ಆ್ಯಶಸ್ ಸರಣಿಯ 4ನೇ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್ ತಂಡ ಆಸ್ಟ್ರೇಲಿಯಾ ವಿರುದ್ಧ 4 ವಿಕೆಟ್‌ಗಳ ಜಯ ಸಾಧಿಸಿದೆ. ಈ ಮೂಲಕ ಕಾಂಗರೂಗಳ ನಾಡಿನಲ್ಲಿ 15 ವರ್ಷಗಳ (5468 ದಿನ) ಬಳಿಕ ಟೆಸ್ಟ್ ಗೆಲುವು ದಾಖಲಿಸಿದ್ದು, ಸರಣಿ ವೈಟ್‌ವಾಶ್‌ನಿಂದ ಪಾರಾಗಿದೆ. ಕೇವಲ ಎರಡು ದಿನಗಳಲ್ಲಿ ಪಂದ್ಯ ಮುಕ್ತಾಯಗೊಂಡಿದೆ.

ಮೆಲ್ಬರ್ನ್‌: ಆಸ್ಟ್ರೇಲಿಯಾ ನೆಲದಲ್ಲಿ 15 ವರ್ಷಗಳ ಬಳಿಕ ಇಂಗ್ಲೆಂಡ್‌ ಟೆಸ್ಟ್‌ ಪಂದ್ಯವೊಂದನ್ನು ಗೆಲ್ಲಲು ಯಶಸ್ವಿಯಾಗಿದೆ. ಆಸ್ಟ್ರೇಲಿಯಾದಲ್ಲಿ ಆಡಿದ ಕಳೆದ 18 ಪಂದ್ಯಗಳಲ್ಲಿ ಗೆಲುವನ್ನೇ ಕಾಣದೆ ಹತಾಶೆಗೆ ಒಳಗಾಗಿದ್ದ ಇಂಗ್ಲೆಂಡ್‌, ಸದ್ಯ ಚಾಲ್ತಿಯಲ್ಲಿರುವ ಆ್ಯಶಸ್‌ ಸರಣಿಯ 4ನೇ ಪಂದ್ಯದಲ್ಲಿ 4 ವಿಕೆಟ್‌ ಜಯ ಸಾಧಿಸಿ ಕೊನೆಗೂ ನಿಟ್ಟುಸಿರು ಬಿಟ್ಟಿದೆ. ಕಾಂಗರೂಗಳ ನಾಡಲ್ಲಿ ಗೆಲುವಿಗಾಗಿ 5468 ದಿನಗಳ ಕಾಯುವಿಕೆ ಕೊನೆಗೊಂಡಿದೆ.

5 ಪಂದ್ಯಗಳ ಸರಣಿಯಲ್ಲಿ ಆಸ್ಟ್ರೇಲಿಯಾ 3-0 ಮುನ್ನಡೆ ಪಡೆದು, ಸರಣಿ ವಶಪಡಿಸಿಕೊಂಡ ಬಳಿಕ ಇಂಗ್ಲೆಂಡ್‌ ಮತ್ತಷ್ಟು ಒತ್ತಡಕ್ಕೆ ಸಿಲುಕಿತ್ತು. ಸರಣಿ ವೈಟ್‌ವಾಶ್‌ನಿಂದ ಪಾರಾಗುವ ಉದ್ದೇಶದಿಂದ 4ನೇ ಪಂದ್ಯಕ್ಕೆ ಕಾಲಿಟ್ಟ ಪ್ರವಾಸಿ ತಂಡ ಅತ್ಯುತ್ತಮ ಬೌಲಿಂಗ್‌ ಪ್ರದರ್ಶನದಿಂದ ಪಂದ್ಯ ತನ್ನದಾಗಿಸಿಕೊಂಡಿತು.

ಎರಡೇ ದಿನದಲ್ಲಿ ಮುಗಿದ ಪಂದ್ಯ: ಕ್ರಿಕೆಟ್‌ ಆಸ್ಟ್ರೇಲಿಯಾಗೆ ಮತ್ತೊಮ್ಮೆ ಭಾರೀ ನಷ್ಟ!

