'ಆಸ್ಟ್ರೇಲಿಯಾ ಬೇರ್‌ಸ್ಟೋವ್ ವಾಪಾಸ್ ಕರೆಸಿಕೊಳ್ಳಬೇಕಿತ್ತು': ವಿವಾದಾತ್ಮಕ ತೀರ್ಪಿನ ಬಗ್ಗೆ ದಿಗ್ಗಜರ ಪ್ರತಿಕ್ರಿಯೆ
ಚರ್ಚೆಗೆ ಗ್ರಾಸವಾದ ಜಾನಿ ಬೇರ್‌ಸ್ಟೋವ್ ರನೌಟ್
ಜಾನಿ ಬೇರ್‌ಸ್ಟೋವ್ ವಿವಾದಾತ್ಮಕ ತೀರ್ಪಿನ ಕುರಿತಂತೆ ಪರ-ವಿರೋಧ ಚರ್ಚೆ
ಆಸ್ಟ್ರೇಲಿಯಾ ಬೇರ್‌ಸ್ಟೋವ್ ವಾಪಾಸ್ ಕರೆಸಿಕೊಳ್ಳಬೇಕಿತ್ತು ಎಂದ ಕ್ರಿಕೆಟ್ ತಜ್ಞರು
ನವದೆಹಲಿ(ಜು.04): ಇಂಗ್ಲೆಂಡ್ - ಆಸ್ಟ್ರೇಲಿಯಾ ನಡುವಿನ ಆ್ಯಷಸ್ ಟೆಸ್ಟ್ ಸರಣಿ ಎರಡನೇ ಪಂದ್ಯಕ್ಕೆ ಲಾರ್ಡ್ಸ್ ಮೈದಾನ ಆತಿಥ್ಯ ವಹಿಸಿತ್ತು. ಆಸ್ಟ್ರೇಲಿಯಾ ನೀಡಿದ್ದ 371 ರನ್ ಗುರಿ ಬೆನ್ನತ್ತಿದ್ದ ಆತಿಥೇಯ ಇಂಗ್ಲೆಂಡ್ ಕ್ರಿಕೆಟ್ ತಂಡವು ಒಂದು ಹಂತದಲ್ಲಿ 193 ರನ್‌ಗಳಿಗೆ 5 ವಿಕೆಟ್ ಕಳೆದುಕೊಂಡಿತ್ತು. ಇಂಗ್ಲೆಂಡ್ ಬ್ಯಾಟರ್ ಜಾನಿ ಬೇರ್‌ಸ್ಟೋವ್ ಸ್ಪಂಪ್‌ಔಟ್ ವಿವಾದಕ್ಕೆ ಕಾರಣವಾಯಿತು. ಗ್ರೀನ್ ಬೌಲಿಂಗ್‌ನಲ್ಲಿ ಚೆಂಡು ಕೀಪರ್ ಅಲೆಕ್ಸ್ ಕೇರ್ರಿ ಕೈಸೇರುವ ಮೊದಲೇ ಬೇರ್‌ಸ್ಟೋವ್ ಕ್ರೀಸ್ ಬಿಟ್ಟು ಮತ್ತೊಂದು ಬದಿಯಲ್ಲಿದ್ದ ಸ್ಟೋಕ್ಸ್ ಜೊತೆ ಮಾತನಾಡಲು ಹೊರಟರು. ಕೇರ್ರಿ ಚೆಂಡನ್ನು ಸ್ಟಂಪ್ಸ್‌ಗೆ ಎಸೆಯುತ್ತಿದ್ದಂತೆ ಆಸೀಸ್ ಆಟಗಾರರು ಔಟ್‌ಗೆ ಮನವಿ ಸಲ್ಲಿಸಿದರು. ಲೆಗ್ ಅಂಪೈರ್ 3ನೇ ಅಂಪೈರ್‌ಗೆ ತೀರ್ಪು ನೀಡುವಂತೆ ಕೋರಿದಾಗ ಔಟ್ ಎನ್ನುವ ಉತ್ತರ ಸಿಕ್ಕಿತು. ಬೇರ್‌ಸ್ಟೋವ್ ಅವರ ಅಜಾಗರೂಕತೆಯಿಂದಾಗಿ ಇಂಗ್ಲೆಂಡ್‌ಗೆ ಭಾರೀ ನಷ್ಟ ಉಂಟಾಯಿತು. ಅಂತಿಮವಾಗಿ ಇಂಗ್ಲೆಂಡ್ ಎದುರು ಆಸ್ಟ್ರೇಲಿಯಾ ಕ್ರಿಕೆಟ್ ತಂಡವು 43 ರನ್ ರೋಚಕ ಜಯ ಸಾಧಿಸಿತು.
