Ashes 2023: ಪಂದ್ಯದ ವೇಳೆ ಮೈದಾನಕ್ಕೆ ನುಗ್ಗಿದ ಪ್ರತಿಭಟನಾಕಾರರು..! ಜಾನಿ ಬೇರ್‌ಸ್ಟೋವ್ ಮಾಡಿದ್ದೇನು?
ಆ್ಯಷಸ್ ಟೆಸ್ಟ್ ಪಂದ್ಯದ ವೇಳೆ ಪ್ರತಿಭಟನೆಯ ಬಿಸಿ
‘ಜಸ್ಟ್ ಸ್ಟಾಪ್ ಆಯಿಲ್’ ಹೆಸರಿನಲ್ಲಿ ನಡೆಸುತ್ತಿರುವ ಪ್ರತಿಭಟನೆ
ಪ್ರತಿಭಟನಾಕಾರನನ್ನು ಮೈದಾನದಾಚೆಗೆ ಹೊತ್ತೊಯ್ದ ಜಾನಿ ಬೇರ್‌ಸ್ಟೋವ್
ಲಾರ್ಡ್ಸ್: ಹವಾಮಾನ ಬದಲಾವಣೆ ಕುರಿತು ಜಾಗೃತಿಗಾಗಿ ‘ಜಸ್ಟ್ ಸ್ಟಾಪ್ ಆಯಿಲ್’ ಹೆಸರಿನಲ್ಲಿ ನಡೆಸುತ್ತಿರುವ ಪ್ರತಿಭಟನೆ ಬಿಸಿ ಆ್ಯಷಸ್ ಟೆಸ್ಟ್ ಪಂದ್ಯಕ್ಕೂ ತಟ್ಟಿತು. ಬುಧವಾರ ಆಸ್ಟ್ರೇಲಿಯಾದ ಇನ್ನಿಂಗ್ಸ್‌ನ ಮೊದಲ ಓವರ್ ಮುಕ್ತಾಯಗೊಂಡಾಗ ಇಬ್ಬರು ಪ್ರತಿಭಟನಾಕಾರರು ಮೈದಾನಕ್ಕೆ ನುಗ್ಗಿ ಕಿತ್ತಳೆ ಬಣ್ಣದ ಪುಡಿಯನ್ನು ಚೆಲ್ಲಿದ್ದಾರೆ. ಈ ವೇಳೆ ಆಟಗಾರರು ಅವರನ್ನು ತಡೆದಿದ್ದು, ಓರ್ವನನ್ನು ಇಂಗ್ಲೆಂಡ್ ವಿಕೆಟ್‌ಕೀಪರ್ ಜಾನಿ ಬೇರ್‌ಸ್ಟೋವ್ ಸ್ವತಃ ತಾವೇ ಎತ್ತಿಕೊಂಡು ಮೈದಾನದಿಂದ ಹೊರಹಾಕಿದ ಪ್ರಸಂಗವೂ ನಡೆಯಿತು. 5 ನಿಮಿಷಗಳ ಕಾಲ ಪಂದ್ಯ ಸ್ಥಗಿತಗೊಂಡರೂ ಮತ್ತೆ ಪಂದ್ಯ ಆರಂಭಿಸಲಾಯಿತು.
ಕೆಲ ಸಮಯದಿಂದ ಬ್ರಿಟನ್‌ನಾದ್ಯಂತ ‘ಜಸ್ಟ್ ಸ್ಟಾಪ್ ಆಯಿಲ್’ ಪ್ರತಿಭಟನೆ ನಡೆಯುತ್ತಿದ್ದು, ಸ್ನೂಕರ್, ಫುಟ್ಬಾಲ್, ರಗ್ಬಿ ಪಂದ್ಯಗಳಿಗೂ ಪ್ರತಿಭಟನಾಕಾರರು ಅಡ್ಡಿಪಡಿಸಿದ್ದಾರೆ. ಇತ್ತೀಚೆಗೆ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ವೇಳೆ ಪ್ರತಿಭಟನಾಕಾರರು ಮೈದಾನಕ್ಕೆ ನುಗ್ಗುವ ಭೀತಿಯಿಂದ ಐಸಿಸಿ 2 ಪಿಚ್‌ಗಳನ್ನು ಸಿದ್ಧಪಡಿಸಿತ್ತು.
