ಆಶಸ್ ಸರಣಿಯ ಅಂತಿಮ ಟೆಸ್ಟ್‌ನಲ್ಲಿ, ಆರ್‌ಸಿಬಿ ಆಟಗಾರ ಜೇಕಬ್ ಬೆಥೆಲ್ ಅವರ ಚೊಚ್ಚಲ ಶತಕದ (142*) ನೆರವಿನಿಂದ ಇಂಗ್ಲೆಂಡ್ ಹೋರಾಟ ನಡೆಸುತ್ತಿದೆ. ನಾಲ್ಕನೇ ದಿನದಾಟದ ಅಂತ್ಯಕ್ಕೆ 302/8 ಸ್ಕೋರ್ ಮಾಡಿರುವ ಇಂಗ್ಲೆಂಡ್, 119 ರನ್‌ಗಳ ಅಲ್ಪ ಮುನ್ನಡೆ ಸಾಧಿಸಿದ್ದು, ಆಸ್ಟ್ರೇಲಿಯಾ ಗೆಲುವಿನ ಸನಿಹದಲ್ಲಿದೆ.

ಸಿಡ್ನಿ: ಆಸ್ಟ್ರೇಲಿಯಾ ಹಾಗೂ ಇಂಗ್ಲೆಂಡ್ ನಡುವಿನ ಆಶಸ್ ಟೆಸ್ಟ್ ಸರಣಿಯ ಐದನೇ ಹಾಗೂ ಕೊನೆಯ ಟೆಸ್ಟ್‌ ಪಂದ್ಯವು ರೋಚಕ ಘಟ್ಟದತ್ತ ಸಾಗುತ್ತಿದೆ. ಆರ್‌ಸಿಬಿ ಯುವ ಬ್ಯಾಟರ್ ಜೇಕಬ್ ಬೆಥೆಲ್ ಬಾರಿಸಿದ ಚೊಚ್ಚಲ ಟೆಸ್ಟ್ ಶತಕದ ನೆರವಿನಿಂದ ಇಂಗ್ಲೆಂಡ್ ತಂಡವು, ಆತಿಥೇಯ ಆಸ್ಟ್ರೇಲಿಯಾ ಎದುರು ಅಲ್ಪ ಮುನ್ನಡೆ ಸಾಧಿಸಿದ್ದು, ಕೊನೆಯ ದಿನದಾಟದ ಮೇಲೆ ಎಲ್ಲರ ಚಿತ್ತ ನೆಟ್ಟಿದೆ. ಸದ್ಯ ಇಂಗ್ಲೆಂಡ್ ತಂಡವು ನಾಲ್ಕನೇ ದಿನದಾಟದಂತ್ಯದ ವೇಳೆಗೆ 8 ವಿಕೆಟ್ ಕಳೆದುಕೊಂಡು 302 ರನ್ ಬಾರಿಸಿದ್ದು, 119 ರನ್‌ಗಳ ಮುನ್ನಡೆ ಸಾಧಿಸಿದೆ. ಜೇಕಬ್ ಬೆಥೆಲ್ 142 ಹಾಗೂ ಮ್ಯಾಥ್ಯೂ ಪಾಟ್ಸ್‌ 0 ಕೊನೆಯ ದಿನಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ.

ಸಿಡ್ನಿ ಟೆಸ್ಟ್ ಗೆಲುವಿನ ಹೊಸ್ತಿಲಲ್ಲಿ ಆಸ್ಟ್ರೇಲಿಯಾ

ಆಶಸ್ ಸರಣಿಯ ಅಂತಿಮ ಟೆಸ್ಟ್‌ನಲ್ಲಿ ಆಸ್ಟ್ರೇಲಿಯಾ ಗೆಲುವಿನ ಹೊಸ್ತಿಲಲ್ಲಿದೆ. 183 ರನ್‌ಗಳ ಮೊದಲ ಇನ್ನಿಂಗ್ಸ್ ಹಿನ್ನಡೆ ಅನುಭವಿಸಿದ ಇಂಗ್ಲೆಂಡ್, ನಾಲ್ಕನೇ ದಿನದಾಟದ ಅಂತ್ಯಕ್ಕೆ ಎಂಟು ವಿಕೆಟ್ ನಷ್ಟಕ್ಕೆ 302 ರನ್ ಗಳಿಸಿದೆ. ನಾಳೆ ಅಂತಿಮ ದಿನ ಸೋಲಿನಿಂದ ಪಾರಾಗಲು ಪವಾಡವೇ ನಡೆಯಬೇಕಿದೆ. ಎರಡನೇ ಇನ್ನಿಂಗ್ಸ್‌ನಲ್ಲಿ ಒಂದು ಹಂತದಲ್ಲಿ 219-3 ಎಂಬ ಬಲಿಷ್ಠ ಸ್ಥಿತಿಯಲ್ಲಿದ್ದ ಇಂಗ್ಲೆಂಡ್, ಮತ್ತೆ ದಿಢೀರ್ ಐದು ವಿಕೆಟ್‌ಗಳನ್ನು ಕಳೆದುಕೊಂಡು ನಾಟಕೀಯ ಕುಸಿತ ಕಂಡಿತು.

