ಸಿಡ್ನಿ ಟೆಸ್ಟ್‌ನಲ್ಲಿ ಜೋ ರೂಟ್ (160) ಭರ್ಜರಿ ಶತಕ ಸಿಡಿಸಿದ್ದಾರೆ. ಇದು ಅವರ 41ನೇ ಟೆಸ್ಟ್ ಶತಕವಾಗಿದ್ದು, ಈ ಮೂಲಕ ಅತಿ ಹೆಚ್ಚು ಶತಕ ಸಿಡಿಸಿದವರ ಪಟ್ಟಿಯಲ್ಲಿ ರಿಕಿ ಪಾಂಟಿಂಗ್ ದಾಖಲೆಯನ್ನು ಸರಿಗಟ್ಟಿದ್ದಾರೆ. ಇದರೊಂದಿಗೆ  ರೂಟ್, ಸಚಿನ್ ಮತ್ತು ಕಾಲಿಸ್ ದಾಖಲೆ ಮುರಿಯುವತ್ತ ಹೆಜ್ಜೆ ಹಾಕಿದ್ದಾರೆ.

ಸಿಡ್ನಿ: ಇಂಗ್ಲೆಂಡ್ ದಿಗ್ಗಜ ಬ್ಯಾಟರ್ ಜೋ ರೂಟ್ ಆಶಸ್ ಟೆಸ್ಟ್ ಸರಣಿಯ ಕೊನೆಯ ಪಂದ್ಯದಲ್ಲಿ ಆಕರ್ಷಕ ಶತಕ ಸಿಡಿಸಿ ಸಂಭ್ರಮಿಸಿದ್ದಾರೆ. ಇದು ಟೆಸ್ಟ್‌ ಕ್ರಿಕೆಟ್‌ನಲ್ಲಿ ಜೋ ರೂಟ್ ಬಾರಿಸಿದ 41ನೇ ಟೆಸ್ಟ್ ಶತಕ ಎನಿಸಿಕೊಂಡಿತು. ಇದರೊಂದಿಗೆ ಟೆಸ್ಟ್‌ ಕ್ರಿಕೆಟ್‌ನಲ್ಲಿ ಅತಿಹೆಚ್ಚು ಶತಕ ಸಿಡಿಸಿದ ಬ್ಯಾಟರ್‌ಗಳ ಪೈಕಿ ರಿಕಿ ಪಾಂಟಿಂಗ್ ಜತೆ ರೂಟ್ ಜಂಟಿ ಮೂರನೇ ಸ್ಥಾನಕ್ಕೇರಿದ್ದಾರೆ. ಇದೀಗ ಜೋ ರೂಟ್ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಹಾಗೂ ಜಾಕ್ ಕಾಲಿಸ್ ದಾಖಲೆ ಮುರಿಯುವತ್ತ ದಿಟ್ಟ ಹೆಜ್ಜೆ ಹಾಕಿದ್ದಾರೆ.

ಹೌದು, ಟೆಸ್ಟ್‌ ಕ್ರಿಕೆಟ್‌ನಲ್ಲಿ ಅತಿಹೆಚ್ಚು ಶತಕ ಸಿಡಿಸಿದ ದಾಖಲೆ ಭಾರತದ ಕ್ರಿಕೆಟ್ ಲೆಜೆಂಡ್ ಸಚಿನ್ ತೆಂಡೂಲ್ಕರ್ ಹೆಸರಿನಲ್ಲಿದೆ. ಸಚಿನ್ 200 ಟೆಸ್ಟ್‌ ಪಂದ್ಯಗಳನ್ನಾಡಿ 51 ಶತಕ ಸಿಡಿಸಿದ್ದಾರೆ. ಇನ್ನು ದಕ್ಷಿಣ ಆಫ್ರಿಕಾದ ಸ್ಟಾರ್ ಆಲ್ರೌಂಡರ್ ಜಾಕ್ ಕಾಲಿಸ್ 45 ಶತಕ ಸಿಡಿಸುವ ಮೂಲಕ ಟೆಸ್ಟ್ ಕ್ರಿಕೆಟ್‌ನಲ್ಲಿ ಅತಿಹೆಚ್ಚು ಶತಕ ಸಿಡಿಸಿದ ಬ್ಯಾಟರ್‌ಗಳ ಪೈಕಿ ಎರಡನೇ ಸ್ಥಾನದಲ್ಲಿ ಭದ್ರವಾಗಿದ್ದಾರೆ.

