ಆಸ್ಟ್ರೇಲಿಯಾ ಹಾಗೂ ಇಂಗ್ಲೆಂಡ್‌ ನಡುವಿನ ಆ್ಯಷಸ್‌ ಸರಣಿಯ 3ನೇ ಟೆಸ್ಟ್‌ ಇಂದಿನಿಂದ ಆರಂಭ5 ಪಂದ್ಯಗಳ ಸರಣಿಯಲ್ಲಿ 2-0 ಮುನ್ನಡೆ ಹೊಂದಿರುವ ಆಸೀಸ್‌ಆತಿಥೇಯ ಇಂಗ್ಲೆಂಡ್‌ ಪುಟಿದೇಳಬೇಕಾದ ಒತ್ತಡ 

ಲೀಡ್ಸ್‌(ಜು.06): ಆಸ್ಟ್ರೇಲಿಯಾ ಹಾಗೂ ಇಂಗ್ಲೆಂಡ್‌ ನಡುವಿನ ಆ್ಯಷಸ್‌ ಸರಣಿಯ 3ನೇ ಟೆಸ್ಟ್‌ ಗುರುವಾರದಿಂದ ಆರಂಭಗೊಳ್ಳಲಿದೆ. 5 ಪಂದ್ಯಗಳ ಸರಣಿಯಲ್ಲಿ 2-0 ಮುನ್ನಡೆ ಹೊಂದಿರುವ ಆಸೀಸ್‌, ಈ ಪಂದ್ಯವನ್ನೂ ಗೆದ್ದು ಸರಣಿ ವಶಪಡಿಸಿಕೊಳ್ಳಲು ಎದುರು ನೋಡುತ್ತಿದ್ದರೆ, ಆತಿಥೇಯ ಇಂಗ್ಲೆಂಡ್‌ ಪುಟಿದೇಳಬೇಕಾದ ಒತ್ತಡಕ್ಕೆ ಸಿಲುಕಿದೆ. ಇಂಗ್ಲೆಂಡ್‌ ಆಡುವ ಹನ್ನೊಂದರ ಬಳಗವನ್ನು ಪ್ರಕಟಿಸಿದ್ದು, ಕಳೆದ ಪಂದ್ಯದಲ್ಲಿದ್ದ ತಂಡದಲ್ಲಿ 3 ಬದಲಾವಣೆ ಮಾಡಿದೆ. ಓಲಿ ಪೋಪ್‌, ಜೇಮ್ಸ್‌ ಆ್ಯಂಡರ್‌ಸನ್‌, ಜೋಶ್ ಟಂಗ್‌ ಬದಲು ಮೋಯಿನ್ ಅಲಿ, ಮಾರ್ಕ್‌ ವುಡ್, ಕ್ರಿಸ್‌ ವೋಕ್ಸ್‌ ಆಡಲಿದ್ದಾರೆ. ಆಸ್ಟ್ರೇಲಿಯಾ ಗಾಯಾಳು ಲಯನ್‌ ಬದಲು ಟಾಡ್‌ ಮರ್ಫಿಯನ್ನು ಆಡಿಸಬಹುದು.

ಟೆಸ್ಟ್‌ ರ‍್ಯಾಂಕಿಂಗ್‌: ಅಗ್ರಸ್ಥಾನದಲ್ಲೇ ಭಾರತ ತಂಡ

ದುಬೈ: ಐಸಿಸಿ ಟೆಸ್ಟ್‌ ತಂಡಗಳ ರ‍್ಯಾಂಕಿಂಗ್‌ ಪಟ್ಟಿಯಲ್ಲಿ ಭಾರತ ಅಗ್ರಸ್ಥಾನ ಕಾಯ್ದುಕೊಂಡಿದೆ. ಆಸ್ಟ್ರೇಲಿಯಾ ವಿರುದ್ಧ ವಿಶ್ವ ಟೆಸ್ಟ್‌ ಚಾಂಪಿಯನ್‌ಶಿಪ್‌ ಫೈನಲ್‌ ಸೋತ ಹೊರತಾಗಿಯೂ ಭಾರತ ಮೊದಲ ಸ್ಥಾನದಲ್ಲೇ ಉಳಿದಿದೆ. ಇನ್ನು ಬೌಲರ್‌ಗಳ ಪಟ್ಟಿಯಲ್ಲಿ ಆರ್‌.ಅಶ್ವಿನ್‌ ಮೊದಲ ಸ್ಥಾನದಲ್ಲೇ ಮುಂದುವರಿದರೆ, ಬ್ಯಾಟರ್‌ಗಳ ಪಟ್ಟಿಯಲ್ಲಿ ಇಂಗ್ಲೆಂಡ್‌ನ ಜೋ ರೂಟ್‌ರನ್ನು ಹಿಂದಿಕ್ಕಿ ನ್ಯೂಜಿಲೆಂಡ್‌ನ ಕೇನ್‌ ವಿಲಿಯಮ್ಸನ್‌ ಮೊದಲ ಸ್ಥಾನಕ್ಕೇರಿದ್ದಾರೆ. ಸ್ಟೀವ್‌ ಸ್ಮಿತ್‌ 2ನೇ ಸ್ಥಾನಕ್ಕೆ ಮರಳಿದ್ದಾರೆ.

