ಆ್ಯಷಸ್ ಟೆಸ್ಟ್ ಸರಣಿಯ ಎರಡನೇ ಪಂದ್ಯಕ್ಕೆ ಲಾರ್ಡ್ಸ್‌ ಮೈದಾನ ಆತಿಥ್ಯಉಭಯ ತಂಡಗಳಲ್ಲೂ ಒಂದು ಬದಲಾವಣೆ ಸಾಧ್ಯತೆಇಂಗ್ಲೆಂಡ್ ತಂಡದಿಂದ ಹೊರಬಿದ್ದ ಮೋಯಿನ್ ಅಲಿ

ಲಾರ್ಡ್ಸ್‌(ಜೂ.28): ಇಂಗ್ಲೆಂಡ್‌ ಹಾಗೂ ಆಸ್ಟ್ರೇಲಿಯಾ ನಡುವಿನ 2ನೇ ಆ್ಯಷಸ್‌ ಟೆಸ್ಟ್‌ ಪಂದ್ಯ ಬುಧವಾರದಿಂದ ಕ್ರಿಕೆಟ್‌ ಕಾಶಿ ಲಾರ್ಡ್ಸ್‌ ಕ್ರೀಡಾಂಗಣದಲ್ಲಿ ಆರಂಭಗೊಳ್ಳಲಿದೆ. ಮೊದಲ ಪಂದ್ಯದಲ್ಲಿ 2 ವಿಕೆಟ್‌ ರೋಚಕ ಗೆಲುವು ಸಾಧಿಸಿ 5 ಪಂದ್ಯಗಳ ಸರಣಿಯಲ್ಲಿ 1-0 ಮುನ್ನಡೆಯಲ್ಲಿರುವ ಆಸೀಸ್‌ ಮತ್ತೊಂದು ಗೆಲುವಿನ ನಿರೀಕ್ಷೆಯಲ್ಲಿದೆ. ಇಂಗ್ಲೆಂಡ್‌ ಸಮಬಲ ಸಾಧಿಸುವ ತವಕದಲ್ಲಿದೆ. ಇಂಗ್ಲೆಂಡ್‌ ಈಗಾಗಲೇ ಆಡುವ ಹನ್ನೊಂದರ ಬಳಗವನ್ನು ಪ್ರಕಟಿಸಿದ್ದು, ಮೊಯೀನ್‌ ಅಲಿ ಬದಲು ಜೋಶ್‌ ಟಂಗ್‌ ತಂಡಕ್ಕೆ ಸೇರ್ಪಡೆಗೊಂಡಿದ್ದಾರೆ.

ಆ್ಯಷಸ್‌ ಟೆಸ್ಟ್ ಸರಣಿಯ ಮೊದಲ ಪಂದ್ಯದ ಮೂಲಕ ಆಲ್ರೌಂಡರ್ ಮೋಯಿನ್ ಅಲಿ ವಿದಾಯ ಹಿಂಪಡೆದು ಟೆಸ್ಟ್‌ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದ್ದರು. ಆದರೆ ಎಜ್‌ಬಾಸ್ಟನ್‌ನಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯದಲ್ಲಿ ಮೋಯಿನ್ ಅಲಿ ನಿರೀಕ್ಷಿತ ಆಲ್ರೌಂಡ್‌ ಪ್ರದರ್ಶನ ತೋರಲು ವಿಫಲವಾಗಿದ್ದರು. ಇನ್ನು ಟೆಸ್ಟ್ ಪಂದ್ಯದ ಸಂದರ್ಭದಲ್ಲಿ ಕೊಂಚ ಸ್ನಾಯು ಸೆಳೆತಕ್ಕೆ ಒಳಗಾದಂತೆ ಕಂಡು ಬಂದಿದ್ದರು. ಹೀಗಿದ್ದೂ ಲಾರ್ಡ್ಸ್‌ ಟೆಸ್ಟ್ ಪಂದ್ಯಕ್ಕೂ ಮುನ್ನ ಮೋಯಿನ್ ಅಲಿ ನೆಟ್‌ ಪ್ರಾಕ್ಟೀಸ್ ಮಾಡಿ ಗಮನ ಸೆಳೆದಿದ್ದರು. ಇದರ ಹೊರತಾಗಿಯೂ ಮೋಯಿನ್ ಅಲಿಗೆ ವಿಶ್ರಾಂತಿ ನೀಡಿ ಜೋಶ್ ಟಂಗ್‌ಗೆ ಇಂಗ್ಲೆಂಡ್ ಆಡುವ ಹನ್ನೊಂದರ ಬಳಗದಲ್ಲಿ ಸ್ಥಾನ ನೀಡಲಾಗಿದೆ. ವೇಗಿ ಜೋಶ್ ಟಂಗ್, ಐರ್ಲೆಂಡ್ ಎದುರಿನ ಪಾದಾರ್ಪಣೆ ಟೆಸ್ಟ್ ಪಂದ್ಯದಲ್ಲಿ 5 ವಿಕೆಟ್ ಕಬಳಿಸಿ ಗಮನ ಸೆಳೆದಿದ್ದು, ಇದೀಗ ಆ್ಯಷಸ್ ಸರಣಿಯಲ್ಲಿ ಆಸ್ಟ್ರೇಲಿಯಾ ಎದುರು ಮಿಂಚಲು ತುದಿಗಾಲಿನಲ್ಲಿ ನಿಂತಿದ್ದಾರೆ. 