ಕೊನೆಯ ಟೆಸ್ಟ್‌ನಲ್ಲಿ 384 ರನ್‌ಗಳಿಗೆ ಇಂಗ್ಲೆಂಡ್ ಆಲೌಟ್

ಆಶಸ್ ಸರಣಿಯ ಐದನೇ ಹಾಗೂ ಕೊನೆಯ ಟೆಸ್ಟ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಇಂಗ್ಲೆಂಡ್ ಮೊದಲ ಇನ್ನಿಂಗ್ಸ್‌ನಲ್ಲಿ 384 ರನ್‌ಗಳಿಗೆ ಆಲೌಟ್ ಆಗಿದೆ. ಮೊದಲ ಎರಡು ಸೆಷನ್‌ಗಳಲ್ಲಿ ಭರ್ಜರಿ ಬ್ಯಾಟಿಂಗ್ ನಡೆಸಿದ ಇಂಗ್ಲೆಂಡ್, ಜೋ ರೂಟ್ ಅವರ ಅದ್ಭುತ ಶತಕದಾಟದ ನೆರವಿನಿಂದ ಉತ್ತಮ ಮೊತ್ತ ಕಲೆಹಾಕಿತು. 160 ರನ್ ಗಳಿಸಿದ ಜೋ ರೂಟ್ ಇಂಗ್ಲೆಂಡ್ ಪರ ಟಾಪ್ ಸ್ಕೋರರ್ ಆದರು. ಹ್ಯಾರಿ ಬ್ರೂಕ್ 84 ರನ್ ಗಳಿಸಿದರೆ, ವಿಕೆಟ್ ಕೀಪರ್ ಜೇಮಿ ಸ್ಮಿತ್ 46 ರನ್ ಗಳಿಸಿದರು. ಆಸ್ಟ್ರೇಲಿಯಾ ಪರ ಮೈಕಲ್ ನೇಸರ್ ನಾಲ್ಕು, ಸ್ಕಾಟ್ ಬೋಲ್ಯಾಂಡ್ ಮತ್ತು ಮಿಚೆಲ್ ಸ್ಟಾರ್ಕ್ ತಲಾ ಎರಡು ವಿಕೆಟ್ ಪಡೆದರು.

ಇನ್ನು ಮೊದಲ ಇನ್ನಿಂಗ್ಸ್ ಆರಂಭಿಸಿರುವ ಆಸ್ಟ್ರೇಲಿಯಾ ತಂಡವು ದಿಟ್ಟ ಆರಂಭವನ್ನೇ ಪಡೆದಿದ್ದು, ಎರಡನೇ ದಿನದಾಟದಂತ್ಯಕ್ಕೆ ಎರಡು ವಿಕೆಟ್ ನಷ್ಟಕ್ಕೆ 166 ರನ್ ಸಿಡಸಿದ್ದು, ಇನ್ನು 218 ರನ್‌ಗಳ ಹಿನ್ನಡೆಯಲ್ಲಿದೆ.