183 ರನ್‌ಗಳ ಬೃಹತ್ ಹಿನ್ನಡೆಯೊಂದಿಗೆ ಎರಡನೇ ಇನ್ನಿಂಗ್ಸ್ ಆರಂಭಿಸಿದ ಇಂಗ್ಲೆಂಡ್‌ಗೆ ಆರಂಭದಲ್ಲೇ ಆರಂಭಿಕ ಆಟಗಾರ ಜಾಕ್ ಕ್ರಾಲಿ (1) ವಿಕೆಟ್ ಕಳೆದುಕೊಂಡಿತು. ಆದರೆ, ಜೇಕಬ್ ಬೆಥೆಲ್ ಮತ್ತು ಬೆನ್ ಡಕೆಟ್ (42) ಇಂಗ್ಲೆಂಡ್‌ಗೆ ಆಸರೆಯಾದರು. ಬೆನ್ ಡಕೆಟ್ ಔಟಾದ ನಂತರ, ಮೊದಲ ಇನ್ನಿಂಗ್ಸ್‌ನಲ್ಲಿ ಶತಕ ಗಳಿಸಿದ್ದ ಜೋ ರೂಟ್ (6) ಕೂಡ ಬೋಲ್ಯಾಂಡ್ ಎಸೆತದಲ್ಲಿ ವಿಕೆಟ್ ಒಪ್ಪಿಸಿ ಪೆವಿಲಿಯನ್ ಹಾದಿ ಹಿಡಿದರು. ಆದರೆ ಹ್ಯಾರಿ ಬ್ರೂಕ್ ಮತ್ತು ಬೆಥೆಲ್ ಇಂಗ್ಲೆಂಡ್‌ಗೆ ಮುನ್ನಡೆ ತಂದುಕೊಟ್ಟರು.

Scroll to load tweet…

ಇವರಿಬ್ಬರು ಇಂಗ್ಲೆಂಡ್‌ಗೆ ಉತ್ತಮ ಮುನ್ನಡೆ ನೀಡುತ್ತಾರೆ ಎಂದು ನಿರೀಕ್ಷಿಸಿದ್ದಾಗ, ಬ್ಯೂ ವೆಬ್‌ಸ್ಟರ್ ಹ್ಯಾರಿ ಬ್ರೂಕ್ (42) ಅವರನ್ನು ಬಲಿಪಡೆಯುವ ಮೂಲಕ ಪೆವಿಲಿಯನ್ ಹಾದಿ ತೋರಿಸಿದರು. ನಂತರ ಕ್ರೀಸ್‌ಗೆ ಬಂದ ವಿಲ್ ಜಾಕ್ಸ್ (0) ದೊಡ್ಡ ಹೊಡೆತಕ್ಕೆ ಯತ್ನಿಸಿ ಅದೇ ಓವರ್‌ನಲ್ಲಿ ಔಟಾದರು. ಜೇಮಿ ಸ್ಮಿತ್ ಮತ್ತು ಬೆಥೆಲ್ ಇಂಗ್ಲೆಂಡ್‌ಗೆ ಆಸರೆಯಾದರೂ, ಸ್ಮಿತ್ (26) ರನೌಟ್ ಆಗುವುದರೊಂದಿಗೆ ಇಂಗ್ಲೆಂಡ್ ಮತ್ತೆ ಕುಸಿಯಿತು. ಸ್ಮಿತ್ ನಂತರ, ನಾಯಕ ಬೆನ್ ಸ್ಟೋಕ್ಸ್ (1) ಅವರನ್ನು ವೆಬ್‌ಸ್ಟರ್ ಎಸೆತದಲ್ಲಿ ಸ್ಲಿಪ್‌ನಲ್ಲಿ ಸ್ಮಿತ್ ಅದ್ಭುತ ಕ್ಯಾಚ್ ಮೂಲಕ ಔಟ್ ಮಾಡಿದರು.

ಬ್ರೈಡನ್ ಕಾರ್ಸ್ (16) ಕ್ರೀಸ್‌ನಲ್ಲಿ ನಿಲ್ಲಲು ಪ್ರಯತ್ನಿಸಿದರೂ, ಸ್ಕಾಟ್ ಬೋಲ್ಯಾಂಡ್ ಅವರನ್ನು ಔಟ್ ಮಾಡಿದರು. ಆಸ್ಟ್ರೇಲಿಯಾ ಪರ ಬ್ಯೂ ವೆಬ್‌ಸ್ಟರ್ ಮೂರು ಮತ್ತು ಮಿಚೆಲ್ ಸ್ಟಾರ್ಕ್ ಎರಡು ವಿಕೆಟ್ ಪಡೆದರು. ಇದಕ್ಕೂ ಮುನ್ನ, ಏಳು ವಿಕೆಟ್ ನಷ್ಟಕ್ಕೆ 518 ರನ್‌ಗಳಿಂದ ಬ್ಯಾಟಿಂಗ್ ಮುಂದುವರಿಸಿದ ಆಸ್ಟ್ರೇಲಿಯಾ 567 ರನ್‌ಗಳಿಗೆ ಆಲೌಟ್ ಆಯಿತು. ಸ್ಟೀವ್ ಸ್ಮಿತ್ 138 ರನ್ ಗಳಿಸಿದರೆ, ಬ್ಯೂ ವೆಬ್‌ಸ್ಟರ್ 71 ರನ್ ಗಳಿಸಿದರು. ಇಂಗ್ಲೆಂಡ್ ಪರ ಜೋಶ್ ಟಂಗ್ ಮತ್ತು ಬ್ರೈಡನ್ ಕಾರ್ಸ್ ತಲಾ ಮೂರು ವಿಕೆಟ್ ಪಡೆದರೆ, ಬೆನ್ ಸ್ಟೋಕ್ಸ್ ಎರಡು ವಿಕೆಟ್ ಪಡೆದರು.