನೀಡಿದರು. ಉತ್ತಮವಾಗಿ ಬ್ಯಾಟ್ ಬೀಸುತ್ತಿದ್ದ ಡೇವಿಡ್ ಮಲಾನ್ (Dawid Malan) ಹಾಗೂ ಜೋ ರೂಟ್‌ (Joe Root) ಜೋಡಿಯನ್ನು ಬೇರ್ಪಡಿಸುವಲ್ಲಿ ಲಯನ್ ಯಶಸ್ವಿಯಾದರು. ಮೂರನೇ ವಿಕೆಟ್‌ಗೆ ಈ ಜೋಡಿ 316 ಎಸೆತಗಳನ್ನು ಎದುರಿಸಿ 162 ರನ್‌ ಬಾರಿಸುವ ಮೂಲಕ ತಂಡಕ್ಕೆ ಆಸರೆಯಾಗಿತ್ತು. ಮಲಾನ್‌ 195 ಎಸೆತಗಳನ್ನು ಎದುರಿಸಿ 10 ಬೌಂಡರಿ ಸಹಿತ 82 ರನ್‌ ಬಾರಿಸಿ ಲಬುಶೆನ್‌ಗೆ ಕ್ಯಾಚಿತ್ತು ಪೆವಿಲಿಯನ್‌ ಸೇರಿದರು.

ಕೊನೆಗೂ 400ನೇ ವಿಕೆಟ್ ಕಬಳಿಸಿದ ನೇಥನ್ ಲಯನ್‌: ಶೇನ್‌ ವಾರ್ನ್‌ (Shane Warne) ಬಳಿಕ ಆಸ್ಟ್ರೇಲಿಯಾ ತಂಡದ ಪ್ರಮುಖ ಸ್ಪಿನ್ ಅಸ್ತ್ರವಾಗಿ ಗುರುತಿಸಿಕೊಂಡಿರುವ ಆಫ್ ಸ್ಪಿನ್ನರ್‌ ನೇಥನ್‌ ಲಯನ್‌ ಕೊನೆಗೂ 400 ವಿಕೆಟ್‌ ಗಡಿ ದಾಟುವಲ್ಲಿ ಯಶಸ್ವಿಯಾಗಿದ್ದಾರೆ. ಜನವರಿ 06, 2020ರಲ್ಲಿ 390ನೇ ವಿಕೆಟ್ ಕಬಳಿಸಿದ್ದ ಲಯನ್‌, ಬರೋಬ್ಬರಿ ಒಂದು ವರ್ಷ 13 ದಿನಗಳ ಬಳಿಕ ಅಂದರೆ ಜನವರಿ 19, 2021ರಲ್ಲಿ 399ನೇ ವಿಕೆಟ್ ಕಬಳಿಸಿದರು. ಇದಾಗಿ ಬರೋಬ್ಬರಿ 326 ದಿನಗಳ ಬಳಿಕ ಕೊನೆಗೂ 400ನೇ ವಿಕೆಟ್ ಕಬಳಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇದರೊಂದಿಗೆ ಟೆಸ್ಟ್ ಕ್ರಿಕೆಟ್‌ನಲ್ಲಿ 400 ವಿಕೆಟ್‌ ಕಬಳಿಸಿದ ಆಸ್ಟ್ರೇಲಿಯಾದ ಮೂರನೇ (ಮೊದಲು ಶೇನ್‌ ವಾರ್ನ್(708), ಗ್ಲೆನ್ ಮೆಗ್ರಾತ್(563)) ಹಾಗೂ ಒಟ್ಟಾರೆ 17ನೇ ಬೌಲರ್‌ ಎನ್ನುವ ಕೀರ್ತಿಗೆ ನೇಥನ್ ಲಯನ್ ಯಶಸ್ವಿಯಾಗಿದ್ದಾರೆ. ಗಾಬಾ ಟೆಸ್ಟ್ ಪಂದ್ಯದಲ್ಲಿ ಲಯನ್ 4 ವಿಕೆಟ್ ಕಬಳಿಸುವ ಮೂಲಕ ಆಸೀಸ್‌ ಸುಲಭ ಗೆಲುವು ಸಾಧಿಸಲು ನೆರವಾದರು.

Ashes 2021 : ವರ್ಷದಲ್ಲಿ ಇಂಗ್ಲೆಂಡ್ ಪರವಾಗಿ ಗರಿಷ್ಠ ರನ್ ಬಾರಿಸಿದ ಬ್ಯಾಟ್ಸ್ ಮನ್ ಎನಿಸಿದ ರೂಟ್!