ಆ್ಯಷಸ್ ಟೆಸ್ಟ್: ಮೊದಲ ದಿನ ಆಸೀಸ್ ಮೇಲುಗೈ
ಲಾರ್ಡ್ಸ್: ಇಂಗ್ಲೆಂಡ್ ವಿರುದ್ಧದ 2ನೇ ಆ್ಯಷಸ್ ಟೆಸ್ಟ್ ಪಂದ್ಯದಲ್ಲಿ ಪ್ರವಾಸಿ ಆಸ್ಟ್ರೇಲಿಯಾ ಮೊದಲ ದಿನ ಮೇಲುಗೈ ಸಾಧಿಸಿದೆ. ಈಗಾಗಲೇ 5 ಪಂದ್ಯಗಳ ಸರಣಿಯಲ್ಲಿ 1-0 ಮುನ್ನಡೆಯಲ್ಲಿರುವ ಪ್ಯಾಟ್ ಕಮಿನ್ಸ್ ಪಡೆ, ಬುಧವಾರ ಬ್ಯಾಟಿಂಗ್‌ನಲ್ಲಿ ಪ್ರಾಬಲ್ಯ ಸಾಧಿಸಿತು. ಉಸ್ಮಾನ್ ಖವಾಜ(17) ಅವರನ್ನು ಬೇಗನೇ ಕಳೆದುಕೊಂಡರೂ, ಸತತ ವೈಫಲ್ಯಗಳಿಂದ ಟೀಕೆಗೊಳಗಾಗಿದ್ದ ಡೇವಿಡ್ ವಾರ್ನರ್(66) ಅತ್ಯಮೂಲ್ಯ ಅರ್ಧಶತಕ ಬಾರಿಸಿದರು. ಲಬುಶೇನ್ 47 ರನ್ ಗಳಿಸಿದರು. ಸ್ಟೀವ್ ಸ್ಮಿತ್ ಅರ್ಧಶತಕ ದಾಖಲಿಸಿದರು. 69 ಓವರಲ್ಲಿ ಆಸೀಸ್ 3 ವಿಕೆಟ್‌ಗೆ 283 ರನ್ ಕಲೆಹಾಕಿತ್ತು.
ಧೃವ್ ಶೋರೆ ಶತಕ: ದೊಡ್ಡ ಮೊತ್ತದ ಉತ್ತರ ವಲಯ
ಬೆಂಗಳೂರು: ಧೃವ್ ಶೋರೆ ಶತಕದ ನೆರವಿನಿಂದ ಈಶಾನ್ಯ ವಲಯದ ವಿರುದ್ಧ ಉತ್ತರ ವಲಯ ದುಲೀಪ್ ಟ್ರೋಫಿ ಕ್ವಾರ್ಟರ್ ಫೈನಲ್ ಪಂದ್ಯದ ಮೊದಲ ದಿನವೇ ಮೇಲುಗೈ ಸಾಧಿಸಿದೆ.
ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ಉತ್ತರ ವಲಯ ದಿನದಂತ್ಯಕ್ಕೆ 6 ವಿಕೆಟ್‌ಗೆ 306 ರನ್ ಗಳಿಸಿದೆ. ಆರಂಭಿಕ ಬ್ಯಾಟರ್ ಧೃವ್ 135 ರನ್ ಸಿಡಿಸಿದರು. ನಿಶಾಂತ್ ಸಿಂಧು ಔಟಾಗದೆ 76 ರನ್ ಗಳಿಸಿದ್ದು, ಪ್ರಶಾಂತ್ ಚೋಪ್ರಾ 32, ಪ್ರಭ್‌ಸಿಮ್ರನ್ 31 ರನ್ ಕೊಡುಗೆ ನೀಡಿದರು.