ಇಂಗ್ಲೆಂಡ್‌ ತಂಡವು ಇದೀಗ ಲಾರ್ಡ್ಸ್ ಟೆಸ್ಟ್‌ನಲ್ಲಿ ತಜ್ಞ ಸ್ಪಿನ್ನರ್ ಇಲ್ಲದೇ ಕಣಕ್ಕಿಳಿಯಲು ಸಜ್ಜಾಗಿದ್ದು, ಮಾಜಿ ನಾಯಕ ಜೋ ರೂಟ್ ಹಂಗಾಗಿ ಸ್ಪಿನ್ನರ್ ಆಗಿ ಬೌಲಿಂಗ್ ಮಾಡುವ ಸಾಧ್ಯತೆಯಿದೆ.

ಆಸ್ಟ್ರೇಲಿಯಾ ಪರ ಒಂದು ಬದಲಾವಣೆ?: ಈಗಾಗಲೇ ಮೊದಲ ಟೆಸ್ಟ್ ಪಂದ್ಯವನ್ನು ರೋಚಕವಾಗಿ ಗೆದ್ದು ಬೀಗುತ್ತಿರುವ ಆಸ್ಟ್ರೇಲಿಯಾ ತಂಡವು ಒಂದು ಪ್ರಮುಖ ಬದಲಾವಣೆಯೊಂದಿಗೆ ಕಣಕ್ಕಿಳಿಯುವ ಸಾಧ್ಯತೆಯಿದೆ. ಲಾರ್ಡ್ಸ್ ಟೆಸ್ಟ್ ಪಂದ್ಯದಲ್ಲಿ ಸ್ಕಾಟ್ ಬೋಲೆಂಡ್ ಬದಲಿಗೆ ಮಿಚೆಲ್ ಸ್ಟಾರ್ಕ್‌ ಆಡುವ ಹನ್ನೊಂದರ ಬಳಗದಲ್ಲಿ ಸ್ಥಾನ ಪಡೆಯುವ ಸಾಧ್ಯತೆಯಿದೆ. ಇನ್ನುಳಿದಂತೆ ಆಸ್ಟ್ರೇಲಿಯಾ ತಂಡದಲ್ಲಿ ಬದಲಾವಣೆಯಾಗುವ ಸಾಧ್ಯತೆ ಕಡಿಮೆ.

ಇಂಗ್ಲೆಂಡ್ ತಂಡ ಹೀಗಿದೆ:

ಬೆನ್ ಡುಕೆಟ್, ಜಾಕ್ ಕ್ರಾಲಿ, ಓಲಿ ಪೋಪ್, ಜೋ ರೂಟ್, ಹ್ಯಾರಿ ಬ್ರೂಕ್, ಬೆನ್ ಸ್ಟೋಕ್ಸ್, ಜಾನಿ ಬೇರ್‌ಸ್ಟೋವ್, ಸ್ಟುವರ್ಟ್‌ ಬ್ರಾಡ್, ಓಲಿ ರಾಬಿನ್‌ಸನ್, ಜೋಶ್ ಟಂಗ್, ಜೇಮ್ಸ್‌, ಆ್ಯಂಡರ್‌ಸನ್.

ಆಸ್ಟ್ರೇಲಿಯಾ ಕ್ರಿಕೆಟ್ ತಂಡ:

ಡೇವಿಡ್ ವಾರ್ನರ್, ಉಸ್ಮಾನ್ ಖವಾಜ, ಮಾರ್ನಸ್ ಲಬುಶೇನ್, ಸ್ಟೀವ್ ಸ್ಮಿತ್, ಟ್ರಾವಿಸ್ ಹೆಡ್, ಕ್ಯಾಮರೋನ್ ಗ್ರೀನ್, ಅಲೆಕ್ಸ್ ಕೇರಿ, ಪ್ಯಾಟ್ ಕಮಿನ್ಸ್, ಮಿಚೆಲ್ ಸ್ಟಾರ್ಕ್‌, ನೇಥನ್ ಲಯನ್‌, ಜೋಶ್ ಹೇಜಲ್‌ವುಡ್.

ಪಂದ್ಯ ಆರಂಭ: ಮಧ್ಯಾಹ್ನ 3.30

ಸ್ಥಳ: ಲಾರ್ಡ್ಸ್‌