ವಿಂಡೀಸ್‌ ಟೆಸ್ಟ್‌ ಸರಣಿಗೆ ಭಾರತ ಅಭ್ಯಾಸ ಶುರು

ಬಾರ್ಬಡೊಸ್‌: 2023-25ರ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನಲ್ಲಿ ಶುಭಾರಂಭ ಮಾಡುವ ವಿಶ್ವಾಸದಲ್ಲಿರುವ ಭಾರತ ತಂಡ, ವೆಸ್ಟ್‌ಇಂಡೀಸ್‌ ವಿರುದ್ಧದ 2 ಪಂದ್ಯಗಳ ಟೆಸ್ಟ್‌ ಸರಣಿಗೂ ಮುನ್ನ 2 ದಿನಗಳ ಅಭ್ಯಾಸ ಪಂದ್ಯದಲ್ಲಿ ತೊಡಗಿದೆ.

ವೆಸ್ಟ್‌ ಇಂಡೀಸ್‌ ವಿರುದ್ಧ ಟಿ20 ಸರಣಿಗೆ ಭಾರತ ತಂಡ ಪ್ರಕಟ, ಕೊಹ್ಲಿ-ರೋಹಿತ್‌ ಇಬ್ರೂ ಇಲ್ಲ!

ಬುಧವಾರದಿಂದ ಆರಂಭಗೊಂಡ ಅಭ್ಯಾಸ ಪಂದ್ಯದಲ್ಲಿ ನಾಯಕ ರೋಹಿತ್‌ ಶರ್ಮಾ ಹಾಗೂ ಕೋಚ್‌ ರಾಹುಲ್‌ ದ್ರಾವಿಡ್‌ ಮೊದಲ ಟೆಸ್ಟ್‌ಗೆ ಆಡುವ ಹನ್ನೊಂದರ ಬಳಗವನ್ನು ಗುರುತಿಸಲಿದ್ದಾರೆ. ಸರಣಿ ಆರಂಭಕ್ಕೆ10 ದಿನ ಮೊದಲೇ ಕೆರಿಬಿಯನ್‌ಗೆ ತೆರಳಿರುವ ಭಾರತ, 2 ಪಂದ್ಯಗಳ ಸರಣಿಯನ್ನು 2-0ಯಲ್ಲಿ ಜಯಿಸಿ ಪೂರ್ಣ ಅಂಕ ಸಂಪಾದಿಸುವ ಗುರಿ ಹೊಂದಿದೆ. ಮೊದಲ ಟೆಸ್ಟ್‌ ಜು.12ರಿಂದ ಆರಂಭಗೊಳ್ಳಲಿದ್ದು, ಜು.20ರಿಂದ 2ನೇ ಟೆಸ್ಟ್‌ ನಡೆಯಲಿದೆ.

ವಿಂಡೀಸ್‌ ದಿಗ್ಗಜ ಸೋಬರ್ಸ್‌ರನ್ನು ಭೇಟಿಯಾದ ಭಾರತ ಕ್ರಿಕೆಟಿಗರು

ಬಾರ್ಬಡೊಸ್‌: ಭಾರತ ಕ್ರಿಕೆಟ್‌ ತಂಡದ ಆಟಗಾರರು ವೆಸ್ಟ್‌ಇಂಡೀಸ್‌ನ ದಿಗ್ಗಜ ಕ್ರಿಕೆಟಿಗ ಸರ್‌. ಗ್ಯಾರಿ ಸೋಬರ್ಸ್‌ರನ್ನು ಇಲ್ಲಿನ ಕೆನ್ಸಿಂಗ್ಟನ್‌ ಓವಲ್‌ ಕ್ರೀಡಾಂಗಣದಲ್ಲಿ ಭೇಟಿಯಾಗಿ ಅವರೊಂದಿಗೆ ಕೆಲ ಕಾಲ ಸಮಾಲೋಚನೆ ನಡೆಸಿದರು. ಗಿಲ್‌, ಶಾರ್ದೂಲ್‌ ಸೇರಿದಂತೆ ಭಾರತದ ಕೆಲ ಯುವ ಕ್ರಿಕೆಟಿಗರನ್ನು ಪ್ರಧಾನ ಕೋಚ್‌ ರಾಹುಲ್‌ ದ್ರಾವಿಡ್‌, ಸೋಬರ್ಸ್‌ಗ ಅವರಿಗೆ ಪರಿಚಯ ಮಾಡಿಕೊಟ್ಟರು. ಭೇಟಿಯ ವಿಡಿಯೋವನ್ನು ಬಿಸಿಸಿಐ ತನ್ನ ಟ್ವೀಟರ್‌ ಖಾತೆಯ ಮೂಲಕ ಹಂಚಿಕೊಂಡಿದೆ.