ರೋಹಿತ್ ಶರ್ಮಗಿಂತ ಒಳ್ಳೆ ಟ್ರ್ಯಾಕ್ ರೆಕಾರ್ಡ್ ಇದ್ರೂ ಸಚಿನ್‌ನ ಈ ಗೆಳಯನಿಗೆ ಸಿಗಲಿಲ್ಲ ಟೀಂ ಇಂಡಿಯಾ ಚಾನ್ಸ್!
ಕೇಂದ್ರ 182ಕ್ಕೆ ಆಲೌಟ್
ಮತ್ತೊಂದು ಕ್ವಾರ್ಟರ್ ಪಂದ್ಯದಲ್ಲಿ ಪೂರ್ವ ವಲಯ ವಿರುದ್ಧ ಕೇಂದ್ರ ವಲಯ 182ಕ್ಕೆ ಆಲೌಟ್ ಆಯಿತು. ರಿಂಕು ಸಿಂಗ್ (38) ತಂಡದ ಪರ ಗರಿಷ್ಠ ವೈಯಕ್ತಿಕ ಮೊತ್ತ ಗಳಿಸಿದರೆ, ಹಿಮಾನ್ಶು ಮಂತ್ರಿ(29), ಉಪೇಂದ್ರ ಯಾದವ್(25) ನಿರೀಕ್ಷೆ ಉಳಿಸಿಕೊಳ್ಳಲಿಲ್ಲ. ಮಣಿಶಂಕರ್ 5 ವಿಕೆಟ್ ಕಿತ್ತರು. ಬಳಿಕ ಮೊದಲ ಇನ್ನಿಂಗ್ಸ್ ಆರಂಭಿಸಿದ ಪೂರ್ವ ವಲಯ 2 ವಿಕೆಟ್‌ಗೆ 32 ರನ್ ಗಳಿಸಿದೆ.
ಮುಂಬೈ: ಕ್ರಿಕೆಟ್ ಪಂದ್ಯದ ಭದ್ರತಾ ಶುಲ್ಕ ಕಡಿತ!
ಮುಂಬೈ: ವಿಶ್ವಕಪ್ ಆರಂಭಕ್ಕೆ ಕೆಲ ತಿಂಗಳುಗಳಷ್ಟೇ ಬಾಕಿ ಇರುವಾಗಲೇ ಮುಂಬೈನಲ್ಲಿ ಕ್ರಿಕೆಟ್ ಪಂದ್ಯಗಳ ಭದ್ರತೆಗೆ ಪಡೆಯುತ್ತಿದ್ದ ಶುಲ್ಕವನ್ನು ಮಹಾರಾಷ್ಟ್ರ ಸರ್ಕಾರ ಭಾರೀ ಪ್ರಮಾಣದಲ್ಲಿ ಕಡಿತಗೊಳಿಸಿದೆ. ಈ ಮೊದಲು 2018ರಲ್ಲಿ ಸರ್ಕಾರ ಪ್ರತಿ ಟಿ20 ಪಂದ್ಯಕ್ಕೆ 70 ಲಕ್ಷ ರು., ಏಕದಿನ ಪಂದ್ಯಕ್ಕೆ 75 ಲಕ್ಷ ರು., ಟೆಸ್ಟ್ ಪಂದ್ಯಕ್ಕೆ 60 ಲಕ್ಷ ರು. ನಿಗದಪಡಿಸಿತ್ತು. ಆದರೆ ಇದನ್ನು ಪರಿಷ್ಕರಿಸಿರುವ ಸರ್ಕಾರ, ಟಿ20 ಪಂದ್ಯಕ್ಕೆ 10 ಲಕ್ಷ ರು., ಏಕದಿನಕ್ಕೆ 25 ಲಕ್ಷ ರು. ಹಾಗೂ ಟೆಸ್ಟ್ ಪಂದ್ಯಕ್ಕೆ 24 ಲಕ್ಷ ರು. ನಿಗದಿಪಡಿಸಿದೆ.