ಆಸ್ಟ್ರೇಲಿಯಾ ಎದುರು ಇಂಗ್ಲೆಂಡ್‌ಗೆ ಅರಂಭಿಕ ಆಘಾತ

ಟಾಸ್ ಗೆದ್ದು ಬ್ಯಾಟಿಂಗ್ ಆರಂಭಿಸಿದ ಇಂಗ್ಲೆಂಡ್, 50 ರನ್ ಗಳಿಸುವಷ್ಟರಲ್ಲಿ ಆರಂಭಿಕರಾದ ಬೆನ್ ಡಕೆಟ್ (27) ಮತ್ತು ಝಾಕ್ ಕ್ರಾಲಿ (16) ವಿಕೆಟ್ ಕಳೆದುಕೊಂಡಿತ್ತು. ಜೇಕಬ್ ಬೆಥೆಲ್ (10) ಮತ್ತೊಮ್ಮೆ ನಿರಾಸೆ ಮೂಡಿಸಿದಾಗ ಇಂಗ್ಲೆಂಡ್ ಸ್ಕೋರ್ 3 ವಿಕೆಟ್ ನಷ್ಟಕ್ಕೆ ಕೇವಲ 57 ರನ್ ಮಾತ್ರ. ಈ ವೇಳೆ ಒಂದಾದ ರೂಟ್ ಮತ್ತು ಬ್ರೂಕ್ ಜೋಡಿ 169 ರನ್‌ಗಳ ಜೊತೆಯಾಟವಾಡಿ ಇಂಗ್ಲೆಂಡ್‌ಗೆ ಆಸರೆಯಾದರು. 97 ಎಸೆತಗಳಲ್ಲಿ 84 ರನ್ ಗಳಿಸಿದ್ದ ಬ್ರೂಕ್‌ರನ್ನು ಬೋಲ್ಯಾಂಡ್ ಔಟ್ ಮಾಡಿದ ನಂತರ ಬಂದ ನಾಯಕ ಬೆನ್ ಸ್ಟೋಕ್ಸ್ ಶೂನ್ಯಕ್ಕೆ ಔಟಾದರು. ಆದರೆ, ಜೇಮಿ ಸ್ಮಿತ್ ಜೊತೆಗೂಡಿ ಅಬ್ಬರಿಸಿದ ರೂಟ್ ಇಂಗ್ಲೆಂಡ್ ಮೊತ್ತವನ್ನು 300ರ ಗಡಿ ದಾಟಿಸಿದರು. ಈ ನಡುವೆ, ಟೆಸ್ಟ್‌ನಲ್ಲಿ 41ನೇ ಮತ್ತು ಆಸ್ಟ್ರೇಲಿಯಾದಲ್ಲಿ ಎರಡನೇ ಶತಕ ಪೂರೈಸಿದ ರೂಟ್, ಟೆಸ್ಟ್ ಶತಕಗಳ ಬೇಟೆಯಲ್ಲಿ ಆಸೀಸ್ ಮಾಜಿ ನಾಯಕ ರಿಕಿ ಪಾಂಟಿಂಗ್ ಅವರ ದಾಖಲೆಯನ್ನು ಸರಿಗಟ್ಟಿದರು.

ಸ್ಮಿತ್ (46) ಔಟಾದ ನಂತರ, ವಿಲ್ ಜಾಕ್ಸ್ ಜೊತೆಗೂಡಿ ಅರ್ಧಶತಕದ ಜೊತೆಯಾಟವಾಡಿದ ರೂಟ್, ಇಂಗ್ಲೆಂಡ್ ಮೊತ್ತವನ್ನು 375ಕ್ಕೆ ತಲುಪಿಸಿದರು. ಆದರೆ ಜಾಕ್ಸ್ ಔಟಾದ ಬೆನ್ನಲ್ಲೇ ಇಂಗ್ಲೆಂಡ್‌ನ ಬಾಲಂಗೋಚಿಗಳು ಬೇಗನೆ ಪೆವಿಲಿಯನ್ ಸೇರಿದರು.

ಕಳೆದ ಆರು ವರ್ಷದಲ್ಲಿ 24ನೇ ಟೆಸ್ಟ್‌ ಶತಕ ಸಿಡಿಸಿದ ಜೋ ರೂಟ್

ಆಸ್ಟ್ರೇಲಿಯಾ ಬೌಲರ್‌ಗಳನ್ನು ಎಚ್ಚರಿಕೆಯಿಂದ ಎದುರಿಸಿದ ಜೋ ರೂಟ್ 242 ಎಸೆತಗಳಲ್ಲಿ 15 ಬೌಂಡರಿಗಳೊಂದಿಗೆ 160 ರನ್ ಗಳಿಸಿ ಒಂಬತ್ತನೇಯವರಾಗಿ ಔಟಾದರು. ಕಳೆದ ಆರು ವರ್ಷಗಳಲ್ಲಿ ರೂಟ್ ಗಳಿಸಿದ 24ನೇ ಟೆಸ್ಟ್‌ ಶತಕ ಇದಾಗಿದೆ. ಸದ್ಯ ಅಂತರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ಶತಕ ಗಳಿಸಿದ ಹಾಲಿ ಆಟಗಾರರ ಪಟ್ಟಿಯಲ್ಲಿ ವಿರಾಟ್ ಕೊಹ್ಲಿ (84) ನಂತರ ರೂಟ್ (60) ಎರಡನೇ ಸ್ಥಾನದಲ್ಲಿದ್ದಾರೆ.