ಬಾಕ್ಸಿಂಗ್‌ ಡೇ ಟೆಸ್ಟ್‌ ಕೇವಲ ಎರಡೇ ದಿನದಲ್ಲಿ ಮುಕ್ತಾಯಗೊಂಡಿದ್ದರಿಂದ ಕ್ರಿಕೆಟ್‌ ಆಸ್ಟ್ರೇಲಿಯಾ (ಸಿಎ) ಭಾರೀ ಆರ್ಥಿಕ ನಷ್ಟ ಅನುಭವಿಸಲಿದೆ. ಪಂದ್ಯದ 5 ದಿನದಾಟದ ಟಿಕೆಟ್‌ಗಳು, ಪ್ರಾಯೋಜಕತ್ವ, ಮಾಧ್ಯಮ ಪ್ರಸಾರ ಹಕ್ಕಿನ ಪಾಲು ಹೀಗೆ ಸಿಎಗೆ ಅಂದಾಜು 3 ಮಿಲಿಯನ್‌ ಆಸ್ಟ್ರೇಲಿಯನ್‌ ಡಾಲರ್‌ (ಅಂದಾಜು 18 ಕೋಟಿ ರು.) ನಷ್ಟವಾಗಲಿದೆ ಎಂದು ವರದಿಯಾಗಿದೆ. ಈ ಸರಣಿಯಲ್ಲಿ ಕೇವಲ ಎರಡೇ ದಿನಕ್ಕೆ ಮುಕ್ತಾಯಗೊಂಡ 2ನೇ ಟೆಸ್ಟ್‌ ಇದು. ಪರ್ತ್‌ನಲ್ಲಿ ನಡೆದಿದ್ದ ಮೊದಲ ಟೆಸ್ಟ್‌ ಕೂಡ 2 ದಿನಕ್ಕೆ ಮುಗಿದಿತ್ತು. ಆಗ ಸಿಎ ತನಗೆ ಅಂದಾಜು 5 ಮಿಲಿಯನ್‌ ಆಸ್ಟ್ರೇಲಿಯನ್‌ ಡಾಲರ್‌ (ಅಂದಾಜು 30 ಕೋಟಿ ರು.) ನಷ್ಟವಾಗಲಿದೆ ಎಂದು ಹೇಳಿತ್ತು.

‘2 ದಿನಗಳಲ್ಲಿ ಪಂದ್ಯ ಮುಗಿಯುವುದು ಟೆಸ್ಟ್‌ ಕ್ರಿಕೆಟ್‌ನ ಭವಿಷ್ಯದ ದೃಷ್ಟಿಯಿಂದ ಒಳ್ಳೆಯ ಬೆಳವಣಿಗೆ ಅಲ್ಲ. ಮೆಲ್ಬರ್ನ್‌ ಪಂದ್ಯದ ಮೊದಲ ದಿನ 20 ವಿಕೆಟ್‌ ಪತನಗೊಂಡ ಬಳಿ, ನಿದ್ದೆ ಇಲ್ಲದ ರಾತ್ರಿ ಕಳೆದಿದ್ದೇನೆ’ ಎಂದು ಕ್ರಿಕೆಟ್‌ ಆಸ್ಟ್ರೇಲಿಯಾದ ಸಿಇಒ ಟಾಡ್‌ ಗ್ರೀನ್‌ಬರ್ಗ್‌ ಹೇಳಿದ್ದಾರೆ.

ಹೇಗಿತ್ತು ಬಾಕ್ಸಿಂಗ್ ಡೇ ಟೆಸ್ಟ್?

ಮೊದಲ ದಿನ 20 ವಿಕೆಟ್‌ ಪತನಗೊಂಡ ಬಳಿಕ ಆಸ್ಟ್ರೇಲಿಯಾ 2ನೇ ಇನ್ನಿಂಗ್ಸ್‌ ಆರಂಭಿಸಿ ವಿಕೆಟ್‌ ನಷ್ಟವಿಲ್ಲದೆ 4 ರನ್‌ ಗಳಿಸಿತ್ತು. 2ನೇ ದಿನವಾದ ಶನಿವಾರ, ಆ ಮೊತ್ತಕ್ಕೆ ಕೇವಲ 128 ರನ್‌ ಸೇರಿಸಲಷ್ಟೇ ಶಕ್ತವಾಯಿತು. ಟ್ರ್ಯಾವಿಸ್‌ ಹೆಡ್‌ 46, ಹಂಗಾಮಿ ನಾಯಕ ಸ್ಟೀವ್‌ ಸ್ಮಿತ್‌ ಔಟಾಗದೆ 24 ಹಾಗೂ ಕ್ಯಾಮರೂನ್‌ ಗ್ರೀನ್‌ 19 ರನ್‌ ಗಳಿಸಿದ್ದನ್ನು ಬಿಟ್ಟರೆ, ಉಳಿದವರ್‍ಯಾರೂ ಎರಡಂಕಿ ಮೊತ್ತ ತಲುಪಲಿಲ್ಲ. ಇಂಗ್ಲೆಂಡ್‌ ಪರ ಕಾರ್ಸ್‌ 4, ಸ್ಟೋಕ್ಸ್‌ 3, ಟಂಗ್‌ 2 ಹಾಗೂ ಆ್ಯಟ್ಕಿನ್ಸನ್‌ 1 ವಿಕೆಟ್‌ ಕಿತ್ತರು.