ಬೆನ್ ಸ್ಟೋಕ್ಸ್ ಕೆಚ್ಚೆದೆಯ ಹೋರಾಟ ವ್ಯರ್ಥ:
ಗೆಲ್ಲಲು 371 ರನ್ ಗುರಿ ಪಡೆದಿದ್ದ ಇಂಗ್ಲೆಂಡ್ ಪಂದ್ಯದ ಕೊನೆ ದಿನವಾದ ಭಾನುವಾರ 327ಕ್ಕೆ ಆಲೌಟಾಯಿತು. 4ನೇ ದಿನದಂತ್ಯಕ್ಕೆ 4 ವಿಕೆಟ್‌ಗೆ 114 ರನ್ ಗಳಿಸಿದ್ದ ಇಂಗ್ಲೆಂಡ್ ಕೊನೆ ದಿನ ಗೆಲ್ಲಲು 257 ರನ್ ಗಳಿಸಬೇಕಿತ್ತು. ಆಸೀಸ್ ಜಯಕ್ಕೆ 6 ವಿಕೆಟ್ ಅಗತ್ಯವಿತ್ತು. ಆದರೆ 5ನೇ ವಿಕೆಟ್‌ಗೆ ಬೆನ್ ಡಕೆಟ್(83) ಜೊತೆ 132 ರನ್ ಜೊತೆಯಾಟವಾಡಿದ ಬೆನ್ ಸ್ಟೋಕ್ಸ್, ಇಂಗ್ಲೆಂಡ್ ಪಾಳಯದಲ್ಲಿ ಗೆಲುವಿನ ನಿರೀಕ್ಷೆ ಮೂಡಿಸಿದರು. ಡಕೆಟ್ ನಿರ್ಗಮನದ ಬಳಿಕ ಇತರರಿಂದ ಸೂಕ್ತ ಬೆಂಬಲ ಸಿಗದಿದ್ದರೂ ಏಕಾಂಗಿಯಾಗಿ ಅಬ್ಬರಿಸಿದ ಬೆನ್ ಸ್ಟೋಕ್ಸ್, ತಂಡವನ್ನು ಗೆಲುವಿನ ಸನಿಹಕ್ಕೆ ತಲುಪಿಸಿದರು. ಆದರೆ 214 ಎಸೆತಗಳಲ್ಲಿ 9 ಬೌಂಡರಿ, 9 ಸಿಕ್ಸರ್‌ನೊಂದಿಗೆ 155 ರನ್ ಗಳಿಸಿದ್ದ ಸ್ಟೋಕ್ಸ್, ಗೆಲುವಿಗೆ 70 ರನ್ ಬೇಕಿದ್ದಾಗ ಹೇಜಲ್‌ವುಡ್‌ಗೆ ಬಲಿಯಾದರು. ಇದಾದ ಬಳಿಕ ಇಂಗ್ಲೆಂಡ್ ಬ್ಯಾಟರ್‌ಗಳನ್ನು ಆಲೌಟ್ ಮಾಡಲು ಆಸ್ಟ್ರೇಲಿಯಾ ಬೌಲರ್‌ಗಳಿಗೆ ಹೆಚ್ಚು ಸಮಯ ಹಿಡಿಯಲಿಲ್ಲ.
ಕ್ರೀಡಾಸ್ಫೂರ್ತಿಗೆ ಕೇರ್ ಆಫ್ ಅಡ್ರೆಸ್ ಮಹಿ..! ಮೋಸ ಮಾಡಿ ಗೆಲುವು ಸಾಧಿಸ್ತಾ ಆಸ್ಟ್ರೇಲಿಯಾ..?
ಇನ್ನು ಬೇರ್‌ಸ್ಟೋವ್ ಕುರಿತಾಗಿ ನೀಡಲಾದ ತೀರ್ಪಿನ ಕುರಿತಂತೆ ಹಲವು ಹಾಲಿ ಮಾಜಿ ಕ್ರಿಕೆಟಿಗರು, ಕ್ರಿಕೆಟ್ ವಿಶ್ಲೇಷಕರು ತಮ್ಮದೇ ಆದ ರೀತಿಯಲ್ಲಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಆಸ್ಟ್ರೇಲಿಯಾ ಮೂಲದ ಮಾಜಿ ಅಂಪೈರ್ ಸೈಮನ್ ಟಫಲ್, ಜಾನಿ ಬೇರ್‌ಸ್ಟೋವ್ ಕುರಿತಾಗಿ ನೀಡಲಾದ ತೀರ್ಪು ಸರಿಯಾಗಿದೆ ಎಂದು ಸಮರ್ಥಿಸಿಕೊಂಡಿದ್ದಾರೆ.