ಕೈಕೊಟ್ಟ ಮಧ್ಯಮ ಕ್ರಮಾಂಕ: ಎರಡನೇ ಇನಿಂಗ್ಸ್‌ನಲ್ಲಿ ಭಾರೀ ಹಿನ್ನೆಡೆಯೊಂದಿಗೆ ಬ್ಯಾಟಿಂಗ್ ಆರಂಭಿಸಿದ್ದ ಇಂಗ್ಲೆಂಡ್ ತಂಡಕ್ಕೆ ಮಲಾನ್ ಹಾಗೂ ನಾಯಕ ಜೋ ರೂಟ್ ಆಸರೆಯಾದರು. ಆದರೆ ಈ ಜೋಡಿ ಬೇರ್ಪಡುತ್ತಿದ್ದಂತೆಯೇ ಇಂಗ್ಲೆಂಡ್ ನಾಟಕೀಯ ಕುಸಿತ ಕಂಡಿತು. ಇಂಗ್ಲೆಂಡ್ ನಾಯಕ ಜೋ ರೂಟ್‌ 165 ಎಸೆತಗಳನ್ನು ಎದುರಿಸಿ 10 ಬೌಂಡರಿ ಸಹಿತ 89 ರನ್‌ ಬಾರಿಸಿ ಕ್ಯಾಮರೊನ್ ಗ್ರೀನ್‌ಗೆ ವಿಕೆಟ್‌ ಒಪ್ಪಿಸಿದರು. ಇನ್ನು ಓಲಿ ಪೋಪ್ ಹಾಗೂ ಬೆನ್ ಸ್ಟೋಕ್ಸ್ (Ben Stokes) ಹಾಗೂ ಜೋಸ್ ಬಟ್ಲರ್ (Jos Buttler) ಅವರನ್ನು ಹೆಚ್ಚುಹೊತ್ತು ಕ್ರೀಸ್‌ನಲ್ಲಿರುವ ಆಸೀಸ್‌ ಬೌಲರ್‌ಗಳು ಅವಕಾಶ ನೀಡಲಿಲ್ಲ. ಓಲಿ ಪೋಪ್ 4 ರನ್‌ ಬಾರಿಸಿ ಲಯನ್‌ಗೆ ಎರಡನೇ ಬಲಿಯಾದರು. ಬೆನ್‌ ಸ್ಟೋಕ್ಸ್‌(14) ಹಾಗೂ ಜೋಸ್ ಬಟ್ಲರ್‌(23) ತಂಡವನ್ನು ಸಂಕಷ್ಟದಿಂದ ಪಾರು ಮಾಡಲು ಸಾಧ್ಯವಾಗಲಿಲ್ಲ. ಅಂತಿಮವಾಗಿ ಎರಡನೇ ಇನಿಂಗ್ಸ್‌ನಲ್ಲಿ ಇಂಗ್ಲೆಂಡ್ 297 ರನ್ ಬಾರಿಸಿ ಆಲೌಟ್‌ ಆಯಿತು. ಈ ಮೂಲಕ ಗಾಬಾ ಟೆಸ್ಟ್ ಗೆಲ್ಲಲು ಆತಿಥೇಯ ಆಸ್ಟ್ರೇಲಿಯಾಗೆ ಕೇವಲ 20 ರನ್‌ಗಳ ಸುಲಭ ಗುರಿ ನೀಡಿತು.

ಇಂಗ್ಲೆಂಡ್ ನೀಡಿದ್ದ ಸಾಧಾರಣ ಗುರಿ ಬೆನ್ನತ್ತಿದ ಆಸ್ಟ್ರೇಲಿಯಾ ತಂಡವು ಅಲೆಕ್ಸ್ ಕ್ಯಾರಿ (Alex Carey) ವಿಕೆಟ್ ಕಳೆದುಕೊಂಡಿತಾದರೂ, ಕೇವಲ 5.1 ಓವರ್‌ನಲ್ಲಿ ಗೆಲುವಿನ ನಗೆ ಬೀರಿತು. ಈ ಮೂಲಕ ಗಾಬಾ ಟೆಸ್ಟ್‌ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡವು ಗೆಲುವಿನ ಹಳಿಗೆ ಮರಳುವಲ್ಲಿ ಯಶಸ್ವಿಯಾಯಿತು. ಆಸ್ಟ್ರೇಲಿಯಾ ತಂಡವು ಬ್ರಿಸ್ಬೇನ್‌ನ ಗಾಬಾ ಮೈದಾನದಲ್ಲಿ ಕಳೆದ 33 ಪಂದ್ಯಗಳ ಪೈಕಿ ಭಾರತ ವಿರುದ್ದ ಒಂದು ಪಂದ್ಯವನ್ನು ಮಾತ್ರ ಸೋತಿದ್ದು, ಉಳಿದ 25 ಪಂದ್ಯಗಳಲ್ಲಿ ಗೆಲುವು ಹಾಗೂ 7 ಪಂದ್ಯಗಳನ್ನು ಡ್ರಾ ಮಾಡಿಕೊಂಡಿದೆ.

Follow Us:
Download App:
  • android
  • ios