ಮೊದಲ ಇನ್ನಿಂಗ್ಸಲ್ಲಿ 42 ರನ್‌ ಮುನ್ನಡೆ ಪಡೆದಿದ್ದ ಆಸೀಸ್‌, ಇಂಗ್ಲೆಂಡ್‌ ಗೆಲುವಿಗೆ 175 ರನ್‌ ಗುರಿ ನಿಗದಿಪಡಿಸಿತು. ಜ್ಯಾಕ್‌ ಕ್ರಾಲಿ (37) ಹಾಗೂ ಬೆನ್‌ ಡಕೆಟ್‌ (34) ಮೊದಲ ವಿಕೆಟ್‌ಗೆ 51 ರನ್ ಜೊತೆಯಾಟವಾಗಿ ತಂಡಕ್ಕೆ ಉತ್ತಮ ಆರಂಭ ಒದಗಿಸಿದರು. ಆ ನಂತರ ಕೆಲ ವಿಕೆಟ್‌ಗಳನ್ನು ಕಬಳಿಸಲು ಆಸೀಸ್‌ ಬೌಲರ್‌ಗಳು ಸಫಲರಾದರೂ, ಪಂದ್ಯವನ್ನು ಉಳಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಜೇಕಬ್‌ ಬೆಥೆಲ್‌ 40, ಜೋ ರೂಟ್‌ 15, ಹ್ಯಾರಿ ಬ್ರೂಕ್‌ ಔಟಾಗದೆ 18 ರನ್‌ ಗಳಿಸಿ ತಂಡವನ್ನು ಗೆಲುವಿನ ದಡ ಸೇರಿಸಿದರು. ಇಂಗ್ಲೆಂಡ್‌ 6 ವಿಕೆಟ್‌ಗೆ 178 ರನ್‌ ಗಳಿಸಿತು. ಸರಣಿಯಲ್ಲಿ ಆಸೀಸ್‌ 3-1 ಮುನ್ನಡೆ ಹೊಂದಿದ್ದು, ಕೊನೆ ಪಂದ್ಯ ಜ.4ರಿಂದ ಸಿಡ್ನಿಯಲ್ಲಿ ನಡೆಯಲಿದೆ.

ಸ್ಕೋರ್‌: ಆಸ್ಟ್ರೇಲಿಯಾ 152 ಹಾಗೂ 132 (ಹೆಡ್‌ 46, ಸ್ಮಿತ್‌ 24*, ಕಾರ್ಸ್‌ 4-34), ಇಂಗ್ಲೆಂಡ್‌ 110 ಹಾಗೂ 178/6 (ಬೆಥೆಲ್‌ 40, ಕ್ರಾಲಿ 37, ಡಕೆಟ್‌ 34, ಬೋಲೆಂಡ್‌ 2-29, ಸ್ಟಾರ್ಕ್‌ 2-55, ರಿಚರ್ಡ್‌ಸನ್‌ 2-22)

5468 ದಿನಗಳ ಕಾಯುವಿಕೆ ಅಂತ್ಯ:

ಆಸ್ಟ್ರೇಲಿಯಾ ನೆಲದಲ್ಲಿ ಟೆಸ್ಟ್‌ ಗೆಲುವಿಗೆ ಇಂಗ್ಲೆಂಡ್‌ ಬರೋಬ್ಬರಿ 5468 ದಿನಗಳ ಕಾಲ ಕಾಯ್ದಿತ್ತು. 2010-11ರ ಪ್ರವಾಸದಲ್ಲಿ ಸಿಕ್ಕ ಗೆಲುವಿನ ಬಳಿಕ ಮತ್ತೊಂದು ಗೆಲುವಿಗೆ 2025ರ ವರೆಗೂ ಕಾಯಬೇಕಾಯಿತು.