ಇನ್ನು ಆಸ್ಟ್ರೇಲಿಯಾ ತಂಡವು ಜಾನಿ ಬೇರ್‌ಸ್ಟೋವ್ ಅವರನ್ನು ವಾಪಾಸ್ ಕರೆಸಿಕೊಳ್ಳಬೇಕಿತ್ತು ಎಂಬ ಅಭಿಪ್ರಾಯವೂ ವ್ಯಕ್ತವಾಗಿದೆ.
ಇನ್ನು ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ವೇಗಿ ಮಿಚೆಲ್ ಸ್ಟಾರ್ಕ್, ಜಾನಿ ಬೇರ್‌ಸ್ಟೋವ್ ಅವರ ಔಟ್ ಎನ್ನುವುದು ಎಷ್ಟು ನಿಜವೋ, ನಾನು ಹಿಡಿದ ಕ್ಯಾಚ್ ಕೂಡಾ ನಿಜವಾಗಿಯೂ ಔಟ್ ಆಗಿದ್ದು ಅಷ್ಟೇ ನಿಜ ಎಂದು ಹೇಳಿದ್ದಾರೆ.
ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ನಾಯಕ ಪ್ಯಾಟ್ ಕಮಿನ್ಸ್ ಈ ಕುರಿತಂತೆ ಪ್ರತಿಕ್ರಿಯೆ ನೀಡಿದ್ದು, ನನ್ನ ಪ್ರಕಾರ ಇದು ಸರಿಯಾದ ತೀರ್ಪು ಎಂದು ಅಭಿಪ್ರಾಯಪಟ್ಟಿದ್ದಾರೆ.
ಇನ್ನು ಇಂಗ್ಲೆಂಡ್ ತಂಡದ ಅನುಭವಿ ವೇಗಿ ಸ್ಟುವರ್ಟ್ ಬ್ರಾಡ್, ಈ ಕುರಿತಂತೆ, ಆಸ್ಟ್ರೇಲಿಯಾ ವಿಕೆಟ್ ಕೀಪರ್ ಅಲೆಕ್ಸ್ ಕೇರಿ ಅವರನ್ನು ಉದ್ದೇಶಿಸಿ, ನೀವು ಮಾಡಿದ ಈ ಘಟನೆ ಎಂದೆಂದಿಗೂ ನೆನಪಿನಲ್ಲಿ ಉಳಿಯುತ್ತದೆ ಎಂದು ಹೇಳಿದ್ದರು.
ಇದಕ್ಕೆ ಪ್ರತಿಕ್ರಿಯೆ ನೀಡಿರುವ ಲಕ್ಷ್ಮಣ್ ಶಿವರಾಮಕೃಷ್ಣನ್, ಯುವರಾಜ್ ಸಿಂಗ್, ಓವರ್ ವೊಂದರಲ್ಲಿ 6 ಸಿಕ್ಸರ್ ಸಿಡಿಸಿದ್ದು ಸ್ಟುವರ್ಟ್ ಬ್ರಾಡ್ ಎಂದೆಂದಿಗೂ ನನಪಿನಲ್ಲಿಟ್ಟುಕೊಳ್ಳಲಿದ್ದಾರೆ ಕಾಲೆಳೆದಿದ್ದಾರೆ.
ಇನ್ನು ವಿಕ್ಟೋರಿಯಾ ಪೊಲೀಸ್ ಟ್ವೀಟ್ ಮಾಡಿ, ಗ್ರೀನ್ ಲೈಟ್ ಬರುವ ಮುನ್ನ ಮುಂದಡಿ ಇಡಬೇಡಿ ಎನ್ನುವುದನ್ನು ನೆನಪು ಮಾಡಿಕೊಟ್ಟಿದ್ದಕ್ಕೆ ಜಾನಿ ಬೇರ್‌ಸ್ಟೋವ್ ಅವರಿಗೆ ಧನ್ಯವಾದಗಳು ಎಂದು ಕಾಲೆಳೆದಿದ್ದಾರೆ.